ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜ್‌ಬಾವಡಿ: ಗಣೇಶ ವಿಸರ್ಜನೆಗೆ ಆಗ್ರಹ

Last Updated 21 ಜುಲೈ 2017, 6:25 IST
ಅಕ್ಷರ ಗಾತ್ರ

ವಿಜಯಪುರ: ಐತಿಹಾಸಿಕ ತಾಜ್‌ಬಾವಡಿಯಲ್ಲಿ ಗಜಾನನ ಉತ್ಸವ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಗಜಾನನ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ‘ಹತ್ತಾರು ವರ್ಷಗಳಿಂದ ನಗರದ ಎಲ್ಲಾ ಗಜಾನನ ಉತ್ಸವ ಮೂರ್ತಿಗಳನ್ನು ತಾಜ್‌ಬಾವಡಿಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ, ಆದರೆ ಈ ಬಾರಿ  ಜಿಲ್ಲಾಡಳಿತ ವಿಸರ್ಜನೆಗೆ ನಿಷೇಧ ಹೇರಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಆಯುಕ್ತರ ಪ್ರಕಟಣೆಯಿಂದಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ, ಜಿಲ್ಲಾ ಉಸ್ತುವಾರಿ ಸಚಿವರು ತಾಜ್‌ಬಾವಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಂಘ-–ಸಂಸ್ಥೆ, ಸಾರ್ವಜನಿಕರೊಡನೆ ಸಮಾಲೋಚನೆ ನಡೆಸದ ಪರಿಣಾಮ ಗೊಂದಲ ಉಂಟಾ ಗಿದೆ, ಸಚಿವರು ಕೂಡಲೇ ಮಧ್ಯಸ್ಥಿಕೆ ವಹಿಸಿ ಗೊಂದಲ ಬಗೆಹರಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ ಮಾತನಾಡಿ ‘ತಾಜ್‌ಬಾವಡಿಯಲ್ಲಿ ಹೂಳು ತೆಗೆದಿ ರುವುದು ಸ್ವಾಗತಾರ್ಹ. ಆದರೆ ಗಜಾನನ ಉತ್ಸವ ಮೂರ್ತಿಗಳ ವಿಸರ್ಜನೆಗೆ ನಿಷೇಧ ಹೇರಿರುವುದು ಸರಿಯಲ್ಲ.

ಸ್ವಚ್ಛಗೊಂಡಂತಹ ಬಾವಡಿಗಳನ್ನು ಕಲುಷಿತಗೊಳಿಸುವ ಉದ್ದೇಶವು ಗಜಾನನ ಮಹಾಮಂಡಳಿಗಿಲ್ಲ. ತಾಜ್‌ಬಾವಡಿಯ ಆವರಣ ಮೊದಲಿನ ರೂಪದಲ್ಲಿಲ್ಲ. ಬಲಭಾಗದಲ್ಲಿ ವಕ್ಫ್ ಬೋರ್ಡ್‌ ಕಚೇರಿ, ಎಡಭಾಗದಲ್ಲಿ ಪ್ರಾರ್ಥನಾ ಮಂದಿರಗಳಿವೆ, ಈ ಎರಡು ಕಟ್ಟಡಗಳು ಅನಧಿಕೃತವಾಗಿವೆ.

ಒಂದು ಸಮಾಜಕ್ಕೆ ಧಾರ್ಮಿಕ ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ಜರುಗಿಸಲು ಅನುವು ಮಾಡಿಕೊಟ್ಟಂತೆ, ಹಿಂದೂ ಸಮಾಜದ ರಾಷ್ಟ್ರೀಯ ಹಬ್ಬವಾದ ಗಣೇಶ ಚತುರ್ಥಿ ಉತ್ಸವದಲ್ಲಿ ಗಣೇಶ ವಿಗ್ರಹಗಳನ್ನು ತಾಜ್ ಬಾವಡಿಯಲ್ಲಿ ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಕೂಡಲೇ ಈ ಎರಡು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಉಪಮೇಯರ್ ಗೋಪಾಲ ಘಟಕಾಂಬಳೆ, ಶಿವಾನಂದ ಮಾನಕರ, ಭೀಮಾಶಂಕರ ಹದನೂರ, ಮಹೇಶ ಜಾಧವ, ಉಮೇಶ ಲೋಣಿ, ಅಪ್ಪು ಸಜ್ಜನ, ಪರಶುರಾಮ ರಜಪೂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT