ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಮಿಥಾಲಿ ರಾಜ್ ಬಳಗ

ಹರ್ಮನ್‌ಪ್ರೀತ್ ಕೌರ್ ಅಬ್ಬರದ ಶತಕ: ಅಲೆಕ್ಸ್‌ ಬ್ಲ್ಯಾಕ್‌ವೆಲ್ ಹೋರಾಟ ವ್ಯರ್ಥ
Last Updated 20 ಜುಲೈ 2017, 19:50 IST
ಅಕ್ಷರ ಗಾತ್ರ

ಡರ್ಬಿ, ಲಂಡನ್‌: ಹರ್ಮನ್‌ಪ್ರೀತ್ ಕೌರ್‌ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡದವರು ಮಹಿಳಾ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದರು.

ಇಲ್ಲಿನ ಕೌಂಟಿ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆರು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಭಾರತದ ಮಹಿಳೆಯರು 36 ರನ್‌ಗಳಿಂದ ಮಣಿಸಿದರು. ಈ ಮೂಲಕ ವಿಶ್ವಕಪ್‌ನಲ್ಲಿ ಎರಡನೇ ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

ಆರಂಭದಲ್ಲಿ ಅನುಭವಿಸಿದ ಆಘಾತವನ್ನು ಮೆಟ್ಟಿ ನಿಂತು ಭಾರತ ತಂಡ ಗಳಿಸಿದ 281 ರನ್‌ಗಳನ್ನು ಬೆನ್ನತ್ತಿದ ಎದುರಾಳಿ ತಂಡದವರು 40.1 ಓವರ್‌ಗಳಲ್ಲಿ 245 ರನ್‌ಗಳಿಗೆ ಪತನ ಕಂಡರು. ಮಳೆಯಿಂದಾಗಿ ಮೂರು ತಾಸು ವಿಳಂಬವಾಗಿ ಆರಂಭಗೊಂಡ ಪಂದ್ಯವನ್ನು 42 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 35 ರನ್‌ ಗಳಿಸುವಷ್ಟರಲ್ಲಿ ಸ್ಮೃತಿ ಮಂದಾನ ಮತ್ತು ಪೂನಮ್ ರಾವತ್‌ ಅವರ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ನಾಲ್ಕನೇ ಕ್ರಮಾಂಕದ ಹರ್ಮನ್‌ಪ್ರೀತ್ ಕೌರ್‌ ಮಿಂಚು ಹರಿಸಿದರು. ನಾಯಕಿ ಮಿಥಾಲಿ ರಾಜ್‌, ದೀಪ್ತಿ ಶರ್ಮಾ ಮತ್ತು ವೇದಾ ಕೃಷ್ಣಮೂರ್ತಿ ಅವರೊಂದಿಗೆ ಅಮೋಘ ಜೊತೆಯಾಟ ಆಡಿದ ಅವರು ಕಾಂಗರೂಗಳ ನಾಡಿನವರನ್ನು ನಿರಾಸೆಯ ಕೂಪಕ್ಕೆ ತಳ್ಳಿದರು.

171 ರನ್‌ ಸಿಡಿಸಿದ ಅವರು ತಂಡ ಭಾರಿ ಮೊತ್ತ ಗಳಿಸಲು ನೆರವಾದರು. ನಾಯಕಿಯ ಜೊತೆಗೂಡಿ 66 ರನ್‌ ಸೇರಿಸಿದ ಕೌರ್‌ ತಂಡವನ್ನು ಮೂರಂಕಿ ಗಡಿ ದಾಟಿಸಿದರು. ಮಿಥಾಲಿ ರಾಜ್‌ ಅವರು ಕ್ರಿಸ್ಟೆನ್ ಬೀಮ್ಸ್ ಎಸೆತದಲ್ಲಿ ಬೌಲ್ಡ್ ಆಗಿ ಮರಳಿದ ನಂತರ ತಂಡದ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತುಕೊಂಡ ಕೌರ್‌ ಆಸ್ಟ್ರೇಲಿಯಾದ ಪ್ರಭಾವಿ ಬೌಲರ್‌ಗಳನ್ನು ನಿರಂತರವಾಗಿ ದಂಡಿಸಿದರು. ನಾಲ್ಕನೇ ವಿಕೆಟ್‌ಗೆ ದೀಪ್ತಿ ಶರ್ಮಾ ಜೊತೆ 137 ರನ್‌ ಸೇರಿಸಿದರು. ಇದರಲ್ಲಿ ದೀಪ್ತಿ ಅವರ ಕಾಣಿಕೆ ಕೇವಲ 25 ಆಗಿತ್ತು.

ದೀಪ್ತಿ ಪೆವಿಲಿಯನ್‌ ಸೇರಿದ ನಂತರ ಕೌರ್‌ ಜೊತೆಯಾದವರು ಕಳೆದ ಪಂದ್ಯದಲ್ಲಿ ಮಿಂಚಿದ್ದ ವೇದಾ ಕೃಷ್ಣಮೂರ್ತಿ. ಮುರಿಯದ ಐದನೇ ವಿಕೆಟ್‌ಗೆ ವೇದಾ ಮತ್ತು ಕೌರ್‌ 43 ರನ್‌ ಸೇರಿಸಲು ತೆಗೆದುಕೊಂಡದ್ದು ಕೇವಲ 22 ಎಸೆತ ಮಾತ್ರ. ವೇದಾ 10 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ 16 ರನ್ ಗಳಿಸಿ ಮಿಂಚಿದರು.

ಬೌಂಡರಿ, ಸಿಕ್ಸರ್‌ಗಳ ಮಳೆ: ಆಸ್ಟ್ರೇಲಿಯಾ ವಿರುದ್ಧ ಈ ವರೆಗೆ 42 ಪಂದ್ಯಗಳ ಪೈಕಿ ಕೇವಲ ಎಂಟು ಪಂದ್ಯಗಳನ್ನು ಮಾತ್ರ ಭಾರತ ಗೆದ್ದಿತ್ತು. ಆರಂಭದಲ್ಲಿ ಎರಡು ವಿಕೆಟ್ ಕಳೆದುಕೊಂಡಾಗ ಈ ಪಂದ್ಯದಲ್ಲೂ ಭಾರತ ನಿರಾಸೆ ಅನುಭವಿಸಲಿದೆ ಎಂದು ಲೆಕ್ಕ ಹಾಕಿದವರೇ ಹೆಚ್ಚು. ಆದರೆ ಹರ್ಮನ್‌ಪ್ರೀತ್ ಕೌರ್‌ ಈ ಲೆಕ್ಕಾಚಾರವನ್ನು ಹುಸಿಗೊಳಿಸಿದರು. ಬೌಂಡರಿ ಮತ್ತು ಸಿಕ್ಸರ್‌ಗಳ ಗುಡುಗಿನೊಂದಿಗೆ ರನ್‌ ಮಳೆ ಹರಿಸಿದರು. ಅವರ ಉತ್ಸಾಹದ ಹೊಳೆಯಲ್ಲಿ ಆಸ್ಟ್ರೇಲಿಯಾ ತಂಡದವರ ಆಸೆ ಕೊಚ್ಚಿ ಹೋಯಿತು.

ಮೆಗನ್‌ ಶೂಟ್‌ ಹಾಕಿದ 13ನೇ ಓವರ್‌ನಲ್ಲಿ ಎರಡು ಬೌಂಡರಿಗಳನ್ನು ಸಿಡಿಸಿ ಇನಿಂಗ್ಸ್‌ಗೆ ವೇಗ ತುಂಬಿದ ಕೌರ್‌ ನಂತರ 20ನೇ ಓವರ್‌ ವರೆಗೂ ತಾಳ್ಮೆಯಿಂದ ಆಡಿದರು. 21ನೇ ಓವರ್‌ನಲ್ಲಿ  ಕ್ರಿಸ್ಟನ್‌ ಬೀಮ್ಸ್ ಅವರನ್ನು ಬೌಂಡರಿಗೆ ಅಟ್ಟಿದರು. ಬೀಮ್ಸ್‌ ಹಾಕಿದ 27ನೇ ಓವರ್‌ನಲ್ಲಿ ಮೊದಲ ಸಿಕ್ಸರ್ ಸಿಡಿಸಿದ ಅವರು ಇದೇ ಓವರ್‌ನಲ್ಲಿ ಬೌಂಡರಿ ಗಳಿಸಿ ಅರ್ಧಶತಕ ಪೂರೈಸಿದರು.

35ನೇ ಓವರ್‌ನಲ್ಲಿ ಕೌರ್‌ ವೃತ್ತಿಜೀವನದ ಮೂರನೇ ಶತಕ ಬಾರಿಸಿದರು. ಬೀಮ್ಸ್ ಅವರ ಎಸೆತವನ್ನು ಮಿಡ್‌ವಿಕೆಟ್‌ ಕಡೆಗೆ ಫ್ಲಿಕ್ ಮಾಡಿ ಎರಡು ರನ್‌ ಹೆಕ್ಕಿ ಮೂರಂಕಿ ದಾಟಿದ ಕೌರ್‌ ಕ್ರೀಸ್‌ನಲ್ಲಿದ್ದ ದೀಪ್ತಿ ಶರ್ಮಾ ಜೊತೆ ಸಂಭ್ರಮ ಹಂಚಿಕೊಂಡರು.

ಎಲಿಸ್‌ ಪೆರಿ ಹಾಕಿದ 40ನೇ ಓವರ್‌ನಲ್ಲಿ ಒಂಟಿ ರನ್ ಗಳಿಸಿ 150 ರನ್‌ಗಳ ಗಡಿಯನ್ನೂ ದಾಟಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ 150 ರನ್‌ ಗಳಿಸಿದ ಭಾರತದ ಎರಡನೇ ಆಟಗಾರ್ತಿ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು.

ಆಶ್ಲೆ ಗಾರ್ಡನರ್ ಹಾಕಿದ 37ನೇ ಓವರ್‌ನಲ್ಲಿ ಎರಡು ಸಿಕ್ಸರ್‌ ಮತ್ತು ಎರಡು ಬೌಂಡರಿಗಳನ್ನು ಚಚ್ಚಿ ಎದುರಾಳಿಗಳನ್ನು ಬೆಚ್ಚಿಬೀಳಿಸಿದರು. ಜೊನಾಸೆನ್ ಹಾಕಿದ 41ನೇ ಓವರ್‌ನಲ್ಲಿ ನಿರಂತರ ಎರಡು ಸಿಕ್ಸರ್‌ ಸಿಡಿಸಿದರು.

171 ರನ್‌ ಗಳಿಸಿದ ಅವರು ಏಕದಿನ ಕ್ರಿಕೆಟ್‌ನ ಇನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ ಗಳಿಸಿದ ಭಾರತದ ಎರಡನೇ ಆಟಗಾರ್ತಿ ಎನಿಸಿಕೊಂಡರು. ಐರ್ಲೆಂಡ್ ವಿರುದ್ಧ 188 ರನ್‌ ಗಳಿಸಿದ ದೀಪ್ತಿ ಶರ್ಮಾ ಅತಿಹೆಚ್ಚು ರನ್‌ ಗಳಿಸಿದ ಭಾರತದ ಬ್ಯಾಟ್ಸ್‌ವುಮನ್ ಆಗಿದ್ದಾರೆ.

ಶಿಖಾ, ಜೂಲನ್, ದೀಪ್ತಿ ಉತ್ತಮ ದಾಳಿ: ಪ್ರತಿ ಓವರ್‌ಗೆ 6.71ರ ಸರಾಸರಿಯಲ್ಲಿ ರನ್ ಗಳಿಸಬೇಕಾದ ಗುರಿಯೊಂದಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಗೆ ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ ನತ್ತು ದೀಪ್ತಿ ಶರ್ಮಾ ನೇತೃತ್ವದ ಭಾರತದ ಬೌಲರ್‌ಗಳು ನಿರಂತರ ಪೆಟ್ಟು ನೀಡಿದರು.

ಹೀಗಾಗಿ ಆಗಾಗ ವಿಕೆಟ್ ಕಳೆದುಕೊಂಡ ತಂಡದ ಐದು ಮಂದಿ ಎರಡಂಕಿ ಮೊತ್ತ ದಾಟದೆ ವಾಪಸಾದರು. ಎಲಿಸ್ ಪೆರಿ, ಎಲಿಸ್‌ ವಿಲಾನಿ ಮತ್ತು ಅಲೆಕ್ಸ್‌ ಬ್ಲ್ಯಾಕ್‌ವೆಲ್‌ ನಡೆಸಿದ ಪ್ರತಿ ಹೋರಾಟ ವ್ಯರ್ಥವಾಯಿತು.

ಸಂಕ್ಷಿಪ್ತ ಸ್ಕೋರ್‌
ಭಾರತ:
42 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 281 (ಮಿಥಾಲಿ ರಾಜ್‌ 36, ಹರ್ಮನ್‌ಪ್ರೀತ್ ಕೌರ್‌ ಔಟಾಗದೇ 171, ದೀಪ್ತಿ ಶರ್ಮಾ 25, ವೇದಾ ಕೃಷ್ಣಮೂರ್ತಿ ಔಟಾಗದೆ 16);

ಆಸ್ಟ್ರೇಲಿಯಾ: 40.1 ಓವರ್‌ಗಳಲ್ಲಿ 245(ಎಲಿಸ್ ಪೆರಿ 38, ಎಲಿಸ್‌ ವಿಲಾನಿ 75, ಅಲೆಕ್ಸ್ ಬ್ಲ್ಯಾಕ್‌ವೆಲ್‌ 90; ಜೂಲನ್ ಗೋಸ್ವಾಮಿ 35ಕ್ಕೆ2, ಶಿಖಾ ಪಾಂಡೆ 17ಕ್ಕೆ2, ದೀಪ್ತಿ ಶರ್ಮಾ 59ಕ್ಕೆ3). ಫಲಿತಾಂಶ: ಭಾರತಕ್ಕೆ 36 ರನ್‌ಗಳ ಜಯ; ಫೈನಲ್ ಪ್ರವೇಶ. ಪಂದ್ಯದ ಶ್ರೇಷ್ಠ ಆಟಗಾರ್ತಿ: ಹರ್ಮನ್‌ಪ್ರೀತ್‌ ಕೌರ್‌.

ಫೈನಲ್‌: ಜುಲೈ 23, ಲಾರ್ಡ್ಸ್‌. ಎದುರಾಳಿ– ಇಂಗ್ಲೆಂಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT