ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಪಂಚಮಿಯ ವಿಶೇಷ ಅಡುಗೆಗಳು

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಶ್ರಾವಣಮಾಸದ ಆರಂಭದಲ್ಲಿಯೇ ಬರುವ ಹಬ್ಬ ನಾಗರಪಂಚಮಿ ವಿಶೇಷವಾದುದ್ದು. ಇದನ್ನು ಗರಡುಪಂಚಮಿ ಎಂದೂ ಕರೆಯುತ್ತಾರೆ. ಈ ಹಬ್ಬ ಸ್ತ್ರೀಯರಿಗೆ ವಿಶೇಷ. ಅಂದು ನಾನಾ ರೀತಿಯ ಉಂಡೆಗಳನ್ನು ತಯಾರಿಸುತ್ತಾರೆ. ನಾಗಪ್ಪನಿಗೆ ಅತಿ ಪ್ರಿಯವಾದ ಹಸಿಹಾಲು, ತುಪ್ಪ, ಭತ್ತದ ಅರಳು, ಹುರಿದ ಕಡ್ಲೆಕಾಳು, ಹುಣಸೆಕಾಯಿ, ಹಸಿ ಅಕ್ಕಿಹಿಟ್ಟು, ಅಕ್ಕಿ ತರಿ – ಇವುಗಳನ್ನು ತಯಾರಿಸಿಕೊಂಡು ನಾಗದೇವರಿಗೆ ನೈವೇದ್ಯ ಮಾಡುತ್ತಾರೆ.

ತಾಳೆಹೂವಿನಿಂದ ತನಿ ಎರೆದು, ತಂಬಿಟ್ಟು, ಚಿಗಳಿ, ಸಿಹಿಕಡುಬು, ಖಾರದ ಕಡುಬು ಮಾಡಿ ನೈವೇದ್ಯ ಮಾಡಿ, ಮಂಗಳಾರತಿ ಮಾಡುತ್ತಾರೆ. ಹೀಗೆ ನಾಗರಪಂಚಮಿಯಂದು ‘ನಾಗಪ್ಪ’ನಿಗೆ ಪ್ರಿಯವಾಗುವ ಅಡುಗೆಗಳು ಹಾಗೂ ಅವುಗಳನ್ನು ತಯಾರಿಸುವ ವಿಧಾನ...

ತಂಬಿಟ್ಟು
ಬೇಕಾಗುವ ಸಾಮಗ್ರಿಗಳು: ಅಕ್ಕಿ – 1 ಪಾವು, ಬೆಲ್ಲದ ಪುಡಿ – 2 ಕಪ್‌, ಕಾಯಿತುರಿ –2 ಕಪ್‌, ಏಲಕ್ಕಿಪುಡಿ – 1 ಚಮಚ.

ತಯಾರಿಸುವ ವಿಧಾನ: ಅಕ್ಕಿಯನ್ನು ಒಂದು ಗಂಟೆ ನೆನಸಿಟ್ಟು, ನೀರು ಬಸಿದು, ಕುಟ್ಟಿ ಜರಡಿ ಹಿಡಿದು, ಆ ಸಣ್ಣ ಹಿಟ್ಟಿಗೆ, ಕಾಯಿತುರಿ, ಬೆಲ್ಲದಪುಡಿ, ಏಲಕ್ಕಿಪುಡಿ ಹಾಕಿ, ಕುಟ್ಟಿ, ಉಂಡೆ ಕಟ್ಟಿಡಿ. (ನೀರು ಸೇರಿಸಬೇಡಿ, ಕಾಯಿತುರಿಯಲ್ಲಿ ಅದು ನೆನೆಯುತ್ತದೆ).

ಚಿಗಳಿ
ಬೇಕಾಗುವ ಸಾಮಗ್ರಿಗಳು: ಕರಿಎಳ್ಳು – 1 ಕಪ್‌, ಬೆಲ್ಲದಪುಡಿ –1/4 ಕಪ್‌.

ತಯಾರಿಸುವ ವಿಧಾನ: ಎಳ್ಳನ್ನು ಕಮ್ಮಗೆ ಹುರಿದು, ಬೆಲ್ಲದಪುಡಿ ಸೇರಿಸಿ ಕುಟ್ಟಿ ಉಂಡೆ ಕಟ್ಟಿ. (ನಾಗಪ್ಪನಿಗೆ ನೈವೇದ್ಯಕ್ಕೆ ಮಾತ್ರ, ಹಸಿಎಳ್ಳನ್ನೇ ಕುಟ್ಟಿ, ಬೆಲ್ಲ ಸೇರಿಸಿ ಉಂಡೆ ಕಟ್ಟಿ.)

ಖಾರದ ಕಡುಬು
ಬೇಕಾಗುವ ಸಾಮಗ್ರಿಗಳು: ಉದ್ದಿನಬೇಳೆ – 1 ಪಾವು, ಅಕ್ಕಿತರಿ – 2 ಪಾವು, ನೆನಸಿದ ಕಡ್ಲೆಬೇಳೆ – 3 ಚಮಚ, ಜೀರಿಗೆ – 2 ಚಮಚ, ಕರಿಮೆಣಸಿನತರಿ – 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಉದ್ದಿನಬೇಳೆಯನ್ನು 8 ಗಂಟೆ ನೆನೆಸಿ, ನೀರು ಬಸಿದು ನುಣ್ಣಗೆ ರುಬ್ಬಿ, ಅಕ್ಕಿ ತರಿ ತೊಳೆದು ಸೇರಿಸಿ. ಮಿಕ್ಕೆಲ್ಲಾ ಪದಾರ್ಥಗಳನ್ನು ಸೇರಿಸಿ ಕಲೆಸಿ. 8 ಗಂಟೆ ಮುಚ್ಚಿಟ್ಟು, ನಂತರ ಬಾಳೆಎಲೆಗೆ 3 ಚಮಚ ಹಾಕಿ, ಸುತ್ತಿ ಇಡ್ಲಿ ಸ್ಟ್ಯಾಂಡಿನಲ್ಲಿಟ್ಟು, ಆವಿಯಲ್ಲಿ 15 ನಿಮಿಷ ಬೇಯಿಸಿ, ಆರಿದ ನಂತರ ತೆಗೆದಿಡಿ

ಸಿಹಿಕಡುಬು
ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 ಪಾವು, ತೆಂಗಿನತುರಿ – 2 ಕಪ್‌, ಬೆಲ್ಲದಪುಡಿ – 2 ಕಪ್‌, ಏಲಕ್ಕಿಪುಡಿ – 1 ಚಮಚ, ಬಾಳೆಎಲೆ.

ತಯಾರಿಸುವ ವಿಧಾನ: ಅಕ್ಕಿಯನ್ನು 1 ಗಂಟೆ ನೆನೆಸಿ ನೀರು ಬಸಿದು ಕುಟ್ಟಿ, ಸಣ್ಣಹಿಟ್ಟು ತೆಗೆದು, ಅದನ್ನು ಉಕ್ಕರಿಸಿಟ್ಟುಕೊಳ್ಳಿ. ಕಾಯಿತುರಿಗೆ, ಬೆಲ್ಲ, ಏಲಕ್ಕಿ ಹಾಕಿ ಹೂರಣ ತಯಾರಿಸಿ. ಉಕ್ಕರಿಸಿಟ್ಟು ಹಿಟ್ಟಲ್ಲಿ ಹಪ್ಪಳದಗಲ ಒತ್ತಿ. ಅದರೊಳಕ್ಕೆ 1 ಚಮಚ ಹೂರಣ ತುಂಬಿ ಆವಿಯಲ್ಲಿ ಬೇಯಿಸಿ ತೆಗೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT