ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡು ಮಧ್ಯಾಹ್ನದ ಜೀವಂತಿಕೆ

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ಮಡಿವಾಳ ವೃತ್ತಿಯು ಗೌಜುಗದ್ದಲವಿಲ್ಲದೇ ಕೊಳೆ ವಸ್ತ್ರಗಳನ್ನು ಸ್ವಚ್ಛಗೊಳಿಸುವ ಕ್ರಿಯಾಶೀಲ ಸಂಸ್ಕೃತಿಯುಳ್ಳದ್ದು. ಇಂದಿನ ಚೌಕಟ್ಟಿನಲ್ಲಿರುವ ಅಂತಹದ್ದೊಂದು ದೃಶ್ಯವನ್ನು ಎ.ಎನ್.ಪ್ರಸನ್ನ ಅವರು ಬನಶಂಕರಿ ಎರಡನೇ ಹಂತದ ದೋಬಿಘಾಟ್‌ನಲ್ಲಿ ಸೆರೆಹಿಡಿದಿದ್ದಾರೆ.

ಎಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ಸಾಹಿತ್ಯ, ಸಿನಿಮಾ, ರಂಗಭೂಮಿ ಜೊತೆ ಸಾಂಗತ್ಯ ಹೊಂದಿದ್ದು, ಎರಡು ವರ್ಷಗಳಿಂದ ಫೋಟೋಗ್ರಫಿ ಹವ್ಯಾಸದಲ್ಲೂ ತೊಡಗಿದ್ದಾರೆ. ಜನಜೀವನ, ಲ್ಯಾಂಡ್‌ಸ್ಕೇಪ್, ಪೋರ್‌ರ್ಟೈಟ್‌ ಮತ್ತು ಕಲಾತ್ಮಕ ಛಾಯಾಗ್ರಹಣದಲ್ಲಿ ಹೊಸತನ್ನು ಸಾಧಿಸುವ ತವಕ ಅವರದ್ದು. ಅವರು ಬಳಸಿದ ಕ್ಯಾಮೆರಾ, ನಿಕಾನ್ ಕೂಲ್ ಪಿಕ್ಸ್‌ಪಿ – 900.

ಎಕ್ಸ್ ಪೋಷರ್ ವಿವರ ಇಂತಿದೆ: ಲೆನ್ಸ್ ಫೋಕಲ್ ಲೆಂಗ್ತ್ 6.2 ಎಂ.ಎಂ., ಅಪರ್ಚರ್ f 3.5, ಷಟರ್ ವೇಗ 1/1600 ಸೆಕೆಂಡ್, ಐ.ಎಸ್.ಒ 100 ಮತ್ತು ಪ್ಯಾಟರ್ನ್ ಮೀಟರಿಂಗ್ ಮೋಡ್.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆ ಇಂತಿದೆ: ದೋಬಿ ವೃತ್ತಿ ಜೀವನಕ್ಕೆ ಪರಿಣಾಮಕಾರಿಯಾಗಿ ಕನ್ನಡಿ ಹಿಡಿಯಬಲ್ಲ ಫೋಟೋಜರ್ನಲಿಸಂ ವಿಭಾಗಕ್ಕೆ ಸರಿ ಹೊಂದುವ, ಆದಾಗ್ಯೂ ಕಲಾತ್ಮಕ ಅಂಶಗಳನ್ನೊಳಗೊಂಡ ಉತ್ತಮ ಛಾಯಾಚಿತ್ರ ಇದಾಗಿದೆ. ಅಖಂಡತೆ, ಸಮತೋಲನ, ಜೀವಂತಿಕೆ ಮತ್ತು ಗಾಢವಾದ ಪರಿಣಾಮದ ದೃಷ್ಟಿಯಿಂದ ಇದು ಉತ್ತಮ ಚಿತ್ರ.

ಚಿತ್ರದ ಚೌಕಟ್ಟಿನೊಳಗೆ ಅನೇಕ ವಸ್ತುಗಳು ವಿವಿಧ ರೂಪ, ಆಕೃತಿ, ವರ್ಣಛಾಯಾಂತರ, ಗಾತ್ರ ಅಥವಾ ಭಾವದಲ್ಲಿ ಇರಬಹುದಾದರೂ, ಅದರಲ್ಲಿ ಪ್ರಧಾನವಾದ ಒಂದು ಮಾತ್ರ ಮುಖ್ಯವಸ್ತುವಾಗಿ ಚಿತ್ರಕ್ಕೆ ಪ್ರವೇಶ ಬಿಂದುವಾಗಿರಬೇಕು (ಎಂಟ್ರಿ ಪಾಯಿಂಟ್).

ಈ ಅಂಶಗಳಿಗೆ ಪೈಪೋಟಿ ಅನಿಸದಂತೆ ಇತರ ಎಲ್ಲ ವಸ್ತುಗಳೂ ಇದ್ದು, ಮುಖ್ಯವಸ್ತುವನ್ನು ಬೆಂಬಲಿಸುವಂತಿರಬೇಕು. ಪ್ರಸ್ತುತ ಚಿತ್ರದಲ್ಲಿ ಬಲಭಾಗದ ಹಿನ್ನೆಲೆಯಿಂದ ಕೊಳೆ ಬಟ್ಟೆ ಮೂಟೆಯನ್ನು ಹಿಡಿದು ಬರುತ್ತಿರುವ ಸಹಾಯಕನ ಭಂಗಿ ಮತ್ತು ಆಚೆ ಈಚೆ ಕಾಣಿಸುತ್ತಿರುವ ಎಲ್ಲ ವಸ್ತುಗಳೂ, ಎಡಭಾಗದಲ್ಲಿ ಕಾರ್ಯನಿರತನಾಗಿರುವ ಚಿತ್ರದ ಮುಖ್ಯವಸ್ತುವಾದ ದೋಬಿಯ ಕಾಯಕಕ್ಕೆ ಪೂರಕವಾಗಿಯೇ ರೂಪುಗೊಂಡಿರುವುದೇ ಅಖಂಡತೆಯ ಗುಣ.

(ಎ.ಎನ್.ಪ್ರಸನ್ನ)

ಪ್ರವೇಶ ಬಿಂದುವಾದ ದೋಬಿಯನ್ನು ಮಧ್ಯದಲ್ಲೇ ಇಡದೇ ಚೌಕಟ್ಟಿನ ಎಡಬದಿಯ ಒಂದು ಮೂರಾಂಶದ ಭಾಗದಲ್ಲಿ ಕಾಣಿಸಿ, ಮೂಟೆ ಹಿಡಿದು ಅವನೆಡೆಗೇ ಬರುತ್ತಿರುವ ಸಹಾಯಕನನ್ನು ಬಲಬದಿಯ ಒಂದುಮೂರಂಶದ ಭಾಗದಲ್ಲಿ ಸೆರೆ ಹಿಡಿದಿರುವುದು ಚಿತ್ರದ ‘ಸಮತೋಲನ’ವನ್ನು ಸರಿಹೊಂದಿಸಿದೆ.

ಇದು ಸ್ಥಿರ ಛಾಯಾಚಿತ್ರ (ಸ್ಟಿಲ್ ಫೋಟೋಗ್ರಫಿ) ತಾನೆ? ಚಲನಚಿತ್ರದಲ್ಲಿ ತೋರಿಸುವಂತೆ ಜೀವರಸವಾದ ಚಲನೆಯನ್ನು ಕಾಣಿಸುವಲ್ಲಿ ಮುಖ್ಯವಸ್ತು ಹಾಗೂ ಪೂರಕ ವಸ್ತುಗಳು ಉದ್ದೇಶಿತ ಚೈತನ್ಯವನ್ನು ಸೂಸುವ ಆ್ಯಕ್ಷನ್ ಕ್ಷಣವೊಂದನ್ನು ಸಮಯ ಪ್ರಜ್ಞೆಯಿಂದ ಕ್ಯಾಮೆರಾದಲ್ಲಿ ‘ಫ್ರೀಜ್’ ಮಾಡುವುದೇ ಆ ಚಿತ್ರಕ್ಕೆ ಜೀವಂತಿಕೆಯನ್ನು ತುಂಬಬಲ್ಲದಾಗಿರುತ್ತದೆ.ಇಲ್ಲಿ, ಸಾಬೂನು ದ್ರವ್ಯವನ್ನು ಸಿಮೆಂಟಿನ ತೊಟ್ಟಿಗೆ ಸುರಿಯುತ್ತಿರುವ ದೋಬಿಯ ಭಂಗಿ, ಸಹಾಯಕ ಅವನೆಡೆಗೇ ಹೆಜ್ಜೆ ಹಾಕಿ ಬರುತ್ತಿರುವುದು ಈ ಅಂಶವನ್ನು ಸಾದರಪಡಿಸುತ್ತವೆ.

ಇಷ್ಟೆಲ್ಲಾ ಇದ್ದರೂ ನೋಡುಗನ ಕಣ್ಣು ಮತ್ತು ಮನಸಿನ ಮೇಲೆ ಚಿತ್ರ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದು ಅವಶ್ಯಕ ತಾನೆ? ಈ ದೃಶ್ಯದಲ್ಲಿ, ಇಡೀ ಪರಿಸರವೇ ಅಲ್ಲಿ ನಡೆಯುತ್ತಿರುವ ವೃತ್ತಿಪರತೆಯ ನಿಷ್ಠೆಗೆ ಕನ್ನಡಿ ಹಿಡಿದಂತಿರುವುದು; ಸಹಾಯಕನ ನಡಿಗೆಯನ್ನು ಗಮನಿಸಿದಂತಿರುವ ದೋಬಿಯ ಹಸನ್ಮುಖದ ಸಂವಹನ ಕೂಡಾ ನೋಡುಗನ ಕಣ್ಮನವನ್ನು ಸೆಳೆಯಬಲ್ಲದಾಗಿರುವುದು ಮತ್ತು ಒಟ್ಟಾರೆ ಅಭಿವ್ಯಕ್ತಿಗೆ ಯಾವುದೇ ಗೊಂದಲ ಅಡ್ಡಿ ಬರುತ್ತಿಲ್ಲವಾಗಿರುವುದು ‘ಗಾಢವಾದ ಪರಿಣಾಮ’ ಗುಣಕ್ಕೆ ಪುಷ್ಟಿ ನೀಡುತ್ತಿವೆ.

ಮುಖ್ಯವಸ್ತುವಿನೆಡೆಗೆ ಕಣ್ಣನ್ನು ಸೆಳೆಯುವ ‘ಎಳೆಗಳ’ (ಲೀಡಿಂಗ್ ಲೈನ್ಸ್) ಪಾತ್ರವೂ ಕಲಾತ್ಮಕ ಸಂಯೋಜನೆಯ ಮೂಲ ಅಂಶ. ಅದು ಇಲ್ಲಿ ಸಮರ್ಪಕವಾಗಿ ಮೂಡಿದೆ. ತಾಂತ್ರಿಕವಾಗಿ ಎಕ್ಸ್‌ಪೋಷರ್ ಸರಿಯಿದೆಯಾದರೂ, ಕ್ಲಿಕ್ಕಿಸಿದ್ದು ನಡು ಮಧ್ಯಾಹ್ನವಾದ್ದರಿಂದ ನೆರಳು ಬೆಳಕಿನ ವೈರುಧ್ಯ (ಕಾಂಟ್ರಸ್ಟ್) ಹೆಚ್ಚಿದೆ. ಬೆಳಗಿನ ಅಥವಾ ಮಧ್ಯಾಹ್ನದ ನಂತರದ ಅರುವತ್ತು ಡಿಗ್ರಿ ಕೋನದ ಸೂರ್ಯನ ಬೆಳಕಿನಲ್ಲಿ ಶೂಟ್ ಮಾಡುವುದು ಸಾದ್ಯವಾಗಿದ್ದರೆ, ದೋಬಿಯ ವಸ್ತ್ರ, ಮತ್ತಿತರೆ ತೂಗುಹಾಕಿದ ಬಟ್ಟೆಗಳ ಬಣ್ಣ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ದೋಬಿಯ ಮುಖಭಾವ ಇನ್ನೂ ಚೆನ್ನಾಗಿ ಕಾಣಿಸುವಂತಾಗಬಹುದಿತ್ತು. ವಿವಿಧ ರೀತಿಯ ವಸ್ತುಗಳನ್ನು ಚೌಕಟ್ಟಿನೆಲ್ಲೆಡೆ ಹರಡಿರುವುದು ಇಲ್ಲಿ ಅನಿವಾರ್ಯವೇ ಆಗಿದ್ದರೂ, ಅದರ ಬದಲು ಪೂರಕ ವಸ್ತುಗಳು ಸರಳವಾಗಿರುವಂತೆ ಎಚ್ಚರ ವಹಿಸಿದರೆ ಇನ್ನೂ ಒಳ್ಳೆಯ ಚಿತ್ರ ಸಂಯೋಜನೆ ಸಾಧ್ಯವಾಗುತ್ತಿತ್ತು. ಲೆನ್ಸ್‌ನ ಅತಿ ಕಡಿಮೆ 6.2 ಎಮ್.ಎಮ್. ಫೋಕಲ್ ಲೆಂಗ್ತ್‌ನ ದೆಸೆಯಿಂದ, ವಿಶಿಷ್ಟವಾದ ಅಂತರ ಭಾಸ (ಪರ್ಸ್ಪೆಕ್ಟಿವ್ ) ನಿರ್ಮಿತಿಗೊಂಡಿರುವುದು ಉತ್ತಮ ಪ್ರಯತ್ನ. ಅದರಿಂದ, ಮುನ್ನೆಲೆಯು (ಫೋರ್ ಗ್ರೌಂಡ್) ಹೆಚ್ಚು ಅಗಲವಾಗಿಯೂ, ಹಿನ್ನೆಲೆಯು (ಬ್ಯಾಕ್ ಗ್ರೌಂಡ್) ತುಸು ದೂರ ಸರಿದು ವಸ್ತುಗಳು ಸ್ವಲ್ಪ ಗಾತ್ರದಲ್ಲಿ ಚಿಕ್ಕದಾಗಿಯೂ ರೂ‍ಪುಗೊಂಡು ಮೂರು ಆಯಾಮದ (ತ್ರೀಡಿ) ಕೌತುಕ ಪರಿಣಾಮವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT