ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಸರ್ಕಾರದ ನಿರ್ಲಕ್ಷ್ಯ

Last Updated 23 ಜುಲೈ 2017, 9:12 IST
ಅಕ್ಷರ ಗಾತ್ರ

ಬೆಳಗಾವಿ: ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. ಸರ್ಕಾರಿ ಶಾಲೆಗಳಿಗೆ ಹೋಲಿಸಿದರೆ ಸಾಕಷ್ಟು ತಾರತಮ್ಯ ಮಾಡುತ್ತಿದೆ. ಇದರ ವಿರುದ್ಧ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಹೋರಾಟಕ್ಕಿಳಿಯಬೇಕು ಎಂದು ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸಭಾಭವನದಲ್ಲಿ ಶನಿವಾರ ನಡೆದ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣ ಬೇಡ ಎಂದು ಹೇಳುವ ರಾಜ್ಯ ಸರ್ಕಾರವೇ ಪಕ್ಷಪಾತ ಅನುಸರಿಸುತ್ತಿದೆ. ಕೆಲ ರಾಜಕಾರಣಿಗಳ ಸಂಸ್ಥೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಿದೆ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಒಕ್ಕೂಟದ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ಸರ್ಕಾರ ಮಾಡುವ ಆದೇಶಗಳನ್ನು ನೋಡುತ್ತ ಕುಳಿತರೆ ಸಾಲದು, ಅನ್ಯಾಯ ಆಗುತ್ತಿರುವುದನ್ನು ಪ್ರತಿಭಟಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

‘ಕಬ್ಬಿಣ ಕಾದಾಗ ಬಡಿದರೆ ಬಗ್ಗುತ್ತದೆ’ ಎಂದು ಹೇಳಿ ವಿಧಾನಸಭೆ ಚುನಾವಣೆ ಬಂದಿದೆ, ಈ ಸಂದರ್ಭವನ್ನು ಶಿಕ್ಷಣ ಸಂಸ್ಥೆಗಳು ಹಾಗೂ ನೌಕರರು ಬಳಸಿಕೊಳ್ಳಬೇಕು ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಯಾವಾಗ ಅಧಿಕಾರದಲ್ಲಿ ಇರುತ್ತದೆಯೋ ಅಂತಹ ಸಂದರ್ಭಗಳಲ್ಲೆಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಇಂತಹ ಪ್ರಹಾರಗಳು ನಡೆದಿವೆ. ಇದಕ್ಕೆ ತಕ್ಕ ಉತ್ತರ ನೀಡಬೇಕಾಗಿದೆ ಎಂದರು.

ಸಂಸದ ಸುರೇಶ ಅಂಗಡಿ ಮಾತನಾಡಿ, ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನ ನಡೆದಿದ್ದರೆ ಇಂಥ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗುತ್ತಿತ್ತು. ಮಂತ್ರಿಗಳು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಈ ಬಗ್ಗೆ ದನಿ ಕಳೆದುಕೊಂಡು ತೆಪ್ಪಗಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಮಾತನಾಡಿ, ಸ್ಪರ್ಧಾತ್ಮಕ ಶಿಕ್ಷಣ ನೀಡಿ, ಸರ್ಕಾರಿ ಶಾಲೆ ಕಾಲೇಜುಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿರುವ ಖಾಸಗಿ ಶಾಲೆ ಕಾಲೇಜುಗಳನ್ನು ಎರಡನೇ ದರ್ಜೆಯಲ್ಲಿ ಗುರುತಿಸುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರು ಮಾತನಾಡಿ, ಶಾಲೆ ಕಾಲೇಜುಗಳಿಗೆ ಅನುಮತಿ ಕೊಡುವಾಗ ಶಿಕ್ಷಣದ ಮೂಲ ಕಾಯ್ದೆಯನ್ನು ಮರೆಮಾಚಲಾಗುತ್ತಿದೆ, ಒಂದು ವಿಷಯಕ್ಕೆ ಒಬ್ಬರು ಶಿಕ್ಷಕ ಎಂಬ ತತ್ವವನ್ನು ಕಡೆಗಣಿಸಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಅನುದಾನಿತ ನೌಕರರ ಸಂಘದ ಅಧ್ಯಕ್ಷ ಟಿ.ಸಿ. ಗೋಪಿನಾಥ ಮಾತನಾಡಿ, ‘ಕೇಂದ್ರ ಸರ್ಕಾರವು ಜಿಎಸ್‌ಟಿ ಕಾಯ್ದೆ ಜಾರಿಗೊಳಿಸಿ ಏಕರೂಪ ತೆರಿಗೆ ಪದ್ಧತಿ’ ಜಾರಿಗೆ ತಂದಿದೆ, ಅದರಂತೆ ನೌಕರರಿಗೆ ವೇತನ ನೀಡಿಕೆಯಲ್ಲಿಯೂ ಏಕರೂಪ ಕಾಯ್ದೆ ಮಾಡಬೇಕು, ಕೇಂದ್ರ, ರಾಜ್ಯ, ಅನುದಾನ ರಹಿತ ನೌಕರರಿಗೂ  ಒಂದೇ ಮಾದರಿ ವೇತನ ನೀಡಬೇಕು ಎಂದರು.

ಒಕ್ಕೂಟದ ಕಾರ್ಯದರ್ಶಿ ವೀರಣ್ಣ ಚರಂತಿಮಠ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಅವರು ಸರ್ಕಾರದ ಧೋರಣೆಯನ್ನು ಖಂಡಿಸಿದರು. ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಂಸದ ಅಮರಸಿಂಹ ಪಾಟೀಲ, ಶಾಸಕ ಸಂಜಯ ಪಾಟೀಲ, ಅಥಣಿಯ ಅರವಿಂದರಾವ್‌ ಜಾಧವ್‌, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಂಡ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಶಿವಣ್ಣ ಇದ್ದರು.

ಬೇಡಿಕೆಗಳು
l ಸರ್ಕಾರದ ‘ವರ್ಕ್‌ಲೋಡ್‌’ ವ್ಯಾಖ್ಯಾನವನ್ನು ಬದಲಾಯಿಸಿ, ಮೊದಲಿನಂತೆ ಮಾಡಬೇಕು.
l ಶಿಕ್ಷಕ, ವಿದ್ಯಾರ್ಥಿ ಅನುಪಾತವನ್ನು 1:40 ಮಾಡಬೇಕು.
l ಅನುದಾನರಹಿತ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು.
l ಹೊಸ ಪಿಂಚಣಿ ಯೋಜನೆಯನ್ನು ಎಲ್ಲರಿಗೂ ಅನುದಾನ ರಹಿತ ಶಾಲಾ ಕಾಲೇಜು ಸಿಬ್ಬಂದಿಗೂ ವಿಸ್ತರಿಸಬೇಕು.
l ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT