ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನನದಲ್ಲಿ ‘ಟ್ರಿಗರ್’ ಸದ್ದು

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಶಿರಸಿ, ಸಿದ್ದಾಪುರದ ಕಾಡಿನಲ್ಲಿ ಚಿತ್ರೀಕರಣ ನಡೆಸಿರುವ ‘ಟ್ರಿಗರ್’ ಪ್ರೇಕ್ಷಕರ ಮನಸ್ಸು ಸೆಳೆಯಲು ಸಜ್ಜಾಗಿದೆ. ಹಸಿರು ಕಾನನದಲ್ಲಿ ಥ್ರಿಲ್ಲರ್‌, ಸಸ್ಪೆನ್ಸ್‌, ಆಕ್ಷನ್‌ನೊಟ್ಟಿಗೆ ಪ್ರೀತಿ ಬೆರೆಸಿ ಪ್ರೇಕ್ಷಕರಿಗೆ ಉಣಬಡಿಸುವ ತವಕ ನಿರ್ದೇಶಕ ವಿಜಯ್‌ ಪಾಳೇಗಾರ್‌ ಅವರದು. ಕಾಡಿನ ಅನುಭವ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಬಂದಿತ್ತು.

‘ಕನ್ನಡ ಚಿತ್ರಗಳ ಮಟ್ಟಿಗೆ ಇದು ಭಿನ್ನವಾದ ಸಿನಿಮಾ. ಜತೆಗೆ, ವಿಭಿನ್ನ ಕಥಾವಸ್ತು. ಕಾಡಿನಲ್ಲಿ ಸಿನಿಮಾದ ಚಿತ್ರೀಕರಣಕ್ಕಾಗಿ ಸೆಟ್‌ ಹಾಕಲು ಬರುವ ಯುವಕನಿಗೆ ಹಲವು ತೊಂದರೆ ಎದುರಾಗುತ್ತವೆ. ಆತ ಅಲ್ಲಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಕಥಾಹಂದರ’ ಎಂದರು ನಾಯಕ ಚೇತನ್‌ ಗಂಧರ್ವ.

‘ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೇಳಲು ಹೊರಟಿಲ್ಲ. ಚಿತ್ರ ನೈಜವಾಗಿ ಮೂಡಿಬಂದಿದೆ. ಚಿತ್ರೀಕರಣದ ವೇಳೆಯೂ ಪರಿಸರಕ್ಕೆ ಧಕ್ಕೆಯಾಗಲಿಲ್ಲ’ ಎಂದು ಅವರು ಚಿತ್ರೀಕರಣದ ನೆನಪಿಗೆ ಜಾರಿದರು.

ನಿರ್ಮಾಪಕ ಎಂ. ಕೃಷ್ಣ ಮಾಸ್ಟರ್‌ ವೃತ್ತಿಯಲ್ಲಿ ಶಿಕ್ಷಕರು. ಚಿಕ್ಕವಯಸ್ಸಿನಲ್ಲಿಯೇ ಚಿತ್ರರಂಗದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಅವರು ಈಗ ‘ಟ್ರಿಗರ್‌’ ಒತ್ತಿದ್ದಾರೆ. ‘ಅಂತೂ ನನ್ನ ಕನಸು ಈಡೇರಿದೆ. ಚಿತ್ರ ನಿರ್ಮಾಣಕ್ಕೆ ಕೈಹಾಕಿದಾಗ ಹಲವು ಸ್ನೇಹಿತರು ನನ್ನಿಂದ ದೂರವಾದರು. ಹಣ ಕೇಳುತ್ತಾನೆಂಬುದೇ ಇದಕ್ಕೆ ಕಾರಣ. ಸಾಕಷ್ಟು ತೊಂದರೆಗಳ ನಡುವೆಯೂ ಚಿತ್ರ ಪೂರ್ಣಗೊಳಿಸಿದ ತೃಪ್ತಿ ಇದೆ’ ಎಂದರು.

ಹಲವು ಚಿತ್ರಗಳಿಗೆ ಸಹಾಯಕರಾಗಿ ದುಡಿದಿರುವ ವಿಜಯ್‌ ಪಾಳೇಗಾರ್‌ ಈ ಚಿತ್ರದ ಮೂಲಕ ನಿರ್ದೇಶನದ ವೃತ್ತಿ ಬದುಕಿಗೆ ಅಡಿ ಇಡುತ್ತಿದ್ದಾರೆ. ‘ಚಿತ್ರ ಕಲಾವಿದನಾಗಿಯೇ ಚಿತ್ರರಂಗದಲ್ಲಿ ದುಡಿದೆ. ಇದು ನನ್ನ ಮೊದಲ ಸಿನಿಮಾ. ಚಿತ್ರ ನೈಜವಾಗಿ ಮೂಡಿಬಂದಿರುವುದು ತೃಪ್ತಿ ತಂದಿದೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ’ ಎಂದರು.

ನಾಯಕಿ ಜೀವಿಕಾ, ‘ನನ್ನದು ಹಳ್ಳಿ ಹುಡುಗಿಯ ಪಾತ್ರ’ ಎಂದಷ್ಟೇ ಹೇಳಿ ಮಾತು ಮುಗಿಸಿದರು. ಚಂದ್ರು ಓಬಯ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಐದು ಹಾಡುಗಳಿವೆ. ಉಗ್ರಂ ರವಿ, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಸಂಕೇತ್‌ ಕಾಶಿ, ಮೈಕಲ್‌ ಮಧು, ಬಿರಾದಾರ್‌, ನೀನಾಸಂ ಅಶ್ವಥ್‌, ಸಿದ್ಧಿ ಪ್ರಶಾಂತ್‌ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT