ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾತರ ಚಿತ್ತ ಗೋವಿನ ಜೋಳದತ್ತ

Last Updated 21 ಜುಲೈ 2017, 6:59 IST
ಅಕ್ಷರ ಗಾತ್ರ

ಹಾನಗಲ್: ಸತತ ಬರದಿಂದ ಕಂಗೆಟ್ಟಿರುವ ಕೃಷಿ ವಲಯಕ್ಕೆ ಈ ಬಾರಿಯೂ ಮಳೆಯ ಕೊರತೆ ಏರ್ಪಟ್ಟಿದ್ದು, ವಾಡಿಕೆ ಪ್ರಕಾರ ಇಲ್ಲಿಯವರೆಗೂ ಶೇ50 ರಷ್ಟು ಮಳೆ ಕಡಿಮೆಯಾಗಿದೆ. ಹೀಗಾಗಿ ಸಾಂಪ್ರದಾಯಿಕ ನಾಟಿ ಭತ್ತದ ವೈಭವ ತಾಲ್ಲೂಕಿನಲ್ಲಿ ಮರೆಯಾಗುತ್ತಿದೆ.

ಜಿಲ್ಲೆಯಲ್ಲಿಯೇ ಹೆಚ್ಚಿನ ಮಳೆ ದಾಖಲಾಗುವ ಹಾನಗಲ್‌ ತಾಲ್ಲೂಕಿನಲ್ಲಿ ಜುಲೈ ತನಕ 615 ಮಿ.ಮೀ. ಮಳೆಯಾಗಬೇಕು, ಆದರೆ ಈತನಕ 250ಕ್ಕೂ ಅಧಿಕ ಮಿ.ಮೀ. ಮಳೆಯಾಗಿದ್ದು, ವಾಡಿಕೆ ಪ್ರಕಾರ ಜುಲೈ ನಂತರ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ, ಹೀಗಾಗಿ ಅಧಿಕ ಮಳೆಯ ಭರವಸೆಯ ಜುಲೈ ತಿಂಗಳು ಸಹ ನಿರಾಶೆ ಮೂಡಿಸುತ್ತಿದೆ.

ತಾಲ್ಲೂಕಿನ ಒಟ್ಟು ಕೃಷಿ ಕ್ಷೇತ್ರದ ಪೈಕಿ ಅರ್ಧಕ್ಕಿಂತ ಹೆಚ್ಚು ಕ್ಷೇತ್ರವು ಮಳೆಯಾಶ್ರಿತ. ಒಟ್ಟು 49,183 ಹೆಕ್ಟೇರ್‌ ಕೃಷಿ ಜಮೀನು ಪೈಕಿ ಈಗಾಗಲೇ 31,583 ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆ ಕ್ಷೀಣಗೊಳ್ಳುತ್ತಿರುವ ಕಾರಣ ಭತ್ತದ ಕಣಜವಾಗಿದ್ದ ತಾಲ್ಲೂಕಿನಲ್ಲಿ ರೈತರು ಗೋವಿನಜೋಳ ಬೆಳೆಯತ್ತ ಆಸಕ್ತಿ ತೋರುತ್ತಿದ್ದಾರೆ.

7,456 ಹೆಕ್ಟರ್‌ನಲ್ಲಿ ಭತ್ತ ಬಿತ್ತನೆಯಾಗಿದ್ದರೆ, 17,971 ಹೆಕ್ಟರ್‌ ಭೂಮಿ ಗೋವಿನಜೋಳ ಬಿತ್ತನೆಗೆ ಒಳಪಟ್ಟಿದೆ. 3,668 ಹೆಕ್ಟರ್‌ ಕ್ಷೇತ್ರವು ಹತ್ತಿ, 2,499 ಹೆಕ್ಟ್‌ನಲ್ಲಿ ಸೋಯಾ ಉಳಿದ ಜಮೀನುಗಳಲ್ಲಿ ಶೇಂಗಾ ಮತ್ತಿತರ ಬೆಳೆಗಳ ಬಿತ್ತನೆಯಾಗಿದೆ.

ಮೊದಲಿನಿಂದಲೂ ತಾಲ್ಲೂಕಿನಲ್ಲಿ ಸುಮಾರು 13 ಸಾವಿರ ಹೆಕ್ಟರ್‌ ಭೂಮಿಯಲ್ಲಿ ಭತ್ತ ನಾಟಿ ಕಾರ್ಯ ನಡೆಯುತ್ತಿತ್ತು. ಮಳೆಯ ಅಭಾವ, ನೀರಾವರಿ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಕೊರತೆ ಪರಿಣಾಮ ಈಗ ನಾಟಿಕ್ಷೇತ್ರದ ಪೈಕಿ ಸುಮಾರು 6 ಸಾವಿರ ಹೆಕ್ಟರ್‌ ಕ್ಷೇತ್ರದಲ್ಲಿ ಗೋವಿನಜೋಳ ಬೆಳೆಯಲಾಗುತ್ತಿದೆ.

ಒಟ್ಟು ಕೃಷಿ ಕ್ಷೇತ್ರದ ಪೈಕಿ 27,748 ಹೆಕ್ಟರ್‌ ಭೂಮಿ ಮಳೆಯಾಶ್ರಿತ ಆಗಿದ್ದು, ಇನ್ನುಳಿದ 21,435 ಹೆಕ್ಟರ್‌ ಜಮೀನು ನೀರಾವರಿಗೆ ಒಳಪಟ್ಟಿದೆ. ಇದರಲ್ಲಿ ಧರ್ಮಾ ಕಾಲುವೆಯಿಂದಲೇ ಸುಮಾರು 6 ಸಾವಿರ ಹೆಕ್ಟರ್‌ ಭೂಮಿ ನೀರಾವರಿ ಹೊಂದಿರುವುದು ವಿಶೇಷ.

‘ತಾಲ್ಲೂಕಿನಲ್ಲಿನ ರೈತ ಸಂಪರ್ಕ ಕೇಂದ್ರಗಳಿಂದ ಈಗಾಗಲೇ ಅಗತ್ಯದ ಬೀಜ, ರಸಗೊಬ್ಬರಗಳನ್ನು ವಿತರಿಸಲಾಗಿದ್ದು, ಬೇಡಿಕೆ ಪ್ರಮಾಣದ ಮೇಲಿಂದ ಹೆಚ್ಚಿನ ದಾಸ್ತಾನು ಮಾಡಿಕೊಳ್ಳಲಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಹೇಳಿದ್ದಾರೆ.

‘ಕೂರಗಿ ಬಿತ್ತನೆ ಮಾಡಿರುವ ಭತ್ತ ಮತ್ತು ಗೋವಿನಜೋಳಕ್ಕೆ ರೋಗ ಬಾಧೆ ಅಲ್ಲಲ್ಲಿ ಕಂಡು ಬರುತ್ತಿದ್ದು, ಹಾನಗಲ್‌ಗೆ ಹೊಂದಿಕೊಂಡ ಹಳೆಕೋಟಿ ಪ್ರದೇಶ ವ್ಯಾಪ್ತಿಯಲ್ಲಿ ಭತ್ತಕ್ಕೆ ಬೆಂಕಿರೋಗ ಕಾಣಿಸಿಕೊಳ್ಳುತ್ತಿದೆ. ಗೋವಿನಜೋಳ ಬೆಳೆ ಎಲೆಗಳು ಕೆಂಪಾಗಿ ಕಾಣಿಸುವ ಬಾಧೆ ತಾಲ್ಲೂಕಿನ ಅಲ್ಲಲ್ಲಿ ಕಂಡು ಬಂದಿದೆ’ ಎಂದು ಕೃಷಿ ಸಹಾಯಕ ನಿರ್ದೇಶಕ ಡಾ.ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ (ಬೆಳೆವಿಮೆ) ಮಾಡಿಸಲು ಜುಲೈ 31 ಕೊನೆಯ ದಿನವಾಗಿದ್ದು, ಈ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯ್ತಿ ಮಟ್ಟ ಮತ್ತು ಹೋಬಳಿ ವ್ಯಾಪ್ತಿಯಲ್ಲಿನ ಬೆಳೆಗಳಿಗೆ ರೈತರು ಕಡ್ಡಾಯವಾಗಿ ವಿಮೆ ಮಾಡಿಸಬೇಕು’ ಎಂದು ಡಾ.ಬಸವರಾಜ ಹೇಳಿದ್ದಾರೆ.

* * 

ಬೆಳೆವಿಮೆ ಮಾಡಿಸಲು ರೈತರು ಕೊನೆಯ ದಿನದವರೆಗೂ ಕಾಯಬಾರದು. ಆ ವೇಳೆ ತಂತ್ರಾಂಶ ಕೈಕೊಟ್ಟರೆ ಸಮಸ್ಯೆ ಆಗುತ್ತದೆ. ಹೀಗಾಗಿ ಮುಂಚಿತವಾಗಿಯೇ ವಿಮೆ ಮಾಡಿಸಿ
ಡಾ.ಬಸವರಾಜ
ಕೃಷಿ ಸಹಾಯಕ ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT