ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ನೀರಿಲ್ಲ, ಮಳೆ ಬಿದ್ದರೆ ಸಂಚಾರ ಕಷ್ಟ!

ಅಭಿವೃದ್ಧಿ ಕಾಣದೇ ಹದಗೆಟ್ಟ ಹಾವೇರಿ ನಗರದ ರಸ್ತೆಗಳು: ಇದ್ದೂ ಇಲ್ಲದಂತಿರುವ ‘ನಗರಸಭೆ’!
Last Updated 24 ಜುಲೈ 2017, 8:31 IST
ಅಕ್ಷರ ಗಾತ್ರ

ಹಾವೇರಿ: ಸತತ ಬರ, ಬಿಸಿಲಿನ ಝಳ, ನೀರಿನ ಸಮಸ್ಯೆಗಳಿಂದ ಕಂಗೆಟ್ಟಿದ್ದ ನಾಗರಿಕರಿಗೆ ಕಳೆದ ವಾರಪೂರ್ತಿ ಸುರಿದ ತುಂತುರು ಮಳೆ ನೆಮ್ಮದಿ ನೀಡಿತ್ತು. ಗರಿಷ್ಠ ತಾಪಮಾನ ಕಂಡ ಜನತೆಗೆ, ಹಿತಮಯ ಗಾಳಿ ತಂಪು ನೀಡಿತ್ತು. ಆದರೆ, ನಗರದಲ್ಲಿ ಜನತೆ ಹೊರಗೆ ಸಂಚರಿಸದ ಪರಿಸ್ಥಿತಿ ಉಂಟಾಗಿದೆ.

ನಗರದ ರಸ್ತೆಗಳಲ್ಲಿ ಕಂಡ ಕಂಡಲ್ಲಿ ಹೊಂಡ, ಅಲ್ಲಲ್ಲಿ ಅಗೆದು ಹಾಕಿದ ಮಣ್ಣು, ರಸ್ತೆಯುದ್ದಕ್ಕೂ ಕೆಸರು, ವಾಹನ ಸಂಚರಿಸುವಾಗ ಎರಚುವ ರಾಡಿ. ಇನ್ನು ಹೊಸದಾಗಿ ಕಾಮಗಾರಿ ನಡೆದ ರಸ್ತೆಗಳಲ್ಲೂ ಹೊಂಡ ಗುಂಡಿಗಳು. ಕಳಪೆ ಕಾಮಗಾರಿ, ತೇಪೆ ಕಾರ್ಯದಿಂದಾಗಿ ನಗರವೇ ರಾಡಿಯಾಗಿದೆ.

ಒಟ್ಟು 29.75 ಚದರ ಕಿ.ಮೀ. ವ್ಯಾಪ್ತಿಯ 31 ವಾರ್ಡ್‌ಗಳ ಈ ನಗರದಲ್ಲಿ, ಸದ್ಯ 140 ಕಿ.ಮೀ. ಪ್ರಮುಖ ರಸ್ತೆಗಳು ನಗರಸಭೆಯ ಅಧೀನದಲ್ಲಿವೆ. ಇವು ಸೇರಿದಂತೆ ಹೊಸ ಬಡಾವಣೆಗಳ ರಸ್ತೆಗಳೂ ಇವೆ. ಈ ಪೈಕಿ ಸದ್ಯ ಸುಸ್ಥಿತಿಯಲ್ಲಿರುವ ರಸ್ತೆಗಳೇ ವಿರಳ. ನಗರದ ಎಂ.ಜಿ. ರಸ್ತೆ ವಿಸ್ತರಣೆ ಸಮರ್ಪಕವಾಗಿ ನಡೆಯದ ಪರಿಣಾಮ ಸಂಚಾರ ಇನ್ನಷ್ಟು ದುಸ್ತರವಾಗಿದೆ.

ಅಲ್ಲಲ್ಲಿ ಚರಂಡಿ ಕುಸಿತ, ರಸ್ತೆಯಲ್ಲಿ ಹೊಂಡಗಳು ಮೊದಲ ಮಳೆಗೇ ಕಾಣಿಸಿಕೊಂಡಿವೆ. ಸುಭಾಸ್ ವೃತ್ತ, ಜೆ.ಎಚ್‌.ಪಟೇಲ್ ವೃತ್ತ, ರೈಲ್ವೆ ನಿಲ್ದಾಣ, ಇಜಾರಿ ಲಕಮಾಪುರದ ರಸ್ತೆ, ಶಿವಬಸವನಗರ, ವಿದ್ಯಾನಗರ, ತಾಜ್ ನಗರ, ನಾಗೇಂದ್ರನಮಟ್ಟಿ ಸೇರಿದಂತೆ ನಗರದೆಲ್ಲೆಡೆ ರಸ್ತೆಗಳು ಮೊದಲ ಮಳೆಗ ಕೆಸರು ಗದ್ದೆಯಾದರೆ, ಚರಂಡಿಗಳಲ್ಲಿ ಸ್ವಚ್ಛವಿಲ್ಲದೇ ಕೊಳಚೆ– ತ್ಯಾಜ್ಯ ತುಂಬಿಕೊಂಡಿದೆ.

ಅನುದಾನ: 2016–17ನೇ ಸಾಲಿನ ಬಜೆಟ್‌ನಲ್ಲಿ ನಗರಸಭೆಯು ಹೊಸ ರಸ್ತೆ ನಿರ್ಮಾಣಕ್ಕೆ ₹6 ಕೋಟಿ, ಹೊಸ ಚರಂಡಿ ಮತ್ತು ಗಟಾರ ನಿರ್ಮಾಣಕ್ಕೆ ₹ 3 ಕೋಟಿ, ರಸ್ತೆ ದುರಸ್ತಿಗೆ ₹1 ಕೋಟಿ, ಚರಂಡಿ ದುರಸ್ತಿಗೆ ₹1 ಕೋಟಿ, ನಗರ ನೈರ್ಮಲೀಕರಣಕ್ಕೆ ₹2.28 ಕೋಟಿ ಅನುದಾನ ಕಲ್ಪಿಸಿತ್ತು.

2017–18ನೇ ಸಾಲಿನ ಬಜೆಟ್‌ನಲ್ಲಿ ಹೊಸ ರಸ್ತೆ ನಿರ್ಮಾಣಕ್ಕೆ ₹5.5 ಕೋಟಿ, ಹೊಸ ಚರಂಡಿ ನಿರ್ಮಾಣಕ್ಕೆ ₹3 ಕೋಟಿ, ರಸ್ತೆ ದುರಸ್ತಿಗೆ ₹75 ಲಕ್ಷ, ಗಟಾರ ದುರಸ್ತಿಗೆ ₹25 ಲಕ್ಷ, ನಗರ ನೈರ್ಮಲೀಕರಣಕ್ಕೆ ₹3.69 ಕೋಟಿ ಮೀಸಲಿರಿಸಿದೆ.

20116–17ರಲ್ಲಿ ₹33.71 ಕೋಟಿ ಇದ್ದ ಬಜೆಟ್ 2017–18ನೇ ಸಾಲಿನಲ್ಲಿ ₹36.91 ಕೋಟಿಗೆ ಏರಿದೆ. ಒಟ್ಟಾರೆ, ₹3.2 ಕೋಟಿಗೆ ಏರಿಕೆಯಾಗಿದೆ. ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ₹50 ಕೋಟಿ ನೀಡಿದೆ. ಇನ್ನು ಶಾಸಕರ ಅನುದಾನ, ವಿವಿಧ ಯೋಜನೆಗಳ ಅಡಿಯಲ್ಲೂ ಅನುದಾನಗಳು ಬಂದಿವೆ. ಆದರೆ, ನಗರದ ಸ್ಥಿತಿ ಮಾತ್ರ ಸುಧಾರಿಸಿಲ್ಲ.

ಸಂಚಾರ ಸಂಕಷ್ಟ: ಮಳೆ ನಿಂತ ಬಳಿಕ ಗಾಳಿ ಬೀಸುತ್ತಿದೆ. ಈ ಗಾಳಿಗೆ ದೂಳಿನ ಅಬ್ಬರ ಹೆಚ್ಚಿದೆ. ಬಸ್‌, ಲಾರಿ, ಕಾರು ಮತ್ತಿತರ ವಾಹನಗಳು ರಸ್ತೆಯಲ್ಲಿ ಸಂಚರಿಸುವಾಗ ಬೈಕ್‌, ಸ್ಕೂಟರ್‌ ಮುಂತಾದ ದ್ವಿಚಕ್ರ ಸವಾರರು, ಸೈಕಲ್‌ ಸವಾರರು ಹೋಗುವುದೇ ಅಸಾಧ್ಯ ಎನಿಸಿದೆ. ಹಲವೆಡೆ ಕಾಮಗಾರಿಗಳ ಕಾರಣ ರಸ್ತೆಯೇ ಕೆಸರು ಮಯವಾಗಿದೆ.

ಅತಿಕ್ರಮಣ: ಇನ್ನು ನಗರದ ಕೇಂದ್ರೀಯ ಬಸ್‌ ನಿಲ್ದಾಣ ಬಳಿ, ಪಿ.ಬಿ ರಸ್ತೆಯಲ್ಲಿ ಪಾದಚಾರಿಗಳ ಪಾಡು ಹೇಳತೀರದು. ನಗರದ ಎಲ್ಲೆಡೆ ಸಮರ್ಪಕ ಪಾದಚಾರಿ ಹಾದಿ ಇಲ್ಲ. ಕೆಲವೆಡೆ  ಪಾದಚಾರಿ ಹಾದಿಯನ್ನು ಬೀದಿ ಬದಿ ವ್ಯಾಪಾರ ಹಾಗೂ ವಾಹನ ನಿಲುಗಡೆಯು ಆವರಿಸಿದೆ. ಇತ್ತೀಚೆಗೆ ಬಂಡಿಗಳ ಸಂಖ್ಯೆ ಹೆಚ್ಚಾಗಿದ್ದು, ಪಿ.ಬಿ. ರಸ್ತೆಯನ್ನು ಆವರಿಸಿವೆ.

‘ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದ ಬಸವಳಿದ ಜನತೆಗೆ ಕಳೆದೊಂದು ವಾರ ಸುರಿದ ಮಳೆಗೆ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಭಾರಿ ಮಳೆ ಸುರಿದರೆ ನಗರದ ಪಾಡೇನು’ ಎಂದು ಪ್ರಶ್ನಿಸುತ್ತಾರೆ ಮಹಾಂತೇಶ ಬಿ. 

ಮಳೆಯೇ ಬರಲಿ, ಬಿಸಿಲೇ ಇರಲಿ, ಹಾವೇರಿ ಹದಗೆಟ್ಟಿರಲಿ’ ಎನ್ನುವಂತೆ ನಮ್ಮ ಜನಪ್ರತಿನಿಧಿಗಳು ಪರಿಸ್ಥಿತಿಯನ್ನು ಕಾಯ್ದುಕೊಂಡು ಬಂದಿದ್ದಾರೆ’ ಎನ್ನುತ್ತಾರೆ ನಗರದ ನಿವಾಸಿ ಶಿವಯೋಗಿ.

*
24x7 ಕುಡಿಯುವ ನೀರು, ಒಳಚರಂಡಿ ಕಾಮಗಾರಿಯ ಪರಿಣಾಮ ನಗರದ ಹಲವೆಡೆ ರಸ್ತೆ ಹದಗೆಟ್ಟಿದೆ. ಅದನ್ನು ಶೀಘ್ರವೇ ದುರಸ್ತಿ ಪಡಿಸಲಾಗುವುದು.
–ಪಾರ್ವತೆಮ್ಮ ಹಲಗಣ್ಣನವರ,
ಅಧ್ಯಕ್ಷರು, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT