ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯ ಮುಖಂಡರಿಗೆ ಜವಾಬ್ದಾರಿ ಬೇಡ’

Last Updated 23 ಜುಲೈ 2017, 6:05 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಸ್ಪರ್ಧಾಕಾಂಕ್ಷಿಗಳಿಗೆ ಟಿಕೆಟ್‌ ಹಂಚುವ ಜವಾಬ್ದಾರಿಯನ್ನು ಪಕ್ಷದಲ್ಲಿರುವ ರಾಜ್ಯದ ಯಾವುದೇ ನಿರ್ದಿಷ್ಟ ವ್ಯಕ್ತಿಗೆ ವಹಿಸದಂತೆ ಕಾಂಗ್ರೆಸ್‌ನ ಕೆಲವು ಮುಖಂಡರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ಮುಂದಿನ ವರ್ಷದ ಏಪ್ರಿಲ್‌  ತಿಂಗಳಲ್ಲಿ ನಿಗದಿಯಾಗಲಿರುವ ಚುನಾವಣೆಗೆ ಆಯಾ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಪ್ರಕ್ರಿಯೆಯನ್ನು ಆರು ತಿಂಗಳು ಮೊದಲೇ ಪೂರ್ಣಗೊಳಿಸುವುದಾಗಿ ಹೈಕಮಾಂಡ್ ಹೇಳಿಕೆ ನೀಡಿರುವ ಬೆನ್ನಲ್ಲೇ ರಾಜಧಾನಿಗೆ ದೌಡಾಯಿಸುತ್ತಿರುವ ಪಕ್ಷದ ಕೆಲವು ಮುಖಂಡರು, ವರಿಷ್ಠರನ್ನು ಭೇಟಿ ಮಾಡಿ ಈ ಕುರಿತು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಟಿಕೆಟ್‌ ಹಂಚಿಕೆಗೆ ಮುನ್ನ ಆಯಾ ಕ್ಷೇತ್ರಗಳ ಮುಖಂಡರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಬೇಕು. ಯಾವುದೇ ಕಾರಣಕ್ಕೂ ಟಿಕೆಟ್‌ ಹಂಚಿಕೆ ಜವಾಬ್ದಾರಿಯನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕೆಲವು ದಿನಗಳ ಹಿಂದೆ ಮಂಡಿ ನೋವಿನಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ವಿಚಾರಣೆಯ ನೆಪದಲ್ಲಿ ದೆಹಲಿಗೆ ಭೇಟಿ ನೀಡಿ ಮರಳಿರುವ 20ಕ್ಕೂ ಅಧಿಕ ಸಚಿವರು, ಮುಖಂಡರು ವರಿಷ್ಠರ ಬಳಿಯೂ ತೆರಳಿ ಈ ರೀತಿಯ ಅಹವಾಲನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣೆ ಹಾಗೂ ಸ್ಪರ್ಧೆಯನ್ನೇ ಗುರಿಯಾಗಿ ಇರಿಸಿಕೊಂಡು ಜೆಡಿಎಸ್‌ ಅಥವಾ ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ವಲಸೆ ಬಂದಿರುವ ಹಾಗೂ ಬರಲಿರುವವರಿಗೆ ಮಣೆ ಹಾಕಬಾರದು. ಬದಲಿಗೆ, ಪಕ್ಷ ಸಂಘಟನೆಗಾಗಿ ಅನೇಕ ವರ್ಷಗಳಿಂದ ಶ್ರಮಿಸಿರುವ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್‌ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಜನತಾ ಪರಿವಾರದಿಂದ ಬಂದವರಿಗೆ ಆದ್ಯತೆ ನೀಡದಂತೆ ತಡೆಯಬೇಕು ಎಂಬುದೂ ಅವರ ಬೇಡಿಕೆಯಾಗಿದೆ.

ಇತ್ತೀಚೆಗೆ ಬಿಡುಗಡೆ ಮಾಡಿರುವ ಪಕ್ಷದ ರಾಜ್ಯ ಪದಾಧಿಕಾರಿಗಳ ಪಟ್ಟಿಯ ಕುರಿತೂ ತೀವ್ರ ಅಸಮಾಧಾನ ಹೊಂದಿರುವ ಕೆಲವು ಮುಖಂಡರು, ಆ ಕುರಿತೂ ವರಿಷ್ಠರ ಬಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೈಕಮಾಂಡ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT