ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಾಥ ಕೋವಿಂದ್‌ ರಾಷ್ಟ್ರಪತಿ

ವಿರೋಧ ಪಕ್ಷಗಳ ಮೀರಾ ಕುಮಾರ್‌ ಪರಾಭವ
Last Updated 20 ಜುಲೈ 2017, 20:21 IST
ಅಕ್ಷರ ಗಾತ್ರ

ನವದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಅವರು ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ಏರಿದ ಬಿಜೆಪಿಯ ಮೊದಲ ಮುಖಂಡ ಮತ್ತು ಆರ್‌ಎಸ್‌ಎಸ್‌ ಹಿನ್ನೆಲೆಯ ಮೊದಲ ವ್ಯಕ್ತಿ. ಜತೆಗೆ ಅತ್ಯುನ್ನತ ಸಾಂವಿಧಾನಿಕ ಸ್ಥಾನ ಪಡೆದ ದಲಿತ ಸಮುದಾಯದ ಎರಡನೇ ವ್ಯಕ್ತಿ ಇವರು.

40 ರಾಜಕೀಯ ಪಕ್ಷಗಳ ಬೆಂಬಲ ಹೊಂದಿದ್ದ ಕೋವಿಂದ್‌ (71) ಅವರು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್‌ ಅವರನ್ನು ಸೋಲಿಸಿದರು. ಕೋವಿಂದ್‌ ಅವರಿಗೆ ಶೇ 65.65ರಷ್ಟು ಮತ ಸಿಕ್ಕಿದೆ. ಮತಗಳ ಮೌಲ್ಯ 7,02,044. ಪ್ರತಿಸ್ಪರ್ಧಿ ಮೀರಾ ಅವರಿಗೆ ಶೇ 34.35ರಷ್ಟು ಮತಗಳು ದೊರೆತಿವೆ. ಅದರ ಮೌಲ್ಯ 3,67,314.

ರಾಷ್ಟ್ರಪತಿ ಭವನದಲ್ಲಿ  25ರಂದು ಕೋವಿಂದ್‌ ಪ್ರಮಾಣ ಸ್ವೀಕರಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಪ್ರಮಾಣ ಬೋಧಿಸಲಿದ್ದಾರೆ.

ದೇಶದುದ್ದಕ್ಕೂ ಕೋವಿಂದ್‌ ಅವರಿಗೆ  ಭಾರಿ ಬೆಂಬಲ ವ್ಯಕ್ತವಾಗಿದೆ. ಹಾಗಾಗಿ ತಮ್ಮ ಲೆಕ್ಕಾಚಾರಕ್ಕಿಂತ 116 ಹೆಚ್ಚು ಮತಗಳು ಕೋವಿಂದ್‌ ಅವರಿಗೆ ದೊರೆತಿವೆ ಎಂದು ಅವರ ಚುನಾವಣಾ ನಿರ್ವಾಹಕರು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿಗೆ ರಾಷ್ಟ್ರಪತಿ ಚುನಾವಣೆ ಅಗ್ನಿಪರೀಕ್ಷೆಯಾಗಿತ್ತು. 18 ಪಕ್ಷಗಳು ಒಂದಾಗಿ ಮೀರಾ ಕುಮಾರ್‌ ಅವರನ್ನು ಕಣಕ್ಕೆ ಇಳಿಸಿದ್ದವು.

ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಮೀರಾ ಅವರಿಗೆ ಬೆಂಬಲ ನೀಡದೆ ಕೋವಿಂದ್‌ ಅವರನ್ನು ಬೆಂಬಲಿಸಿದರು. ಹಾಗಾಗಿ ರಾಷ್ಟ್ರಪತಿ ಚುನಾವಣೆ ವಿರೋಧ ಪಕ್ಷಗಳ ಒಗ್ಗಟ್ಟಿನಲ್ಲಿ ಸಣ್ಣ ಮಟ್ಟದ ಬಿರುಕು ಮೂಡಿಸಿದೆ.

ಆದರೆ ಬಿಜೆಪಿಯಿಂದ ಅಡ್ಡ ಮತದಾನ ಆಗಿದೆ ಎಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಮೀರಾ ಅವರಿಗೆ ನಿರೀಕ್ಷೆಗಿಂತಲೂ ಹೆಚ್ಚು ಮತಗಳು ಬಿದ್ದಿವೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಬಿಜೆಪಿ ಶಾಸಕರು ಮೀರಾ ಅವರಿಗೆ ಮತ ಹಾಕಿದ್ದಾರೆ. ಆದರೆ ವಿರೋಧ ಪಕ್ಷಗಳ ಒಗ್ಗಟ್ಟು ಗಟ್ಟಿಯಾಗಿಯೇ ಮುಂದುವರಿದಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಒಟ್ಟು ಮತದಾರರು (ಸಂಸದರು ಮತ್ತು ಶಾಸಕರು): 4,896
ಮತ ಚಲಾಯಿಸಿದವರು: 4,851
ಕೋವಿಂದ್‌ ಪರ   
ಮತಗಳು: 2,930
ಮೀರಾ ಪರ ಪತಗಳು: 1,844
ಅಸಿಂಧು ಮತಗಳು: 77
ಸಂಸದರ ಅಸಿಂಧು ಮತಗಳು: 21

* ಗೋವಾ, ಗುಜರಾತ್‌, ಛತ್ತೀಸಗಡದಲ್ಲಿ ಕೋವಿಂದ್‌ ಅವರಿಗೆ ಕಾಂಗ್ರೆಸ್‌ನಿಂದ ಅಡ್ಡಮತದಾನ

* ಕೋವಿಂದ್‌ ಅವರಿಗೆ ನಿರೀಕ್ಷೆಗಿಂತ ಹೆಚ್ಚು ಮತಗಳು ಸಿಕ್ಕ ರಾಜ್ಯಗಳು: ಮಹಾರಾಷ್ಟ್ರ, ತ್ರಿಪುರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ

* ವಿರೋಧ ಪಕ್ಷದ ಅಭ್ಯರ್ಥಿಗೆ ಈ ಬಾರಿ ದೊರೆತಷ್ಟು ಮತಗಳು ಹಿಂದೆಂದೂ ದೊರೆತಿರಲಿಲ್ಲ

* ಎರಡನೇ ದಲಿತ: ಕೋವಿಂದ್‌ ಅವರು ದೇಶದ ದಲಿತ ಸಮುದಾಯದಿಂದ ಬಂದ ಎರಡನೇ ರಾಷ್ಟ್ರಪತಿ. ಈ ಸ್ಥಾನಕ್ಕೆ ಏರಿದ್ದ ಮೊದಲ ದಲಿತ ವ್ಯಕ್ತಿ ಕೆ.ಆರ್‌. ನಾರಾಯಣನ್‌

* ರಾಷ್ಟ್ರಪತಿಯಾಗುವ ಆಕಾಂಕ್ಷೆ ಎಂದೂ ಇರಲಿಲ್ಲ. ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವವರಿಗೆ ನನ್ನ ಗೆಲುವು ಒಂದು ಸಂದೇಶ. ಇದು ದೇಶದ ಪ್ರಜಾಪ್ರಭುತ್ವದ ಶ್ರೇಷ್ಠತೆಯ ಸಂಕೇತವೂ ಹೌದು.

–ರಾಮನಾಥ ಕೋವಿಂದ್‌

3 ಹೆಚ್ಚುವರಿ ಮತಗಳ ಮೂಲ ಯಾವುದು?

ಬೆಂಗಳೂರು: ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ಅವರಿಗೆ ರಾಜ್ಯದಲ್ಲಿ ಬಿಜೆಪಿ ಲೆಕ್ಕಾಚಾರಕ್ಕಿಂತ 3 ಮತಗಳು ಹೆಚ್ಚುವರಿಯಾಗಿ ಬಿದ್ದಿದ್ದು, ಈ ಚುನಾವಣೆಯಲ್ಲಿಯೂ ಅಡ್ಡ ಮತದಾನ ನಡೆದಿರುವ  ಶಂಕೆ ಬಲವಾಗಿದೆ.

ಕಾಂಗ್ರೆಸ್‌ ಪಕ್ಷದ ಮೂರು ಮತಗಳೇ ತಿರಸ್ಕೃತವಾಗಿವೆ ಎಂದು ಭಾವಿಸಿದರೂ 166 ಮತಗಳು ಯುಪಿಎ ಅಭ್ಯರ್ಥಿ ಮೀರಾ ಕುಮಾರ್‌ ಅವರಿಗೆ ಲಭಿಸಬೇಕಿತ್ತು. ಆದರೆ, 163 ಮತಗಳನ್ನು ಮಾತ್ರ  ಅವರು ಪಡೆದಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ‘ಬಿಜೆಪಿ–45, ಬಿಎಸ್‌ಆರ್‌ಸಿ–3, ಎಂಇಎಸ್ ಬೆಂಬಲಿತ ಪಕ್ಷೇತರ ಸದಸ್ಯರು–2 ಹಾಗೂ  ನಮ್ಮ ಜತೆಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ. ನಾಗೇಂದ್ರ ಸೇರಿ ಒಟ್ಟು 52 ಮತಗಳು ಪಕ್ಕಾ ಆಗಿದ್ದವು. ನಾಲ್ಕು ಮತಗಳು ಹೆಚ್ಚುವರಿಯಾಗಿ ಬಂದಿದೆ.

ಅವು ಎಲ್ಲಿಂದ ಬಂದವು ಎಂಬುದು ಗೊತ್ತಿಲ್ಲ’ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ. ಕರ್ನಾಟಕ ಮಕ್ಕಳ ಪಕ್ಷದ ಅಶೋಕ್‌ ಖೇಣಿ ಯಾರನ್ನು ಬೆಂಬಲಿಸಿದ್ದಾರೆ ಎಂಬುದು ನಿಗೂಢ.

ಕಾಂಗ್ರೆಸ್‌ನ 124 (ಸಭಾಧ್ಯಕ್ಷ ಸೇರಿ), ಗೈರು ಹಾಜರಾದ ಇಬ್ಬರ ಮತ ಕಳೆದು ಜೆಡಿಎಸ್‌ ಗುಂಪಿನ 38, ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್. ಪುಟ್ಟಣ್ಣಯ್ಯ,  ಕೆಜೆಪಿಯ ಬಿ.ಆರ್‌. ಪಾಟೀಲ, ಕಾಂಗ್ರೆಸ್ ಸಹ ಸದಸ್ಯರಾಗಿರುವ   ಸತೀಶ ಸೈಲ್‌, ಜಿ. ಮಂಜುನಾಥ್‌, ಮಂಕಾಳ ಸುಬ್ಬ ವೈದ್ಯ, ವರ್ತೂರು ಪ್ರಕಾಶ್, ಎಸ್‌.ಎನ್. ಸುಬ್ಬಾರೆಡ್ಡಿ ಸೇರಿ ಒಟ್ಟು  169  ಮತಗಳು ಬರಬೇಕಾಗಿತ್ತು.

‘ಕಾಂಗ್ರೆಸ್ ಪಕ್ಷದ ಮತಗಳು ಎನ್‌ಡಿಎ ಅಭ್ಯರ್ಥಿಗೆ ಬಿದ್ದಿಲ್ಲ. ನಮ್ಮ ಲೆಕ್ಕಾಚಾರದಷ್ಟೇ ಮತಗಳು ಸಿಕ್ಕಿವೆ’ ಎಂದು ಕಾಂಗ್ರೆಸ್‌ ಮೂಲಗಳು ಸಮರ್ಥಿಸಿಕೊಂಡಿವೆ.

‘ನಮ್ಮ ಪಕ್ಷ ಯುಪಿಎ ಅಭ್ಯರ್ಥಿಗೆ ಬೆಂಬಲಿಸಿರುವುದರಿಂದ ನಮ್ಮವರು ಯಾರೂ ಅಡ್ಡ ಮತದಾನ ಮಾಡಿಲ್ಲ’ ಎಂದು ಜೆಡಿಎಸ್‌ ನಾಯಕರೊಬ್ಬರು ತಿಳಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT