ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷ ಸಂಘಟನೆಗೆ ಒತ್ತು ನೀಡಲು ಜವಾಬ್ದಾರಿ ಹಂಚಿಕೆ’

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿರುವ ಕೆಪಿಸಿಸಿ, ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ನೂತನ ಪದಾಧಿಕಾರಿಗಳ ಮೊದಲ ಸಭೆಯಲ್ಲಿ ಈ ಕುರಿತು ವಿಸ್ಕೃತ ಚರ್ಚೆ ನಡೆದಿದೆ. ಅಲ್ಲದೆ, ಜುಲೈನಿಂದ ಡಿಸೆಂಬರ್‌ವರೆಗೆ ವಿವಿಧ ಕಾರ್ಯಕ್ರಮಗಳನ್ನು ಪಕ್ಷ ಹಮ್ಮಿಕೊಂಡಿದೆ.

ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ‘ಚುನಾವಣೆ ಗಮನದಲ್ಲಿಟ್ಟು ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಲಾಗಿದೆ. ಪ್ರತಿ ಜಿಲ್ಲೆಯ ಉಸ್ತುವಾರಿಯನ್ನು ಉಪಾಧ್ಯಕ್ಷರಿಗೆ ವಹಿಸಲಾಗಿದೆ. 2–3 ಜಿಲ್ಲೆಗಳಿಗೆ ಒಬ್ಬರಂತೆ ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಅಲ್ಲದೆ, ಪ್ರತಿ ಜಿಲ್ಲೆಗೆ ಒಬ್ಬರು, ದೊಡ್ಡ ಜಿಲ್ಲೆಗೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ. ಪ್ರತಿಯೊಬ್ಬ ಕಾರ್ಯದರ್ಶಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿದೆ. ಪಕ್ಷ ವಹಿಸಿದ ಕೆಲಸವನ್ನು ಬದ್ಧತೆಯಿಂದ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಪದಾಧಿಕಾರಿಗಳು ಹೊಣೆಗಾರಿಕೆ ವಹಿಸಿರುವ ಜಿಲ್ಲೆಗಳಲ್ಲಿ ಆಗಸ್ಟ್ ಒಳಗೆ ಬೂತ್‌ ಮಟ್ಟದ ಏಜೆಂಟರು ಮತ್ತು ಸಮಿತಿಗಳನ್ನು ಹಾಗೂ ಪಂಚಾಯಿತಿ ಮಟ್ಟದ ಸಮಿತಿಗಳನ್ನು ರಚಿಸಬೇಕು. ಸೆಪ್ಟೆಂಬರ್ ತಿಂಗಳಲ್ಲಿ ‘ಕಾಂಗ್ರೆಸ್‌ ನಡಿಗೆ ಮರಳಿ ಜನರ ಬಳಿಗೆ’ ಎಂಬ ಹೆಸರಿನಲ್ಲಿ ಬೂತ್‌ಮಟ್ಟದ ಸಮಿತಿ ಪ್ರತಿ ಮನೆಗೆ ತೆರಳಿ ರಾಜ್ಯ ಸರ್ಕಾರದ ಸಾಧನೆ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಜೊತೆಗೆ ಈ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯಗಳ ಬಗ್ಗೆಯೂ ಅರಿವು ಮೂಡಿಸಬೇಕು. ಅದಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಪಕ್ಷ ಮುದ್ರಿಸಿ ಹಂಚಲಿದೆ’ ಎಂದರು.

ಅಕ್ಟೋಬರ್‌ ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮಾವೇಶಗಳನ್ನು ಆಯೋಜಿಸಲಾಗುವುದು. ನವೆಂಬರ್‌ನಲ್ಲಿ ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುವುದು. ಹೀಗಾಗಿ ಆ ತಿಂಗಳ 1ನೇ ತಾರೀಕಿನಿಂದ 18ರ ಮಧ್ಯೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇಂದಿರಾ ಗಾಂಧಿ ಅವರ ಜನ್ಮದಿನವಾದ ನ. 19ರಂದು ‘ಇಂದಿರಮ್ಮ–100’ ಹೆಸರಿನಲ್ಲಿ ರಾಜ್ಯಮಟ್ಟದಸಮಾವೇಶ ಏರ್ಪಡಿಸಲಾಗುವುದು. ಆದರೆ, ಸಮಾವೇಶದ ಜಾಗ ಇನ್ನೂ ನಿರ್ಧರಿಸಿಲ್ಲ’ ಎಂದರು.

‘ಹೈದರಾಬಾದ್‌– ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ  371–ಜೆ ಅಡಿ ವಿಶೇಷ ಸ್ಥಾನಮಾನ ನೀಡಿರುವುದು, ಹಿಂದಿನ ಯುಪಿಎ ಸರ್ಕಾರದ ಸಾಧನೆ. ಈ ಕಾರಣದಿಂದ ಆಗಸ್ಟ್‌ 4ರಂದು ರಾಯಚೂರಿನಲ್ಲಿ ಪಕ್ಷದ ಬೃಹತ್‌ ಸಮಾವೇಶ ಏರ್ಪಡಿಸಲಾಗಿದೆ’ ಎಂದೂ ಅವರು ವಿವರಿಸಿದರು.

‘ಪದಾಧಿಕಾರಿಗಳ ಮೇಲೆ ನಿರೀಕ್ಷೆ ಹೆಚ್ಚಿದೆ’
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಚುನಾವಣಾ ವರ್ಷ ಆಗಿರುವುದರಿಂದ ಪದಾಧಿಕಾರಿಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಪಕ್ಷವನ್ನು ಬಲಪಡಿಸುವ

ಸವಾಲಿನ ಜೊತೆಗೆ ಮತ್ತೆ ಅಧಿಕಾರಕ್ಕೆ ತರಬೇಕಾಗಿದೆ. ನಮ್ಮ ಕಾರ್ಯಕರ್ತರು ಎದೆ ಉಬ್ಬಿಸುವ ಕೆಲಸವನ್ನು ಸರ್ಕಾರ ಮಾಡಿದೆಯೇ ಹೊರತು ಎದೆಗುಂದುವ ಕಾರ್ಯ ಮಾಡಿಲ್ಲ’ ಎಂದರು.

‘ಎಐಸಿಸಿಯಿಂದ ರಾಜ್ಯಕ್ಕೆ ನೇಮಕಗೊಂಡಿರುವ  ಉಸ್ತುವಾರಿ ಕಾರ್ಯದರ್ಶಿಗಳು ಉತ್ತಮವಾಗಿ ಕೆಲಸ ಮಾಡುತ್ತಿರುವುದು ವಿರೋಧ ಪಕ್ಷಗಳಲ್ಲಿ ನಡುಕ ಉಂಟು ಮಾಡಿದೆ. ನಾಲ್ಕು ವರ್ಷದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಜೆಪಿಗೆ ಸವಾಲು ಹಾಕಿದ್ದೇನೆ. ಬಿಜೆಪಿಯವರು
ಕೆಲಸ ಮಾಡದೆ ಮಾತನಾಡುತ್ತಾರೆ. ನಾವು ಮಾಡಿರುವ ಕೆಲಸಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿಯವರದ್ದು ಬಾಯಿ ಬಡಾಯಿ, ಸಾಧನೆ ಶೂನ್ಯ’ ಎಂದು ಹೇಳಿದರು.

‘ಸರ್ಕಾರವನ್ನು ಟೀಕಿಸಲು ಬಿಜೆಪಿಯವರರಿಗೆ ಯಾವುದೇ ವಿಷಯಗಳಿಲ್ಲ. ಹೀಗಾಗಿ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಅದನ್ನು ತಡೆಯಲು ನಮ್ಮವರು ಸಜ್ಜಾಗಬೇಕು. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸೋಣ.

ಬಿಜೆಪಿಯವರು ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ದಲಿತರಿಗೆ ಬಿಜೆಪಿಯವರು ಏನೂ ಮಾಡಲಿಲ್ಲ. ಈಗ ದಲಿತರ ಮನೆಗೆ ಭೇಟಿ ನೀಡುವ ನಾಟಕ ಆಡುತ್ತಿದ್ದಾರೆ. ದಲಿತರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇಲ್ಲ. ಸಾಮಾಜಿಕ ನ್ಯಾಯಕ್ಕೆ, ಜಾತ್ಯತೀತ ವಾದಕ್ಕೆ ಅವರು ಯಾವಾಗಲೂ ವಿರುದ್ಧ.  ಅದರಲ್ಲಿ ಬದ್ಧತೆ ಇರುವುದು ಕಾಂಗ್ರೆಸ್‌ಗೆ ಮಾತ್ರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT