ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಮರ ಬೆಳೆಸಲು ಸಲಹೆ

Last Updated 19 ಜುಲೈ 2017, 11:01 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ರೈತರು ಅಂತರ್ಜಲ ಸಂರಕ್ಷಣೆ ದೃಷ್ಟಿಯಿಂದ ನೀಲಗಿರಿ ಮರಗಳನ್ನು ತೆರವುಗೊಳಿಸಬೇಕು. ಪರಿಸರ ಸ್ನೇಹಿ ಮರಗಳನ್ನು ಬೆಳೆಯಬೇಕು’ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಸಲಹೆ ಮಾಡಿದರು. ತಾಲ್ಲೂಕಿನ ಹೊಗಳಗೆರೆ ಅರಣ್ಯ ಪ್ರದೇಶದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ವತಿಯಿಂದ ನೀರಿಗಾಗಿ ಅರಣ್ಯ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಕೋಲಾರ ಜಿಲ್ಲೆಗೆ ನೀಲಗಿರಿ ಶಾಪವಾಗಿ ಪರಿಣಮಿಸಿದೆ. ಕೆರೆಗಳನ್ನು ಆವರಿಸಿಕೊಂಡಿರುವ ಕರಿ ಜಾಲಿ ದೊಡ್ಡ ತೊಡಕಾಗಿದೆ. ಈ ಎರಡನ್ನೂ ತೆರವುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಈಗ ಉಂಟಾಗಿದೆ’ ಎಂದು ಅವರು ಹೇಳಿದರು.

‘ನಮ್ಮ ಹಿರಿಯರು ನಮಗೆ ಮಾದರಿಯಾಗಿದ್ದಾರೆ. ಅವರು ಬೆಳೆಸಿದ ಮರಗಳು ಪರಿಸರ ಹಾಗೂ ಜನ ಸ್ನೇಹಿಯಾಗಿವೆ. ಆದ್ದರಿಂದಲೇ ಈಗ ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಾಗೂ ಆಶ್ರಯ ಕೊಡುವ ಮರಗಳನ್ನು ಮಾತ್ರ ಬೆಳೆಸಲು ಉದ್ದೇಶಿಸಲಾಗಿದೆ. ಬಗೆ ಬಗೆಯ ಹಣ್ಣಿನ ಸಸಿಗಳನ್ನು ನೆಡಲಾಗುತ್ತಿದೆ. ಇದೊಂದು ಚಳವಳಿಯಾಗಿ ಮುಂದುವರಿಯಬೇಕು. ಪರಿಸರದಲ್ಲಿ ನೀರು ಉಳಿಯಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿಗಳು ನೀಲಗಿರಿ ಮರದಿಂದ ಉಂಟಾಗುವ ತೊಂದರೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಪರಿಸರ ರಕ್ಷಣೆಗಾಗಿ ಗಿಡ ಮರ ಬೆಳೆಸಬೇಕು. ಪರಿಸರ ಉಳಿದರೆ ಮಾತ್ರ ಜೀವ ಜಗತ್ತು ಉಳಿಯಬಲ್ಲದು ಎಂಬ ಸತ್ಯವನ್ನು ಎಲ್ಲರೂ ಮನಗಾಣಬೇಕು. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಉಂಟುಮಾಡುವ ಉದ್ದೇಶದಿಂದಲೇ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಉಪ ವಿಭಾಗಾಧಿಕಾರಿ ಶುಭ ಕಲ್ಯಾಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರೋಹಿಣಿ ಸಫೆಟ್‌, ತಹಶೀಲ್ದಾರ್‌ ವೈ.ರವಿ, ರಾಜ್ಯ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ, ವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಇದ್ದರು.

ಸಸಿ ನೆಡುವ ಕಾರ್ಯಕ್ರಮದಲ್ಲಿ ಕೋಲಾರ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಶಾಲಾ ಕಾಲೇಜಿನ 7 ಸಾವಿರಕ್ಕೂ ಹೆಚ್ಚಿನ  ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಬ್ಬದ ವಾತಾವರಣದಲ್ಲಿ ಸಾಂಘಿಕವಾಗಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಸಂಭ್ರಮಿಸಿದರು. ಬೀಜದ ಉಂಡೆಗಳನ್ನು ಎಸೆದು ಆನಂದಿಸಿದರು. ಸುಮಾರು 1.5 ಲಕ್ಷ ಸಸಿ ನೆಡಲಾಯಿತು. ಅಷ್ಟೇ ಸಂಖ್ಯೆಯ ಬೀಜದುಂಡೆಗಳನ್ನು ಭೂಮಿಗೆ ಸೇರಿಸಲಾಯಿತು. ವನಮಹೋತ್ಸವದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT