ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜೀಪುರ– ಕೇಂದ್ರೀಯ ಸದನ ಮೇಲ್ಸೇತುವೆಗೆ ಶಂಕುಸ್ಥಾಪನೆ

ಸಂಚಾರದಲ್ಲಿ ಸುಮಾರು 30 ನಿಮಿಷ ಉಳಿತಾಯ
Last Updated 24 ಜುಲೈ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಮುಖ್ಯಮಂತ್ರಿ ಅವರ ನಗರೋತ್ಥಾನ ಯೋಜನೆ ಅಡಿಯಲ್ಲಿ ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿರುವ ಈಜೀಪುರ ಮುಖ್ಯರಸ್ತೆ–ಒಳವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಶಂಕುಸ್ಥಾಪನೆ ಮಾಡಿದರು.

ಈ ಮೇಲ್ಸೇತುವೆಯು ನಗರದ ಆಗ್ನೇಯ ಭಾಗದಲ್ಲಿ ಪೂರ್ವ ಮತ್ತು ದಕ್ಷಿಣ ಕಾರಿಡಾರ್‌ ಆಗಿ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಈಜೀಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನದವರೆಗೆ 3 ಮುಖ್ಯ ಮತ್ತು 4 ಸಣ್ಣ ಜಂಕ್ಷನ್‌ಗಳ ವಾಹನ ದಟ್ಟಣೆಯನ್ನು ತಪ್ಪಿಸಿದಂತಾಗುತ್ತದೆ. ಸಂಚಾರದಲ್ಲಿ ಸುಮಾರು 30 ನಿಮಿಷಗಳು ಉಳಿತಾಯವಾಗುತ್ತದೆ.

ಮೇಲ್ಸೇತುವೆಯ ಕಾಮಗಾರಿಯ ಗುತ್ತಿಗೆಯನ್ನು ಮೆ.ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ವಹಿಸಲಾಗಿದೆ. 18 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿದೆ. ವಿವಿಧ ಕಾಮಗಾರಿಗಳಿಗೆ ಚಾಲನೆ: ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೂ ಚಾಲನೆ ನೀಡಲಾಯಿತು.

ಪ್ರಮುಖ ಹಾಗೂ ವಾರ್ಡ್‌ ಮಟ್ಟದ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು 60 ಕಿ.ಮೀ. ಕಾಂಕ್ರೀಟ್‌ ರಸ್ತೆ ಹಾಗೂ 300 ಕಿ.ಮೀ. ಮರು ಡಾಂಬರೀಕರಣ ಸೇರಿ ಒಟ್ಟು 458 ಕಾಮಗಾರಿಗಳನ್ನು ₹255.54 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪಂಗಡದವರಿಗೆ 320 ಒಂಟಿ ಮನೆಗಳನ್ನು ₹12.80 ಕೋಟಿ ವೆಚ್ಚದಲ್ಲಿ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ವರ್ಗದವರಿಗೆ 120 ಒಂಟಿ ಮನೆಗಳನ್ನು ₹4.80 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.ಕೋರಮಂಗಲ ಕಣಿವೆಗಳ 4.10 ಕಿ.ಮೀ. ಉದ್ದದ ಮಳೆನೀರು ಕಾಲುವೆಗಳನ್ನು ₹19.70 ಕೋಟಿ ವೆಚ್ಚದಲ್ಲಿ ಪುನರ್‌ ನವೀಕರಣಗೊಳಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ₹60 ಕೋಟಿ ವೆಚ್ಚದಲ್ಲಿ ಲಸ್ಕರ್‌ ಹೊಸೂರು ಮುಖ್ಯರಸ್ತೆಗೆ ವೈಟ್‌ ಟಾಪಿಂಗ್‌ ಮಾಡಲಾಗುತ್ತದೆ.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್‌ ಯೋಜನೆ–ಸರ್ವರಿಗೂ ಸೂರು ಯೋಜನೆಯಡಿ ರಾಜೇಂದ್ರ ನಗರ, ಆಡುಗೋಡಿಯ ಎ.ಕೆ.ಕಾಲೊನಿ, ಭೋವಿ ಕಾಲೊನಿ (ಸುದ್ದುಗುಂಟೆ ಪಾಳ್ಯ) ಮತ್ತು ಸಿದ್ಧಾರ್ಥನಗರ ಕೊಳಚೆ ಪ್ರದೇಶಗಳಲ್ಲಿ 963 ಮನೆಗಳನ್ನು ₹48.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.

ಯೋಜನೆಗಳಿಗೆ ವಿರೋಧ ಸಲ್ಲ: ಸಿದ್ದರಾಮಯ್ಯ
‘ಮರಗಳು ನಾಶವಾಗುತ್ತವೆ ಎಂದು ಪ್ರತಿಯೊಂದು ಯೋಜನೆಗೂ ವಿರೋಧ ಮಾಡುತ್ತಿದ್ದರೆ, ನಗರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಹೇಳಿದರು. ‘ಉಕ್ಕಿನ ಸೇತುವೆ ನಿರ್ಮಾಣದಿಂದ ಮರಗಳು ಹೋಗುತ್ತವೆ ಎಂದು ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಮರಗಳನ್ನು ಬುಡಸಮೇತ ಬೇರೆಡೆಗೆ ಸ್ಥಳಾಂತರ ಮಾಡುವಂತಹ ತಂತ್ರಜ್ಞಾನ ಲಭ್ಯ ಇದೆ.  ಸ್ಥಳಾಂತರ ಮಾಡಲು ಸಾಧ್ಯವಿಲ್ಲ ಎನ್ನುವ ಮರಗಳನ್ನು ಕತ್ತರಿಸುತ್ತೇವೆ. ಇಂತಹ ಒಂದು ಮರಕ್ಕೆ 10 ಗಿಡಗಳನ್ನು ನೆಟ್ಟು ಬೆಳೆಸುತ್ತೇವೆ’ ಎಂದರು.

‘ಮರಗಳು ನಾಶವಾಗುತ್ತವೆ ಎನ್ನುವ ಕಾರಣಕ್ಕೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳದೆ ಇರಲು ಸಾಧ್ಯವಿಲ್ಲ. ಮರಗಳ ರಕ್ಷಣೆ ಜತೆಗೆ ಅಭಿವೃದ್ಧಿಗೂ ಒತ್ತು ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು. ‘ಶಿವಾನಂದ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಉಕ್ಕಿನ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ವಿರೋಧ ಪಕ್ಷಗಳು ಹಾಗೂ ಪರಿಸರವಾದಿಗಳು ಅದನ್ನೂ ವಿರೋಧಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗಿನ ಉಕ್ಕಿನ ಮೇಲ್ಸೇತುವೆಗೆ ಕೆಲವರು ವಿರೋಧ ಮಾಡಿದ್ದರು. ಆ ಯೋಜನೆ ಅಂತಿಮಗೊಂಡಿರಲಿಲ್ಲ.

ಆದರೂ, ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿದ್ದರು. ಇಂದಿರಾ ಕ್ಯಾಂಟೀನ್‌ನಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ. ಸುಳ್ಳು ಹೇಳುವುದನ್ನೇ ಕಸುಬು ಮಾಡಿಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣದಿಂದ ಕೆಲವರು ರಾಜಕೀಯ ಕಣ್ಣುಗಳಿಂದ ನೋಡುತ್ತಿದ್ದಾರೆ. ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಇಂತಹವರಿಗೆ ಛೀಮಾರಿ ಹಾಕಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎರಡನೇ ಅತಿ ಉದ್ದದ ಮೇಲ್ಸೇತುವೆ’: ‘ಮೈಸೂರು ರಸ್ತೆಯಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಬಿಟ್ಟರೆ, ಅತಿ ಉದ್ದದ ಮೇಲ್ಸೇತುವೆ ಇದು. ಶಿವಾನಂದ ವೃತ್ತದಲ್ಲಿ ₹19.85 ಕೋಟಿ ವೆಚ್ಚದಲ್ಲಿ ಉಕ್ಕಿನ ಮೇಲ್ಸೇತುವೆ  ನಿರ್ಮಿಸಲಾಗುತ್ತದೆ. ಮಿನರ್ವ ವೃತ್ತದಿಂದ ಹಡ್ಸನ್‌ ವೃತ್ತದವರೆಗೆ ₹135 ಕೋಟಿ ವೆಚ್ಚದಲ್ಲಿ ಉಕ್ಕಿನ ಸೇತುವೆಯನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಮರು ಟೆಂಡರ್‌ ಕರೆಯಲಾಗಿದೆ’ ಎಂದು ಮೇಯರ್‌ ಜಿ.ಪದ್ಮಾವತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT