ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ನಿರೀಕ್ಷೆಯಲ್ಲಿ ಭಾರತ

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಫಿಬಾ ಏಷ್ಯಾಕಪ್‌ ಮಹಿಳಾ  ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯುವ ಮಹಾದಾಸೆ ಹೊತ್ತಿರುವ ಭಾರತ ತಂಡದವರು ಈ ಬಾರಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಭಾನುವಾರ ನಡೆಯುವ ‘ಎ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಉಜ್ಬೆಕಿಸ್ತಾನದ ಸವಾಲು ಎದುರಿಸಲಿದೆ. ಉಭಯ ತಂಡಗಳ ನಡುವಣ ಈ ಹೋರಾಟಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧಗೊಂಡಿದೆ.

ಭಾರತ ತಂಡ ‘ಬಿ’ ಡಿವಿಷನ್‌ನಲ್ಲಿ ಆಡುತ್ತಿದ್ದು ಈ ಬಾರಿ ಪ್ರಶಸ್ತಿ ಗೆದ್ದರೆ  ‘ಎ’ ಡಿವಿಷನ್‌ಗೆ ಅರ್ಹತೆ ಗಳಿಸಬಹುದಾಗಿದೆ. ಹೀಗಾಗಿ ಆತಿಥೇಯರಿಗೆ ಈ ಚಾಂಪಿಯನ್‌ಷಿಪ್‌ ಮಹತ್ವದ್ದೆನಿಸಿದೆ.

ಚಾಂಪಿಯನ್‌ಷಿಪ್‌ನಲ್ಲಿ ಇದು ವರೆಗೂ 17 ಬಾರಿ ಆಡಿರುವ ಭಾರತ ತಂಡ ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ. 2013ರಲ್ಲಿ 5ನೇ ಸ್ಥಾನ ಗಳಿಸಿದ್ದು  ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ.

ಈ ಬಾರಿ ತವರಿನಲ್ಲಿ ಚಾಂಪಿ ಯನ್‌ಷಿಪ್‌ ನಡೆಯುತ್ತಿರುವ ಕಾರಣ ಭಾರತಕ್ಕೆ ಪ್ರಶಸ್ತಿ ಜಯಿಸುವ ಉತ್ತಮ ಅವಕಾಶ ಇದ್ದು, ಇದನ್ನು ತಂಡ ಸದುಪಯೋಗಪಡಿಸಿಕೊಳ್ಳಬೇಕಿದೆ.

ವಿದೇಶಿ ಕೋಚ್‌ ಜೊರಾನ್‌ ವಿಸಿಕ್‌ ಅವರ ಮಾರ್ಗದರ್ಶನದಲ್ಲಿ ತರಬೇತು ಗೊಂಡಿರುವ ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಶಕ್ತಿಯುತವಾಗಿದೆ.

ಅಂಜನಾ, ಗ್ರೀಷ್ಮಾ, ರಸ್‌ಪ್ರೀತ್‌ ಸಿಧು, ನವನೀತಾ, ಜೀನಾ ಮತ್ತು ಶಿರಿನ್‌ ವಿಜಯ್‌ ಲಿಮಯೆ ಅವರು ಮುಂಚೂಣಿ ವಿಭಾಗದಲ್ಲಿ ತಂಡದ ಆಧಾರಸ್ತಂಭ ಗಳಾಗಿದ್ದಾರೆ.

ಪಾಯಿಂಟ್‌ ಗಾರ್ಡ್‌ಗಳಾದ ಬರ್ಕಾ ಸೊಂಕಾರ, ಕವಿತಾ ಅಕುಲಾ, ಅನಿತಾ ಪಾಲ್‌ ದೊರೈ ಅವರ ಮೇಲೂ ಭರವಸೆ ಇಡಬಹುದಾಗಿದೆ. ಕರ್ನಾಟಕದ ಬಾಂಧವ್ಯ, ಅನ್‌ಮೋಲ್‌ಪ್ರೀತ್‌ ಸಿಂಗ್‌, ರಾಜ ಪ್ರಿಯದರ್ಶಿನಿ ಅವರೂ ಉಜ್‌ಬೆಕಿಸ್ತಾನ ವಿರುದ್ಧ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಉಜ್ಬೆಕಿಸ್ತಾನ ತಂಡ ಕೂಡ ಶ್ರೇಷ್ಠ ಆಟ ಆಡಿ ತವರಿನಲ್ಲಿ ಭಾರತದ ಮಹಿಳೆಯರನ್ನು ಸೋಲಿಸುವ ಲೆಕ್ಕಾಚಾರ ಹೊಂದಿದೆ. ಹೀಗಾಗಿ ಎದುರಾಳಿಗಳ ಸವಾಲು ಮೀರಿ ನಿಲ್ಲಲು ಭಾರತ ತಂಡ ಭಿನ್ನ ರಣನೀತಿ ಹೆಣೆದು ಕಣಕ್ಕಿಳಿಯ ಬೇಕಾದ ಅಗತ್ಯವಿದೆ.

13 ವರ್ಷಗಳ ನಂತರ ಬೆಂಗಳೂರಿನಲ್ಲಿ ಟೂರ್ನಿ ಉದ್ಯಾನನಗರಿಯಲ್ಲಿ 13 ವರ್ಷಗಳ ನಂತರ ಫಿಬಾ ಚಾಂಪಿಯನ್‌ಷಿಪ್‌ ಆಯೋಜನೆ
ಯಾಗಿದೆ. 2004ರಲ್ಲಿ ಮೊದಲ ಬಾರಿಗೆ 18 ವರ್ಷದೊಳಗಿನ ಬಾಲಕರ ಚಾಂಪಿಯನ್‌ಷಿಪ್‌ ಜರುಗಿತ್ತು. ಭಾರತದಲ್ಲಿ 2009ರ ನಂತರ ಫಿಬಾ ಚಾಂಪಿಯನ್‌ಷಿಪ್‌ ನಡೆಯುತ್ತಿದೆ.

ಕ್ರೀಡಾಂಗಣಗಳ ನವೀಕರಣ: ಮಹಿಳೆಯರ ಏಷ್ಯಾಕಪ್‌ಗಾಗಿ ಕಂಠೀರವ ಮತ್ತು ಕೋರಮಂಗಲ ಕ್ರೀಡಾಂಗಣಗಳನ್ನು ನವೀಕರಿಸಲಾಗಿದೆ. ಕಂಠೀರವದಲ್ಲಿ 3,700 ಮಂದಿ ಮತ್ತು ಕೋರಮಂಗಲದಲ್ಲಿ 2,400 ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.

ರಾಜ್ಯಪಾಲರಿಂದ ಚಾಲನೆ
ರಾಜ್ಯಪಾಲ ವಜುಭಾಯಿ ವಾಲಾ ಅವರು ರಿಟ್ಜ್‌ ಕಾರ್ಲ್‌ಟನ್‌ ಹೋಟೆಲ್‌ ನಲ್ಲಿ ನಡೆದ ಸಮಾರಂಭದಲ್ಲಿ ಫಿಬಾ ಮಹಿಳಾ ಏಷ್ಯಾಕಪ್‌ ಚಾಂಪಿಯನ್‌ ಷಿಪ್‌ಗೆ ಚಾಲನೆ ನೀಡಿದರು.

ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷ ಕೆ. ಗೋವಿಂದ ರಾಜ್‌ ಮಾತನಾಡಿ ‘ಏಷ್ಯಾದ ರಾಷ್ಟ್ರಗಳ ಕ್ರೀಡಾಪಟುಗಳು ತಮ್ಮೊಳಗಿನ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಲು ಈ ಚಾಂಪಿಯನ್‌ಷಿಪ್‌ ವೇದಿಕೆಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಫಿಬಾ ಸೀನಿಯರ್‌ ಟೂರ್ನಿ ಆಯೋಜನೆ ಯಾಗಿದೆ’ ಎಂದರು.

ಸಚಿವ ಕೆ.ಜೆ. ಜಾರ್ಜ್‌, ಶಾಸಕ ಎನ್‌.ಎ. ಹ್ಯಾರಿಸ್‌, ಮೇಯರ್‌ ಜಿ. ಪದ್ಮಾವತಿ ಮತ್ತು ಫಿಬಾ ಪ್ರಾದೇಶಿಕ ನಿರ್ದೇಶಕ ಹಗೊಪ್‌ ಖಜಿರಿಯನ್‌ ಹಾಜರಿದ್ದರು.

ಇಂದಿನ ಪಂದ್ಯಗಳು
ದಕ್ಷಿಣ ಕೊರಿಯಾ–ಆಸ್ಟ್ರೇಲಿಯಾ
ಆರಂಭ: ಬೆಳಿಗ್ಗೆ 11ಕ್ಕೆ.
ಫಿಲಿಪ್ಪಿನ್ಸ್‌–ಜಪಾನ್‌
ಆರಂಭ: ಮಧ್ಯಾಹ್ನ 1.15.
ಫಿಜಿ–ಸಿಂಗಪುರ
ಆರಂಭ: ಮಧ್ಯಾಹ್ನ 3.
ಚೀನಾ ತೈಪೆ–ಉತ್ತರ ಕೊರಿಯಾ
ಆರಂಭ: ಮಧ್ಯಾಹ್ನ 3.30.
ನ್ಯೂಜಿಲೆಂಡ್‌–ಚೀನಾ
ಆರಂಭ: ಸಂಜೆ 5.45
ಕಜಕಸ್ತಾನ–ಲೆಬನಾನ್‌
ಆರಂಭ: ಸಂಜೆ 6
ಭಾರತ–ಉಜ್ಬೆಕಿಸ್ತಾನ
ಆರಂಭ: ರಾತ್ರಿ 8ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT