ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ 25 ಮದ್ಯದಂಗಡಿಗಳಿಗೆ ಬಿತ್ತು ಬೀಗ!

ರಾಜ್ಯ ಹೆದ್ದಾರಿ ಡಿನೋಟಿಫಿಕೇಶನ್ನಿಂದಾಗಿ ಜಿಲ್ಲೆಯಲ್ಲಿ ಶೇ 60 ಮದ್ಯದಂಗಡಿಗಳು ಬಚಾವ್
Last Updated 20 ಜುಲೈ 2017, 10:22 IST
ಅಕ್ಷರ ಗಾತ್ರ

ಹಾವೇರಿ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬದಿಯ ಮದ್ಯದಂಗಡಿಗಳ ತೆರವಿಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಹಾಗೂ ಬಳಿಕ ರಾಜ್ಯ ಸರ್ಕಾರ ಮಾಡಿದ ‘ಹೆದ್ದಾರಿ ಡಿನೋಟಿಫಿಕೇಶನ್‌’ ಬಳಿಕವೂ ಜಿಲ್ಲೆಯಲ್ಲಿ 25 ಮದ್ಯದಗಂಡಿಗಳು ಮುಚ್ಚಿವೆ.

ಜಿಲ್ಲೆಯಲ್ಲಿ ಕಳೆದ ವರ್ಷ ಎಂ.ಎಸ್.ಐ.ಎಲ್, ವೈನ್‌ ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಒಟ್ಟು 154 ಮದ್ಯದಂಗಡಿಗಳು ಇದ್ದವು. ಈ ಪೈಕಿ ಸುಪ್ರೀಂ ಕೋರ್ಟ್ ಆದೇಶದ ಪರಿಣಾಮ 93 ಪರವಾನಗಿ ರದ್ದಾಗುವ ಆತಂಕ ಎದುರಿಸಿತ್ತು. ಆದರೆ, ಆ ಬಳಿಕ ರಾಜ್ಯ ಸರ್ಕಾರವು ನಗರ ಹಾಗೂ ಪಟ್ಟಣಗಳಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಗಳ ಡಿನೋಟಿಫಿಕೇಶನ್ ಮಾಡಿದ ಪರಿಣಾಮ ಜಿಲ್ಲೆಯ 58 ಮದ್ಯದಂಗಡಿಗಳು ಅಪಾಯದಿಂದ ಪಾರಾದವು.

ಉಳಿದ 35 ಮದ್ಯದಂಗಡಿಗಳು ಮುಚ್ಚುವ ಪರಿಸ್ಥಿತಿಗೆ ಬಂತು. ಈ ಪೈಕಿ 11  ಸ್ಥಳಾಂತರ ಮಾಡಿದವು. ಉಳಿದ 24 ಮದ್ಯದಂಗಡಿಗಳು ಅನಿವಾರ್ಯವಾಗಿ ಮುಚ್ಚಬೇಕಾಯಿತು. (ಒಂದು ಮದ್ಯದಂಗಡಿಯ ಮಾಲೀಕರು ಸ್ವಯಂ ಇಚ್ಛೆಯಿಂದ ಮುಂದುವರಿಸಿಲ್ಲ) ಅಬಕಾರಿ ಕಾಯಿದೆ ಪ್ರಕಾರ ಪ್ರತಿ ವರ್ಷ ಜುಲೈ ತಿಂಗಳೊಳಗೆ ಮದ್ಯದಂಗಡಿಗಳು ಪರವಾನಗಿ ಮರುನವೀಕರಣ ಮಾಡಬೇಕು. ಈ ವರ್ಷ ಕೇವಲ 129 ಮದ್ಯದಂಗಡಿಗಳು ಮಾತ್ರ ನವೀಕರಣ ಮಾಡಿಕೊಂಡಿವೆ’ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಬಿ.ಎಲ್. ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆದ್ದಾರಿಯಲ್ಲಿ ಪಾನಮತ್ತ ಚಾಲನೆಯಿಂದ ಉಂಟಾಗುವ ಅವಘಡಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳನ್ನು ಏಪ್ರಿಲ್‌ 1ರೊಳಗೆ ಮುಚ್ಚುವಂತೆ ಆದೇಶ ನೀಡಿತ್ತು. ಇದರಿಂದ, ಮದ್ಯ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಹಲವರು ಮೇಲ್ಮನವಿ ಸಲ್ಲಿಸಿದ್ದರು. ಕೆಲ ನಿಯಮಗಳನ್ನು ಕೋರ್ಟ್ ಸಡಿಲಿಕೆ ಮಾಡಿತೇ ಹೊರತು, ಆದೇಶ ಹಿಂಪಡೆದುಕೊಳ್ಳಲಿಲ್ಲ. ಮುಂಬೈ ಮದ್ಯ ಮಾರಾಟ ಸಂಘದವರ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆದರೆ, ಆ ಬಳಿಕ ರಾಜ್ಯ ಸರ್ಕಾರವು ನಗರ ಹಾಗೂ ಪಟ್ಟಣಗಳಲ್ಲಿ ಹಾದು ಹೋಗುವ ಹೆದ್ದಾರಿಗಳನ್ನು ಡಿನೋಟಿಫೈ ಮಾಡಿತ್ತು.

‘ಮದ್ಯದಂಗಡಿಗಳನ್ನು ಸ್ಥಳಾಂತರ ಮಾಡಲು ಖರ್ಚು ಇದೆ. ಬದಲಿ ಸ್ಥಳದಲ್ಲಿನ ವ್ಯಾಪಾರದ ಬಗ್ಗೆಯೂ ಆತಂಕ ಇರುತ್ತದೆ. ಕಾರ್ಮಿಕರು, ಪರವಾನಗಿ, ಕಟ್ಟಡ ಬಾಡಿಗೆ ಮತ್ತು ‘ಇತರೆ’ ವೆಚ್ಚಕ್ಕಾಗಿ ಪ್ರತಿ ತಿಂಗಳು ನಿರ್ದಿಷ್ಟ ಹಣ ಬೇಕು. ಹೂಡಿದ ಬಂಡವಾಳ ವಾಪಾಸ್ ಬರುವುದೇ? ಎಂಬ ಆತಂಕ ಕಾಡುವುದು ಸಹಜ. ಇದರಿಂದ ಸೂಕ್ತ ಸ್ಥಳ ಸಿಗದ ಕಾರಣ ಹಲವರು ಸ್ಥಳಾಂತರಕ್ಕೆ ಹಿಂದೇಟು ಹಾಕಿದ್ದಾರೆ’ ಎನ್ನುತ್ತಾರೆ ಹಾವೇರಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಬೆಳವಡಿ.

‘ಇನ್ನೊಂದೆಡೆ, ಸಿ.ಎಲ್–2 ಮತ್ತು 9 (ವೈನ್ ಶಾಪ್‌, ಬಾರ್ ಆ್ಯಂಡ್ ರೆಸ್ಟೋರೆಂಟ್ ಇತ್ಯಾದಿ) ಸ್ಥಳಾಂತರ ಮಾಡಬಹುದು. ಆದರೆ, ಸಿ.ಎಲ್.–7 (ವಸತಿಗೃಹ ಸಹಿತ ಮದ್ಯ ಮಾರಾಟ) ಸ್ಥಳಾಂತರ ಕಷ್ಟಸಾಧ್ಯ. ಹೆದ್ದಾರಿ ಅಥವಾ ಪಟ್ಟಣಗಳಿಂದ ದೂರದಲ್ಲಿ ವಸತಿಗೃಹ ನಿರ್ಮಿಸಿಕೊಂಡು ವ್ಯಾಪಾರ ನಡೆಸುವುದು ಕಷ್ಟ’ ಎಂದರು. 

‘ರಾಷ್ಟ್ರೀಯ ಹೆದ್ದಾರಿಯ ಶಿಗ್ಗಾವಿ ಬಳಿ ಇರುವ ಕೆಲವು ‘ಸಿ.ಎಲ್–7 ಇಂತಹ ಸಮಸ್ಯೆ ಎದುರಿಸುತ್ತಿವೆ. ರಾಜ್ಯ ಸರ್ಕಾರವು ಹೆದ್ದಾರಿ ಡಿನೋಟಿಫಿಕೇಶನ್ ಮಾಡಿದ ಪರಿಣಾಮ ಹಾವೇರಿ ನಗರದಲ್ಲಿನ 22 ಮದ್ಯದಂಗಡಿಗಳ ಪೈಕಿ 19 ಉಳಿದುಕೊಂಡಿವೆ. ಇಲ್ಲದಿದ್ದರೆ, ಜಿಲ್ಲೆಯಲ್ಲಿ ಸುಮಾರು 93 ಮದ್ಯ ದಂಗಡಿಯ ಮಾಲೀಕರು, ಕಾರ್ಮಿಕರು, ಪರೋಕ್ಷವಾಗಿ ಅವಲಂಬಿಸಿದ ಹೋಟೆಲ್‌ಗಳು, ಮದ್ಯ ಸರಬರಾಜು ವಾಹನ ಮಾಲೀಕರು, ಚಾಲಕರು ಮತ್ತಿತರರ ಕುಟುಂಬಗಳ ಬದುಕು ದುಸ್ತರವಾಗುತ್ತಿತ್ತು’ ಎಂದರು.

** 

ಮದ್ಯದ ಅಂಗಡಿಗಳಿಗೆ ರಾಷ್ಟ್ರೀಯ ಹೆದ್ದಾರಿಗಿಂತ 500 ಮೀಟರ್ ಹಾಗೂ ಗ್ರಾಮೀಣ ಭಾಗದಲ್ಲಿ 220 ಮೀಟರ್ ಹೊರಗೆ ಸ್ಥಳಾಂತರ ಮಾಡಿಕೊಳ್ಳಲು ಅವಕಾಶಗಳಿವೆ
ಬಿ.ಎಲ್‌. ಹಿರೇಮಠ
ಅಬಕಾರಿ ಇಲಾಖೆ ಉಪ ಆಯುಕ್ತ

**

ಅಂಕಿ ಅಂಶ

₹8.77ಕೋಟಿ 

ಜಿಲ್ಲೆಯಲ್ಲಿ ಮದ್ಯ ವಹಿವಾಟಿನಿಂದ  ಸರ್ಕಾರಕ್ಕೆ ಬರುವ ವಾರ್ಷಿಕ ಆದಾಯ

129 

ಪರವಾನಗಿ ನವೀಕರಣಗೊಂಡ (ಜುಲೈ 2017) ಮದ್ಯದಂಗಡಿಗಳು

2,000 

ಮದ್ಯ ವ್ಯಾಪಾರ ಅವಲಂಬಿತ (ಅಂದಾಜು)ಕುಟುಂಬಗಳು

**

ಕುಟುಂಬಗಳು ಬೀದಿ ಪಾಲು

‘ಮದ್ಯದಂಗಡಿಗಳ ಸಂಖ್ಯೆ ಕಡಿಮೆಯಾದರೆ, ಮದ್ಯಪಾನ ಮತ್ತು ವ್ಯಾಪಾರವೇ ಇಳಿಕೆಯಾಗುತ್ತದೆ ಎಂಬ  ತರ್ಕದಲ್ಲಿ ಅರ್ಥವಿಲ್ಲ. ಮದ್ಯ ಸೇವನೆಗೆ ಇತರ ಅಂಗಡಿಗೆ ಹೋಗುವ ಸಾಧ್ಯತೆ ಇರುತ್ತದೆ. ಆದರೆ, ಮದ್ಯ ಮಾರಾಟವನ್ನೇ ನಂಬಿ ಬದುಕುವ ಕುಟುಂಬಗಳು ಮಾತ್ರ ಬೀದಿ ಪಾಲಾಗುತ್ತವೆ’ ಎನ್ನುತ್ತಾರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಬೆಳವಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT