ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ ಯಶ್‌ಪಾಲ್ ನಿಧನ

Last Updated 25 ಜುಲೈ 2017, 14:53 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ವಿಜ್ಞಾನಿ, ಪದ್ಮ ವಿಭೂಷಣ ಯಶ್‌ಪಾಲ್(90) ಅವರು ಉತ್ತರಪ್ರದೇಶದ ನೋಯ್ಡಾದಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಮೂರು ಗಂಟೆಗೆ ಅಂತ್ಯಸಂಸ್ಕಾರ ನೆರವೇರಲಿದೆ.

ಸೂರ್ಯ ಕಿರಣಗಳ ಅಧ್ಯಯನ, ಭೌತಶಾಸ್ತ್ರ, ಖಗೋಳ ವಿಜ್ಞಾನ ಅಧ್ಯಯನದ ಮೂಲಕ ಅವರು ವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದರು. ದೇಶದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದ್ದರು. ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರು 1976ರಲ್ಲಿ ಪದ್ಮಭೂಷಣಕ್ಕೆ ಪಾತ್ರರಾಗಿದ್ದರು. 2013ರಲ್ಲಿ ಅವರಿಗೆ ಪದ್ಮ ವಿಭೂಷಣ ಪುರಸ್ಕಾರ ನೀಡಲಾಗಿತ್ತು.

ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ 2000ನೇ ಇಸವಿಯಲ್ಲಿ ಇಂದಿರಾ ಗಾಂಧಿ ಪ್ರಶಸ್ತಿ, 2006ರಲ್ಲಿ ಮೇಘಾನಂದ ಸಹಾ ಮೆಡಲ್‌ಗೆ ಪಾತ್ರರಾಗಿದ್ದರು. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕೆ ಅಪ್ರತಿಮ ಕೊಡುಗೆ ನೀಡಿದ್ದ ವಿಜ್ಞಾನಿ ಯು.ಆರ್‌. ರಾವ್ (ಉಡುಪಿ ರಾಮಚಂದ್ರ ರಾವ್‌) ಸಹ ಸೋಮವಾರ ನಿಧನರಾಗಿದ್ದಾರೆ.

ಕ್ಯಾನ್ಸರ್ ಜಯಿಸಿದ್ದ ವಿಜ್ಞಾನಿ: ಯಶ್‌ಪಾಲ್ ಅವರು ಐದು ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದರು. ನಂತರ ಚೇತರಿಸಿಕೊಂಡಿದ್ದರು.

ಸ್ವಾತಂತ್ರ್ಯಪೂರ್ವ ಭಾರತದ ಭಾಗವಾಗಿದ್ದ, ಈಗ ಪಾಕಿಸ್ತಾನದಲ್ಲಿರುವ ಝಾಂಗ್ ಜಿಲ್ಲೆಯಲ್ಲಿ 1926ರಲ್ಲಿ ಜನಿಸಿದ್ದ ಯಶ್‌ಪಾಲ್ ಅವರು, 1949ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದರು. 1958ರಲ್ಲಿ ಇನ್ಸ್‌ಟಿಟ್ಯೂಟ್ ಆಫ್‌ ಮಸಾಚುಸೆಟ್ಸ್‌ನಲ್ಲಿ ಪಿಎಚ್‌ಡಿ ಪದವಿ ಪೂರ್ಣಗೊಳಿಸಿದ್ದರು. ಸೂರ್ಯ ಕಿರಣಗಳ ಅಧ್ಯಯನ, ಭೌತಶಾಸ್ತ್ರ, ಖಗೋಳ ವಿಜ್ಞಾನ ವಿಷಯದಲ್ಲಿ ಪರಿಣತಿ ಪಡೆದಿದ್ದರು.

ಜನಪ್ರಿಯತೆಯ ‘ಟರ್ನಿಂಗ್‌ ಪಾಯಿಂಟ್’: ಯಶ್‌ಪಾಲ್ ಅವರ ಜನಪ್ರಿಯತೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ದಿದ್ದು ದೂರದರ್ಶನದಲ್ಲಿ ಅವರು ನಡೆಸಿಕೊಡುತ್ತಿದ್ದ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮ ‘ಟರ್ನಿಂಗ್‌ ಪಾಯಿಂಟ್’. 90ರ ದಶಕದಲ್ಲಿ ಪ್ರಸಾರವಾಗಿದ್ದ ಈ ಕಾರ್ಯಕ್ರಮ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸಲು ಕಾರಣವಾಗಿತ್ತು. ಮುಂಬೈನ ಟಾಟಾ ಇನ್ಸ್‌ಟಿಟ್ಯೂಟ್ ಆಫ್‌ ಫಂಡಮೆಂಟಲ್ ರಿಸರ್ಚ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಯಶ್‌ಪಾಲ್ ಅವರು ಅಹಮದಾಬಾದ್‌ನ ಬಾಹ್ಯಾಕಾಶ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ 1973ರಿಂದ 1981ರವರೆಗೆ ಸೇವೆ ಸಲ್ಲಿಸಿದ್ದರು.

1983–84ರಲ್ಲಿ ಯೋಜನಾ ಆಯೋಗದ ಮುಖ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. 1984–86 ಅವಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಐದು ವರ್ಷಗಳ ಕಾಲ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷರಾಗಿದ್ದರು. ಈ ವೇಳೆ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನವದೆಹಲಿಯ ಜವಹರ್‌ಲಾಲು ನೆಹರು ವಿಶ್ವವಿದ್ಯಾಲಯದ ಕುಲಪತಿಯಾಗಿ 2007ರಿಂದ 2012ರವರೆಗೆ ಯಶ್‌ಪಾಲ್ ಕಾರ್ಯನಿರ್ವಹಿಸಿದ್ದರು.

ವಿಶ್ವಸಂಸ್ಥೆಯಲ್ಲೂ ಸೇವೆ: ವಿಶ್ವಸಂಸ್ಥೆಯ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಮಿತಿಯ ಸಲಹೆಗಾರರಾಗಿಯೂ ಯಶ್‌ಪಾಲ್ ಅವರು ಕಾರ್ಯನಿರ್ವಹಿಸಿದ್ದರು. ಮಾರ್ಕೊನಿ ಅಂತರರಾಷ್ಟ್ರೀಯ ಫೆಲೊಶಿಪ್ ಪ್ರಶಸ್ತಿ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗೂ ಯಶ್‌ಪಾಲ್ ಅವರು ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT