ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡದ ಪದಾಧಿಕಾರಿಗಳಿಗೆ ಗೇಟ್‌ ಪಾಸ್‌: ವೇಣುಗೋಪಾಲ್‌

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷ ಸಂಘಟನೆ ಮಾಡದ ಪದಾಧಿಕಾರಿಗಳಿಗೆ ಗೇಟ್‌ ಪಾಸ್‌ ಕೊಟ್ಟು ಹೊಸಬರಿಗೆ ಅವಕಾಶ ಕೊಡಲಾಗುವುದು’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಎಚ್ಚರಿಕೆ ನೀಡಿದ್ದಾರೆ.

‘ಮೊದಲು ಜವಾಬ್ದಾರಿ ಇಲ್ಲ, ಹುದ್ದೆ ಇಲ್ಲ ಎಂದು ಹೇಳುತ್ತಿದ್ದಿರಿ. ಈಗ ಜವಾಬ್ದಾರಿ ಕೊಡಲಾಗಿದೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡುವತ್ತ ಗಮನಹರಿಸಿ’ ಎಂದು ಅವರು ಶುಕ್ರವಾರ ನಡೆದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿಮಗೀಗ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಮಾಡಿಕೊಂಡು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮವಹಿಸಿ. ರಾಜ್ಯದಲ್ಲಿ ಮತ್ತೆ ನಮ್ಮ ಸರ್ಕಾರ ಬಂದರೆ ಅದರಿಂದ ನಿಮಗೇ ಲಾಭ ಎಂದೂ ಹೇಳಿದ್ದಾರೆ.

‘ಪಕ್ಷದ ಸ್ಥಾನಮಾನಕ್ಕಾಗಿ ಹೊರಗಡೆ ಬಹಳಷ್ಟು ಮಂದಿ ಕಾಯುತ್ತಿದ್ದಾರೆ. ನೀವು ಕೆಲಸ ಮಾಡದಿದ್ದರೆ ನಿಮ್ಮನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ ಅವರಿಗೆ ಸ್ಥಾನಮಾನ ನೀಡುತ್ತೇವೆ’ ಎಂದೂ ವೇಣುಗೋಪಾಲ್‌ ತಿಳಿಸಿದ್ದಾರೆ.

‘ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ, ಪದಾಧಿಕಾರಿಗಳು ಪಕ್ಷ ಸಂಘಟನೆ ಮಾಡುವಲ್ಲಿ ತೊಡಕು ಕಾಣುತ್ತಿದೆ. ಹೈಕಮಾಂಡ್‌ ಮತ್ತು ಬೂತ್‌ ಮಟ್ಟದ ಕಾರ್ಯಕರ್ತರ ಮಧ್ಯೆ ಇರುವಂತಹ ಪದಾಧಿಕಾರಿಗಳು ಸೈನಿಕರ ರೀತಿ ಕೆಲಸ ಮಾಡಬೇಕು. ನಿಮ್ಮಿಂದ ಪಕ್ಷ ಹೆಚ್ಚಿನದನ್ನು ನಿರೀಕ್ಷಿಸಿದೆ’ ಎಂದಿದ್ದಾರೆ.

‘ಬಿಜೆಪಿಯವರು ಸಂಘಟನೆ ಮಾಡುವಲ್ಲಿ ಯಶಸ್ವಿ ಆಗುತ್ತಿದ್ದಾರೆ. ಸರ್ಕಾರ ಇಲ್ಲದೆ, ಸಾಧನೆ ಇಲ್ಲದೆ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರಬೇಕಾದರೆ ಕಾಂಗ್ರೆಸ್‌ ನಾಯಕರಿಗೆ ಅದು ಏಕೆ ಸಾಧ್ಯ ಆಗುತ್ತಿಲ್ಲ. ಸರ್ಕಾರ ಇದ್ದೂ ಹುಮ್ಮಸ್ಸು ಬಾರದಿರುವುದು ಸಹಿಸಲು ಅಸಾಧ್ಯ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್‌ ನಿರೀಕ್ಷೆ ನಿಜ ಮಾಡಬೇಕು: ‘2018ರ ವಿಧಾನಸಭಾ ಚುನಾವಣೆ ನಮಗೆ ಅತ್ಯಂತ ಮುಖ್ಯ. ಅದರ ಫಲಿತಾಂಶ ನಿಮ್ಮೆಲ್ಲರ ಮೇಲೆ ನಿಂತಿದೆ. ಪಕ್ಷದ ಹೈಕಮಾಂಡ್‌ ರಾಜ್ಯದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಅದನ್ನು ನಿಜವಾಗಿಸಬೇಕಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಧ್ವಜ ವಿವಾದ ಜಾಣ್ಮೆಯಿಂದ  ನಿಭಾಯಿಸಲು ಸಲಹೆ
‘ಪ್ರತ್ಯೇಕ  ಕನ್ನಡ ಧ್ವಜದ ವಿವಾದವನ್ನು  ಜಾಣ್ಮೆಯಿಂದ ನಿಭಾಯಿಸಿ, ಪಕ್ಷದ ಹಿತಕ್ಕೆ  ಧಕ್ಕೆ ಆಗದಂತೆ ನೋಡಿಕೊಳ್ಳಬೇಕು’ ಎಂದು ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.

ಪದಾಧಿಕಾರಿಗಳ ಸಭೆಯ ಬಳಿಕ ಮುಖ್ಯಮಂತ್ರಿ ಜತೆ ಪ್ರತ್ಯೇಕ ಮಾತುಕತೆ ನಡೆಸಿ, ಧ್ವಜ ವಿವಾದದ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌ ಪಕ್ಷ  ಪ್ರತ್ಯೇಕತಾವಾದ ಮನಸ್ಥಿತಿ ಹುಟ್ಟು ಹಾಕಲು ಪ್ರಯತ್ನಿಸಲಿದೆ ಎಂದು ಬಿಜೆಪಿ ಪ್ರಚಾರ ಮಾಡುವ ಸಾಧ್ಯತೆ ಇದೆ ಎಂಬ ಆತಂಕ ವರಿಷ್ಠರಲ್ಲಿ ಮನೆ ಮಾಡಿದೆ’ ಎಂದೂ ವೇಣುಗೋಪಾಲ್‌ ತಿಳಿಸಿದರು.

‘ಧ್ವಜ ವಿವಾದದ ವಿಷಯದಲ್ಲಿ ಹೈಕಮಾಂಡ್‌ ಆತಂಕಪಡುವ ಅಗತ್ಯವಿಲ್ಲ. ಈ ವಿವಾದ ಹುಟ್ಟುಹಾಕಿದ್ದೇ ಬಿಜೆಪಿ ನಾಯಕರು. ಆದರೆ, ಈಗ ನಿಲುವು ಬದಲಾವಣೆ ಮಾಡಿ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ. ತಜ್ಞರ ವರದಿ ಬಂದ ಬಳಿಕ ಎಚ್ಚರಿಕೆ ಹೆಜ್ಜೆ ಇಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT