ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯ ಸರ್ಕಾರದಿಂದ ಹಿಂದೂ ವಿರೋಧಿ ನೀತಿ’

Last Updated 20 ಜುಲೈ 2017, 8:51 IST
ಅಕ್ಷರ ಗಾತ್ರ

ಧಾರವಾಡ: ಬಂಟ್ವಾಳದಲ್ಲಿ ನಡೆದ ಆರ್‌ಎಸ್ಎಸ್‌ ಕಾರ್ಯಕರ್ತ ಶರತ್ ಮಡಿವಾಳರ ಹತ್ಯೆ, ಪಿಎಫ್‌ಐ, ಕೆಎಫ್‌ಡಿ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸುವುದು ಹಾಗೂ ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ, ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆಯಿಂದ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲೇ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವರಾದ ಯು.ಟಿ. ಖಾದರ್, ರಮಾನಾಥ್ ರೈ ವಿರುದ್ಧ ಘೋಷಣೆ ಕೂಗಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ,  ‘ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತ ನಡೆಸಲು ಪ್ರಾರಂಭಿಸದ ನಂತರ ರಾಜ್ಯದಲ್ಲಿ ಸುಮಾರು 25 ಹಿಂದೂ ಕಾರ್ಯಕರ್ತರ ಕೊಲೆ ನಡೆದಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ.

ಅಲ್ಲದೇ ಇಂತಹ ಹೇಯ ಕೃತ್ಯ ನಡೆಯಲು ಕಾರಣವಾಗಿರುವ ಪಿಎಫ್‌ಐ ಮತ್ತು ಕೆಎಫ್‌ಡಿ ಮುಸ್ಲಿಂ ಸಂಘಟನೆಗಳನ್ನು ನಿಷೇದಿಸುವಂತೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ, ಸರ್ಕಾರ ಕ್ರಮ ಕೈಗೊಂಡಿಲ್ಲ. ಇದು ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಆರೋಪಿಸಿದರು.

‘ಕರಾವಳಿ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಅಲ್ಲಿನ ಹಿಂದೂಗಳಿಗೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಅಲ್ಲಿನ ಪರಿಸ್ಥಿತಿ ಹದಗೆಡಲು ಸಚಿವರಾದ ಯು.ಟಿ. ಖಾದರ, ರಮಾನಾಥ ರೈ ಅವರೇ ಕಾರಣರಾಗಿದ್ದಾರೆ.

ಹೀಗಾಗಿ ಅವರನ್ನು ಈ ಕೂಡಲೆ ಸಚಿವ ಸ್ಥಾನದಿಂದ ವಜಾ ಗೊಳಿಸಬೇಕು. ಮೃತ ಶರತ್‌ನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ, ಸೀಮಾ ಮಸೂತಿ, ಅಮೃತ ದೇಸಾಯಿ, ಶಿವು ಹಿರೇಮಠ, ತವನಪ್ಪ ಅಷ್ಟಗಿ, ಶರಣು ಅಂಗಡಿ, ಅರವಿಂದ ಏಗನಗೌಡರ, ನಾಗೇಶ ಕಲಬುರ್ಗಿ, ಮೋಹನ್ ರಾಮದುರ್ಗ, ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಮಹೇಶ ಟೆಂಗಿನಕಾಯಿ, ಶಂಕರ ಶೇಳಕೆ, ಮಂಜುಳಾ ಅಕ್ಕೂರ, ಅನಸೂಯಾ ಹಿರೇಮಠ, ಪೂರ್ಣಾ ಪಾಟೀಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

**

ಜೈಲು ಹಗರಣ:ನ್ಯಾಯಾಂಗ ತನಿಖೆಗೆ ಆಗ್ರಹ

‘ಜೈಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಯಾಗಬೇಕು’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.

‘ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟರಿಗೆ ಶ್ರೀರಕ್ಷೆ ನೀಡುತ್ತಿದೆ’ ಎಂದು ಆರೋಪಿಸಿದರು.
‘ತಾವು ಮಾಡಿದ ಪ್ರಕರಣಗಳನ್ನು ಮುಚ್ಚಿ ಹಾಕಿಕುವ ಉದ್ದೇಶದಿಂದ ಲೋಕಾಯುಕ್ತವನ್ನು ಮುಚ್ಚಿ ಹಾಕಲಾಗಿದೆ. ಈ ಮೂಲಕ ಬ್ರಷ್ಟಾಚಾರ ಮಾಡುವವರನ್ನು ರಕ್ಷಿಸಲಾಗುತ್ತಿದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ಹೆಸರು ಪ್ರಸ್ತಾಪವಾದರೂ ಅವರ  ಮೇಲೆ ಕ್ರಮ ಜರುಗಿಸಿಲ್ಲ. ಅದೇ ರೀತಿ ಲೈಂಗಿಕ ಆರೋಪದಡಿ ಸಚಿವ ಸ್ಥಾನ ಕಳೆದುಕೊಂಡ ಎಚ್.ವೈ.ಮೇಟಿ ಪ್ರಕರಣ ಹಾಗೂ ಗಣಪತಿ ಸಾವಿನ ಹಿಂದಿನ ವ್ಯಕ್ತಿಗೆ ಸಿಸಿಬಿ ತನಿಖೆ ಮೂಲಕ ಕ್ಲೀನ್ ಚಿಟ್‌ ಕೊಡಿಸಿದ್ದಾರೆ. ಇದು ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆಯನ್ನು ತೋರಿಸುತ್ತದೆ’ ಎಂದರು.
‘ದೇಶಕ್ಕೆ ಒಂದೇ ಧ್ವಜ ಇರಬೇಕು ಎನ್ನುವುದು ಎಲ್ಲರ ಅಭಿಮತ. ಆದರೆ ರಾಜ್ಯ ಸರ್ಕಾರ ಪ್ರತ್ಯೇಕ ಧ್ವಜಕ್ಕಾಗಿ ಸಮಿತಿ ರಚಿಸಿರುವುದು ಸರಿಯಾದ ಬೆಳವಣಿಗೆ ಅಲ್ಲ. ಇದು ಒಡೆದು ಆಳುವ ನೀತಿಯಾಗಿದ್ದು, ಈ ನಿಲುವಿನಿಂದ  ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT