ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಬರೆಯಲು ಭಾರತ ಸಜ್ಜು: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌

Last Updated 23 ಜುಲೈ 2017, 9:26 IST
ಅಕ್ಷರ ಗಾತ್ರ

ಲಾರ್ಡ್‌: ಇಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ಕ್ರಿಕಟ್‌ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಇಂಗ್ಲೆಂಡ್‌ ತಂಡ ಬ್ಯಾಟಿಂಗ್‌ ಆಯ್ದುಕೊಂಡಿದೆ.

ಈ ಪಂದ್ಯ ಗೆಲ್ಲುವ ಮೂಲಕ ಮೊದಲ ಬಾರಿ ವಿಶ್ವಕಪ್‌ ಎತ್ತಿ ಹಿಡಿಯುವ ಕಾತರದಲ್ಲಿದೆ ಮಿಥಾಲಿ ರಾಜ್ ನೇತೃತ್ವದ ತಂಡ. ಇನ್ನೊಂದೆಡೆ ತಲಾ ಮೂರು ಬಾರಿ ಚಾಂಪಿಯನ್ ಪಟ್ಟ ಮತ್ತು ರನ್ನರ್ ಅಪ್‌ ಸ್ಥಾನ ಅಲಂಕರಿಸಿರುವ ಇಂಗ್ಲೆಂಡ್‌ ತಂಡಕ್ಕೆ ಮತ್ತೊಮ್ಮೆ ಪ್ರಶಸ್ತಿ ಎತ್ತಿ ಹಿಡಿಯಲು ಕಾದಿದೆ.

ಟಾಸ್‌ ನಂತರ ಮಾತನಾಡಿದ ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಅವರು, ‘ಗೆಲುವಿನ ವಿಶ್ವಾಸದಲ್ಲಿದ್ದೇವೆ.  ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಂಡಿಲ್ಲ’ ಎಂದು ಹೇಳಿದ್ದಾರೆ.

‘ಮೊದಲು ಬ್ಯಾಟಿಂಗ್‌ ಮಾಡುವ ಮೂಲಕ ಹೆಚ್ಚು ರನ್‌ ಗಳಿಸುವ ಯೋಜನೆಯಲ್ಲಿದ್ದೇವೆ’ ಎಂದು ಇಂಗ್ಲೆಂಡ್‌ ತಂಡಡದ ನಾಯಕಿ ಹೀದರ್ ನೈಟ್‌ ಹೇಳಿದ್ದಾರೆ.

ಸಂಘಟಿತ ಪ್ರಯತ್ನ ಅಗತ್ಯ
ಫೈನಲ್‌ನಲ್ಲಿ ಗೆಲ್ಲಬೇಕಾದರೆ ಭಾರತ ತಂಡದ ಸಂಘಟಿತ ಪ್ರಯತ್ನ ನಡೆಸಬೇಕಾಗಿದೆ. ಈ ಶ್ರಮಕ್ಕೆ ಬೆನ್ನೆಲುಬಾಗಿ ಮಿಥಾಲಿ ರಾಜ್‌ ಮುಂದೆ ನಿಲ್ಲಲಿದ್ದಾರೆ. ಟೂರ್ನಿಯಲ್ಲಿ ಒಟ್ಟು 392 ರನ್ ಗಳಿಸಿರುವ ಮಿಥಾಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆರಂಭದ ಪಂದ್ಯಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.

ಸೆಮಿಫೈನಲ್‌ನಲ್ಲಿ ಔಟಾಗದೆ 171 ರನ್ ಗಳಿಸಿದ ಹರ್ಮನ್‌ಪ್ರೀತ್ ಕೌರ್ ಮಿಂಚು ಹರಿಸಿದ್ದರು. ಸ್ಮೃತಿ ಮಂದಾನ ಫೈನಲ್‌ನಲ್ಲಿ ಮತ್ತೆ ಲಯ ಕಂಡುಕೊಳ್ಳಬೇಕಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 90 ರನ್ ಗಳಿಸಿದ್ದ ಮಂದಾನ ಅವರಿಗೆ ಎದುರಾಳಿ ಬೌಲರ್‌ಗಳ ದೌರ್ಬಲ್ಯದ ಅರಿವು ಇದೆ. ಮಿಥಾಲಿ ರಾಜ್‌ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬು. ಅವರಿಗೆ ಉತ್ತಮ ಸಹಕಾರ ನೀಡಲು ಹರ್ಮನ್‌ಪ್ರೀತ್ ಕೌರ್‌ ಇದ್ದಾರೆ.

ಬೌಲಿಂಗ್ ವಿಭಾಗದಲ್ಲಿ ವೇಗಿ ಜೂಲನ್ ಗೋಸ್ವಾಮಿ ಮತ್ತು ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್‌ ಎದುರಾಳಿ ಬ್ಯಾಟಿಂಗ್ ಪಡೆಯಲ್ಲಿ ನಡುಕ ಹುಟ್ಟಿಸಬಲ್ಲರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಧ್ಯಮ ವೇಗಿ ದೀಪ್ತಿ ಶರ್ಮಾ ಕೂಡ ಇಂಗ್ಲೆಂಡ್‌ ತಂಡಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ಎದುರಾಳಿಗಳು ದುರ್ಬಲರಲ್ಲ: ಎದುರಾಳಿ ಇಂಗ್ಲೆಂಡ್ ತಂಡವನ್ನು ಕಡೆಗಣಿಸಿದರೆ ಭಾರತ ನಿರಾಸೆ ಅನುಭವಿಬೇಕಾದೀತು. ಮೊದಲ ಪಂದ್ಯದಲ್ಲಿ ಸೋತರೂ ನಂತರ ಸಾಮರ್ಥ್ಯ ಹೆಚ್ಚಿಸಿಕೊಂಡ ಆತಿಥೇಯರು ನಂತರದ ಎಲ್ಲ ಪಂದ್ಯಗಳನ್ನೂ ಗೆದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯ ಸಾಧಿಸಿ ಈ ತಂಡ ಫೈನಲ್‌ ಪ್ರವೇಶಿಸಿದೆ. ಈ ಪಂದ್ಯದಲ್ಲಿ ತಂಡ ಕೊನೆಯ ವರೆಗೂ ಹೋರಾಡಿದ ರೀತಿ ಅಪೂರ್ವವಾದದ್ದು. ಫೈನಲ್‌ನಲ್ಲೂ ತಂಡ ಛಲ ಬಿಡದೆ ಹೋರಾಡುವ ಉದ್ದೇಶದಿಂದ ಅಂಗಳಕ್ಕೆ ಇಳಿಯಲಿದೆ.

**
ತಂಡಗಳು
ಭಾರತ:
ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್‌ ಕೌರ್‌, ವೇದಾ ಕೃಷ್ಣಮೂರ್ತಿ, ಮೋನಾ ಮೇಶ್ರಮ್‌, ಪೂನಮ್‌ ರಾವತ್‌, ದೀಪ್ತಿ ಶರ್ಮಾ, ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಏಕ್ತಾ ಬಿಷ್ಠ್‌, ಸುಶ್ಮಾ ವರ್ಮಾ, ಮಾನಸಿ ಜೋಶಿ, ರಾಜೇಶ್ವರಿ ಗಾಯಕವಾಡ್‌, ಪೂನಮ್‌ ಯಾದವ್‌, ನುಶತ್ ಪರ್ವೀನ್‌, ಸ್ಮೃತಿ ಮಂದಾನ.

ಇಂಗ್ಲೆಂಡ್‌: ಹೀದರ್ ನೈಟ್‌ (ನಾಯಕಿ), ಟಾಮಿ ಬ್ಯೂಮೌಂಟ್‌, ಕ್ಯಾಥರಿನ್‌ ಬ್ರೂಂಟ್‌, ಜಾರ್ಜಿಯ ಎಲ್ವಿಸ್‌, ಜೆನಿ ಗೂನ್‌, ಅಲೆಕ್ಸ್ ಹಾರ್ಟ್ಲಿ, ಡ್ಯಾನಿಯೆಲ್ ಹಜೆಲ್‌, ಬೇತ್‌ ಲ್ಯಾಂಗ್‌ಸ್ಟನ್‌, ಲಾರಾ ಮಾರ್ಷ್‌, ಅನ್ಯಾ ಶ್ರುಬ್‌ಸೋಲೆ, ನಥಾಲಿ ಶಿವರ್‌, ಸಾರಾ ಟೇಲರ್‌, ಫ್ರಾನ್‌ ವಿಲ್ಸನ್‌, ಡ್ಯಾನಿಯೆಲ್‌ ವಿಟ್‌, ಲಾರೆನ್‌ ವಿನ್‌ಫೀಲ್ಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT