ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಧಾ ರಮಣ’ದಲ್ಲಿ ಆಸ್ಟ್ರೇಲಿಯಾ ದರ್ಶನ

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌ ನಗರ, ನದಿ ತೀರ, ಗೋಲ್ಡ್‌ ಕೋಸ್ಟ್‌, ಕಡಲ ಕಿನಾರೆಗಳು... ಹೀಗೆ ಆಸ್ಟ್ರೇಲಿಯಾದ ಪ್ರವಾಸಿ ತಾಣಗಳಲ್ಲಿ ರಾಧಾ, ರಮಣ ಹಾಗೂ ದೀಪಿಕಾ ಜಾಲಿಯಾಗಿ ಸುತ್ತುತ್ತಿರುವ ಸನ್ನಿವೇಶಗಳನ್ನು ‘ರಾಧ ರಮಣ’ ಧಾರಾವಾಹಿ ವೀಕ್ಷಕರೂ ಕಣ್ತುಂಬಿಕೊಳ್ಳುತ್ತಿದ್ದಾರೆ.

ಸಿನಿಮಾದಂತೆ ಕಿರುತೆರೆಯಲ್ಲೂ ಈಗ ಹೊರಾಂಗಣ ಹಾಗೂ ವಿದೇಶಗಳಲ್ಲಿ ಚಿತ್ರೀಕರಣದ ಪರ್ವ ಮತ್ತೆ ಮುಂದುವರಿದಿದೆ. ಈ ಹಿಂದೆ ‘ಅಶ್ವಿನಿ ನಕ್ಷತ್ರ’ ಧಾರಾವಾಹಿಯ ಕೆಲವು ಸಂಚಿಕೆಗಳನ್ನೂ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಚಿತ್ರೀಕರಿಸಲಾಗಿತ್ತು. ‘ರಾಧಾರಮಣ’ ತಂಡ ಹತ್ತು ದಿನ ಕಾಂಗರೂ ನಾಡಿನ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ಮುಗಿಸಿಬಂದಿದೆ.

ದೇಶದ ಗಡಿದಾಟಿ ಚಿತ್ರೀಕರಣಕ್ಕೆ ಹೋಗುವುದು ಬಜೆಟ್‌ ದೃಷ್ಟಿಯಲ್ಲಿ ಕಷ್ಟಸಾಧ್ಯ. ಆದರೆ ವಾಹಿನಿಗೆ ಈ ಬಾಬತ್ತು ಹೊರಯಾಗಿಲ್ಲ. ಕಾರಣ, ಆಸ್ಟ್ರೇಲಿಯಾದ ಪ್ರವಾಸೋದ್ಯಮ ಇಲಾಖೆ ಈ ವಿದೇಶ ಪ್ರವಾಸಕ್ಕೆ ಸಹಯೋಗ ನೀಡಿತು.

‘ಆಸ್ಟ್ರೇಲಿಯಾ ಪ್ರವಾಸೋದ್ಯಮ ಇಲಾಖೆ ವೀಸಾ, ಸಾರಿಗೆ, ಹೋಟೆಲ್‌, ಊಟೋಪಚಾರ ಎಲ್ಲವನ್ನೂ ವಹಿಸಿಕೊಂಡಿತ್ತು. ಪೂರ್ಣಚಂದ್ರ ಅವರು ಆಸ್ಟ್ರೇಲಿಯಾದಲ್ಲಿ ನಿರ್ದೇಶನ ಮಾಡಿದ್ದರು. ಕ್ಯಾನನ್‌ 5ಡಿ ಸಿಪಿ2 ಲೆನ್ಸ್‌ ಕ್ಯಾಮೆರಾ ಬಳಸಲಾಯಿತು. ಜಿಲಿಂಕ್‌ ರೈಲು, ಗೋಲ್ಡ್‌ಕೋಸ್ಟ್‌ ಕಡಲ ಕಿನಾರೆ, ಬ್ರಿಸ್ಬೇನ್‌ ನಗರದ ಮಾಲ್‌ಗಳಲ್ಲಿ ಚಿತ್ರೀಕರಣ ಮಾಡಿದೆವು’ ಎನ್ನುತ್ತಾರೆ ಕಲರ್ಸ್‌ ಕನ್ನಡ ವಾಹಿನಿಯ ಮುಖ್ಯಸ್ಥ (ಬ್ಯುಸಿನೆಸ್‌) ಪರಮೇಶ್ವರ ಗುಂಡ್ಕಲ್‌.

ಆಸ್ಟ್ರೇಲಿಯಾ ಚಿತ್ರೀಕರಣಕ್ಕಾಗಿ 'ಗಿಂಬಲ್‌' ಕ್ಯಾಮೆರಾ ಬಳಸಲಾಗಿದೆ. ಚೆನ್ನೈನ ಅರುಣ್‌ ಅವರು ಛಾಯಾಗ್ರಹಣ ಮಾಡಿದ್ದಾರೆ. 17 ಮಂದಿ ಆಸ್ಟ್ರೇಲಿಯಾಕ್ಕೆ ಹೋಗಿಬಂದಿದ್ದಾರೆ. ಚಿತ್ರೀಕರಣದ ದೃಶ್ಯಗಳು ಜುಲೈ 28ರವರೆಗೆ ಪ್ರಸಾರವಾಗಲಿವೆ.

‘ನಮ್ಮ ಧಾರಾವಾಹಿಯನ್ನು ಅದ್ದೂರಿ ಮದುವೆ ಕಾರ್ಯಕ್ರಮದಿಂದ ಆರಂಭಿಸಿದ್ದೆವು. ಮೊದಲ ಸಂಚಿಕೆಯಿಂದಲೇ ಒಂದು ಘನತೆ ಕಾಪಾಡಿಕೊಂಡು ಬಂದಿದ್ದೇವೆ. ಅದೀಗ ಮುಂದುವರೆದಿದೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ರಮಣನನ್ನು ಪರಿಚಯಿಸಿದಾಗಲೇ ಈತ (ರಮಣ್‌), ಸಿದ್ಧಾರ್ಥ್‌ ಸ್ನೇಹಿತ, ಆಸ್ಟ್ರೇಲಿಯಾದಲ್ಲಿದ್ದಾನೆ ಎಂಬುದನ್ನು ತಿಳಿಸಿದ್ದೆವು. ಆ ಲಿಂಕ್‌ ಈಗ ಆಸ್ಟ್ರೇಲಿಯಾ ಪ್ರವಾಸದ ದೃಶ್ಯಕ್ಕೆ ಹೊಂದಿಕೊಳ್ಳುತ್ತದೆ. ಒಟ್ಟು ₹20 ಲಕ್ಷ ಖರ್ಚಾಗಿದೆ. ವಾಹಿನಿಯವರು ಹೆಚ್ಚುವರಿ ಬಜೆಟ್‌ ಕೊಡುತ್ತಾರೆ. ಹಾಗಾಗಿ ವಿದೇಶದಲ್ಲಿ ಚಿತ್ರೀಕರಣ ಮಾಡಿದ್ದು ಹೆಚ್ಚಿನ ಹೊರೆ ಆಗಲಿಲ್ಲ’ ಎನ್ನುತ್ತಾರೆ ನಿರ್ಮಾಪಕ ಎಂ.ಸುಬ್ರಹ್ಮಣ್ಯ.

‘ಧಾರಾವಾಹಿಯಲ್ಲಿ ರಮಣ, ಗೊಂಬೆ ಫ್ಯಾಕ್ಟರಿ ಮಾಲೀಕ. ತನ್ನ ಉದ್ಯಮ ವಿಸ್ತರಣೆಗಾಗಿ ಆಸ್ಟ್ರೇಲಿಯಾಕ್ಕೆ ಹೋಗಿರುತ್ತಾನೆ. ಜೊತೆಯಲ್ಲಿ ರಾಧಾ, ದೀಪಿಕಾ ಅವರನ್ನು ಕರೆದುಕೊಂಡು ಹೋಗಿರುತ್ತಾನೆ. ಬ್ಯುಸಿನೆಸ್‌ಗೆ ಸಹಾಯ ಮಾಡುತ್ತಿರುವ ದೀಪಿಕಾಗೂ ರಮಣನ ಮೇಲೆ ಪ್ರೀತಿ ಹುಟ್ಟಿರುತ್ತದೆ. ಮುಂದೆ ಏನಾಗುತ್ತದೆಯೋ ಕಾದು ನೋಡೋಣ. ಆದರೆ ಮುಂದಿನ ದಿನಗಳಲ್ಲಿ ರಮಣ್‌ ಸಿಂಗಪುರ, ನ್ಯೂಯಾರ್ಕ್‌ಗಳಿಗೂ ಹೋಗಬಹುದು’ ಎಂದು, ವಿದೇಶದಲ್ಲಿ ಇನ್ನಷ್ಟು ಚಿತ್ರೀಕರಣದ ಸಾಧ್ಯತೆಯನ್ನು ಸೂಚ್ಯವಾಗಿ ಹೇಳುತ್ತಾರೆ ಸುಬ್ರಹ್ಮಣ್ಯ.

ಆಸ್ಟ್ರೇಲಿಯಾದಲ್ಲಿ ಧಾರಾವಾಹಿ ಚಿತ್ರೀಕರಣವಾಗುತ್ತಿದ್ದರೆ, ಬೆಂಗಳೂರಿನಲ್ಲೂ ಯಥಾಪ್ರಕಾರ ಚಿತ್ರೀಕರಣ ಮುಂದುವರಿದಿತ್ತು. ಇಲ್ಲಿ, ನಿರ್ದೇಶಕ ಶಿವ ಪೂಜೇನ ಅಗ್ರಹಾರ ಅವರೇ ಇದ್ದರು.

‘ತ್ರಿಕೋನ ಪ್ರೇಮಕತೆಯನ್ನೊಳಗೊಂಡ ವಸ್ತುವನ್ನುಳ್ಳ ಧಾರಾವಾಹಿ ಇದು. ಒಪ್ಪಂದದ ಮದುವೆಯಾಗಿರುವ ರಾಧಾ ಮತ್ತು ರಮಣನ ನಡುವೆ ದೀಪಿಕಾ ಎಂಬ ರಮಣನ ಅತ್ತೆ ಮಗಳ ಚೆಲ್ಲಾಟ, ಮೋಸದಾಟಗಳು ನಡೆಯುತ್ತಲೇ ಇರುತ್ತವೆ. ನಮ್ಮ ಕಥೆಗೆ ಆಸ್ಟ್ರೇಲಿಯಾ ಪ್ರವಾಸ ಸೇರಿಕೊಳ್ಳುತ್ತದೆ ಎಂಬುದು ಮೊದಲೇ ಗೊತ್ತಿತ್ತು. ಧಾರಾವಾಹಿ ವೀಕ್ಷಕರಿಗೆ ಏನಾದರೂ ಹೊಸತು ಕೊಡಬೇಕು ಎಂಬ ಉದ್ದೇಶ ನಮ್ಮದು. ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗಿದ್ದರೂ ಸಿನಿಮಾಗೂ ಧಾರಾವಾಹಿಗೂ ಹೋಲಿಕೆ ಮಾಡಲು ಬರುವುದಿಲ್ಲ. ಸಿನಿಮಾದಲ್ಲಿ ಎರಡೂವರೆ ಗಂಟೆಯಲ್ಲಿ ಒಂದು ಲವ್‌ ಸ್ಟೋರಿ ತೋರಿಸುತ್ತಾರೆ. ನಿಜ ಜೀವನದಲ್ಲಿ ಪ್ರೇಮಕತೆ ಎರಡೂವರೆ ಗಂಟೆಯಲ್ಲಿ ಮುಗಿಯುವುದಿಲ್ಲ. ಹಾಗೆ ಧಾರಾವಾಹಿ ಕಥೆಯಲ್ಲಿ ಸಣ್ಣ ಸಣ್ಣ ವಿಷಯಗಳನ್ನು ಸೇರಿಸಿ, ಹೆಚ್ಚು ತೋರಿಸಬೇಕಾಗುತ್ತದೆ’ ಎನ್ನುತ್ತಾರೆ ಶಿವ ಪೂಜೇನಅಗ್ರಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT