ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಮ ಗಿಲಿಮರಿ ಎಲ್ಲಿ?

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ತಿದಿನ ಶಾಲೆಯಿಂದ ಬರುತ್ತಿದ್ದಂತೆ ಸಂಜೆಯ ಒಂದು ಗಂಟೆಯನ್ನು ತಂಗಿಯ ಮಗಳೊಂದಿಗೆ ಕಳೆಯುವುದು ಸೂರ್ಯ ಮುಳುಗುವಷ್ಟೇ ಸತ್ಯ. ತಂಗಿಯ ಮಗಳು ಅಂದರೆ ಎರಡು ವರ್ಷದ ಪುಟ್ಟ ಪಾಪು. ಮಾತುಗಳಿನ್ನೂ ಎರಡು ಪದಗಳ ವಾಕ್ಯವನ್ನು ಪೂರ್ಣವಾಗಿಸುತ್ತಿರಲಿಲ್ಲ. ಆ ತೊದಲ ಮೊದಲ ಮಾತುಗಳೆಲ್ಲವೂ ಮುತ್ತಿಗೆ ಮುತ್ತು ಪೋಣಿಸಿದ ಮಣಿಸರದಂತೆ.

ಅವಳಿಗೆ ಸಂಜೆಯ ಹೊತ್ತು ಅಂದರೆ ಮಾಮ, ಮಾಮ ಅಂದರೆ ಸಂಜೆ ಅನ್ನುವಂತಾಗಿತ್ತು. ಮೊದಮೊದಲು ಮನೆಯ ಒಳಗೆ ಆಟವಾಡುತ್ತ ಈ ಸಮಯ ಹೋಗುತ್ತಿತ್ತು. ಅವಳ ಭಾಷೆಯಲ್ಲಿ ಆಟದ ಹೆಸರುಗಳನ್ನು ಹೇಳುವುದಾದರೆ ಗೋಕಲಿ(ಜೋಕಾಲಿ), ಜೋಸು ಬಾ (ಬಾಕ್ಸ್‌ಗಳನ್ನು ಜೋಡಿಸುವುದು), ಕಾಲು ಬಿಲು (ಕಾರು ಬಿಡುವ ಆಟ), ಆನಿ ಮಾಲೆ (ಆನೆ ಬಂತಾನೆ) ಹೀಗೆ ಏನೇನೋ..! ಸ್ವಲ್ಪ ದಿನಗಳ ನಂತರ ಆ ಆಟಗಳೆಲ್ಲ ಹಳತೆನಿಸಿ ವರಾಂಡಕ್ಕೆ ಶಿಫ್ಟ್ ಆಯ್ತು ಆಟದ ಮೈದಾನ.

ಅಲ್ಲೇನಿದ್ದರೂ ರಸ್ತೆಯಲ್ಲಿ ಹೋಗುವ ಬರುವ ಎಲ್ಲವನ್ನೂ ನೋಡುವುದು, ಕೇಕೆ ಹಾಕುತ್ತಾ ಕುಣಿಯುವುದು, ಅವುಗಳನ್ನು ಬಾ ಬಾ ಎಂದು ಕರೆಯುವುದೇ ಆಟವಾಗಿರುತ್ತಿತ್ತು. ರಸ್ತೆಯ ಮೇಲಿನ ಎತ್ತು ಆಕಳು ಎಮ್ಮೆ ಕಂಡರೆ ‘ಅಂಬಾ ಬಂತು’ ಅನ್ನುವ ಕೂಗಾಟ ಕುಣಿದಾಟ, ಕುರಿಮರಿ ನೋಡಿದೊಡನೆ ‘ಕುಇಮಇ ಕುಇಮಇ’ ಅನ್ನುವುದು, ಕಾಗೆ ಹಾರಿದರೆ ‘ಕಾಕಿ ಕಾಕಿ’ ಎನ್ನುತ್ತಾ ‘ಉಶ್, ಉಶ್’ ಎಂದು ಓಡಿಸುವುದು, ಮೇಕೆ ಕಂಡರೆ ‘ಗೋಟು,ಗೋಟು’ ಎಂದು ಕೂಗಿ ‘ಬಾ,ಬಾ..’ ಎಂದು ಕರೆಯುವುದು ವಿರಾಮವಿಲ್ಲದ ಆಟ.

ಒಂದು ದಿನ ಬಟ್ಟೆ ತೊಳೆಯುವಾಗ ಟೆರೇಸ್‍ನ ಪರಿಚಯವಾಯ್ತು ಗುಂಡನಿಗೆ. ನಾನು ಅವಳನ್ನು ‘ಗುಂಡ ಗುಂಡ’ ಎಂದೇ ಕರೆಯುತ್ತಿದ್ದೆ. ನೀರನ್ನು ನೋಡಿ ‘ಬುಆ..ಬುಆ..’ ಅನ್ನುತ್ತ ನೀರಿನಾಟದಲ್ಲಿ ಬಟ್ಟೆ ಎಲ್ಲಾ ತೋಯಿಸಿಕೊಂಡಳು. ಬಾಯಿಯಲ್ಲಿ ನೀರು ತುಂಬಿಕೊಂಡು ಪುರ್ ಮಾಡುವುದು ಅವಳಿಗೆ ತುಂಬಾ ಇಷ್ಟದ ನೀರಾಟ ಆಯ್ತು. ನೀರನ್ನು ಮುಟ್ಟಿ ‘ತಣ್ಣ,ತಣ್ಣ(ತಣ್ಣಗೆ)’ ಅನ್ನುವುದು ಅವಳ ಬಾಯಲ್ಲಿ ಕೇಳುವುದೇ ಚಂದ.

ಅವತ್ತಿನಿಂದ ಆಟದ ಮೈದಾನ ಅಂದರೆ ಟೆರೇಸ್ ಆಗಿಬಿಟ್ಟಿತು. ಆದರೆ ನೀರಿನಾಟ ಅವಳ ಆರೋಗ್ಯದಲ್ಲಿ ಏರುಪೇರು ಮಾಡಿ ಶೀತಜ್ವರ ಬರಲು ಕಾರಣವಾಯ್ತು. ಅದನ್ನು ತಪ್ಪಿಸಲು ನಮ್ಮ ಮನೆಯ ಹಿಂದೆ ಇದ್ದ ಮರಗಿಡಗಳನ್ನು ತೋರಿಸುತ್ತಿದ್ದೆ. ದೊಡ್ಡದೊಂದು ಬೇವಿನಮರ,ಅದರ ಹಸಿರು, ಗಾಳಿಗೆ ಹೋಯ್ದಾಡುವ ಕೊಂಬೆಗಳು,ಅದರಲ್ಲಿದ್ದ ಹಕ್ಕಿಗಳು ಇವಳ ಗಮನ ಸೆಳೆದವು. ಇದು ನಮ್ಮ ನಿತ್ಯದ ದಿನಚರಿ ಆಯ್ತು. ಪ್ರತಿದಿನವೂ ಟೆರೇಸ್ ಮೇಲೆ ಹೋಗುವುದು ಆ ಮರದ ಮೇಲಿದ್ದ ಹಕ್ಕಿಗಳೊಂದಿಗೆ ಆಟ ಆಡುವುದು ಅಂದರೆ ಇವಳು ಒಂದು ಪುಟ್ಟ ಹಕ್ಕಿಯಂತಾಗುತ್ತಿದ್ದಳು.

ದಿನಗಳು ಉರುಳಿದಂತೆ ಬೇವಿನ ಮರವೆಲ್ಲ ಹಚ್ಚಹಸಿರಾಗಿ ಮೈದುಂಬಿಕೊಂಡಿತು. ಹಾಗೆ ಕಾಯಿ ಬಿಟ್ಟು ಹಣ್ಣಾಗುತ್ತಿದ್ದಂತೆ ಮರದ ತುಂಬೆಲ್ಲ ಹಕ್ಕಿಗಳ ಹಬ್ಬದ ಸಡಗರ. ಒಂದು ದಿನ ಸಂಜೆಯಲ್ಲಿ ಟೆರೇಸ್‍ಗೆ ಹೋದಾಗ ಗಿಳಿಗಳು ಕಂಡವು. ನನಗೂ ಎಲ್ಲಿಲ್ಲದ ಖುಷಿ! ಇದೇನಿದು ಗೀಳಿಗಳೇಕೆ ಇಲ್ಲಿ ಎಂದು ಯೋಚಿಸಿದಾಗ ಹತ್ತಿರದಲ್ಲಿದ್ದ ರೈಸ್‍ಮಿಲ್ ಇತ್ತು. ಅಲ್ಲಿನ ಭತ್ತ ತಿನ್ನಲು ಬಂದಿರಬಹುದು ಅಂದುಕೊಂಡು ‘ಗುಂಡ, ನೋಡಲ್ಲಿ ನೋಡಲ್ಲಿ ಗಿಳಿ’ ಎಂದು ತೋರಿಸಿದೆ. ಅದಕ್ಕವಳು ‘ಗಿಲಿಮಇನಾ..! ಎಲ್ಲಿ ಎಲ್ಲಿ?’ ಎಂದು ಕೇಳುತ್ತಾ ಮತ್ತೆ ನಾನು ತೋರಿಸಿದಾಗ ಕೇಕೆ ಹಾಕಿ ಕುಣಿದು ಚಪ್ಪಾಳೆ ತಟ್ಟಿ ಖುಷಿಪಟ್ಟಳು. ಆ ದಿನದಿಂದ ಗಿಳಿಮರಿ ನಮ್ಮ ಆಟದ ಸುಂದರ ಭಾಗವಾಯ್ತು. ಪ್ರತಿಸಂಜೆಯೂ ಬಿಟ್ಟೂ ಬಿಡದಂತೆ ಬರುತ್ತಿದ್ದ ನಾವೂ ಒಂದೊಂದು ದಿನ ಗಿಳಿಗಳಿಲ್ಲದಾಗ ಬೇಸರವಾಗುತ್ತಿತ್ತು. ಅವಳಂತೂ ‘ಮಾಮ ಗಿಲಿಮಇ ಎಲ್ಲಿ’ ಅನ್ನುತ್ತ ‘ಗಿಲಿಮಇ ಇಲ್ಲ’ ಎಂದೂ ಹೇಳುತ್ತಿದ್ದಳು.

ಎಂದಿನಂತೆಯೇ ಒಂದು ಸಂಜೆ ಟೆರೆಸ್ ಮೇಲೆ ಹೋದಾಗ ಆಘಾತ ಕಾದಿತ್ತು. ಗಿಳಿಗಳು ಇಲ್ಲಿರುವುದು ನಮಗೆ ಆಗಾಗ ಅಚ್ಚರಿ ಅನಿಸಿದರೆ ಇವತ್ತು ಬೇವಿನ ಮರವೇ ಇಲ್ಲ! ಅಲ್ಲಿ ಒಂದು ಕ್ಷಣವೂ ನಿಲ್ಲಲಾಗದೆ ಕೆಳಗೆ ಬಂದಿಬಿಟ್ಟೆ. ಪಾಪ ಈ ಪುಟ್ಟ ಹುಡುಗಿ ‘ಮಾಮ ಮಾಮ ಮಾಲೆ ಬಾ, ಗಿಲಿಮಇ ತೋಸು ಬಾ, ಗಿಲಿಮಇ ಎಲ್ಲಿ?’ ಒಂದೇ ಸಮನೆ ಹಟ ಮಾಡುತ್ತಾ ಅಳು ಶುರು ಮಾಡಿದಳು. ನನಗೆ ದಿಕ್ಕೇ ತೋಚದಂತಾಯ್ತ.

ಮನಸ್ಸಿನ ಚಡಪಡಿಕೆಯನ್ನು ಸಹಿಸಿಕೊಳ್ಳಲಾಗದೆ ಬೇವಿನ ಮರವಿದ್ದ ಮನೆಯವನ್ನು ಹೋಗಿ ಕೇಳಿದೆ. ‘ನಮ್ಮ ರೈಸ್‍ಮಿಲ್‍ಗೆ ಗಿರಾಕಿ ಕಡಿಮೆ ಆಗಿದ್ರು, ರೈಸ್‍ಮಿಲ್ ಮುಂದೆ ಬೇವಿನ ಮರ ಇರೋದ್ರಿಂದ ಹಾಗಾಗಿದೆ ಅಂತ ಜ್ಯೋತಿಷಿ ಹೇಳಿದ್ರಂತೆ! ಅದಕ್ಕೆ ಕಡಿಸಿಬಿಟ್ವಿ.’ ಎಂದು ತೀರ ಸಹಜವಾಗಿ ಉತ್ತರಿಸಿ ಅದನ್ನೆಲ್ಲ ಕೇಳೋಕೆ ನೀವ್ಯಾರು ಎಂದು ಪ್ರಶ್ನಿಸುವಂತೆ ದುರುಗುಟ್ಟಿದರು. ‘ಎರಡು ವರ್ಷಗಳಿಂದ ಸರಿಯಾಗಿ ಮಳೆ ಆಗಿಲ್ಲ, ಬೆಳೆ ಇಲ್ಲ. ಇನ್ನು ಎಲ್ಲಿಂದ ಬರುತ್ತಾರೆ ಗಿರಾಕಿಗಳು?’ ಎಂದು ಹೇಳಬೇಕೆಂದವನು ಸುಮ್ಮನೆ ಬಂದೆ. ಮರವೇ ಹೋಗಿದೆ ಮಾತಿನಿಂದೇನು ಉಪಯೋಗ ಎಂಬ ಯೋಚನೆ ನನ್ನದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT