ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದುಗುಂಡು ಕೊರತೆಗೆ ಸೇನಾ ಕಾರ್ಖಾನೆ ಕಾರಣ: ಮಹಾಲೇಖಪಾಲಕರ ವರದಿ

ಆರ್ಡ್‌ನನ್ಸ್ ಫ್ಯಾಕ್ಟರಿ ಬೋರ್ಡ್‌, ರಕ್ಷಣಾ ಸಚಿವಾಲಯಗಳೇ ಹೊಣೆ
Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಸೇನೆಯ ಬಳಿ ಅಗತ್ಯ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಇಲ್ಲದೇ ಇರುವುದಕ್ಕೆ ಆರ್ಡ್‌ನನ್ಸ್ ಫ್ಯಾಕ್ಟರಿ ಬೋರ್ಡ್‌ (ಒಎಫ್‌ಬಿ) ಕಾರಣ. ರಕ್ಷಣಾ ಸಚಿವಾಲಯವೂ ಇದರ ಹೊಣೆ ಹೊರಬೇಕು’ ಎಂದು ಮಹಾಲೇಖಪಾಲಕರ (ಸಿಎಜಿ) ವರದಿ ಹೇಳಿದೆ.

ಸಿಎಜಿ ಸಿದ್ಧಪಡಿಸಿರುವ ‘ಮದ್ದುಗುಂಡುಗಳ ನಿರ್ವಹಣಾ ವರದಿ’ಯನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಅದರಲ್ಲಿ, ‘2013ರಿಂದ ಒಎಫ್‌ಬಿ ಪೂರೈಸಿರುವ ಮದ್ದುಗುಂಡುಗಳಲ್ಲಿ ಹಲವು, ನಿಗದಿತ ಗುಣಮಟ್ಟಕ್ಕೆ ಅನುಗುಣವಾಗಿಲ್ಲ’ ಎಂದೂ ಸಿಎಜಿ ಆರೋಪಿಸಿದೆ.

ಸೇನೆಗೆ ಅಗತ್ಯವಿರುವ ಮದ್ದುಗುಂಡುಗಳಲ್ಲಿ ಶೇ 90ರಷ್ಟನ್ನು ಒಎಫ್‌ಬಿಯೇ ಪೂರೈಸುತ್ತದೆ.

‘ವಿವಿಧ ಸಲಕರಣೆ, ವಾಹನ, ಮದ್ದುಗುಂಡುಗಳ ಅಭಿವೃದ್ಧಿ,  ಖರೀದಿ  ಮತ್ತು  ನಿರ್ವಹಣೆಯಲ್ಲಿ ಸೇನೆಯ ವಿವಿಧ ಪಡೆಗಳು ಹಾಗೂ ಸರ್ಕಾರಿ ಸ್ವಾಮ್ಯದ ತಯಾರಕ ಸಂಸ್ಥೆಗಳು ಅವ್ಯವಹಾರ ನಡೆಸಿವೆ’ ಎಂದೂ ಸಿಎಜಿ ಆರೋಪಿಸಿದೆ.

40 ದಿನಗಳ ನಿರಂತರ ಯುದ್ಧಕ್ಕೆ ಅಗತ್ಯವಿರುವಷ್ಟು ಮದ್ದುಗುಂಡುಗಳು ಸೇನೆ ಬಳಿ ದಾಸ್ತಾನು ಇರಬೇಕು. ಆದರೆ, ಈಗ ಕೇವಲ 10 ದಿನಗಳ ನಿರಂತರ ಯುದ್ಧಕ್ಕೆ ಸಾಲುವಷ್ಟು ಮಾತ್ರ ಮದ್ದುಗುಂಡುಗಳ ಸಂಗ್ರಹ ಇದೆ ಎಂದು ಸರ್ಕಾರ ಹೇಳಿತ್ತು. ಅತ್ಯಗತ್ಯವಿರುವ ಮದ್ದುಗುಂಡುಗಳನ್ನು ಸೇನೆಯೇ ನೇರವಾಗಿ ಖರೀದಿಸಲು ಅನುಮತಿ ನೀಡಿದಾಗ ಸರ್ಕಾರ ಈ ಮಾಹಿತಿ ಬಹಿರಂಗಪಡಿಸಿತ್ತು.

ಅನರ್ಹತೆ, ಸಾಲುಸಾಲು ಅವ್ಯವಸ್ಥೆ, ಅವ್ಯವಹಾರ; ಸಂಸತ್ತಿನಲ್ಲಿ ಸಿಎಜಿ ವರದಿ ಮಂಡನೆ

* ಸರ್ಕಾರಕ್ಕೆ 2015ರಲ್ಲಿ ‘ಸೇನೆಯಲ್ಲಿ ಮದ್ದುಗುಂಡುಗಳ ನಿರ್ವಹಣೆ’ ವರದಿ ಸಲ್ಲಿಸಲಾಗಿತ್ತು. ಸೇನೆಯಲ್ಲಿ ಮದ್ದುಗುಂಡುಗಳ ಕೊರತೆ ಮತ್ತು ಕಳಪೆ ಗುಣಮಟ್ಟದ ಬಗ್ಗೆ ಆ ವರದಿಯಲ್ಲಿ ವಿವರಿಸಲಾಗಿತ್ತು. ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. 2013ರಲ್ಲಿ ಇದ್ದ ಪರಿಸ್ಥಿತಿ ಈಗಲೂ ಬದಲಾಗಿಲ್ಲ

* ಸೇನೆ ಮತ್ತು ಒಎಫ್‌ಬಿಯ ನಿರ್ವಹಣೆಯಲ್ಲಿರುವ ಬಹುತೇಕ ಶಸ್ತ್ರಾಗಾರಗಳಲ್ಲಿ ಅಗ್ನಿಶಾಮಕ ಉಪಕರಣ ಮತ್ತು ಸಿಬ್ಬಂದಿ ಇಲ್ಲ. ಆ ಶಸ್ತ್ರಾಗಾರಗಳಲ್ಲಿ ಯಾವ ಸಮಯದಲ್ಲಾದರೂ ಅವಘಡ ಸಂಭವಿಸಬಹುದು

* ತಾನೇ ನಿಗದಿ ಮಾಡಿಕೊಂಡಿರುವ ಉತ್ಪಾದನಾ ಗುರಿಯನ್ನು ಪೂರೈಸಲು ಒಎಫ್‌ಬಿಗೆ ಸಾಧ್ಯವಾಗುತ್ತಿಲ

* 2009–2013ರ ಅವಧಿಯಲ್ಲಿ ವಿದೇಶಿ ಮತ್ತು ಖಾಸಗಿ ಸಂಸ್ಥೆಗಳಿಂದ ಮದ್ದುಗುಂಡುಗಳ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಅವುಗಳಲ್ಲಿ ಬಹುತೇಕ ಈಗಲೂ ಸೇನೆಗೆ ತಲುಪಿಲ್ಲ

* ಬಲೂನು ಕಣ್ಗಾವಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಲಾ ₹ 6.20 ಕೋಟಿ ಬೆಲೆಯ ವಿಶೇಷ ಬಲೂನುಗಳನ್ನು ಆಮದು ಮಾಡಿಕೊಂಡಿತ್ತು. ಈ ಪರಿಕಲ್ಪನೆಯಲ್ಲೇ ಸಮಸ್ಯೆ ಇದ್ದರೂ, ಡಿಆರ್‌ಡಿಒ ಈ ಯೋಜನೆಗೆ ಒಟ್ಟು ₹ 49.50 ಕೋಟಿ ವೆಚ್ಚ ಮಾಡಿತು. ಆದರೆ ಅದು ವಿಫಲವಾಯಿತು

* ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಮಹಾನಿರ್ದೇಶಕರು, 34 ಲಘು ವಿಮಾನಗಳ ಎಂಜಿನ್‌ಗಳನ್ನು ನವೀಕರಣಕ್ಕೆಂದು ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದಾರೆ. ಗುತ್ತಿಗೆ ಮೊತ್ತ ಹೊಸ ಎಂಜಿನ್‌ಗಳ ಬೆಲೆಯ ಅರ್ಧಕ್ಕಿಂತಲೂ ಹೆಚ್ಚು. ಸೇನಾ ನಿಯಮಗಳ ಪ್ರಕಾರ, ಯಾವುದೇ ವಸ್ತುಗಳ ದುರಸ್ತಿಯ ವೆಚ್ಚ, ಅಂಥದ್ದೇ ಹೊಸ ವಸ್ತುವಿನ ಬೆಲೆಯ ಅರ್ಧಕ್ಕಿಂತ ಕಡಿಮೆ ಇರಬೇಕು.

* ಈಗ ಇರುವ ಲಘು ವಿಮಾನಗಳನ್ನು ಬಳಸದೇ ಇದ್ದರೂ, ಇನ್ನೂ 110 ಹೊಸ ವಿಮಾನಗಳನ್ನು ₹ 52.91 ಕೋಟಿ ವೆಚ್ಚದಲ್ಲಿ ಖರೀದಿಸಲು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ನ ಮಹಾನಿರ್ದೇಶಕರು ಒಪ್ಪಿಗೆ ನೀಡಿದ್ದಾರೆ

* ತಮಿಳುನಾಡಿನ ಆವಡಿಯಲ್ಲಿರುವ ಕದನ ವಾಹನ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಸಿವಿಆರ್‌ಡಿಇ) 20 ಲಾಹತ್ ಕ್ಷಿಪಣಿಗಳನ್ನು ಇಸ್ರೇಲ್‌ನಿಂದ ಖರೀದಿಸಿತ್ತು. ಅರ್ಜುನ ಟ್ಯಾಂಕ್‌ಗಳಲ್ಲಿ ಬಳಸಲು ಉದ್ದೇಶಿಸಿದ್ದ ಈ ಕ್ಷಿಪಣಿಗಳು, ಸಾಮರ್ಥ್ಯ ಪರೀಕ್ಷೆಯಲ್ಲಿ ವಿಫಲವಾಗಿದ್ದವು. ಸೇನೆ ಅವುಗಳನ್ನು ತಿರಸ್ಕರಿಸಿತ್ತು. ಕ್ಷಿಪಣಿಗಳಲ್ಲೇ ದೋಷ ಇದ್ದರೂ, ಇಸ್ರೇಲ್‌ನ ಕಂಪೆನಿಗೆ ₹ 19.53 ಕೋಟಿ ಪಾವತಿ ಮಾಡಲಾಗಿದೆ

ಪೂರೈಕೆಯಾಗದ ಸೇತುವೆ ಟ್ಯಾಂಕ್‌ಗಳು

ನದಿ, ಹೊಂಡ ಮತ್ತು ಹಳ್ಳಗಳನ್ನು ಸೇನಾ ವಾಹನಗಳು ಸರಾಗವಾಗಿ ದಾಟಲು ಅನುವು ಮಾಡಿಕೊಡುವ ಬ್ರಿಡ್ಜ್‌ ಲೇಯಿಂಗ್ ಟ್ಯಾಂಕ್‌ (ಬಿಎಲ್‌ಟಿ) ಟಿ–72ಗಳ ನಿರ್ಮಾಣವನ್ನು ಚೆನ್ನೈನ ಆವಡಿಯಲ್ಲಿ ಇರುವ ಹೆವೀ ವೆಹಿಕಲ್ ಫ್ಯಾಕ್ಟರಿಗೆ (ಎಚ್‌ವಿಎಫ್‌) ವಹಿಸಲಾಗಿದೆ.

ಎಚ್‌ವಿಎಫ್‌ 2012ರಿಂದ ಹಂತ ಹಂತವಾಗಿ 2017ರಲ್ಲಿ ಎಲ್ಲಾ ಟ್ಯಾಂಕ್‌ಗಳನ್ನೂ ಪೂರೈಸಬೇಕಿತ್ತು. ಆದರೆ, ಪದೇ ಪದೇ ವಿನ್ಯಾಸ ಬದಲಿಸುತ್ತಿರುವುದರಿಂದ ಈವರೆಗೆ ಟ್ಯಾಂಕ್‌ಗಳು ಪೂರೈಕೆಯಾಗಿಲ್ಲ.

ವಿನ್ಯಾಸದಂತಿಲ್ಲದ ರೇಡಿಯೇಟರ್‌...

ರಷ್ಯಾದಿಂದ ಖರೀದಿಸಲಿರುವ ಮತ್ತು ಭಾರತದಲ್ಲೇ ತಯಾರಿಸಲಿರುವ ಟ್ಯಾಗಿಲ್‌ ಟಿ–90 ಟ್ಯಾಂಕ್‌ಗಳ ರೇಡಿಯೇಟರ್‌ಗಳನ್ನು ₹ 2.78 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಎಚ್‌ವಿಎಫ್‌ ಒಪ್ಪಿಕೊಂಡಿದೆ. ಇವು ಟ್ಯಾಂಕ್‌ನ ಎಂಜಿನ್‌ನ ವಿನ್ಯಾಸಕ್ಕೆ ಅನುಗುಣವಾಗಿಲ್ಲ. ಈ ರೇಡಿಯೇಟರ್‌ಗಳನ್ನು ಅಳವಡಿಸಿರುವ ಟ್ಯಾಂಕ್‌ಗಳನ್ನು ಸ್ವೀಕರಿಸಲು ಸೇನೆ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ.

ಎಂಜಿನ್‌ ಬಿಸಿಯಾದಾಗದಂತೆ ಬಳಸವ ನೀರನ್ನು ತಣ್ಣಗಾಗಿಸುವ ಕೆಲಸವನ್ನು ರೇಡಿಯೇಟರ್‌ಗಳು ಮಾಡುತ್ತವೆ.

ಐಎನ್‌ಎಸ್‌ ಸಿಂಧುರಕ್ಷಕ್‌ ದುರಂತಕ್ಕೆ ಕಳಪೆ ವಸ್ತುಗಳೇ ಕಾರಣ

ಪ್ರಜಾವಾಣಿ ವಾರ್ತೆ

ನವದೆಹಲಿ: ‘ಕಳಪೆ ಗುಣಮಟ್ಟದ ವಸ್ತುಗಳಿಂದ ನಿರ್ಮಿಸಿದ್ದ ಟಾರ್ಪೆಡೊಗಳು  (ನೀರಿನಾಳದಲ್ಲಿ ಬಳಸುವ ಕ್ಷಿಪಣಿ) ಸ್ಫೋಟಗೊಂಡದ್ದೇ ಐಎನ್‌ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿ ನೌಕೆಯ ದುರಂತಕ್ಕೆ ಕಾರಣ’ ಮಹಾಲೇಖಪಾಲಕರ ವರದಿಯಲ್ಲಿ ಆರೋಪಿಸಲಾಗಿದೆ.

2013ರ ಆಗಸ್ಟ್‌ನಲ್ಲಿ ಮುಂಬೈನ ಬಂದರಿನ ಸಮೀಪ ನೌಕೆ ಸ್ಫೋಟಗೊಂಡಿತ್ತು. ಅದರಲ್ಲಿದ್ದ 18 ನಾವಿಕರು ಮೃತಪಟ್ಟಿದ್ದರು.

‘ಟಾರ್ಪೆಡೊಗೆ ಆಮ್ಲಜನಕ ಪೂರೈಸುವ ಕೊಳವೆಗಳಿಂದ ಆಮ್ಲಜನಕ ಸೋರಿಕೆಯಾಗಿ, ಬೆಂಕಿ ಹೊತ್ತಿಕೊಂಡಿತ. ರಷ್ಯಾದಿಂದ ಖರೀದಿಸಲಾಗಿದ್ದ ನೌಕೆ 1999ರಲ್ಲಿ ಸೇವೆಗೆ ನಿಯೋಜನೆ ಆಗಿತ್ತು.  2012ರಲ್ಲಿ ಅದನ್ನು ನವೀಕರಣಕ್ಕೆ ಕಳುಹಿಸಲಾಗಿತ್ತು. 2013ರ ಏಪ್ರಿಲ್‌ನಲ್ಲಿ ನೌಕೆ ಭಾರತಕ್ಕೆ ಹಿಂತಿರುಗಿತ್ತು. ಆದರೆ, ಅದು ಸಮರ್ಥವಾಗಿದೆಯೇ ಎಂಬುದನ್ನು ಪರೀಕ್ಷಿಸದೆಯೇ ನೌಕಾಪಡೆ ಸೇವೆಗೆ ನಿಯೋಜಿಸಿತ್ತು. ಇದು ನೌಕಾಪಡೆಯ ಲೋಪವೂ ಹೌದು’ ಎಂದು ವರದಿ ಹೇಳಿದೆ.

‘ನೌಕಾಪಡೆಯಲ್ಲಿ ಸುರಕ್ಷಾ ನಿರ್ದೇಶನಾಲಯವೇ ಇಲ್ಲ. ಅಂಥಹದ್ದೊಂದು ವಿಭಾಗ ಸ್ಥಾಪಿಸಲು ನೌಕಾಪಡೆ 2006ರಲ್ಲೇ ಮುಂದಾಗಿತ್ತು. ಈ ಸಂಬಂಧ 2014ರಲ್ಲಿ ರಕ್ಷಣಾ ಸಚಿವಾಲಯಕ್ಕೆ ವಿಭಾಗದ ಪೂರ್ಣ ಚಿತ್ರಣ ಇರುವ ಪ್ರಸ್ತಾವ ಸಲ್ಲಿಸಿತ್ತು. ಆದರೆ ರಕ್ಷಣಾ ಸಚಿವಾಲಯ ಈವರಗೆ ಅದಕ್ಕೆ ಅನುಮತಿ ನೀಡಿಲ್ಲ. 2007ರಿಂದ 2016ರ ಅವಧಿಯಲ್ಲಿ ನೌಕಾಪಡೆಯಲ್ಲಿ ಒಟ್ಟು 38 ಅವಘಡ ನಡೆದಿವೆ. ಅವುಗಳಿಗೆ ರಕ್ಷಣಾ ಸಚಿವಾಲಯದ ನಿರ್ಲಕ್ಷ್ಯವೂ ಕಾರಣ’ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT