ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿ ಕಳೆದುಕೊಳ್ಳುತ್ತಿರುವ ಬಿಸಿಯೂಟ!

Last Updated 23 ಜುಲೈ 2017, 9:31 IST
ಅಕ್ಷರ ಗಾತ್ರ

ಹೂವಿನಹಡಗಲಿ: ತರಕಾರಿಗಳ ಬೆಲೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ನೀಡುವ ತರಕಾರಿಯ ಮೊತ್ತ ಇದ್ದಷ್ಟೇ ಇದೆ. ಕಡಿಮೆ ತರಕಾರಿ ಬಳಸಿ ಸಿದ್ಧಪಡಿ ಸುವ ಬಿಸಿಯೂಟ ರುಚಿ ಕಳೆದು ಕೊಂಡಿದ್ದು, ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದಲೇ ಸೇವಿಸುತ್ತಿದ್ದಾರೆ.

ಅಕ್ಷರ ದಾಸೋಹ ಯೋಜನೆ ಅಡಿ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಆಹಾರ ಧಾನ್ಯ, ತರಕಾರಿಗಳನ್ನು ಪ್ರತಿ ವಿದ್ಯಾರ್ಥಿಗೆ ಲೆಕ್ಕ ಹಾಕಿ ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಸದ್ಯ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಕಡಿಮೆ ಪ್ರಮಾಣದ ತರಕಾರಿ ಬಳಸಿ ಶುಚಿ ರುಚಿ ಊಟ ಸಿದ್ಧಪಡಿಸುವುದು ಅಡುಗೆ ಸಿಬ್ಬಂದಿ ಮತ್ತು ಉಸ್ತುವಾರಿ ವಹಿಸಿಕೊಂಡ ಶಿಕ್ಷಕರಿಗೆ ತಲೆನೋವಾಗಿದೆ.

ಬಿಸಿಯೂಟದಲ್ಲಿ ಅಗತ್ಯವಾಗಿ ಬಳಸಬೇಕಿರುವ ಹಸಿ ಮೆಣಸಿನಕಾಯಿ, ಟೊಮೆಟೊ, ಕ್ಯಾರೆಟ್‌, ಬೀನ್ಸ್ ಬೆಲೆ ನೂರರ ಹಾಸುಪಾಸಿನಲ್ಲಿದೆ. ಈರುಳ್ಳಿ, ಸೌತೆಕಾಯಿ, ಬದನೆಕಾಯಿ, ಕೋಸುಗಡ್ಡೆ ಬೆಲೆಯೂ ಹೆಚ್ಚಳವಾಗಿದೆ. ‘ತರಕಾರಿ ಕಡಿಮೆ ಬಳಸಿದರೆ ಮಕ್ಕಳಿಗೆ ಬಿಸಿಯೂಟ ರುಚಿಸುವುದಿಲ್ಲ. ನಿಗದಿತ ಪ್ರಮಾಣದಲ್ಲಿ ಬಳಸಿದರೆ ಹಣ ಯಾತಕ್ಕೂ ಸಾಲು ವುದಿಲ್ಲ. ಹೀಗಾಗಿ ಬೆಲೆ ಏರಿಕೆಯಾದಾಗ ಬಿಸಿಯೂಟ ನಿರ್ವಹಣೆ ಮಾಡುವುದು ಕಷ್ಟದ ಕೆಲಸ’ ಎನ್ನುತ್ತಾರೆ ಶಿಕ್ಷಕರು.

ಹೂವಿನಹಡಗಲಿ ತಾಲ್ಲೂಕಿನ 150 ಪ್ರಾಥಮಿಕ, 32 ಪ್ರೌಢ ಹಾಗೂ ಒಂದು ಬಾಲ ಕಾರ್ಮಿಕ ವಸತಿ ಶಾಲೆ ಸೇರಿದಂತೆ 183 ಶಾಲೆಗಳ 22500 ವಿದ್ಯಾರ್ಥಿಗಳು ಬಿಸಿಯೂಟ ಫಲಾನುಭವಿಗಳಾಗಿದ್ದಾರೆ.

ಗ್ರಾಮಾಂತರ ವಿದ್ಯಾರ್ಥಿಗಳು ಪರಿಸ್ಥಿತಿಗೆ ಹೊಂದಿಕೊಂಡು ಊಟ ಸೇವಿಸುತ್ತಾರೆ, ಆದರೆ ಪಟ್ಟಣ ವಿದ್ಯಾರ್ಥಿಗಳು ಊಟ ರುಚಿ ಇರದಿದ್ದರೆ ಮನೆಗಳಿಗೆ ತೆರಳು ತ್ತಾರೆ’ ಎಂದು ಅಡುಗೆಯವರು ಹೇಳು ತ್ತಾರೆ. 1 ರಿಂದ 5ನೇ ತರಗತಿ ವರೆಗಿನ ತಲಾ ವಿದ್ಯಾರ್ಥಿಗೆ ಪ್ರತಿದಿನ 100 ಗ್ರಾಂ ಅಕ್ಕಿ, 20 ಗ್ರಾಂ ತೊಗರಿ ಬೇಳೆ, 5 ಗ್ರಾಂ ಎಣ್ಣೆ ಹಾಗೂ ಉಪ್ಪು, ಸಂಬಾರು ದಿನಸಿ, ತರಕಾರಿ, ಇಂಧನ ವೆಚ್ಚ ಸೇರಿ ₹1, 37 ಪೈಸೆ ನೀಡಲಾಗುತ್ತಿದೆ.

6 ರಿಂದ 10ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 150 ಗ್ರಾಂ ಅಕ್ಕಿ, 30 ಗ್ರಾಂ ತೊಗರಿ ಬೇಳೆ, 7.5 ಗ್ರಾಂ ಎಣ್ಣೆ ಹಾಗೂ ಉಪ್ಪು, ಸಂಬಾರು ದಿನಸಿ, ತರಕಾರಿ, ಇಂಧನ ವೆಚ್ಚ ಸೇರಿ ₹2, 05 ಪೈಸೆ ನೀಡಲಾಗುತ್ತಿದೆ.  ‘ತರಕಾರಿ ವ್ಯಾಪಾರಿ ಯೊಂದಿಗೆ ಸ್ಥಿರ ದರಗಳಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಹೀಗಾಗಿ ದರ ಏರಿಕೆಯಿಂದ ನಮಗೆ ಅಷ್ಟೇನೂ ಸಮಸ್ಯೆ ಆಗಿಲ್ಲ. ವ್ಯಾಪಾರಿಯೇ ನಿತ್ಯ ತಾಜಾ ತರಕಾರಿಗಳನ್ನು ಪೂರೈಸುತ್ತಾರೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಣೆ ಆಗುತ್ತಿದ್ದು, ಶಾಲೆಯ ಎಲ್ಲ ಶಿಕ್ಷಕರು ಬಿಸಿಯೂಟವನ್ನೇ ಸೇವಿಸುತ್ತೇವೆ’ ಎಂದು ಪಟ್ಟಣದ ಟಿಡಿವಿ ಶಾಲೆ ಮುಖ್ಯಶಿಕ್ಷಕ ಕೆ.ಜಗದೀಶ್ ಹೇಳಿದರು.

‘ಮಕ್ಕಳ ಹಾಜರಾತಿ ಆಧರಿಸಿ ಪ್ರತಿ ತಿಂಗಳು ಇಲ್ಲವೇ ಎರಡು ತಿಂಗಳಿಗೊಮ್ಮೆ ತರಕಾರಿ, ಇಂಧನ ಮೊತ್ತವನ್ನು ಶಾಲೆಯ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ.  ಹಣ ಜಮೆ ಆಗುತ್ತಿದ್ದಂತೆ ಯೋಜನೆಗೆ ಸಂಬಂಧಿಸಿದ ಕೆಲವರು ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ಕೊಡದೇ ಇದ್ದರೇ ತಪ್ಪುಗಳನ್ನು ಹುಡುಕುತ್ತಾರೆ.

ತರಕಾರಿ ಬೆಲೆ ಏರಿಕೆಯ ದಿನಗಳಲ್ಲಿ ಇವುಗಳ ನಿರ್ವಹಣೆ ಕಷ್ಟದ ಕೆಲಸ. ಇದು ಅನೇಕ ಶಿಕ್ಷಕರಿಗೆ ಮಾನಸಿಕ ಕಿರಿಕಿರಿಯಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಗ್ರಾಮಾಂತರ ಶಾಲೆಯ ಶಿಕ್ಷಕರೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ತರಕಾರಿಗಳ ಬೆಲೆ ಏರಿಕೆ ಸಂದರ್ಭದಲ್ಲಿ ಬೇರೆ ಮೂಲಗಳಿಂದ ವ್ಯತ್ಯಾಸದ ಹಣ ನೀಡಬೇಕು. ಕಾಲಕಾಲಕ್ಕೆ ದರ ಪರಿಷ್ಕರಣೆ ಮಾಡುವುದರಿಂದ ಮಕ್ಕಳಿಗೆ ಶುಚಿ ರುಚಿಯಾದ ಗುಣಮಟ್ಟದ ಆಹಾರ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂಬುದು ಅಡುಗೆ ಸಿಬ್ಬಂದಿಯ ಮನವಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT