ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿರುವುದು ರಾಜ್ಯ ಸ್ವಾಯತ್ತತೆ

Last Updated 19 ಜುಲೈ 2017, 20:23 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯಕ್ಕೆಂದೇ ಒಂದು ಅಧಿಕೃತ ಧ್ವಜ ವಿನ್ಯಾಸ ಮಾಡಲು ಸಮಿತಿಯೊಂದನ್ನು ರಚಿಸಿರುವ ರಾಜ್ಯ ಸರ್ಕಾರದ ಕ್ರಮ ಚುನಾವಣಾ ವರ್ಷದಲ್ಲಿ ಸ್ಫೋಟಗೊಳ್ಳಲಿರುವ ರಾಜಕೀಯ ಪಟಾಕಿಗಳಲ್ಲಿ ಒಂದು ಎಂಬ ಬಗ್ಗೆ ಸದ್ಯಕ್ಕಂತೂ ಅನುಮಾನ ಬೇಡ. ಆದರೆ ಈ ಕ್ರಮಕ್ಕೆ ಇಷ್ಟೇ ಉದ್ದೇಶವೇ ಎಂದು ಕೇಳಿದರೆ ಉತ್ತರ ಅಲ್ಲಿಗೇ ನಿಲ್ಲುವುದಿಲ್ಲ.

ಏಕೆಂದರೆ ಈ ಕ್ರಮದ ಪರಿಣಾಮ ಚುನಾವಣೆಯ ಹೊತ್ತಿಗೆ ಯಾವ ರೂಪ ತಾಳಲಿದೆ ಎಂದು ಈಗಲೇ ಹೇಳಲಾಗುವುದಿಲ್ಲ. ಇದಕ್ಕೆ ಕಾರಣ, ಸದ್ಯದ ರಾಜ್ಯ ಸರ್ಕಾರ, ಅಖಿಲ ಭಾರತ ಪಕ್ಷವೊಂದರ ಸುಪರ್ದಿಯಲ್ಲಿದ್ದು ಈ ಕ್ರಮದ ಬಗ್ಗೆ ಅಲ್ಲಿಂದ ಅಪಸ್ವರಗಳು ಈಗಾಗಲೇ ಕೇಳಿಬಂದಿರುವುದು.

ಈ ವಿಷಯದ ಬಗ್ಗೆ ಹೇಳಬಹುದಾದ ಇನ್ನೂ ಮುಖ್ಯ ಸಂಗತಿ ಎಂದರೆ, ರಾಜ್ಯ ಸರ್ಕಾರದ ಈ ಕ್ರಮ ರಾಷ್ಟ್ರದ ಸ್ವರೂಪದ ಮತ್ತು ರಾಜ್ಯಗಳ ಸ್ವಾಯತ್ತತೆ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದ್ದು ಅದರ ಪರಿವೆಯೇ ಇಲ್ಲದಂತೆ ಅದು ಎತ್ತುಗಳನ್ನು ಬಂಡಿಯ ಹಿಂದೆ ಕಟ್ಟಿದ ಪೆದ್ದುತನವನ್ನು ಪ್ರದರ್ಶಿಸಿರುವುದು. ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ಅನಗತ್ಯ ಮುಜುಗರದ ವಿವಾದವೊಂದನ್ನು ಹುಟ್ಟು ಹಾಕಿರುವುದು.

ಧ್ವಜ ಎಂಬುದು ರಾಜ್ಯದ, ಅಂದರೆ ಅದರ ಜನ ತಮ್ಮ ರಾಜಕಾರಣ, ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಿಸಿದಂತೆ ಅನುಭವಿಸುವ ಸ್ವಾತಂತ್ರ್ಯ-ಸ್ವಾಯತ್ತತೆಗಳ ಲಾಂಛನವಾಗಿರುತ್ತದೆ. ಆದರೆ ಈಗ ಇಲ್ಲಿ ಈ ಸ್ವಾತಂತ್ರ್ಯ-ಸ್ವಾಯತ್ತತೆಗಳನ್ನು ಕುರಿತ ಮಾತೇ ಇಲ್ಲದೆ ಇದ್ದಕ್ಕಿದ್ದಂತೆ ಏನೋ ಹೊಸ ಮತ್ತು ತುರ್ತು ಕೊರತೆಯ ಭಾವನೆಯಲ್ಲಿ ಒಮ್ಮೆಗೇ ಅದರ ಲಾಂಛನದ ತಯಾರಿ ನಡೆದಿದೆ! ಹಾಗಾಗಿಯೇ ಇದು ರಾಜಕೀಯ ಪಟಾಕಿ ಎಂಬ ಅನುಮಾನ ಹುಟ್ಟಿರುವುದು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ-ರಾಷ್ಟ್ರೀಯತೆಯ ಹಲವು ತೆರನ ಒತ್ತಡಗಳಲ್ಲಿ ಕನ್ನಡತನವೆಂಬುದು ನಲುಗಿ ಹೋಗುತ್ತಿದ್ದರೂ- ಜುಟ್ಟಿಗೆ ಮಲ್ಲಿಗೆ ಹೂವು ಎಂಬ ಪರಿಹಾಸ್ಯಕ್ಕೆ ಪಕ್ಕಾಗುವಂತಿರುವುದು.

ನಾವು ನಮ್ಮದೇ ಔದಾರ್ಯದಲ್ಲಿ ನಮ್ಮದು ಒಕ್ಕೂಟ ರಾಷ್ಟ್ರವೆಂದು ಹೇಳಿಕೊಳ್ಳುತ್ತಿದ್ದೇವಾದರೂ, ಸಂವಿಧಾನದ ಕಟ್ಟುನಿಟ್ಟಾದ ಪರಿಭಾಷೆಯಲ್ಲಿ ಹೇಳುವುದಾದರೆ ಇದು ಅರೆ ಒಕ್ಕೂಟ (quasi federal) ರಾಷ್ಟ್ರ.  ನಮ್ಮ ಸಂಸದೀಯ ಆಡಳಿತದ ಇತಿಹಾಸವನ್ನು ಸೂಕ್ಷ್ಮವಾಗಿ ನೋಡುತ್ತಾ ಬಂದವರಿಗೆ, ಇದರರ್ಥ, ಇದು ಹೆಸರಿಗೆ ಮಾತ್ರ ಒಕ್ಕೂಟ ರಾಷ್ಟ್ರವಾಗಿದ್ದು ಮುಖ್ಯವಾಗಿ ಕೇಂದ್ರ ಸರ್ಕಾರ ಚಾಲಿತ ರಾಷ್ಟ್ರವಾಗಿದೆ ಎಂಬುದೇ ಆಗಿದೆ.

ಇಲ್ಲಿ ಚಾಲ್ತಿಯಲ್ಲಿರುವ ರಾಷ್ಟ್ರೀಯತೆಯು, ಈ ರಾಷ್ಟ್ರ ಯಾವುಗಳಿಂದ ಆಗಿದೆಯೋ ಆ ರಾಜ್ಯಗಳ ಜನರ ಭಾಷೆ, ಸಂಸ್ಕೃತಿಗಳಿಗೆ ಸಂಬಂಧಿಸಿದ ಆಶೋತ್ತರಗಳೆಲ್ಲವನ್ನೂ ಪ್ರಾದೇಶಿಕ, ಸಂಕುಚಿತ ಎಂದೆಲ್ಲ ಕೀಳು ಭಾವನೆಯಲ್ಲಿ ವರ್ಣಿಸುತ್ತಾ ಬಂದಿದೆ.  ಇದು ನಮ್ಮ ರಾಷ್ಟ್ರೀಯ (ಸ್ವಾತಂತ್ರ್ಯ) ಹೋರಾಟದ ಭಿನ್ನತೆಯನ್ನು ಗುರುತಿಸದೇ, ರಾಷ್ಟ್ರೀಯತೆಯ ಕಲ್ಪನೆಯನ್ನು ನೇರವಾಗಿ ಆ ಐತಿಹಾಸಿಕ ಸಂದರ್ಭದಲ್ಲಿ ಸಮರೂಪಿಗಳಾಗಿ ಒಡಮೂಡುತ್ತಿದ್ದ ಐರೋಪ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡಿದ್ದರ ಪರಿಣಾಮವೇ ಆಗಿದೆ.

ಈ ಸಂಬಂಧವಾಗಿ ನೆನಪಿಡಬೇಕಾದ ಒಂದು ಮುಖ್ಯ ಸಂಗತಿ ಎಂದರೆ ನಾವು ಇಂದು ರಾಷ್ಟ್ರೀಯ ಎಂದು ಕರೆಯುವ ಹೋರಾಟ ನಿಜವಾಗಿ ಚಾಲನೆ ಪಡೆದದ್ದು 1905ರಲ್ಲಿ ಬ್ರಿಟಿಷ್ ಸರ್ಕಾರ ಮಾಡಿದ ಬಂಗಾಳ ವಿಭಜನೆಯನ್ನು ವಿರೋಧಿಸುವ ಭಾಷಾ ರಾಷ್ಟ್ರೀಯತೆಯ ಹೋರಾಟವಾಗಿ. ನಂತರವಷ್ಟೇ ಅದು ಇಂದು ನಾವು ಭಾರತ ರಾಷ್ಟ್ರವೆಂದು ಕರೆಯುವ ಪ್ರದೇಶಗಳಲ್ಲಿ ಹುರುಪಿನಿಂದ ಹಬ್ಬಿದ್ದು. ಹಾಗಾಗಿ ನಮ್ಮದು ಮೂಲತಃ ಭಾಷಾಕುಲ ಮೂಲವಾದ ರಾಷ್ಟ್ರೀಯತೆ.

ಹಾಗಾಗಿಯೇ ರಾಷ್ಟ್ರ ರಚಿತವಾಗುತ್ತಿದ್ದಂತೆಯೇ ಭಾಷಾವಾರು ರಾಜ್ಯಗಳ ರಾಷ್ಟ್ರವಾಗುವುದು ಅನಿವಾರ್ಯವಾಯಿತು. ನಂತರದಲ್ಲೂ ಗುಜರಾತ್ ಮಹಾರಾಷ್ಟ್ರದಿಂದ, ಹರಿಯಾಣ ಪಂಜಾಬ್‌ನಿಂದ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳು ಅಸ್ಸಾಂನಿಂದ ಬೇರ್ಪಡೆಯಾದುದನ್ನೂ, ಗೋವಾ ಮಹಾರಾಷ್ಟ್ರದಲ್ಲಿ ಸೇರಿಕೊಳ್ಳಲು ನಿರಾಕರಿಸಿದ್ದನ್ನೂ ಈ ನೆಲೆಯಲ್ಲೇ ಗಮನಿಸಬಹುದು. ಹಾಗೇ, ಹೊಸದಾಗಿ ರಚಿತವಾದ ಇತ್ತೀಚಿನ ತೆಲಂಗಾಣ ಸೇರಿದಂತೆ ಯಾವ ರಾಜ್ಯವೂ ಬಹು ಭಾಷೆಯ ರಾಜ್ಯವಾಗಿಲ್ಲ ಎಂಬುದನ್ನೂ ಗಮನಿಸಬೇಕು.

ಅಂದರೆ ಇಂದು ರಾಷ್ಟ್ರೀಯತೆ ಎಂದರೆ ಈ ಭಾಷಾ ರಾಷ್ಟ್ರೀಯತೆಗಳನ್ನು ಸೋದರ ಭಾವನೆಯೊಂದಿಗೆ ಬೆಸೆಯಬೇಕಾದ, ಬೆಳೆಸಬೇಕಾದ ರಾಜಕೀಯ ಸಮನ್ವಯತೆಯ ಮುತ್ಸದ್ದಿತನವೇ ಆಗಿರಬೇಕಿತ್ತು. ಆದರೆ ಇಂತಹ ರಾಷ್ಟ್ರೀಯತೆಯನ್ನು ಸಾಂವಿಧಾನಿಕವಾಗಿ  ಕಟ್ಟತೊಡಗಬೇಕಾಗಿದ್ದ ಸಂದರ್ಭದಲ್ಲೇ ರಾಷ್ಟ್ರ ವಿಭಜನೆಯೆಂಬ ದುರಂತದ ಕರಿ ನೆರಳು ನಮ್ಮನ್ನು ಆವರಿಸಿದ್ದರಿಂದ ಅದು (ಸಗಟು ಏಕತೆಯ) ಬೇರೆಯೇ ದಾರಿ ಹಿಡಿಯಿತು.

ಜೊತೆಗೆ ನಮ್ಮ ಸಂವಿಧಾನ ರಚನಾ ಸಭೆಯನ್ನು ಸಾರ್ವತ್ರಿಕ ವಯಸ್ಕ ಮತದಾನದ ಮೂಲಕ ರಚಿಸದೆ ಆಯ್ದ ಪ್ರತಿಷ್ಠಿತ ಮತದಾರ ಸಮೂಹದಿಂದ ರಚಿಸಲಾಗಿದ್ದೂ ನಮ್ಮದು ಪೂರ್ಣಾರ್ಥದಲ್ಲಿ ಒಕ್ಕೂಟ ರಾಷ್ಟ್ರವಾಗಿ ಕಟ್ಟದೇ ಇರಲು ಒಂದು ಕಾರಣವಿರಬಹುದು. ಮಹಾತ್ಮ ಗಾಂಧಿ ಈ ಭಾರತವನ್ನು ಪ್ರತಿ ಹಳ್ಳಿಯೂ ಒಂದು ರಾಷ್ಟ್ರದಂತಿರುವ ರಾಷ್ಟ್ರಗಳ ಒಕ್ಕೂಟವಾಗಿ ಕಲ್ಪಿಸಿಕೊಂಡಿದ್ದರು ಎಂಬುದನ್ನು ನೆನಪಿಸಿಕೊಂಡಾಗ ರಾಷ್ಟ್ರೀಯ ಹೋರಾಟ ಮೂಡಿಸಿದ್ದ ರಾಷ್ಟ್ರದ ಕಲ್ಪನೆಯಿಂದ ಆರಂಭದಲ್ಲೇ ನಾವು ಎಷ್ಟು ದೂರ ಸರಿದೆವೆಂದು ಗೊತ್ತಾಗುತ್ತದೆ.

ಹಾಗೆ ನೋಡಿದರೆ, ನಮ್ಮ ರಾಜ್ಯಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಜ್ಯಗಳಿರಲಿ; ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಗಳ ರಾಜ್ಯಗಳು ಹೊಂದಿರುವಷ್ಟೂ ಸ್ವಾಯತ್ತತೆಯನ್ನು ಹೊಂದಿಲ್ಲ ಎಂದು ಹೇಳಲಾಗುತ್ತದೆ. ನಮ್ಮ ಸಂವಿಧಾನತಜ್ಞರು ಈ ಬಗ್ಗೆ ಬೆಳಕು ಚೆಲ್ಲಬಹುದಾಗಿದೆ.

ಅದೇನೇ ಇದ್ದರೂ, ಇದೇ ನೆಪವಾಗಿ ಅಖಿಲ ಭಾರತ ಮಟ್ಟದಲ್ಲಿ ರಾಜಕಾರಣ ಮಾಡುವ ಮತ್ತು ವ್ಯಾಪಾರ-ಉದ್ದಿಮೆ-ವ್ಯವಹಾರಗಳನ್ನು ಮಾಡುವ ಮತ್ತು ಆ ಕಾರಣದಿಂದಾಗಿ ಬೃಹತ್ ಬಂಡವಾಳ ಕ್ರೋಡೀಕರಿಸಿಕೊಂಡ ಪಟ್ಟಭದ್ರ ಹಿತಾಸಕ್ತ ಶಕ್ತಿಗಳು ರಾಷ್ಟ್ರದಾದ್ಯಂತ ತನ್ನ ದಲ್ಲಾಳಿ ಜಾಲವನ್ನು ನಿರ್ಮಿಸಿಕೊಂಡು ತಮ್ಮ ರಾಜಕೀಯ ಮತ್ತು ವ್ಯಾಪಾರಿ ಸ್ವಾರ್ಥಕ್ಕಾಗಿ ಹುಸಿ ರಾಷ್ಟ್ರೀಯತೆಯೊಂದನ್ನು ಪೋಷಿಸುತ್ತಾ, ಸಂವಿಧಾನದಲ್ಲಿದ್ದ ಅಲ್ಪಸ್ವಲ್ಪ ಒಕ್ಕೂಟ ಸ್ವರೂಪವನ್ನೂ ತಮ್ಮ ರಾಜಕೀಯ ತಂತ್ರಗಳ ಮೂಲಕ ನಿಧಾನವಾಗಿ ನಾಶ ಮಾಡುತ್ತಾ ರಾಜ್ಯಗಳ ಇದ್ದಬದ್ದ ರಾಜಕೀಯ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಗಳನ್ನೂ ದುರ್ಬಲಗೊಳಿಸುತ್ತಾ ಹೋದವು.

ರಾಷ್ಟ್ರದ ಭೌಗೋಳಿಕ ಸಮಗ್ರತೆಗೆ ಧಕ್ಕೆಯಾಗದಂತೆ ಕೆಲವು ಆಯ್ದ ಅಧಿಕಾರಗಳನ್ನಷ್ಟೇ ಹೊಂದಿರಬೇಕಿದ್ದ ಕೇಂದ್ರ ಸರ್ಕಾರ ಇಂದು ಅಧಿಕಾಂಶ ಅಧಿಕಾರಗಳನ್ನು ತನ್ನದಾಗಿಸಿಕೊಂಡು ಯಜಮಾನ ಸರ್ಕಾರವೆನ್ನಿಸಿ ರಾಜ್ಯಗಳ ಮೇಲೆ ಸವಾರಿ ಮಾಡುವ ಹುಸಿ ರಾಷ್ಟ್ರೀಯತೆಯ ಸಂಕೇತದಂತಾಗಿದೆ. ರಾಜ್ಯ ಸರ್ಕಾರಗಳ ಬಳಿ ಈಗ ರಾಜಕೀಯವಾಗಿ ನಿರ್ಣಾಯಕವೆನ್ನಿಸುವ ಅಧಿಕಾರಗಳೇ ಇಲ್ಲವಾಗಿದ್ದು ಅವು ರಾಷ್ಟ್ರ ಮಟ್ಟದ ನಗರಪಾಲಿಕೆ- ಪುರಸಭೆಗಳ ಮಟ್ಟಕ್ಕೆ ಇಳಿಯುವಂತಾಗಿದೆ.

‘ಒಂದು ರಾಷ್ಟ್ರ ಒಂದು ತೆರಿಗೆ’ ಎಂಬ ಭಾವನಾತ್ಮಕ ಘೋಷಣೆಯೊಂದಿಗೆ ಮತ್ತು ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ನೆನಪಿಗೆ ತರುವಂತಹ ಮಧ್ಯರಾತ್ರಿ ಸಂಸತ್ ಅಧಿವೇಶನ ನಡೆಸುವ ಔಪಚಾರಿಕತೆಯೊಂದಿಗೆ ಜಾರಿಗೆ ಬಂದ ಜಿ.ಎಸ್.ಟಿ. ಇದಕ್ಕೊಂದು ಇತ್ತೀಚಿನ ಉದಾಹರಣೆ. ಇದು ನಮ್ಮ ಒಳ್ಳೆಯದಕ್ಕೇ ಎಂದು ಸರಳೀಕರಿಸಿ ನಾವು ಸುಮ್ಮನಿಲ್ಲವೇ?

ಅಷ್ಟೇ ಅಲ್ಲ, ಗುಜರಾತ್‌ನ ಮುಖ್ಯ ಮಂತ್ರಿಯಾಗಿರುವವರೆಗೂ ಇದು ರಾಷ್ಟ್ರಕ್ಕೂ ರಾಜ್ಯಕ್ಕೂ ಒಳ್ಳೆಯದನ್ನು ಮಾಡುವುದಿಲ್ಲ ಎನ್ನುತ್ತಿದ್ದ ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಿದ್ದಂತೆ ಅದರ ಪ್ರಬಲ ಪ್ರತಿಪಾದಕರಾಗಿ ಅದರೆಲ್ಲ ಕೀರ್ತಿಯನ್ನು ತಾವೇ ಪಡೆದುಕೊಳ್ಳಲು ಮುಂದಾಗಲಿಲ್ಲವೇ? ಕಳೆದ ಆರು ದಶಕಗಳಲ್ಲಿ ಕಟ್ಟಲಾಗಿರುವ ಮತ್ತು ನಾವು ಸಹಜವೆಂಬಂತೆ ಒಳಗಾಗಿರುವ ರಾಷ್ಟ್ರೀಯತೆಯ ನಶೆಯ ಪರಿ ಇದು!

ಕರ್ನಾಟಕ ಸರ್ಕಾರವು ತನ್ನ ಕನ್ನಡದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡದಲ್ಲೇ ಒದಗಿಸುವ ತನ್ನ ಸಂಕಲ್ಪವನ್ನು ಈಡೇರಿಸಿಕೊಳ್ಳಲಾಗದಂತೆ ತಡೆದಿರುವುದೂ ಇಂತಹ ರಾಷ್ಟ್ರೀಯತೆಯೇ. ಹಾಗೇ ನಮ್ಮ ಬದುಕಿನ ಸರ್ವ ಕ್ಷೇತ್ರಗಳಲ್ಲೂ ಕ್ರಮೇಣ ಹಿಂದಿ, ರಾಷ್ಟ್ರಭಾಷೆಯ ಹುಸಿವೇಷದಲ್ಲಿ ಪ್ರವೇಶಿಸಿ ಕನ್ನಡದ ಮೇಲೆ ಸವಾರಿ ಆರಂಭಿಸಿದ್ದರೂ ನಾವು ಸಹಿಸುತ್ತಾ ಸುಮ್ಮನಿರುವಂತೆ ಮಾಡಿರುವುದು.

ಈ ಎಲ್ಲ ಹಿನ್ನೆಲೆಯಲ್ಲಿ  ಕರ್ನಾಟಕ ಸರ್ಕಾರವು ಯಾವುದೇ ಪೂರಕ ಕ್ರಮಗಳಿಲ್ಲದೆ ಇದ್ದಕ್ಕಿದ್ದಂತೆ ರಾಜ್ಯ ಧ್ವಜ ಸ್ಥಾಪನೆಯ ಮೂಲಕ ಕನ್ನಡತನವನ್ನು ಸ್ಥಾಪಿಸಲು ಹೊರಟಿರುವುದು ಒಂದು ಟೊಳ್ಳು ರಾಜಕೀಯ ಪ್ರಯತ್ನವೇ ಆಗಿದೆ. ಅದಕ್ಕೆ ಕನ್ನಡದ ಬಗ್ಗೆ, ಕರ್ನಾಟಕದ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅದು ಮೊದಲು ಮಾಡಬೇಕಾದದ್ದು ಕಳೆದ ಆರೇಳು ದಶಕಗಳಲ್ಲಿ ಪೋಷಿತವಾಗಬೇಕಿದ್ದ; ಆದರೆ ರಾಷ್ಟ್ರೀಯತೆಯ ಹೆಸರಿನಲ್ಲಿ ನಷ್ಟವಾಗಿರುವ ಕನ್ನಡತನವನ್ನು, ಅದರ ಸ್ವಾಯತ್ತೆಯನ್ನು ಸ್ಥಾಪಿಸುವುದು. ಮೊದಲು ಗುಡಿ.

ಆಮೇಲೆ ಅದರ ನೆತ್ತಿಯ ಮೇಲಿನ ಧ್ವಜ. ಹಾಗಾಗಿ ರಾಜ್ಯ ಸರ್ಕಾರ, ಅದರ ಕನ್ನಡತನ ಪ್ರಾಮಾಣಿಕವಾಗಿದ್ದರೆ, ಮೊದಲು ಮಾಡಬೇಕಾದುದು, ರಾಷ್ಟ್ರದ ಭೌಗೋಳಿಕ ಮತ್ತು ಭಾವನಾತ್ಮಕ ಸಮಗ್ರತೆಗೆ ಚ್ಯುತಿಯಾಗದಂತೆ ರಾಜ್ಯದ ರಾಜಕೀಯ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಪುನಃ ಸ್ಥಾಪಿಸಲು ಅಗತ್ಯವಾದ ಸಂವಿಧಾನ ತಿದ್ದುಪಡಿಗಳ ಕರಡು ರೂಪಗಳನ್ನು ಸಿದ್ಧಪಡಿಸಲು ಪರಿಣತರ ಸಮಿತಿಯೊಂದನ್ನು ನೇಮಿಸುವುದು.

ಅದು ಮುಖ್ಯವಾಗಿ ಮಾಡಬೇಕಾದದ್ದು ಸಂವಿಧಾನದಲ್ಲಿನ ರಾಜ್ಯ, ಕೇಂದ್ರ ಮತ್ತು ಸಹಚರಿ ಪಟ್ಟಿಗಳ (central, state and concurrent lists) ಪುನರ್‌ಪರಿಶೀಲನೆ. ಅಂದರೆ ರಾಷ್ಟ್ರೀಯ ಹೋರಾಟದಲ್ಲಿ ಮೂಡಿದ್ದ ಒಕ್ಕೂಟ-ರಾಷ್ಟ್ರೀಯತೆಗೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಣ ಅಧಿಕಾರಗಳ ಪುನರ್‌ವಿತರಣೆಯ ವಿಷಯ.

ಇದಕ್ಕೆ ಪ್ರತ್ಯೇಕ  ರಾಜ್ಯ ಧ್ವಜ ವಿನ್ಯಾಸ ಮಾಡಲು ಸಮಿತಿ ರಚಿಸುವಲ್ಲಿ ತೋರಿರುವ ರಾಜಕೀಯ ಧೈರ್ಯ ಮತ್ತು ನೈತಿಕ ಸ್ಥೈರ್ಯಗಳಿಗಿಂತ ಹೆಚ್ಚಿನ ಧೈರ್ಯ-ಸ್ಥೈರ್ಯಗಳೇನೂ ಬೇಕಾಗಿಲ್ಲ. ಬೇಕಾಗಿರುವುದು ನಿಜವಾದ ಮತ್ತು ಆಳವಾದ ಜನಪರತೆ ಮತ್ತು ರಾಜಕೀಯ ಪ್ರಾಮಾಣಿಕತೆ. ಇದನ್ನು ಸದ್ಯದ ಸರ್ಕಾರ ಪ್ರದರ್ಶಿಸಬಲ್ಲುದೇ ಆದರೆ, ಅದು ಭಾರತದ ಆಧುನಿಕ ಇತಿಹಾಸದಲ್ಲಿ ಒಂದು ಐತಿಹಾಸಿಕ ಹೆಜ್ಜೆಯೇ ಆದೀತು ಮತ್ತು ಸಿದ್ದರಾಮಯ್ಯನವರ ಹೆಸರು ಕರ್ನಾಟಕದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದೀತು.

ರಾಜ್ಯ ಸರ್ಕಾರ ಈಗ ರಾಜ್ಯ ಧ್ವಜ ರಚನೆಗಷ್ಟೇ ಕೈಗೊಂಡಿರುವ ಕ್ರಮ ಹುಸಿ ರಾಷ್ಟ್ರೀಯತೆಯಂತಹದ್ದೇ ಹುಸಿ ಕನ್ನಡತನವನ್ನು ಪೋಷಿಸುವಂತಹದ್ದಾಗಿದ್ದು ಅದು ಕನ್ನಡಿಗರನ್ನು ಇನ್ನಷ್ಟು ಆಳದ ಹುಸಿ ರಾಷ್ಟ್ರೀಯತೆಯ ನಶೆಗೆ ತಳ್ಳುತ್ತದಷ್ಟೇ. ಅಖಿಲ ಭಾರತ ರಾಜಕಾರಣ ಮಾಡುವ ಪಕ್ಷಗಳ ಅಂತಿಮ ಗುರಿ, ಅವಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಅದೇ ಆಗಿರುತ್ತದೆ. ಇದು ಸಿದ್ದರಾಮಯ್ಯ ಮತ್ತು ಅವರ ಸಹೋದ್ಯೋಗಿಗಳಿಗೆ ಗೊತ್ತಿದ್ದರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT