ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿ ಮುಗಿಲ ಮಾಲೆಯ ಬೆನ್ನಿಗಂಟಿದೆ ಎಂಬತ್ತರ ಸಂಭ್ರಮ...

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ನಾಲ್ಕು ದಶಕಗಳಿಂದ ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆ.ಸಿ.ಶಿವಪ್ಪ ಅವರು ಮಾಗಿದ ಕವಿ ಹಾಗೂ ಚಿಂತಕ. ಇವರ ಚೌಪದಿಗಳಲ್ಲಿ ಬರುವ ‘ಮುದ್ದುರಾಮ’ನನ್ನು ಡಿವಿಜಿ ಅವರ ಮಂಕುತಿಮ್ಮನ ತಮ್ಮನೆಂದೇ ಕನ್ನಡ ವಿಮರ್ಶೆ ಗುರುತಿಸಿದೆ.

ಕಾವ್ಯ, ಪ್ರಬಂಧ, ಅನುವಾದ, ಸಂಪಾದನೆ, ಗದ್ಯಸಾಹಿತ್ಯದ ಸಾಧನೆಯನ್ನು ಗುರುತಿಸಿ ಹಲಸಂಗಿ ಗೆಳೆಯರ ಪ್ರತಿಷ್ಠಾನವು(ವಿಜಯಪುರ) 2016ನೇ ಸಾಲಿನ ‘ಮಧುರಚೆನ್ನ’ ಪ್ರಶಸ್ತಿಗಾಗಿ ಇವರನ್ನು ಆಯ್ಕೆ ಮಾಡಿದೆ. ಈ ಸಂದರ್ಭದ ಮತ್ತೊಂದು ವೈಶಿಷ್ಟ್ಯವೆಂದರೆ – ಇದೇ 26ಕ್ಕೆ ಅವರಿಗೆ ಎಂಬತ್ತು ವರ್ಷ ತುಂಬುವುದು(ಜನನ: 1937).

ಕನ್ನಡ ನವೋದಯ ಪರಂಪರೆಯ ಕೊಂಡಿಯಾಗಿರುವ ಕೆ.ಸಿ.ಎಸ್ ಯಾವುದೇ ಆಡಂಬರ, ಪ್ರಚಾರ, ಗುಂಪುಗಾರಿಕೆಯ ಸೋಂಕಿಲ್ಲದೆ, ತಮ್ಮ ಪಾಡಿಗೆ ತಾವು ಸಾರಸ್ವತ ಲೋಕದ ತಪಸ್ವಿಯಂತೆ ಕೆಲಸ ಮಾಡುತ್ತಿದ್ದಾರೆ. ಸರಳತೆ ಮತ್ತು ಕ್ರಿಯಾಶೀಲತೆ ಇವರ ವ್ಯಕ್ತಿತ್ವದ ವಿಶೇಷ ಗುಣಗಳು. ಇಳಿವಯಸ್ಸಿನಲ್ಲಿಯೂ ಓದು ಹಾಗೂ ಬರವಣಿಗೆಯಲ್ಲಿ ಕ್ರಿಯಾಶೀಲವಾಗಿರುವ ಕೆ.ಸಿ.ಎಸ್ ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ. ಒಂದು ಅಥವಾ ಎರಡು ಪುಸ್ತಕ ಪ್ರಕಟಣೆಯೊಂದಿಗೆ ಬಹುತೇಕ ಬರಹಗಾರರಿಗೆ ಸೃಜನಶೀಲ ಸೆಲೆ ಬತ್ತುತ್ತಿದೆ.

ತೀವ್ರ ಅಸಹನೆ ಮತ್ತು ಪ್ರತ್ಯೇಕತೆಯ ಚಟುವಟಿಕೆಗಳಿಂದ ಸಮಕಾಲೀನ ಸಾಹಿತ್ಯ ಇಂದು ಅತಿರೇಕದ ಹಾಗೂ ಆತಂಕದ ಸನ್ನಿವೇಶಗಳನ್ನು ಎದುರಿಸುತ್ತಿದೆ. ನಕಾರಾತ್ಮಕ ಬೆಳವಣಿಗೆಗಳು ಸಾಹಿತ್ಯವಲಯದ ಸಹೃದಯತೆ ಮತ್ತು ಮುಕ್ತ ಓದಿನ ದಾರಿಯನ್ನು ಮುಚ್ಚಿಹಾಕುವಂತಿವೆ. ಇದರಿಂದಾಗಿ ಅಪಾರ ಸಹನೆಯನ್ನು ಬೇಡುವ ಪಾಂಡಿತ್ಯ, ಓದು ಹಾಗೂ ಸೂಕ್ಷ್ಮತೆಯೂ ದಿನೇ ದಿನೇ ಕುಗ್ಗುತ್ತಿದೆ. ಹಾಗಾಗಿ ಬರವಣಿಗೆಯಲ್ಲಿ ಸಾತತ್ಯ, ಸ್ವಭಾವದಲ್ಲಿ ಸಹನೆ ಮತ್ತು ಸೌಹಾರ್ದವನ್ನು ಬೆಳೆಸಿಕೊಂಡಿರುವ ಕೆ.ಸಿ.ಎಸ್ ಅವರ ವ್ಯಕ್ತಿತ್ವ ಅಪರೂಪದ್ದು.

‘ರಾಗರತಿ’ ಕವನ ಸಂಕಲನದ ಮೂಲಕ (1983) ಕನ್ನಡ ಕಾವ್ಯ ಕ್ಷೇತ್ರವನ್ನು ಪ್ರವೇಶಿಸಿದ ಕೆ.ಸಿ.ಎಸ್ ಅವರು ‘ಅನುರಾಗ’, ‘ರಾಧಾಮಾಧವ’, ‘ಚಿತ್ತಭಿತ್ತಿ’, ‘ಚಿತ್ತವೃತ್ತಿ’, ‘ಚಿತ್ರಾಂಬರ’, ‘ಚೆಂಬೆಳಕು’, ‘ಚಿದಾನಂದ’, ‘ಚೆಲುವೆ’, ‘ಚಂದ್ರಿಕೆ’, ‘ಚಾರುಲತೆ’, ‘ಚಿತ್ರಪತ್ರ’ ಎಂಬ ಹನ್ನೆರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಈ ಎಲ್ಲ ಸಂಕಲನಗಳಿಂದ ಆಯ್ದುಕೊಂಡ ಒಂದು ಸಾವಿರ ಪದ್ಯಗಳು ಎರಡು ಸಂಪುಟಗಳಲ್ಲಿ ಪ್ರಕಟವಾಗಿವೆ (ಕೆ.ಸಿ.ಎಸ್ ಸಮಗ್ರ ಕಾವ್ಯ ಸಂಪುಟ 1, 2, ಸಂವಹನ ಪ್ರಕಾಶನ, ಮೈಸೂರು. 2014). ಗೇಯತೆ ಇವರ ಕಾವ್ಯದ ಪ್ರಧಾನ ಗುಣ. ಹಾಗಾಗಿ ಬಹುಪಾಲು ಕವಿತೆಗಳು ಗೀತೆಗಳಾಗಿ ಪ್ರಸಿದ್ಧಿ ಪಡೆದಿವೆ. ನಾಡಿನ ಹೆಸರಾಂತ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಎಂ.ಎಸ್. ಶೀಲಾ, ರತ್ನಮಾಲಾ ಪ್ರಕಾಶ್, ಬಿ.ಆರ್. ಛಾಯಾ, ಸಂಗೀತಾ ಕಟ್ಟಿ, ಎಂ.ಡಿ. ಪಲ್ಲವಿ ಮೊದಲಾದವರ ಗಾಯನದಿಂದ ಇವರ ಕಾವ್ಯ ಕನ್ನಡ ಮನಸ್ಸುಗಳನ್ನು ಮುಟ್ಟಿ ಸೃಜನಶೀಲತೆಯ ಸಾಧ್ಯತೆಗಳನ್ನು ಹೆಚ್ಚಿಸಿದೆ.

‘ಪೋಯಟ್ ಆಫ್ ಹೋಪ್’ ಎಂಬ ಬಲ್ಲವರ ಮಾತು ಶಿವಪ್ಪ ಅವರಿಗೆ ಅನ್ವಯವಾಗುತ್ತದೆ. ಇವರ ಕಾವ್ಯ ಸಹೃದಯರಲ್ಲಿ ಜೀವನಪ್ರೇಮವನ್ನು ಉದ್ದೀಪಿಸುವಂತಹದ್ದು. ಕವಿ ಪು.ತಿ.ನ ಅವರು ಶಿವಪ್ಪ ಅವರ ಕವನಗಳನ್ನು ಕುರಿತು- ’ಶಿವಪ್ಪನವರ ಕವನಗಳು ಸಾಮಾನ್ಯವಾದ ಅನುರಾಗದ ಹದದಲ್ಲಿ ಪ್ರಾರಂಭವಾಗಿ ಕವನದಿಂದ ಕವನಕ್ಕೆ ವಿವಿಧ ಸಂಚಾರಿ ಭಾವಗಳಿಂದ ಕೂಡಿಕೊಂಡು ಮಧುರವಾಗುತ್ತ ಹೋಗುತ್ತವೆ’(ರಾಗರತಿ, ಮುನ್ನುಡಿ) ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಈ ಪ್ರೇಮಗೀತೆಗಳನ್ನು ಚಿತ್ರಾಂತರಿಸುವಲ್ಲಿ ಶಿವಪ್ಪನವರ ಸ್ವಸ್ಥ ಮನಸ್ಸಿನ ವಿಶುದ್ಧ ರಸಿಕತೆ ಮತ್ತು ಕಲಾಪ್ರೇಮಗಳು ಅಭಿವ್ಯಕ್ತಗೊಳ್ಳುತ್ತವೆ. ‘ರಾಧಾಮಾಧವ’ವನ್ನು ಕನ್ನಡದ ಗೀತ ಗೋವಿಂದ ಎಂದು ಕರೆಯಬಹುದು ಎನಿಸುತ್ತದೆ ಎಂಬ ದೇಜಗೌ ಅವರ ಅಭಿಪ್ರಾಯವು ಪುತಿನ ಅವರ ಮಾತಿಗೆ ಮತ್ತಷ್ಟು ಇಂಬನ್ನು ನೀಡುತ್ತದೆ.

ಇವರ ಗೀತೆಗಳು ಒಂದು ಧಾರೆಯಾದರೆ ಮುದ್ದುರಾಮನ ಮನಸು ಎಂಬ ಅಂಕಿತದಲ್ಲಿ ಬರೆದ ಚೌಪದಿಗಳದ್ದು ಮತ್ತೊಂದು ಧಾರೆ. ನವೋದಯ ಪರಂಪರೆಯ ಹಿರಿಯ ಕವಿ ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ ಆಧುನಿಕ ಕನ್ನಡದ ಮಹತ್ವದ ಕೃತಿಯಾಗಿದ್ದು, ಸೃಜನಶೀಲತೆಯ ವಿವಿಧ ಪಲಕುಗಳು, ಸತ್ವ ಕಗ್ಗದಲ್ಲಿ ಕಾಣಿಸಿಕೊಂಡ ಮೇಲೆ ಅಂಥದ್ದೇ ಪ್ರಕಾರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹಿಡಿತ ಸಾಧಿಸಿರುವುದು ಇವರ ಹೆಚ್ಚುಗಾರಿಕೆ. ತಲಾ ಒಂದು ಸಾವಿರ ಚೌಪದಿಗಳಿರುವ ‘ಮುದ್ದುರಾಮನ ಮನಸು’ ಮತ್ತು ‘ಮುದ್ದುರಾಮನ ಬದುಕು - ಬೆಳಕು’ ಎಂಬ ಎರಡು ಸಂಪುಟಗಳು ಪ್ರಕಟಗೊಂಡಿವೆ.

ಉಳಿದಿರುವ ಚೌಪದಿಗಳ ರಾಶಿಯನ್ನು ಸೋಸಿ ಇಂತಹ ಇನ್ನೂ ಎಂಟು ಸಂಪುಟಗಳನ್ನು ಪ್ರಕಟಿಸುವ ಯೋಜನೆ ಇವರಲ್ಲಿದೆ. ಈ ಸಂಪುಟಗಳು ಕ್ರಮವಾಗಿ ಒಂದು ಆರು ಮುದ್ರಣಗಳನ್ನು, ಇನ್ನೊಂದು ಎರಡು ಮುದ್ರಣಗಳನ್ನು ಕಂಡಿವೆ. ‘ಮುದ್ದುರಾಮನ ಮನಸು’ ಇಂಗ್ಲಿಷಿನಲ್ಲಿ ‘ಮೂಸಿಂಗ್ಸ್ ಆಫ್ ಮುದ್ದುರಾಮ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೂಂಡಿದೆ (ಅನುವಾದ: ನರಸಿಂಹಭಟ್ಟ, ಪ್ರಕಾಶನ ಭಾರತೀಯ ವಿದ್ಯಾಭವನ, ಬೆಂಗಳೂರು, 2014). ನಾಡಿನ ವಾಗ್ಮಿ ಮತ್ತು ಪ್ರವಚನಕಾರ ಹಿರೇಮಗಳೂರು ಕಣ್ಣನ್, ಮಲ್ಲಯ್ಯಸ್ವಾಮಿ, ಈಶ್ವರ ಮಂಟೂರು ಮುಂತಾದವರು ತಮ್ಮ ಭಾಷಣಗಳಲ್ಲಿ ಮುದ್ದುರಾಮಾಂಕಿತ ಚೌಪದಿಗಳನ್ನು ಉದ್ಧರಿಸುತ್ತಾರೆ.

ತಿಪಟೂರಿನಲ್ಲಿ ಅಧ್ಯಾಪಕರಾಗಿರುವ ದಿವಾಕರ ಅವರು ‘ಮುದ್ದುರಾಮನ ಮನಸು’ ಓದಿ ಪ್ರಭಾವಿತರಾಗಿ ಸ್ವಯಂ ಪ್ರೇರಿತರಾಗಿ ‘ಮನೆಮನೆಗೆ ಮುದ್ದುರಾಮ’ ಎಂಬ ಗಾಯನ ಮತ್ತು ವ್ಯಾಖ್ಯಾನವನ್ನು ನಿಗದಿತವಾಗಿ ಪ್ರತಿ ಮಂಗಳವಾರ ನಡೆಸುತ್ತಿದ್ದಾರೆ. ಈ ಸಂಗತಿಗಳು ಈ ಚೌಪದಿಗಳ ಜನಪ್ರಿಯತೆಯನ್ನು ವ್ಯಕ್ತಪಡಿಸುತ್ತವೆ. ಸಹಜವಾದ ದಾರ್ಶನಿಕತೆ, ಸಾಮಾಜಿಕ ಪ್ರಜ್ಞೆ ಹಾಗೂ ನಿಸರ್ಗ ಪ್ರೀತಿ ಇವರ ಚೌಪದಿಗಳಲ್ಲಿ ಕೆನೆಗಟ್ಟಿದೆ.

ಬಲು ಹಸಿದ ಸೂರಿರದ ಅಲೆಮಾರಿ ಜನರಲ್ಲಿ
ದೀನರಲಿ ದಲಿತರಲಿ ಆ ದೇವನಿಹನೊ
ಎಸಗಿದರೆ ನಿಜಸೇವೆ ಅವನಿಗದು ನೈವೇದ್ಯ (ಮುದ್ದುರಾಮ – 504, ಪುಟ-132)

ನಿನ್ನ ಜನ ಹಸಿದಿರಲು ಮೃಷ್ಟಾನ್ನ ಉಣ್ಣದಿರು
ಇದೇ ನಿನ್ನ ಅನ್ನದಲಿ ಆ ಬೆವರಿನಂಶ
ಸುರಿಸು ನಿಜ ಕಂಬನಿಯ ಆತ್ಮವಂಚನೆ ಬೇಡ (ಮುದ್ದುರಾಮ – 496, ಪುಟ-151)

ಇಂತಹ ಮಾನವೀಯ ಮೌಲ್ಯಗಳನ್ನು ಬಿತ್ತುವುದರಿಂದಲೇ ಮುದ್ದುರಾಮ ಪ್ರಸ್ತುತವೆನಿಸುತ್ತದೆ. ಜೀವನದ ಅನೇಕ ಮಗ್ಗುಲುಗಳನ್ನು ಸರಳವಾಗಿ ಅಷ್ಟೇ ಅರ್ಥಪೂರ್ಣವಾಗಿ ಅಭಿವ್ಯಕ್ತಿಸುವುದು ಕೆಸಿಎಸ್ ಅವರಿಗೆ ಸಿದ್ಧಿಸಿದೆ. ತಮ್ಮ ಬರವಣಿಗೆ ಯಾನವನ್ನು ಕುರಿತು ಶಿವಪ್ಪನವರು ಹೇಳುವುದು ಹೀಗೆ – 'ನವ್ಯ ಸಾಹಿತ್ಯ ಚಳವಳಿಯಿಂದ ನಾನು ಹೊರಗುಳಿದೆ. ಅದೇಕೊ ನನ್ನ ಸ್ವಭಾವಕ್ಕೆ ಈ ಪಂಥ, ಈ ವಿಚಾರ ಸರಣಿ ಅಷ್ಟಾಗಿ ಹತ್ತಿರವಾಗಲಿಲ್ಲ. ಹೀಗಾಗಿ ಭಾವಗಮ್ಯವಾದ, ಗೀತಾತ್ಮಕ ಕವಿತೆಗಳೇ ಮೇಲುಗೈ ಪಡೆದವು. ಮನದ ಮಂದಹಾಸ ಹಾಗೂ ನವೋನವ ಮನೋಲ್ಲಾಸ ಕವನಿಸುವ ಬಯಕೆಗೆ ಸ್ಫೂರ್ತಿ ತುಂಬಿದವು. ಹೂಗಣ್ಣಿನಿಂದ ಹೊರ – ಒಳ ಜಗತ್ತನ್ನು ಅವಲೋಕಿಸುವ ಸಂವೇದನೆಗೆ ತಳಹದಿಯಾದವು. ನನ್ನ ನನ್ನ ಎಷ್ಟೋ ಜಡ ಗಳಿಗೆಗಳನ್ನು ಹಗುರಾಗಿಸುವ ತಂಪೆಲರಿನ ಪಿಸುಮಾತುಗಳಾದವು (ಕೆಸಿಎಸ್ ಸಮಗ್ರ ಕಾವ್ಯ ಸಂಪುಟ 1)’.

ಸಾಹಿತ್ಯಾಸಕ್ತರಾಗಿರುವ ಕೆಸಿಎಸ್, ವೃತ್ತಿಯಿಂದ ಆಡಳಿತಗಾರರು. ಆರಂಭದಲ್ಲಿ ಮದ್ರಾಸಿನ ಚರ್ಮ ಸಂಶೋಧನಾಲಯದಲ್ಲಿ ಪ್ರಕಟಣಾ ವಿಭಾಗದ ಅಧಿಕಾರಿಗಳಾಗಿದ್ದರು. ಅಲ್ಲಿ ಏಳೆಂಟು ವರ್ಷಗಳ ಕಾಲ ಸೇವೆ ಪೂರೈಸಿದ ಅನಂತರ, ಡಾ. ವಿ. ಕೃ. ಗೋಕಾಕ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಪ್ರಸಾರಾಂಗದ ನಿರ್ದೇಶಕರಾದರು. ಇವರ ಅವಧಿಯಲ್ಲಿ ಪ್ರಸಾರಾಂಗಕ್ಕೆ ಸ್ವತಂತ್ರ ಮುದ್ರಣಾಲಯ ಸ್ಥಾಪಿತವಾಯಿತು. ಕೆಲವು ಕಾಲ ಇವರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಲ್ಲಿಯೂ, ವಿಧಾನಸೌಧದ ಸಚಿವಾಲಯದಲ್ಲಿ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು.

ನವೋದಯದ ಲೇಖಕರಿಂದ ಹಿಡಿದು ಇಂದಿನ ಬರಹಗಾರರೊಡನೆಯೂ ಇವರ ಒಡನಾಟದ ಹರವು ಇದೆ. ಇದನ್ನು ಕುರಿತು ಡಿ.ಆರ್. ನಾಗರಾಜು ಅವರು ’ಕೆಲವರು ದಿನಾ ಸಿಗುತ್ತಿದ್ದರೂ ಸ್ನೇಹಿತರು ಎಂದು ಅನ್ನಿಸುವುದಿಲ್ಲ. ಕೆಲವರು ವರ್ಷಾನುಗಟ್ಟಲೆ ಭೇಟಿಯಾಗದಿದ್ದರೂ ಅಪಾರ ಸ್ನೇಹವನ್ನು ಉಳಿಸಿಕೊಂಡಿರುತ್ತಾರೆ. ನನ್ನ ಮಟ್ಟಿಗೆ ಶಿವಪ್ಪನವರು ಎರಡನೇ ಗುಂಪಿಗೆ ಸೇರಿದವರು. ನಾನು ಶಿವಪ್ಪನವರನ್ನು ಭೇಟಿಯಾಗದೆ ಹಲವಾರು ವರ್ಷಗಳೇ ಕಳೆದು ಹೋಗಿದ್ದವು. ಕಣ್ಣಿನಿಂದ ಮರೆಯಾದರೇನಂತೆ; ಮನಸ್ಸಿನಿಂದಲ್ಲ ಎಂಬ ಸ್ನೇಹದ ಜಾತಿ ಶಿವಪ್ಪನವರದು’ ಎಂದಿದ್ದಾರೆ (‘ಅನುರಾಗ’ ಕೃತಿಯ ಮುನ್ನುಡಿ). ಇಂತಹ ಸ್ನೇಹಜಾಲದೊಡನೆ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಸಾಹಿತ್ಯದ ಮಹತ್ವದ ಕವಿ - ಕೃತಿಗಳನ್ನು ನಿರಂತರವಾಗಿ ಅನುಸಂಧಾನ ಮಾಡುತ್ತ, ಓದು ಹಾಗೂ ಬರವಣಿಗೆಯಲ್ಲಿ ವಿಶ್ರಾಂತ ಜೀವನವನ್ನು ಮೈಸೂರಿನಲ್ಲಿ ಸಾಗಿಸುತ್ತಿದ್ದಾರೆ.

– ಡಾ. ನೀಲಗಿರಿ ತಳವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT