ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದಿಲ್ಲದ ಭೂತಕಾಲದಿಂದ ದಿಢೀರ್ ಬೆಳಕಿಗೆ

Last Updated 21 ಜುಲೈ 2017, 6:12 IST
ಅಕ್ಷರ ಗಾತ್ರ

ನವದೆಹಲಿ: ಅವರದ್ದು, ದಿನಪತ್ರಿಕೆ ಓದುಗರಿಗೆ ಪರಿಚಿತವಾದ ಹೆಸರೂ ಅಲ್ಲ, ಟಿ.ವಿ ವೀಕ್ಷಕರು ಪ್ರತಿದಿನ ನೋಡುವ ಮುಖವೂ ಅಲ್ಲ. ಆದರೂ ರಾಮನಾಥ ಕೋವಿಂದ್, ತಮ್ಮ ಸದ್ದುಗದ್ದಲವಿಲ್ಲದ ಭೂತಕಾಲದಿಂದ ರಾಷ್ಟ್ರಪತಿ ಚುನಾಯಿತರ ಪಟ್ಟಿಗೆಯ ದಾಖಲೆಗೆ  ಸೇರಿದ್ದಾರೆ.

ಬಿಜೆಪಿ ಮುಖಂಡರಾಗಿದ್ದ, ಬಿಹಾರದ ರಾಜ್ಯಪಾಲರಾಗಿದ್ದ ಕೋವಿಂದ್ ಅವರು, ಪಕ್ಷದ ಮುಂಚೂಣಿಯ ನಾಯಕರೇನೂ ಆಗಿರಲಿಲ್ಲ. ಆದರೂ, ಶೇ 65ಕ್ಕೂ ಹೆಚ್ಚು ಮತಗಳನ್ನು ಪಡೆದು ಭಾರತದ ಅತ್ಯನ್ನುತ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ಏರಿದ ದಲಿತ ಸಮುದಾಯದ ಎರಡನೇ ವ್ಯಕ್ತಿ ಮತ್ತು ಬಿಜೆಪಿಯ ಮೊದಲ ಸದಸ್ಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾಗಿದ್ದಾರೆ.

ಬಿಜೆಪಿಯ ಹಿಂದುತ್ವದ ಕಾರ್ಯಸೂಚಿಯ ಜತೆ ಕೋವಿಂದ್ ಗುರುತಿಸಿಕೊಂಡವರಲ್ಲ. ಬದಲಿಗೆ, ದಲಿತರು ಮತ್ತು ದುರ್ಬಲ ವರ್ಗಗಳ ಸಬಲೀಕರಣ  ಅವರ ರಾಜಕೀಯದ ಉದ್ದೇಶ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.

ವಾಣಿಜ್ಯ ವಿಷಯದಲ್ಲಿ ಪದವಿ, ಕಾನ್ಪುರ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದವರು. ಆನಂತರ ದೆಹಲಿ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ವಕೀಲರಾಗಿದ್ದರು. ಈ ಅವಧಿಯಲ್ಲಿ ದೆಹಲಿಯ ‘ಉಚಿತ ಕಾನೂನು ನೆರವು ಸಮಾಜ’ದ ಮುಖೇನ ದಲಿತರು, ಹಿಂದುಳಿದವರು, ಬಡವರು ಮತ್ತು ಅಸಹಾಯಕ ಮಹಿಳೆಯರಿಗೆ ಉಚಿತ ಕಾನೂನು ನೆರವು ನೀಡುತ್ತಿದ್ದರು. ಆನಂತರ, 1980ರಿಂದ 93ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು.

1988ರಿಂದ 2002ರವರೆಗೆ ದಲಿತ ಮೋರ್ಚಾದ ಅಧ್ಯಕ್ಷರಾಗಿದ್ದರು. ಅಲ್ಲದೆ, ಅಖಿಲ ಭಾರತ ಕೋಲಿ ಸಮಾಜವನ್ನೂ ಮುನ್ನಡೆಸಿದ್ದರು. 1997ರಲ್ಲಿ ಕೇಂದ್ರ ಸರ್ಕಾರದ ಆದೇಶವೊಂದರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಸರ್ಕಾರಿ ನೌಕರರು ನಡೆಸಿದ ಹೋರಾಟದಲ್ಲೂ ಭಾಗವಹಿಸಿದ್ದರು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ, ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಆ ಆದೇಶವನ್ನು ವಾಪಸ್ ಪಡೆದಿದ್ದರು.

ಶಿಕ್ಷಣ ಕ್ಷೇತ್ರಕ್ಕೂ ಕೋವಿಂದ್ ಅವರ ಕೊಡುಗೆ ಇದೆ. ಲಖನೌನ ಡಾ.ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾಗಿ, ಕೋಲ್ಕತ್ತದ ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಟಿ) ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದರು.

ಬಿಹಾರದ ರಾಜ್ಯಪಾಲರಾಗಿ, ಅಲ್ಲಿನ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರ ಜತೆ ಯಾವುದೇ ಸಂಘರ್ಷವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಕೋವಿಂದ್ ಅವರನ್ನು ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಎನ್‌ಡಿಎ ಆಯ್ಕೆಮಾಡಿತ್ತು. ‘ಸಂಘರ್ಷವಿಲ್ಲದ ಕಾರ್ಯ ಸಂಬಂಧದ ಕಾರಣಕ್ಕೇ, ನಿತೀಶ್ ನೇತೃತ್ವದ ಜೆಡಿಯು, ಚುನಾವಣೆಯಲ್ಲಿ ಕೋವಿಂದ್ ಬೆಂಬಲಕ್ಕೆ ಬಂದಿತು.  ಅವರ ಈ ವರ್ತನೆಯೇ ಅನುಕೂಲವಾಗಿ ಪರಿಣಮಿಸಿತು’ ಎಂಬ ಮಾತೂ ಇದೆ. ಅವರು ಒಬ್ಬ ದಲಿತ ನಾಯಕ ಮಾತ್ರವಲ್ಲ. ಬದಲಿಗೆ ಸಂಘಟನಾ ಕೌಶಲವಿರುವ ಮತ್ತು ಪಕ್ಷಕ್ಕೆ ನಿಷ್ಠರಾಗಿದ್ದ ಬಿಜೆಪಿ ಮುಖಂಡರೂ ಹೌದು.

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಲದ ಕೋವಿಂದ್‌ ಆಯ್ಕೆಯಾದದ್ದು, ರಾಜಕೀಯ ವಿಶ್ಲೇಷಕರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಆದರೆ ಇದನ್ನು, ‘ತನಗೆ ಬೆಂಬಲವಿಲ್ಲದ ಸಾಮಾಜಿಕ ವಲಯದಲ್ಲಿ ಹೆಜ್ಜೆಯೂರುವ ಮತ್ತು ಹೊಸ ಕ್ಷೇತ್ರಗಳನ್ನು ಗೆಲ್ಲುವ ಎನ್‌ಡಿಎಯ ಚತುರ ನಡೆ’ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪ್ರಮಾಣ ವಚನಕ್ಕೂ ಮುನ್ನ...

* ಸಂಪುಟ ಕಾರ್ಯದರ್ಶಿ ಪಿ.ಕೆ. ಸಿನ್ಹಾ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಮಹರ್ಷಿ ಅವರು ರಾಮನಾಥ ಕೋವಿಂದ್‌ ಅವರನ್ನು ಭೇಟಿ ಮಾಡಿ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಮಂಗಳವಾರ (ಜುಲೈ 25) ನಡೆಯಲಿರುವ ಪ್ರಮಾಣ ವಚನ ಸಮಾರಂಭದ ಬಗ್ಗೆ ಮಾಹಿತಿ ನೀಡುವರು
* ಕೋವಿಂದ್ ಅವರು ಸದ್ಯ ನೆಲೆಸಿರುವ,  ಅಕ್ಬರ್‌ ರಸ್ತೆಯಲ್ಲಿರುವ  ನಿವಾಸದಲ್ಲಿ (ಮನೆ ಸಂಖ್ಯೆ 10) ತಾತ್ಕಾಲಿಕ ರಾಷ್ಟ್ರಪತಿ ಸಚಿವಾಲಯ ಸ್ಥಾಪನೆ
* ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಶನಿವಾರ ಕೋವಿಂದ್‌ ಅವರನ್ನು  ಭೇಟಿಯಾಗಿ ಭದ್ರತಾ ಸ್ಥಿತಿಗತಿ ಬಗ್ಗೆ ವಿವರಿಸುವರು
* ಮಂಗಳವಾರ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲಿರುವ ಕೋವಿಂದ್‌. ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ಪ್ರಮುಖ ವಿಚಾರಗಳು, ಕಡತಗಳ ಬಗ್ಗೆ ಮಾಹಿತಿ ಪಡೆಯುವರು
* ನಂತರ ಇಬ್ಬರೂ ಸಂಸತ್ತಿಗೆ ತೆರಳುವರು
* ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಂದ ಕೋವಿಂದ್‌ಗೆ ಪ್ರಮಾಣ ವಚನ ಬೋಧನೆ
* ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿ ಭವನಕ್ಕೆ ಹೋಗುವರು
* ಪ್ರಣವ್‌ ಮುಖರ್ಜಿ ಅವರು ತಮಗೆ ಹಂಚಿಕೆ ಮಾಡಿರುವ ರಾಜಾಜಿ ಮಾರ್ಗ ದಲ್ಲಿನ ನಿವಾಸಕ್ಕೆ (ಮನೆ ಸಂಖ್ಯೆ 10) ತೆರಳುವರು

ಹುಟ್ಟೂರಿನಲ್ಲಿ ಹಬ್ಬ
ಕಾನ್ಪುರ:
ಫಲಿತಾಂಶ ಹೊರಬೀಳುತ್ತಲೇ, ಇಲ್ಲಿನ ಕಲ್ಯಾಣಪುರದ ಮಹರ್ಷಿ ದಯಾನಂದ ವಿಹಾರ ಕಾಲೊನಿಯಲ್ಲಿರುವ ರಾಮನಾಥ ಕೋವಿಂದ್‌ ಮನೆಯ ಹೊರಗೆ ಹಬ್ಬದ ವಾತಾವರಣ ನಿರ್ಮಾಣ ಆಯಿತು.

ಪರಸ್ಪರ ಸಿಹಿ ತಿಂಡಿಗಳನ್ನು ಹಂಚಿದ ಸ್ಥಳೀಯ ನಿವಾಸಿಗಳು, ದೀಪಾವಳಿ, ಹೋಳಿ ಮತ್ತು ದಸರಾ ಹಬ್ಬಗಳ ರೀತಿಯಲ್ಲೇ ಕೋವಿಂದ್‌ ಅವರ ಗೆಲುವನ್ನು ಆಚರಿಸಿ ಸಂಭ್ರಮಿಸಿದರು.

‘ಕೋವಿಂದ್‌ ಅವರು 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಅವರ ಮನೆ ಕಾನ್ಪುರ ಮಹಾನಗರ ಪಾಲಿಕೆಯ 20ನೇ ವಾರ್ಡ್‌ನಲ್ಲಿದೆ. ಆ ವಾರ್ಡ್‌ಅನ್ನು ಪ್ರತಿನಿಧಿಸುವ  ಸುಯೋಗ ನನ್ನದಾಗಿದೆ’ ಎಂದು ಸ್ಥಳೀಯ ಕಾರ್ಪೊರೇಟರ್‌  ಸಂಜಯ್‌ ಬತಮ್‌ ಹೇಳಿದರು.

‘ಮತ ಎಣಿಕೆ ಆರಂಭವಾಗುವುದಕ್ಕಿಂತಲೂ ಮೊದಲು ನಾವು ಸಂಭ್ರಮಿಸಲು ಆರಂಭಿಸಿದ್ದೆವು. ಕೋವಿಂದ್‌ ಹೆಸರು ಘೋಷಿಸಿದ ದಿನದಿಂದಲೇ ಅವರು ಗೆಲ್ಲುವ ವಿಶ್ವಾಸ ನಮಗಿತ್ತು’ ಎಂದು ಅವರು ಹೇಳಿದರು.

ಗುರುವಾರ ಬೆಳಿಗ್ಗೆ 7 ಗಂಟೆಯಿಂದಲೇ ನೆರೆಹೊರೆಯವರು ಕೋವಿಂದ್‌ ಮನೆಗೆ ಬರಲು ಆರಂಭಿಸಿದ್ದರು.  ಅಧಿಕೃತವಾಗಿ ಫಲಿತಾಂಶ ಘೋಷಣೆಯಾದ ಬಳಿಕ ಕಲ್ಯಾಣಪುರದಲ್ಲಿ ಪಟಾಕಿಗಳನ್ನು ಸಿಡಿಸಿ ಜನರು ಸಂಭ್ರಮ ಪಟ್ಟರು. ಕೋವಿಂದ್ ಅವರು ಶಿಕ್ಷಣ ಪಡೆದಿದ್ದ ಡಿಎವಿ ಕಾಲೇಜಿನ ಬೋಧಕರು ಕೂಡ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು.

‘ನಮಗೆ ಇದೊಂದು ಅದ್ಭುತ ಕ್ಷಣ. ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿಯೊಬ್ಬರು ದೇಶದ ಅತ್ಯುನ್ನತ ಹುದ್ದೆಗೇರುತ್ತಿರುವುದು ಹೆಮ್ಮೆಯ ಸಂಗತಿ. 2019ರಲ್ಲಿ ನಡೆಯಲಿರುವ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ’ ಎಂದು ಕಾಲೇಜು ಪ್ರಾಂಶುಪಾಲ ಅಮಿತ್‌ ಕುಮಾರ್‌ ಶ್ರೀವಾತ್ಸವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT