ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿರಿಸಿನಿಂದ ಅಂತಸ್ತು ಅಳೆಯುವ ಮಂದಿ

ಹೊಸ ಪುಸ್ತಕದಲ್ಲಿ ಸುಧಾ ಮೂರ್ತಿ ಚಿಂತನೆ
Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಇದು ವಿಶೇಷ ವರ್ಗದ (ಬಿಸಿನೆಸ್‌ ಕ್ಲಾಸ್‌) ಪ್ರಯಾಣಿಕರಿಗಾಗಿ ಇರುವ  ಸಾಲು. ನೀವು ಸಾಮಾನ್ಯ ವರ್ಗದ ಪ್ರಯಾಣಿಕರ ಸಾಲಿನಲ್ಲಿ  ಹೋಗಿ ನಿಲ್ಲಿ’

–ಸಾಮಾನ್ಯ ಸಲ್ವಾರ್‌ ಕಮೀಜ್‌ ಧರಿಸಿ ವಿಶೇಷ ವರ್ಗದ ಪ್ರಯಾಣಿಕರ ಸಾಲಿನಲ್ಲಿ ವಿಮಾನ ಏರಲು ನಿಂತಿದ್ದ ಇನ್ಫೊಸಿಸ್‌ನ ಸುಧಾ ಮೂರ್ತಿ ಅವರನ್ನು ಆ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಅವಮಾನಿಸಿದ ಪರಿ ಇದು.

ಲಂಡನ್‌ನ ಹೀಥ್ರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ತಮ್ಮ ಹೊಸ ಪುಸ್ತಕ ‘ಥ್ರೀ ಥೌಸಂಡ್‌ ಸ್ಟಿಚಸ್‌’ನಲ್ಲಿ ಅವರು ಓದುಗರಿಗೆ ತೆರೆದಿಟ್ಟಿದ್ದಾರೆ.

‘ನಾನು ಧರಿಸಿದ್ದ ಸಾದಾ ಬಟ್ಟೆಗಳಿಂದಾಗಿ ಅವರು ತಮ್ಮ ಕಣ್ಣಂಚಿನಿಂದಲೇ  ನನ್ನ ಅಂತಸ್ತು ಅಳೆದಿದ್ದರು. ನಾನು ವಿಶೇಷ ವರ್ಗದ ಪ್ರಯಾಣಿಕಳಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ‘ಅದೇ ದಿನ ಮತ್ತೆ ಅವರು ನನ್ನನ್ನು ನೋಡಬೇಕಾಯಿತು. ನಾನು ಭಾಗವಹಿಸಿದ್ದ ಸಭೆಗೆ ಅವರೂ ಬಂದಿದ್ದರು.

‘ವಿಮಾನ ನಿಲ್ದಾಣದಲ್ಲಿದ್ದಾಗ ಬ್ರ್ಯಾಂಡೆಡ್‌ ಉಡುಪು ಧರಿಸಿದ್ದ ಆ ಮಹಿಳೆ  ಆಶ್ಚರ್ಯಕರ ಎಂಬಂತೆ ನಂತರ ತೀರಾ ಸಾಧಾರಣವಾದ ಖಾದಿ ಸೀರೆಯುಟ್ಟು ಸಭೆಗೆ ಬಂದಿದ್ದರು. ಆ ಸಭೆಯ  ಅಧ್ಯಕ್ಷತೆ ವಹಿಸಿದ್ದ ನನ್ನನ್ನು ನೋಡಿ ಬೆಚ್ಚಿ ಬಿದ್ದರು’ ಎಂದು ಸುಧಾ ಮೂರ್ತಿ ಸ್ಮರಿಸಿಕೊಂಡಿದ್ದಾರೆ.

ಈ ಘಟನೆ ಎಳೆಯನ್ನೇ ಹಿನ್ನೆಲೆಯಾಗಿಟ್ಟುಕೊಂಡು ಅವರು ಸಮಾಜದಲ್ಲಿರುವ ವರ್ಗ ತಾರತಮ್ಯದಂತಹ ಗಂಭೀರ ವಿಷಯದ ಬಗ್ಗೆ  ಚರ್ಚಿಸಿದ್ದಾರೆ. ‘ಹಣ ಗಳಿಸಿದ ಮಾತ್ರಕ್ಕೆ  ತನ್ನಿಂದ ತಾನಾಗಿಯೇ ಅಂತಸ್ತು ಹೆಚ್ಚುತ್ತದೆ ಎನ್ನುವ ಭ್ರಮೆ ಇದೆ.  ವ್ಯಕ್ತಿಗಳು ಧರಿಸುವ ಬಟ್ಟೆಗಳಿಂದ ಅವರ ವ್ಯಕ್ತಿತ್ವ, ವರ್ಗ ಅಳೆಯಲಾಗುತ್ತದೆ. 

‘ಈ ಸಂಗತಿ ವಿಮಾನ ನಿಲ್ದಾಣದಲ್ಲಿ ನಾನು ಎದುರಿಸಿದ ಘಟನೆಯಿಂದ ಮತ್ತೊಮ್ಮೆ ನನಗೆ ಮನದಟ್ಟಾಯಿತು’  ಎಂದು ಹೇಳಿದ್ದಾರೆ. 11 ಅಧ್ಯಾಯಗಳ ಈ ಪುಸ್ತಕವನ್ನು ಪೆಂಗ್ವಿನ್‌ ರ‍್ಯಾಂಡಮ್ ಹೌಸ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT