ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕೆಂಪಾದ ಮಿನಿ ವಿಧಾನಸೌಧ

Last Updated 21 ಜುಲೈ 2017, 7:04 IST
ಅಕ್ಷರ ಗಾತ್ರ

ಹಾವೇರಿ: ಗೋಡೆಗಳ ಮೇಲೆ ಎಲೆ ಅಡಿಕೆಯ ಚಿತ್ತಾರ, ಉದ್ಯಾನದಲ್ಲಿ ಕಸದ ರಾಶಿ, ಅಲ್ಲಲ್ಲಿಯೇ ಕಸಕ್ಕೆ ಬೆಂಕಿ, ಉದ್ಯಾನಕ್ಕೆ ಮುಸರೆ ಚೆಲ್ಲುವ ಸಿಬ್ಬಂದಿ, ಎಲ್ಲೆಂದಲ್ಲಿ ಹರಡಿದ ಕಾಗದ ಪತ್ರಗಳು, ಗಬ್ಬು ವಾಸನೆ... ಇದನ್ನು ಪ್ರತ್ಯಕ್ಷವಾಗಿ ಕಾಣಬೇಕಾದರೆ ನಗರದ ರೈಲ್ವೆ ನಿಲ್ದಾಣ ಎದುರಿನ ಮಿನಿ ವಿಧಾನಸೌಧಕ್ಕೆ ಭೇಟಿ ನೀಡಬೇಕು.

ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಹಾಗೂ ವಿವಿಧ ಅಧಿಕಾರಿಗಳ ಕಚೇರಿಯನ್ನು ಹೊಂದಿರುವ ಈ ಮಿನಿ ವಿಧಾನಸೌಧದಲ್ಲಿ ಗುಟ್ಕಾ ಹಾಗೂ ಎಲೆ ಅಡಿಕೆ ಉಗುಳಿನಿಂದ ತುಂಬಿ ಹೋಗಿದೆ. ಅಲ್ಲಲ್ಲಿ ಹರಕು–ಮುರುಕು ಕುರ್ಚಿ ಮೇಜುಗಳು. ಗುಟ್ಕಾ, ಎಲೆ ಅಡಿಕೆ ತಿಂದು ಕಚೇರಿಯ ಗೋಡೆಗೇ ಉಗುಳುವ ಜನ, ಉದ್ಯಾನಕ್ಕೆ ಉಗುಳುವ ಸಿಬ್ಬಂದಿಯನ್ನೂ ಕಾಣಬಹುದು.

ಚಹಾ ಕುಡಿದ ಪ್ಲಾಸ್ಟಿಕ್ ಹಾಗೂ ಪೇಪರ್ ಗ್ಲಾಸ್‌ಗಳು ಹಾಗೂ ವ್ಯರ್ಥ ಆಹಾರ ಪದಾರ್ಥಗಳು, ಹಾಳಾದ ಇಂಕ್‌ ಪ್ಯಾಡ್‌, ಕಾಗದ, ನೀರಿನ ಬಾಟಲ್‌, ಭಿತ್ತಿ ಪತ್ರಗಳ ಜೊತೆಗೆ ಗುಟ್ಕಾ ಚೀಟಿ, ಕುರ್ಕುರೇ, ಬಿಸ್ಕೆಟ್ ಪ್ಯಾಕೇಟ್‌ಗಳನ್ನು ಉದ್ಯಾನಕ್ಕೆ ಎಸೆಯಲಾಗುತ್ತಿದೆ. ಈ ಕಸಕ್ಕೆ ಅಲ್ಲಿಯೇ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಇದರಿಂದ ಉದ್ಯಾನದ ಗಿಡಗಳಿಗೆ ಹಾನಿಯಾಗುತ್ತಿದೆ.

‘ಈ ಹಿಂದೆ ಸುಮಾರು ₹23ಲಕ್ಷ ವೆಚ್ಚದಲ್ಲಿ ಕಚೇರಿಯ ಆಂತರಿಕ ವಿನ್ಯಾಸ ಹಾಗೂ ಉದ್ಯಾನದಲ್ಲಿ ಸಸಿ ನಾಟಿ, ಮಧ್ಯೆ ಕಸದ ತೊಟ್ಟಿಗಳನ್ನು ಇಡಲಾಗಿತ್ತು. ಆದರೆ, ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಸ್ವಚ್ಛತೆ ಕಾಯ್ದುಕೊಳ್ಳುತ್ತಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಿಬ್ಬಂದಿ ತಿಳಿಸಿದರು.

‘ಇಲ್ಲಿ  ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆಯೂ ಇಲ್ಲ. ಕೆಲವರು ಕಚೇರಿಯ  ಮೂಲೆಗಳಲ್ಲೇ ಕುಳಿತಿರುತ್ತಾರೆ’ ಎಂದು ಮಹಾಂತೇಶ ಗೊಬ್ಬರಗುಂಪಿ ತಿಳಿಸಿದರು.

ಮಿನಿವಿಧಾನಸೌಧಕ್ಕೆ ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಕೆಲಸದ ನಿಮಿತ್ತ ಭೇಟಿ ನೀಡುತ್ತಾರೆ. ಅವರಿಗೆ ಆಸನ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ನಾಮಫಲಕ ಹಾಕಿ: ‘ಮಿನಿ ವಿಧಾನಸೌಧದ ಪ್ರವೇಶ ದ್ವಾರದ ಬಳಿ ವಿವಿಧ ಕಚೇರಿಗಳ ವಿವರಗಳ ನಾಮಫಲಕವನ್ನು ಅಳವಡಿಸಬೇಕು. ಪ್ರವೇಶ ದ್ವಾರದ ಬಳಿ ವಿಚಾರಣಾ ಕೌಂಟರ್‌ ಆರಂಭಿಸಬೇಕು. ಅಧಿಕಾರಿಗಳ ಭೇಟಿ ಅವಧಿಯನ್ನನಿಗದಿ ಪಡಿಸಬೇಕು’ ಎಂದು ಗುತ್ತಲ ನಿವಾಸಿ ಗುರುಬಸಪ್ಪ ನೆಗಳೂರ ಒತ್ತಾಯಿಸಿದರು.

* * 

ಸಾರ್ವಜನಿಕರಲ್ಲಿ ಹಲವು ಬಾರಿ ಮನವಿ ಮಾಡಿದರೂ,   ಜನರು ಗುಟ್ಕಾ ತಿಂದು ಉಗುಳುವುದನ್ನು ಬಿಟ್ಟಿಲ್ಲ. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಂಡು, ದಂಡ ವಿಧಿಸಲಾಗುವುದು
ಜಗದೀಶ ಮಜ್ಜಗಿ
ತಹಶೀಲ್ದಾರ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT