ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಟಿಗೆ ಗೊತ್ತಿರುವುದೆ ಪಾಯಸದ ಸಿಹಿ?

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಅಲ್ಲಮಪ್ರಭುವಿನ ವಚನವೊಂದು ಇಂದೇಕೋ ತುಂಬ ಗಮನ ಸೆಳೆಯಿತು:

ಹಿಡಿವ ಕೈಯ ಮೇಲೆ ಕತ್ತಲೆಯಯ್ಯ!

ನೋಡುವ ಮನದ ಮೇಲೆ ಕತ್ತಲೆಯಯ್ಯ!

ನೆನೆವ ಮನದ ಮೇಲೆ ಕತ್ತಲೆಯಯ್ಯ!

ಕತ್ತಲೆಯೆಂಬುದು ಇತ್ತಲೆಯಯ್ಯ!

ಗುಹೇಶ್ವರನೆಂಬುದು ಅತ್ತಲೆಯಯ್ಯ!

ಅರ್ಥ ಆಗದೇ ಇರುವಂಥದ್ದು ಏನೂ ಇಲ್ಲ; ವಚನ ಸರಳವಾಗಿಯೇ ಇದೆ. ಅರ್ಥವಾಗದೇ ಇರುವುದು ಏನೆಂದರೆ: ‘ನಾವು ಬೆಳಕಿನಲ್ಲಿದ್ದರೂ ಕತ್ತಲೆಯಲ್ಲೇ ಬದುಕಲು ಬಯಸುತ್ತೇವೆ, ಅದು ಏಕೆ?’

ಈ ವಚನದ ಜೊತೆಯಲ್ಲಿಯೇ ‘ಹಿತೋಪದೇಶ’ದ ಶ್ಲೋಕವೊಂದು ನೆನಪಾಯಿತು:

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಂ |

ಲೋಚನಾಭ್ಯಾಂ ವಿಹೀನಸ್ಯ ದರ್ಪಣ ಕಿಂ ಕರಿಷ್ಯತಿ ||

‘ಯಾರಿಗೆ ಸ್ವಂತ ಬುದ್ಧಿ ಇಲ್ಲವೋ ಅವನಿಗೆ ಶಾಸ್ತ್ರ ಏನನ್ನು ಮಾಡೀತು? ಎರಡು ಕಣ್ಣುಗಳೂ ಇಲ್ಲದವನಿಗೆ ಕನ್ನಡಿ ಏನನ್ನು ತಾನೆ ಮಾಡಿತು?’ ಇದು ಈ ಶ್ಲೋಕದ ತಾತ್ಪರ್ಯ.

ಬೆಳಕು–ಕತ್ತಲೆಗಳನ್ನು ಧ್ವನಿಪೂರ್ಣವಾಗಿ ಈ ಎರಡು ಪದ್ಯಗಳಲ್ಲಿಯೂ ಬಳಸಲಾಗಿದೆ. ಕತ್ತಲೆಯನ್ನು ಹೊರಮುಖ ಚಟುವಟಿಕೆಯನ್ನಾಗಿಯೂ ಬೆಳಕನ್ನು ಒಳಮುಖ ಸಿದ್ಧತೆಯನ್ನಾಗಿಯೂ ಸೂಚಿಸಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಕೈಯಲ್ಲಿ ಪೂಜೆಗಾಗಿ ಶಿವಲಿಂಗವನ್ನು ಹಿಡಿದಿರುತ್ತೇವೆ. ಲಿಂಗ ಎಂದರೆ ಬೆಳಕು; ಜೀವನ. ಹಿಡಿದ ಕೈಯನ್ನು ಅದು ಬೆಳಗಬೇಕಲ್ಲವೆ? ಆದರೆ ಕೈಯೇ ಕತ್ತಲಮಯವಾಗಿದೆ ಎನ್ನುತ್ತಿದೆ, ವಚನ. ಇದನ್ನು ಮತ್ತಷ್ಟು ಸ್ಷಷ್ಟಪಡಿಸುತ್ತಿದೆ, ಹಿತೋಪದೇಶದ ಶ್ಲೋಕ.

ಕನ್ನಡಿ ಇರುವುದು ಏಕೆ? ನಮ್ಮ ಮುಖವನ್ನು ನೋಡಿಕೊಳ್ಳಲು ತಾನೆ? ಯಾರು ಆ ಕನ್ನಡಿಯಲ್ಲಿ ನೋಡುತ್ತಾನೋ ಅವನ ಮುಖ ತಾನೆ ಅದರಲ್ಲಿ ಕಾಣುವುದು. ಮುಖ ಕಂಡ ಮಾತ್ರಕ್ಕೇ ಅದನ್ನು ನೋಡುವವನಿಗೂ ಅದು ಕಂಡೇ ಕಂಡೀತೆ? ಇಲ್ಲ, ಕಾಣದು. ನೋಡಲು ಕಣ್ಣು ಬೇಕು; ಇದು ಕನ್ನಡಿಯನ್ನು ನೋಡುವುದಕ್ಕೆ ಇರುವ ಮೊದಲ ಅರ್ಹತೆ. ಕನ್ನಡಿ ಎಷ್ಟೇ ಚೆನ್ನಾಗಿದ್ದರೂ ಕಣ್ಣೇ ಇಲ್ಲದವನಿಗೆ ಅದರಲ್ಲಿ ಏನೂ ಕಾಣದಷ್ಟೆ!

ಒಂದು ವಿಧದಲ್ಲಿ ಅಲ್ಲಮಪ್ರಭುವಿನ ವಚನ ಮತ್ತು ಹಿತೋಪದೇಶದ ಪದ್ಯಗಳು ಜುಗಲ್‌ಬಂದಿಯ ಉತ್ಸಾಹದಲ್ಲಿದೆ ಎನ್ನಬಹುದು. ಶ್ಲೋಕ ಸೂಕ್ಷ್ಮವಾಗಿ ಸೂಚಿಸಿದ ವಿಷಯವನ್ನು ವಚನವು ವಿಸ್ತಾರ ಮಾಡುತ್ತಿದೆ. ನಾವು ಏನನ್ನು ಕಾಣಬೇಕೋ ಅದನ್ನು ಕಾಣಲು ಕೇವಲ ಕನ್ನಡಿ, ಕಣ್ಣು – ಇದ್ದರಷ್ಟೆ ಸಾಲದು ಎನ್ನುತ್ತಿದೆ, ವಚನ! ! ಇದು ಹೇಗೆ? ನಾವು ಕೈಯಲ್ಲಿ ಲಿಂಗವನ್ನು ಹಿಡಿದಿರಬಹುದು, ನಮ್ಮ ದೃಷ್ಟಿಯೂ ಅದರ ಮೇಲೆ ಇರಬಹುದು, ನಾಲಗೆಯಲ್ಲಿ ಶಿವನಾಮವೂ ಕುಣಿಯುತ್ತಿರಬಹುದು – ಇಷ್ಟೆಲ್ಲ ನಡೆಯುತ್ತಿದ್ದರೂ ನಾವು ಗುಹೇಶ್ವರನಿಗೆ, ಎಂದರೆ ದೇವರಿಗೆ, ಎಂದರೆ ಬೆಳಕಿಗೆ, ಎಂದರೆ ನಮಗೆ – ದೂರವಾಗಿಯೇ ಇರುತ್ತೇವೆ.

ಏಕೆಂದರೆ ನಮ್ಮ ಕಣ್ಣು, ಕೈ, ಮನಸ್ಸುಗಳನ್ನು ಕತ್ತಲೆಯಲ್ಲಿ ಅದ್ದಿಬಿಟ್ಟಿರುತ್ತೇವೆ. ನಾವು ಸದಾ ಹೊರಗಿನ ವಿವರಗಳಿಗೇ ಹೆಚ್ಚಿನ ಒತ್ತನ್ನು ಕೊಡುತ್ತಿರುತ್ತೇವೆ. ಇದಕ್ಕೆ ಸುಲಭವಾದ ಉದಾಹರಣೆ ಎಂದರೆ, ನಾವು ಶುಭ್ರವಾದ ಬಟ್ಟೆಯನ್ನು ಧರಿಸಿದವರನ್ನು ‘ಸ್ವಚ್ಛ’ ಎಂದು ಘೋಷಿಸುತ್ತೇವೆ. ಆದರೆ ಅವರು ಅಂತರಂಗದಲ್ಲಿ ಒಂದು ಬಂಡಿಯಷ್ಟು ಕೊಳಕನ್ನು ತುಂಬಿಕೊಂಡಿರಬಹುದು. ಇದು ‘ನೋಡುವುದರಿಂದಷ್ಟೆ’ ಅರಿವಿಗೆ ಬಾರದು; ಅಂಥವರೊಂದಿಗೆ ನಾಲ್ಕು ಹೆಜ್ಜೆಯನ್ನು ಹಾಕಿದಾಗ ಒಳಗಿನ ವಾಸನೆ ಮೂಗಿಗೆ ಬಡಿಯುತ್ತದೆ!

ಹೀಗೆಯೇ ಪುಸ್ತಕದಲ್ಲಿರುವ ವಿಷಯವಷ್ಟನ್ನೂ ತಲೆಯಲ್ಲಿ ತುಂಬಿಕೊಂಡಿರಬಹುದು. ಆದರೆ ಅದು ಸಾರ್ಥಕವಾಗುವುದು ಅದು ನಮ್ಮಲ್ಲಿ ಜೀರ್ಣವಾಗಿ, ಎಂದರೆ ಅರಿವಾಗಿ, ಬದುಕಿಗೆ ಒದಗಿದಾಗಲೇ. ಮಾಹಿತಿಗೂ ಅರಿವಿಗೂ ಇರುವ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಲಮ–ಹಿತೋಪದೇಶಗಳ ಮೀಮಾಂಸೆಯ ನಡುವೆ ಇಲ್ಲಿ ‘ಮಹಾಭಾರತ’ದ ಶ್ಲೋಕವೊಂದು ನುಗ್ಗಿ ಬರುತ್ತಿದೆ:

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಕೇವಲಂ ತು ಬಹುಶ್ರುತಃ |

ನ ಸ ಜಾನಾತಿ ಶಾಸ್ತ್ರಾರ್ಥಂ ದರ್ವೀ ಸೂಪರಸಾನಿವ ||

‘ಯಾರಿಗೆ ಸ್ವಂತ ವಿಚಾರಶಕ್ತಿ ಇಲ್ಲದೆ ಕೇವಲ ಓದಿದವನಷ್ಟೆ ಆಗಿರುತ್ತಾನೆಯೋ ಅಂಥವನಿಗೆ ಶಾಸ್ತ್ರದ ರಹಸ್ಯಾರ್ಥ ತಿಳಿಯದು; ಇದು ಹೇಗೆಂದರೆ ಸಾರಿನ ಪಾತ್ರಯಲ್ಲೋ ಅಥವಾ ಪಾಯಸ ಬಟ್ಟಲಲ್ಲೋ ಸೌಟು ಮುಳುಗಿರುತ್ತದೆ; ಹೀಗೆಂದ ಮಾತ್ರಕ್ಕೆ ಅದಕ್ಕೆ ಸಾರು–ಪಾಯಸಗಳ ರುಚಿ ಗೊತ್ತಿದೆ  ಎನ್ನಲಾದೀತೆ?’

ನಮ್ಮ ಮನೆಯ ವೈಭವ, ಸಂಪತ್ತಿನ ರಾಶಿ, ಡಿಗ್ರಿಗಳ ಮಾಲೆ, ಅಧಿಕಾರದ ದರ್ಪ – ಇವು ನಮ್ಮ ಜೀವನದ ಕತ್ತಲೆಗೆ ಕಾರಣವಾಗಿದೆಯೆ, ಅಥವಾ ಬೆಳಕಿನ ಮೂಲವಾಗಿದೆಯೆ – ಎಂಬ ಆತ್ಮಾವಲೋಕನ ನಮ್ಮಿಂದಲೇ ನಡೆಯಬೇಕಷ್ಟೆ.

⇒–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT