ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳಿನ ಕಂಟಿ ಹಿಡಿದು ಮೆರವಣಿಗೆ

Last Updated 19 ಜುಲೈ 2017, 8:38 IST
ಅಕ್ಷರ ಗಾತ್ರ

ಹಾವೇರಿ:‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿ ಯುವ ಕಾಂಗ್ರೆಸ್‌ ಜಿಲ್ಲಾ ಸಮಿತಿಯ ಸದಸ್ಯರು ಮಂಗಳವಾರ ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಸಂಸದ ಶಿವಕುಮಾರ್ ಉದಾಸಿ ಅವರ ಕಚೇರಿ ತನಕ ಮುಳ್ಳಿನ ಕಂಟಿಗಳನ್ನು ಹಿಡಿದುಬಂದು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಮಾತನಾಡಿ, ‘ರಾಜ್ಯ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡಿದರೆ, ಕೇಂದ್ರ ಸರ್ಕಾರವೂ ಇನ್ನುಳಿದ ಸಾಲವನ್ನು ಮನ್ನಾ ಮಾಡುತ್ತದೆ’ ಎಂದು ಅಂದು ಬಾಯಿ ಬಡಿದುಕೊಳ್ಳುತ್ತಿದ್ದ ಬಿಜೆಪಿ ಸಂಸದರು, ಇಂದು ಕಾಣೆಯಾಗಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರಿಗೆ ತಾಕತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರ ಮೂಗು ಹಿಡಿದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿಸಲಿ’ ಎಂದು ಅವರು ಸವಾಲೆಸೆದರು.

‘ರೈತರು ಸತತ ಬರದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಕಷ್ಟು ಸಮಸ್ಯೆಗಳನ್ನು ಜಿಲ್ಲೆಯ ಜನತೆ ಎದುರಿಸುತ್ತಿದ್ದಾರೆ. ಆದರೆ, ಸಂಸದ ಶಿವಕುಮಾರ ಉದಾಸಿಯವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಬದಲಿಗೆ ಪ್ರವಾಸದಲ್ಲಿ ಕಾಲ ಕಳೆಯುತ್ತಿದ್ದಾರೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರವು ಕೇವಲ ದೊಡ್ಡ ದೊಡ್ಡ ಹಾಗೂ ವಿದೇಶಿ ಉದ್ಯಮಿಗಳ ಪರವಾಗಿದ್ದು, ರೈತರು ಹಾಗೂ ಸಣ್ಣ ವ್ಯಾಪಾರಿ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರೈತರು ಸಾಲ ತೀರಿಸಲಾರದೇ ಗುಳೆ ಹೊರಟರೆ, ಮೋದಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಯುವ ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ  ಮಲ್ಲೇಶಪ್ಪ ಸವಣೂರ ಮಾತನಾಡಿ, ‘ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ರೈತರ ₹78 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದ್ದರು. ಆದರೆ, ಆ ಧೈರ್ಯವು  ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲ. ಅವರು, ಶ್ರೀಮಂತರ ಹಾಗೂ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿಸುವತ್ತ ಗಮನ ಹರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿಯು ರೈತ ವೀರೋಧಿ ನೀತಿ ಮುಂದುವರಿಸಿದರೆ, ಚುನಾವಣೆಯಲ್ಲಿ ರೈತರು ತಕ್ಕ ಶಾಸ್ತಿ ಮಾಡುತ್ತಾರೆ. ರಾಜ್ಯದ 17 ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಬಿದ್ದರೂ ಪರವಾಗಿಲ್ಲ, ರೈತರ ಸಾಲವನ್ನು ಮನ್ನಾ ಮಾಡಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಸನ್ನ ಹಿರೇಮಠ, ಕಾರ್ಯದರ್ಶಿ ಸಂತೋಷ ಘೋರ್ಪಡೆ, ಸಂತೋಶ ಲಮಾಣಿ, ಗೌಟಗೀರಿ, ಪಠಾಣ್‌, ರಾಘವೇಂದ್ರ ಹಾಗೂ ಮಲ್ಲೂರ ಇದ್ದರು.

ಮುಳ್ಳಿನ ಕಂಟಿ ಹಿಡಿದುಕೊಂಡು ಬಂದ ಪ್ರತಿಭಟನಾಕಾರರನ್ನು ಸಂಸದರ ಕಚೇರಿ ಇರುವ ತಾಲ್ಲೂಕು ಪಂಚಾಯ್ತಿಯ ದ್ವಾರದ ಬಾಗಿಲ ಬಳಿಯೇ ಪೊಲೀಸರು ತಡೆದರು. ಬಳಿಕ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಅವರು, ‘ಶಾಂತ ರೀತಿಯಲ್ಲಿ ಮನವಿ ಮಾಡುತ್ತೇವೆ’ ಎಂದು ಭರವಸೆ ನೀಡಿದ ಬಳಿಕ, ಕೇವಲ ಪ್ರತಿಭಟನಾಕಾರರನ್ನು ಒಳಗೆ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT