ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರಿ ಆಸೆಗೆ ಹಿತಾಸಕ್ತಿ ಸಂಘರ್ಷ ನಿಯಮ ಅಡ್ಡಿ

ತಂಡಕ್ಕೆ ಸಲಹೆಗಾರರಾಗಿ ಸಚಿನ್‌ ನೇಮಕಕ್ಕೆ ಪ್ರಸ್ತಾವ
Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಭಾರತ ಕ್ರಿಕೆಟ್ ತಂಡಕ್ಕೆ ಸಲಹೆಗಾರರಾಗಿ ನೇಮಕವಾಗಬೇಕು ಎಂದು ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಒಲವು ವ್ಯಕ್ತಪಡಿಸಿದ್ದಾರೆ. ಆದರೆ, ಅವರನ್ನು ಸಲಹೆಗಾರ ಸ್ಥಾನಕ್ಕೆ ನೇಮಕ ಮಾಡಿದರೆ ಹಿತಾಸಕ್ತಿ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ವಿಶೇಷ ಸಮಿತಿಯು ಅಭಿಪ್ರಾಯಪಟ್ಟಿದೆ.

ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಸಿಇಒ ರಾಹುಲ್ ಜೊಹ್ರಿ, ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಸಿಒಎ ಸದಸ್ಯೆ ಡಯಾನಾ ಯಡುಲ್ಜಿ ಅವರು ಇರುವ ವಿಶೇಷ ಸಮಿತಿಯನ್ನು ಮಂಗಳವಾರ ಭೇಟಿಯಾಗಿದ್ದ ಶಾಸ್ತ್ರಿ ಪ್ರಸ್ತಾವ ಸಲ್ಲಿಸಿದ್ದರು.

‘ಆದರೆ, ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯರೂ ಆಗಿರುವ ತೆಂಡೂಲ್ಕರ್ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡುವುದು ಹಿತಾಸಕ್ತಿ ಸಂಘರ್ಷ ನಿಯಮದ ಉಲ್ಲಂಘನೆಯಾಗುತ್ತದೆ. ರಾಷ್ಟ್ರೀಯ ತಂಡದ ಕೋಚ್ ಅಥವಾ ಸಲಹೆಗಾರ ಹುದ್ದೆಗಳಲ್ಲಿ ಇರುವವರು ಬೇರೆ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ’ ಎಂದು ಸಮಿತಿ ಸದಸ್ಯರು ಶಾಸ್ತ್ರಿ ಅವರಿಗೆ ಹೇಳಿದರು.

‘ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆಗದಂತೆ ಸಚಿನ್ ಅವರನ್ನು ಅಲ್ಪಾವಧಿಗಾಗಿ ಸಲಹೆಗಾರರನ್ನಾಗಿ ನೇಮಕ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಶಾಸ್ತ್ರಿ ಕೋರಿದ್ದರು’ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಸಚಿನ್ ಈ ಪ್ರಸ್ತಾವಕ್ಕೆ ಒಪ್ಪಿಕೊಂಡರೆ ಅವರು ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ಸಲಹೆಗಾರ ಹುದ್ದೆಯೂ ಸೇರಿದಂತೆ ಇನ್ನಿತರ ಸ್ಥಾನಗಳನ್ನು ತ್ಯಜಿಸಬೇಕಾಗುತ್ತದೆ.

‘ಅಲ್ಪಾವಧಿಯ ಕಾರ್ಯಕ್ಕಾಗಿ ಈಗಿರುವ ಸ್ಥಾನಗಳನ್ನು ಬಿಟ್ಟುಬರಲು ಸಚಿನ್ ಅವರು ಒಪ್ಪುವ ಸಾಧ್ಯತೆ ಕಡಿಮೆ. ಬ್ಯಾಟಿಂಗ್ ಸಲಹೆಗಾರ ರಾಹುಲ್ ದ್ರಾವಿಡ್ ಮತ್ತು ಬೌಲಿಂಗ್ ಸಲಹೆಗಾರ ಜಹೀರ್ ಖಾನ್ ಅವರು ವರ್ಷದಲ್ಲಿ 25 ದಿನಗಳ ಕಾಲ ರಾಷ್ಟ್ರೀಯ ತಂಡಕ್ಕೆ ಕಾರ್ಯನಿರ್ವಹಿಸಲು ತಮ್ಮ ಉಳಿದ ಹೊಣೆಗಳನ್ನು ಬಿಟ್ಟುಬರಲು ಒಪ್ಪುವ ಸಾಧ್ಯತೆ ಕಡಿಮೆ’ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಭರತ್ ಅರುಣ್ ಅವರನ್ನು ಭಾರತ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಅವರು ಎರಡು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸುವರು. ಅವರು ಸದ್ಯ ಕೋಚ್ ಆಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ತಮಿಳುನಾಡು ಲೀಗ್‌ನ ವಿ.ಬಿ. ತಿರುವಳ್ಳುವರ್ ವೀರನ್ ತಂಡಗಳನ್ನು ತ್ಯಜಿಸಲಿದ್ದಾರೆ.‌

ಪ್ರಬುದ್ಧನಾಗಿದ್ದೇನೆ: ರವಿ ಶಾಸ್ತ್ರಿ
ಮುಂಬೈ:
ಕಳೆದ  ಎರಡು ವಾರಗಳಲ್ಲಿ ಸಾಕಷ್ಟು ಕಲಿತ್ತಿದ್ದೇನೆ, ಪ್ರಬುದ್ಧನಾಗಿದ್ದೇನೆ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ  ಬುಧವಾರ ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ತಂಡ ತೆರಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೋಚ್ ಸ್ಥಾನಕ್ಕೆ ನೇಮಕವಾದ ನಂತರ  ಅವರಿಗೆ ಇದು ಮೊದಲ ಸುದ್ದಿಗೋಷ್ಠಿಯಾಗಿತ್ತು.

‘ತಂಡದಲ್ಲಿ ಜನ ಬರುತ್ತಾರೆ, ಹೋಗುತ್ತಾರೆ. ಆದರೆ ಕ್ರಿಕೆಟ್‌ ಶ್ರೇಷ್ಠತೆ ಮತ್ತು ಖ್ಯಾತಿ  ಹಾಗೆಯೇ ಉಳಿಯುತ್ತವೆ.  ಭರತ್ ಅರುಣ್ ಅವರು 15 ವರ್ಷಗಳಿಂದ ಕೋಚಿಂಗ್ ಅನುಭವ ಹೊಂದಿದ್ದಾರೆ. ಜೂನಿಯರ್ ವಿಶ್ವಕಪ್‌ನಲ್ಲಿ ಆಡಿದ್ದ ತಂಡದೊಂದಿಗೂ ಅವರು ಕಾರ್ಯನಿರ್ವಹಿಸಿದ್ದಾರೆ.  ತಂಡದ ಆಟಗಾರರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕಂತೆ ತರಬೇತಿ ನೀಡುವ ಸಮರ್ಥರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT