ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಅಲ್ಲಾ ಆದರೂ ಹಾರತೈತಲ್ಲಾ...

Last Updated 19 ಜುಲೈ 2017, 11:03 IST
ಅಕ್ಷರ ಗಾತ್ರ

ಕೆಜಿಎಫ್‌: ಆಷಾಢ ಗಾಳಿ ಸೊಯ್ಯನೆ ಬೀಸುತ್ತಿದೆ. ಕಣ್ಣಿನಲ್ಲಿ ಆಗಾಗ ಮೈದಾನದಲ್ಲಿ ಎದ್ದೇಳುವ ಮಣ್ಣು ತುಂಬುತ್ತಿದೆ. ಆದರೂ ಗಾಳಿ ಪಟ ಹಾರಿಸುವ ಉಮೇದು ಕಡಿಮೆಯಾಗಲಿಲ್ಲ. ನಾಲ್ಕು ವರ್ಷದ ಮಗುವಿನಿಂದ ಎಪ್ಪತ್ತು ವರ್ಷದ ವಯಸ್ಸಿನ ಆಸಕ್ತರು ತಮ್ಮ ಬುದ್ಧಿಶಕ್ತಿಗೆ ಅನುಗುಣವಾಗಿ ಗಾಳಿ ಪಟ ಹಾರಿಸಲು ಪ್ರಯತ್ನ ಪಡುತ್ತಿದ್ದರು.

ಇದು ಬೆಮಲ್‌ ನಗರದ ಕ್ರೀಡಾಂಗಣದಲ್ಲಿ ಕಂಡು ಬಂದ ದೃಶ್ಯ. ಸಮುದಾಯ ಸಂಘಟನೆ ಏರ್ಪಡಿಸಿದ್ದ ಸೌಹಾರ್ದತೆಗೆ ಗಾಳಿಪಟ ಉತ್ಸವದಲ್ಲಿ ನೂರಾರು ಮಂದಿ ಗಾಳಿ ಪಟ ಹಾರಿಸಿ ಖುಷಿ ಪಟ್ಟರು. ಮಕ್ಕಳು ಗಾಳಿ ಪಟ ಮೇಲೆರುತ್ತಲೇ ಜಿಗಿದು ಖುಷಿ ಪಟ್ಟರು.

ಗೋತ ಹೊಡೆಯುತ್ತಲೇ ಸಣ್ಣಮುಖ ಮಾಡಿದರು. ನಾನೂ ಗಾಳಿ ಪಟ ಹಾರಿಸುತ್ತೇನೆ ಎಂದು ಗಾಳಿಪಟವನ್ನು ಹಿಡಿದು ಮೈದಾನದಲ್ಲೆಡೆ ಓಡಾಡಿ, ಯಾಕಪ್ಪ ಮೇಲೆ ಹೋಗುತ್ತಿಲ್ಲ ಎಂಬ ಮಕ್ಕಳ ಮುಗ್ಧ ಪ್ರಶ್ನೆಗಳೂ ಕೇಳಿ ಬಂದವು.

ಹಲವು ಮಂದಿ ತಾವೇ ತಯಾರು ಮಾಡಿದ್ದ ಗಾಳಿಪಟ ತಂದಿದ್ದರು. ಆದರೆ ಅದನ್ನು ತಯಾರು ಮಾಡದವರು ಕ್ರೀಡಾಂಗಣದಲ್ಲಿಯೇ ಸಮುದಾಯ ಸಂಘಟನೆ ಮಾರುತ್ತಿದ್ದ ಗಾಳಿಪಟ ಮತ್ತು ದಾರವನ್ನು ಖರೀದಿ ಮಾಡಿದರು. ಸೂತ್ರ ಹಾಕಿದ ಗಾಳಿಪಟವನ್ನು ಹಾರಿಸುವ ಬಗೆಗೆ ಕೂಡ ಮಾಹಿತಿ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಮಲ್‌ ಪ್ರಧಾನ ವ್ಯವಸ್ಥಾಪಕ ಈಶ್ವರಭಟ್‌, ‘ಗಾಳಿ ಪಟ ಮತ್ತು ನಮ್ಮ ಮನಸ್ಥಿತಿ ಒಂದೇ ರೀತಿ ಇದೆ. ನಾವು ಮೇಲೆ ಏರುತ್ತಿದ್ದಂತೆ ಚಿಕ್ಕವರಾಗಬಾರದು. ಮನಸ್ಸು ಪ್ರಫುಲ್ಲವಾಗಬೇಕು. ನಿತ್ಯದ ಜಂಜಾಟದಿಂದ ಬೇರೆ ಲೋಕದಲ್ಲಿ ವಿಹರಿಸಿದ ಅನುಭವ ಗಾಳಿ ಪಟ ಉತ್ಸವದಲ್ಲಿ ಆಗುತ್ತದೆ’ ಎಂದು ಹೇಳಿದರು.

ಸಮುದಾಯ ಅಧ್ಯಕ್ಷ ಜಗದೀಶ್‌ ನಾಯಕ್‌ ಮಾತನಾಡಿ, ‘ದೇಶದಲ್ಲಿ ಇಂದು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ಮಾಡಬೇಕು. ಮನುಷ್ಯರ ನಡುವೆ ವಿಶ್ವಾಸ ವೃದ್ಧಿಯಾಗಬೇಕು. ಎಲ್ಲ ರೀತಿಯ ಕಂದರ ಕಡಿಮೆಯಾಗಬೇಕು’ ಎಂದರು. ರಾಜ್ಯ ಸಮುದಾಯ ಘಟಕದ ಅಧ್ಯಕ್ಷ  ಅಚ್ಯುತ, ಅಲಿಕ್‌, ಶಶಿಧರ್‌, ಸುರೇಶ್‌ಬಾಬು, ರವೀಂದ್ರಚಾರಿ, ಪ್ರೊ.ವಿನೋದ್‌, ಪ್ರೊ. ರೇವತಿ, ಡಾ.ಕೃಷ್ಣಕುಮಾರ್‌ ಹಾಜರಿದ್ದರು. ಫ್ಲೋರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT