ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸನಸಭೆಗಳಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿ ನೀಡುವ ಮಸೂದೆ: ಚಳಿಗಾಲ ಅಧಿವೇಶನದಲ್ಲಿ ಒಪ್ಪಿಗೆ– ವಿಶ್ವಾಸ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರಿಗೆ ಶೇ 33 ರಾಜಕೀಯ ಮೀಸಲಾತಿ ಕಲ್ಪಿಸುವ ಮಸೂದೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆಯಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ಗುರುವಾರ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡುವ ಅವಶ್ಯಕತೆಯಿದೆ. ಲೋಕಸಭೆಯಲ್ಲಿ  ಇದು ಬಹಳ ಕಾಲದಿಂದಲೂ ನನೆಗುದಿಯಲ್ಲಿದೆ ಎಂದರು.

‘ನಾನು ಪ್ರಧಾನಮಂತ್ರಿ ಆಗಿದ್ದಾಗ ಈ ಸಂಬಂಧ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿದ್ದೆ. ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿತ್ತು. ಲೋಕಸಭೆಯಲ್ಲಿ ಸಮಾಜವಾದಿ ಪಕ್ಷ ಸೇರಿದಂತೆ ಕೆಲವು ಪಕ್ಷಗಳ ವಿರೋಧದಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಈಗ ಬಿಜೆಪಿಗೆ ಬಹುಮತವಿದೆ. ಕಾಂಗ್ರೆಸ್‌ ಮತ್ತು  ಎಡ ಪಕ್ಷಗಳೂ ಒಪ್ಪಿಗೆ ನೀಡುತ್ತವೆ’ ಎಂದರು.

‘ಈಗಾಗಲೇ  ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಮಸೂದೆಗೆ ಒಪ್ಪಿಗೆ ಸಿಕ್ಕಿ ಸಂವಿಧಾನಕ್ಕೆ ತಿದ್ದುಪಡಿಯಾದರೆ ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 84 ಸ್ಥಾನಗಳಿಗೆ ಮಹಿಳೆಯರನ್ನು ಆಯ್ಕೆ  ಮಾಡಬಹುದು’ ಎಂದು ಹೇಳಿದರು.

ಲೀಲಾದೇವಿ ಆರ್‌. ಪ್ರಸಾದ್‌ ಮತ್ತು ಬಿ.ಟಿ.ಲಿಲತಾ ನಾಯಕ್ ಅವರನ್ನು ದೇವೇಗೌಡ ಸನ್ಮಾನಿಸಿದರು.

‘ಬೆಳೆಸಿದ ಪಕ್ಷ ಬಿಡುವುದು ಕಟ್ಟಿಕೊಂಡ ಗಂಡನನ್ನು ಬಿಟ್ಟು ಓಡಿ ಹೋದಂತೆ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌ ಹೇಳಿದರು.

ಧ್ವಜಕ್ಕೆ ವಿರೋಧವಿಲ್ಲ: ‘ಕನ್ನಡಕ್ಕೊಂದು ಧ್ವಜ ಈಗಾಗಲೇ ಇದೆ. ಮತ್ತೊಂದು ಧ್ವಜದ ಅವಶ್ಯಕತೆ ಇಲ್ಲ’ ಎಂದು ಕುಮಾರಸ್ವಾಮಿ ತಿಳಿಸಿದರು.

‘ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು  ಬಗೆಹರಿಸದೇ ಧ್ವಜ ಸಮಿತಿ ರಚನೆ ಮಾಡಿ ಯಾವ ಸಾಧನೆ ಮಾಡಲು ಹೊರಟಿದ್ದಾರೆ ಎನ್ನುವುದನ್ನು ಸಿದ್ದರಾಮಯ್ಯ ಹೇಳಲಿ’ ಎಂದರು.

ಪೊಳ್ಳು ಘೋಷಣೆಗಳ ಸರ್ಕಾರ

‘ನುಡಿದಂತೆ ನಡೆದಿದ್ದೇವೆ  ಎಂಬುದು ಸಿದ್ದರಾಮಯ್ಯ ಅವರ ಪೊಳ್ಳು ಘೋಷಣೆಯೇ ಹೊರತು ವಾಸ್ತವವಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ನುಡಿದಂತೆ ನಡೆದಿದ್ದೇವೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಲೇಖನಗಳನ್ನು ಬರೆಸಿಕೊಳ್ಳುತ್ತಿದ್ದಾರೆ. ಜಾಹಿರಾತು ನೀಡುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಕಾರ್ಯಕ್ರಮಗಳು ಜನರನ್ನು ತಲುಪುತ್ತಿಲ್ಲ’ ಎಂದರು.

‘ಸಮಾಜ ಕಲ್ಯಾಣ ಇಲಾಖೆಯಡಿ ₹ 80,000 ಕೋಟಿ ಖರ್ಚು ಮಾಡಿದ್ದೇವೆಂದು ಹೇಳಿಕೊಂಡಿದ್ದಾರೆ. ನಿತ್ಯವೂ ನನ್ನ ಮನೆ ಮುಂದೆ ದಲಿತ, ಹಿಂದುಳಿದ ವರ್ಗದ ಜನರು ನೆರವು ಕೇಳಿಕೊಂಡು ಬರುತ್ತಿದ್ದಾರೆ. ಹಾಗಿದ್ದರೆ ಸರ್ಕಾರದ ಹಣ ಎಲ್ಲಿ ಹೋಗುತ್ತಿದೆ’ ಎಂದು ಅವರು ಪ್ರಶ್ನಿಸಿದರು.

‘ತಾಯಿ ಮತ್ತು ಮಗುವಿನ ಪೌಷ್ಟಿಕ ಆಹಾರದ ಕೊರತೆ ನೀಗಿಸಲು, ಗರ್ಭಿಣಿಯರಿಗೆ ಆರನೇ ತಿಂಗಳಿಂದಲೇ ಪ್ರತಿ ತಿಂಗಳು ₹ 6,000 ಆರ್ಥಿಕ ನೆರವು ನೀಡಲಾಗುವುದು. ಮಗುವಿಗೆ ಜನ್ಮ ನೀಡಿದ ನಂತರವೂ ಮೂರು ತಿಂಗಳವರೆಗೆ ನೆರವು ನೀಡುತ್ತೇವೆ’ ಎಂದು ಅವರುಆಶ್ವಾಸನೆ ಕೊಟ್ಟರು.

ಪ್ರಮುಖ ನಿರ್ಣಯಗಳು

* ನ್ಯಾಯಾಂಗ ವ್ಯವಸ್ಥೆಯಲ್ಲಿ, ನ್ಯಾಯಾಧೀಶರ ನೇಮಕದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ.

* ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಪ್ರತಿ ಉಪವಿಭಾಗ ಮಟ್ಟದಲ್ಲಿ ಮಹಿಳಾ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯ ಸ್ಥಾಪನೆ.
* ಅರೆ ಸರ್ಕಾರಿ , ಖಾಸಗಿ ಸಂಸ್ಥೆಗಳಲ್ಲಿ ದುಡಿಯುವ ಮಹಿಳೆಯರಿಗೆ ಕಡ್ಡಾಯ ಹೆರಿಗೆ ರಜೆ  ಮತ್ತು ಸೌಲಭ್ಯ  ವೇತನ ಸಹಿತ ನೀಡಲು ಕಾನೂನು ರಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT