ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ತೆರವು ಕಾರ್ಯ ವಿಳಂಬ; ಖಂಡನೆ

Last Updated 21 ಜುಲೈ 2017, 8:37 IST
ಅಕ್ಷರ ಗಾತ್ರ

ಬಾದಾಮಿ: ಕಟ್ಟಡ ತೆರವು ಕಾರ್ಯಾಚರಣೆ ವಿಳಂಬ, ನಿರ್ಮಾಣವಾಗದ ಶೌಚಾಲಯ ಮತ್ತು ಕೈಬಿಟ್ಟುಹೋದ ಸ್ಮಶಾನ ನಿವೇಶನದ ಬಗ್ಗೆ ಪುರಸಭೆ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಸದಸ್ಯ ಶಂಕರ ಕನಕಗಿರಿ ಮಾತನಾಡಿ, ವಿಶ್ವಚೇತನ ಕಟ್ಟಡವನ್ನು, ಚಾಲುಕ್ಯ ನಗರದ ಗುಡಿಸಲುಗಳನ್ನು ಎರಡು ದಿನಗಳಲ್ಲಿ ತೆರವುಗೊಳಿಸಿದಂತೆ,  ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿರುವ ಪುರಸಭೆಯ ಸ.ನಂ. 2843/7ಎ1, 7ಎ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ನಿರ್ಮಿಸಿದ ಕಟ್ಟಡವನ್ನು ಯಾಕೆ ತೆರವುಗೊಳಿಸಲಿಲ್ಲ’ ಎಂದು  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜೂನ್‌ 28ರ ಒಳಗೆ ಕಟ್ಟಡ ಖಾಲಿ ಮಾಡಲು ಧ್ವನಿವರ್ಧಕದ ಮೂಲಕ ತಿಳಿಸಿದ್ದೀರಿ. 29ರಂದು ಮುಂಜಾನೆ 6 ಗಂಟೆಗೆ ತೆರವು ಕಾರ್ಯಾಚರಣೆ ಯಾಕೆ ಕೈಗೊಳ್ಳಲಿಲ್ಲ ಎಂದು ಶಿವಕುಮಾರ ಹಿರೇಮಠ ಪ್ರಶ್ನಿಸಿದಾಗ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರು,  ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಿಲ್ಲ ಎಂದು ಉತ್ತರಿಸಿದರು.

‘ಕೋರ್ಟ್‌ ತಡೆಯಾಜ್ಞೆ ಸಂಜೆ ಬಂದಿದೆ. ಮುಂಜಾನೆ ಯಾಕೆ ತೆರವು ಮಾಡಲಿಲ್ಲ. ಇದರಲ್ಲಿ ನೀವೇನಾದರೂ ಅಧಿಕಾರಿಗಳು ಲಂಚ ಪಡೆದಿರಬಹುದು’ ಎಂದು ಸದಸ್ಯ ಬಸವರಾಜ ತೀರ್ಥಪ್ಪನವರ ಮತ್ತು ಗಿರೀಶ ಶೆಟ್ಟರ ಆರೋಪಿಸಿದಾಗ, ಇದೇ 29ರಂದು ಮತ್ತೆ ವಿಚಾರಣೆ ಇದೆ ಎಂದು ಮುಖ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು.

ವಾರ್ಡ್ 1ರಲ್ಲಿ ಶೌಚಾಲಯ ನಿರ್ಮಿಸಲು ಆರು ತಿಂಗಳಿಂದ ಪುರಸಭೆ ಸಾಮಾನ್ಯ ಸಭೆಯಲ್ಲಿ ಹೇಳುತ್ತಾ ಬಂದಿರುವೆ. ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ? ಎಂದು ವಾರ್ಡಿನ ಸದಸ್ಯ ಶಿವುಕುಮಾರ ಹಿರೇಮಠ ಪ್ರಶ್ನಿಸಿದರು.

‘ಒಂದನೇ ವಾರ್ಡಿನಲ್ಲಿ ಗಣೇಶ ದೇವಾಲಯಕ್ಕೆ ನಿವೇಶನ ಮಂಜೂರು ಮಾಡಿದ್ದಾರೆ. ದೇವಾಲಯ ಕಟ್ಟಿದ್ದಾರೆ. ಆದರೆ ಮತ್ತೆ ಇದೇ ನಿವೇಶನವನ್ನು ಉರ್ದು ಶಾಲೆಗೆ ಅಧಿಕಾರಿಗಳು ಮಂಜೂರು ಮಾಡಿದ ಬಗ್ಗೆ ಸಭೆಯ ಗಮನಕ್ಕೆ ಬಂದಿತು. ಆ ಸಂದರ್ಭ ‘ನಮ್ಮೂರು ಶಾಂತವಾಗಿದೆ. ನಿಮ್ಮಿಂದ ಕೋಮು ಗಲಭೆಗಳು ಆರಂಭವಾಗುತ್ತವೆ. ಉರ್ದು ಶಾಲೆಗೆ ಬೇರೆ ನಿವೇಶನ ಕೊಡಿ’ ಎಂದು ಸಭೆಯಲ್ಲಿ ಸದಸ್ಯರು ಹೇಳಿದರು.

‘ಪುರಸಭೆಯಲ್ಲಿ 2009ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿವೇಶನ ರಹಿತರಿಗೆ ಆಶ್ರಯ ಮನೆ ಮತ್ತು ಹಿಂದೂ ಸ್ಮಶಾನಕ್ಕೆ ಎಂದು ಸ.ನಂ. 187ರಲ್ಲಿ 16 ಎಕರೆ ಜಮೀನನ್ನು ಪಡೆಯಲು ಠರಾವು ಮಾಡಿ ಜಿಲ್ಲಾಧಿಕಾರಿಗೆ ಕಳಿಸಲಾಗಿತ್ತು. 2011ರಲ್ಲಿ ಅಧಿಕಾರಿಗಳೇ ಇದೇ ಜಮೀನಿಗೆ ರಸ್ತೆಯಿಲ್ಲ, ಸುತ್ತಲೂ  ನೀರು ನಿಲ್ಲುತ್ತದೆ.

ವಾಸಕ್ಕೆ ಯೋಗ್ಯವಿಲ್ಲ ಎಂದು ಠರಾವು ಪಾಸು ಮಾಡಿದ್ದೀರಿ. ಅದರ ಪರಿಣಾಮ ಇಂದು ಬಡವರಿಗೆ ಆಶ್ರಯ ಮನೆ ಇಲ್ಲ ಮತ್ತು ಹಿಂದೂ ಜನರಿಗೆ ಸ್ಮಶಾನವಿಲ್ಲ’ ಎಂದು ಬಸವರಾಜ ತೀರ್ಥಪ್ಪನವರ ಆರೋಪಿಸಿದರು.

ಕೇಂದ್ರದ ಹೃದಯ ಯೋಜನೆಯ ₹ 7.51 ಕೋಟಿ ವೆಚ್ಚದ ತಟಕೋಟೆಯಲ್ಲಿ ಯುಜಿಡಿ ಕಾಮಗಾರಿ, ಪಟ್ಟಣದ ರಸ್ತೆ ಅಭಿವೃದ್ಧಿ , ವಿದ್ಯುತ್‌ ಕಂಬದ ಬದಲಾವಣೆ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗೆ ಸಭೆಯಲ್ಲಿ ಅನುಮತಿ ಪಡೆಯಲಾಯಿತು.

ಕೇಶಿಪ್‌ ಯೋಜನೆಯಲ್ಲಿ ಪಟ್ಟಣ ದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ವಿಳಂಬವಾಗಿದೆ. ಕೆಶಿಪ್‌ ಅಧಿಕಾರಿಗಳ ಮತ್ತು  ಗುತ್ತಿಗೆದಾರರ ಸಭೆಯನ್ನು ಕರೆಯಲು ಸದಸ್ಯರು ಒತ್ತಾಯಿಸಿದರು.

ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಫಾರೂಕ್‌ಅಹ್ಮದ್‌ ದೊಡಮನಿ ಕೆಶಿಪ್‌ ಅಧಿಕಾರಿಗಳ ಸಭೆಯನ್ನು ಕರೆಯಲು ಮುಖ್ಯಾಧಿಕಾರಿಗೆ ತಿಳಿಸಿದರು.
ಪಾಂಡಪ್ಪ ಕಟ್ಟಿಮನಿ ಅವರು ನೂತನವಾಗಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ನಿಂಗಮ್ಮ ರೋಣದ ಮತ್ತು ಪುರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT