ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಪರಿಹಾರ ನೀಡುವಲ್ಲಿ ತಾತ್ಸಾರ ಸಲ್ಲ

ಪ್ರಗತಿ ಪರಿಶೀಲನಾ ಸಭೆ; ಅಧಿಕಾರಿಗಳಿಗೆ ಚಾಟಿ ಬೀಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ
Last Updated 25 ಜುಲೈ 2017, 6:43 IST
ಅಕ್ಷರ ಗಾತ್ರ

ಧಾರವಾಡ: ‘ಸಾಮಾಜಿಕ ಭದ್ರತಾ ಯೋಜನೆಗಳು, ಬೆಳೆವಿಮೆ ಹಾಗೂ ಬೆಳೆನಷ್ಟ ಪರಿಹಾರಗಳನ್ನು ರೈತರಿಗೆ ನೀಡುವ ವಿಷಯದಲ್ಲಿ ಬ್ಯಾಂಕ್‌ಗಳು ತಾತ್ಸಾರ ಮಾಡುತ್ತಿವೆ. ಇದೇ ವಿಷಯವಾಗಿ ಹೋರಾಟಗಳು ನಡೆದರೂ ಆಶ್ಚರ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು. 

‘ನಾಲ್ಕೈದು ತಿಂಗಳು ಕಳೆದರೂ ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಅವರ ಪಿಂಚಣಿ ಕೈ ಸೇರುತ್ತಿಲ್ಲ. ಅವರ ಹತ್ತಿರದಲ್ಲೇ ಬ್ಯಾಂಕ್‌ಗಳಿದ್ದರೂ ದೂರದ ಬ್ಯಾಂಕ್‌ಗಳಿಗೆ ಅಲೆಸುತ್ತಿದ್ದೀರಿ. ಅಡವಿಟ್ಟ ಬಂಗಾರ ಬಿಡಿಸಲು ಹಣ ತುಂಬಿದರೂ, ಬೆಳೆಸಾಲದ ನೆಪವೊಡ್ಡಿ ಬಂಗಾರ ಮರಳಿ ನೀಡುತ್ತಿಲ್ಲ. ಬ್ಯಾಂಕ್‌ ಅಧಿಕಾರಿಗಳಿಗೆ ಕನ್ನಡ ಬರುವುದಿಲ್ಲ. ಇದರಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಎಚ್ಚರದಿಂದಿರಿ’ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ವಿಜಯ ಕುಮಾರ್‌ ಅವರನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ಎಲ್ಲಾ ಬ್ಯಾಂಕ್‌ಗಳು ತಾವು ನೀಡುವ ಸಾಲದಲ್ಲಿ ಶೇ 18ರಷ್ಟು ರೈತರಿಗೆ ಕೃಷಿ ಸಾಲ ನೀಡಬೇಕು. ಈವರೆಗೂ ಎಷ್ಟು ಜನರಿಗೆ ನೀಡಿದ್ದೀರಿ ಎಂಬುದನ್ನು ಒಂದು ವಾರದ ಒಳಗೆ ವರದಿ ನೀಡಬೇಕು. ಬೆಳೆವಿಮೆಗೆ ಸಂಬಂಧಿಸಿದಂತೆ ರೈತರ ದಾಖಲೆಗಳಲ್ಲಾದ ಲೋಪಗಳನ್ನು ಸರಿಪಡಿಸಲು ಒಂದು ವಾರದೊಳಗೆ ತಿಳಿಸಬೇಕು’ ಎಂದರು. 

ಇದಕ್ಕೆ ಧ್ವನಿಗೂಡಿಸಿದ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್‌.ಶಿವಳ್ಳಿ, ‘ಪಿಂಚಣಿ ಹಣದಲ್ಲೇ ಅವರ ಆರೋಗ್ಯ ತಪಾಸಣೆ, ಔಷಧ ಖರೀದಿ ಇತ್ಯಾದಿಗಳು ನಡೆಯಬೇಕು. ಕೂಲಿ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಚಟುವಟಿಕೆಗಳು ಇಲ್ಲದೇ ಜನರು ಸಂಕಷ್ಟದಲ್ಲಿರುವಾಗ ಸರ್ಕಾರ ಅವರ ನೆರವಿಗೆ ನಿಂತಿದೆ. ಆದರೆ ಬ್ಯಾಂಕ್‌ಗಳು ಚೆಲ್ಲಾಟವಾಡುತ್ತಿವೆ. ನಾನು ಶಾಸಕನಾದರೂ ಪರವಾಗಿಲ್ಲ ಬ್ಯಾಂಕ್‌ ಎದುರು ಧರಣಿ ನಡೆಸುತ್ತೇನೆ’ ಎಂದು ಅವರು ಎಚ್ಚರಿಸಿದರು. 

‘ಬ್ಯಾಂಕ್‌ ಅಧಿಕಾರಿಗಳ ತಪ್ಪಿನಿಂದ ರೈತರಿಗೆ ಪಾವತಿಯಾಗಬೇಕಾದ ₹ 41.20ಕೋಟಿ ಮೊತ್ತ ಬ್ಯಾಂಕ್‌ನಲ್ಲೇ ಇದೆ. ಈ ಕುರಿತು ಈಗಾಗಲೇ ರೈತರಿಗೆ ಎಸ್‌.ಎಂ.ಎಸ್‌. ರವಾನೆಯಾಗಿದೆ. ಈ ವಿಮಾ ಮೊತ್ತವನ್ನು ರೈತರಿಗೆ ಶೀಘ್ರದಲ್ಲಿಯೇ ಪಾವತಿಸುವ ಕೆಲಸವನ್ನು ಕೃಷಿ ಇಲಾಖೆ ಮತ್ತು ಬ್ಯಾಂಕ್‌ ಅಧಿಕಾರಿಗಳು ಸೇರಿ ಮಾಡಬೇಕು’ ಎಂದರು.

ಸಚಿವರಿಂದ ಸಿಇಒಗೆ ತರಾಟೆ
‘ಮಳೆ ಪ್ರಮಾಣ ಇಳಿಮುಖವಾಗಿದೆ. ಬ್ಯಾರೇಜ್ ನಿರ್ಮಾಣಕ್ಕೆ ಆರು ತಿಂಗಳು ಕಳೆದರೂ ಟೆಂಡರ್‌ ಕರೆದಿಲ್ಲ ಎಂದಾದರೆ ಅಧಿಕಾರಿಗಳ ನಿರ್ಲಕ್ಷ್ಯ ಎಲ್ಲೆ ಮೀರಿದೆ ಎಂಬುದು ಗೊತ್ತಾಗುತ್ತದೆ. ವಿಳಂಬ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದ ನೀವೂ ಅಸಮರ್ಥರು ಎಂದೇ ಭಾವಿಸಬೇಕಾಗುತ್ತದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ರಾಯಮಾನೆ ಅವರನ್ನು ವಿನಯ ಕುಲಕರ್ಣಿ ತರಾಟೆಗೆ ತೆಗೆದುಕೊಂಡರು. 

‘ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎನ್‌.ಗೌಡರ್‌ ಅವರು ಒಂದು ಬ್ಯಾರೇಜ್‌ಗೆ ಅಧಿಕ ಮೊತ್ತ ನಿಗದಿಪಡಿಸಿದ್ದರಿಂದ ಅದನ್ನು ಮರಳಿ ಕಳುಹಿಸಲಾಗಿದೆ. ಈ ಕುರಿತಂತೆ ಪರಿಶೀಲಿಸುವಂತೆ ಹಲವು ಬಾರಿ ತಿಳಿಸಿದ್ದರೂ ಅವರು ಕ್ರಮ ಕೈಗೊಂಡಿಲ್ಲ. ಒಂದು ಬ್ಯಾರೇಜ್‌ಗೆ ₹ 3ಲಕ್ಷ ಸರ್ಕಾರ ನಿಗದಿಪಡಿಸಿದರೆ, ₹ 25ಲಕ್ಷ ವೆಚ್ಚವಾಗಲಿದೆ ಎಂದಿದ್ದರು. ಇದನ್ನು ಮರಳಿ ಕಳುಹಿಸಿದ್ದೇನೆ’ ಎಂದು ಸ್ನೇಹಲ್‌ ಹೇಳಿದರು.

ಇದಕ್ಕೆ ಒಪ್ಪದ ಸಚಿವ ವಿನಯ, ‘ಐಎಎಸ್ ಅಧಿಕಾರಿಯಾದರೆ ಏನು, ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಕೆಲಸ ಮಾಡುವ ಅಗತ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ತಿರುಗಾಡಿ ಸಮಸ್ಯೆಗಳನ್ನು ಅರಿತು ಪರಿಹರಿಸಲು ಪ್ರಯತ್ನಿಸಿ. ಜಿಲ್ಲಾ ಪಂಚಾಯ್ತಿ ಎಂದರೆ ನಿಷ್ಪ್ರಯೋಜಕ ಎಂದೇ ಬಿಂಬಿತವಾಗಿದೆ. ಬೇಸಿಗೆಯಲ್ಲಿ ಆಗಬೇಕಾದ ಕಾಮಗಾರಿಗಳು ಮಳೆಗಾಲ ಮಧ್ಯದಲ್ಲಿದ್ದರೂ ಆಗಿಲ್ಲ ಎಂದಾದರೆ ನೀವೆಲ್ಲಾ ಹೇಗೆ ಕೆಲಸ ಮಾಡುತ್ತಿದ್ದೀರಿ ಎಂಬುದು ಅರ್ಥವಾಗುತ್ತದೆ’ ಎಂದು ಚಾಟಿ ಬೀಸಿದರು.

‘ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. 70ರಿಂದ ಈಗ 700 ಅಡಿಗೆ ಕುಸಿದಿದೆ. ಇದನ್ನು ಕಂಡರೆ ಅಧಿಕಾರಿಗಳಿಗೆ ಹೊಟ್ಟೆ ಉರಿಯಬೇಕು. ಬ್ಯಾರೇಜ್‌ ನಿರ್ಮಾಣ ಮಾಡುವ ಮೂಲಕವಾದರೂ ಅಂತರ್ಜಲ ಕಾಯ್ದುಕೊಳ್ಳಬಹುದಿತ್ತು. ನೀರಿನ ವಿಷಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ. ಇಲ್ಲವಾದಲ್ಲಿ ಭವಿಷ್ಯಕ್ಕೆ ದ್ರೋಹ ಮಾಡಿದಂತೆ. ನಾವು ಎಂದಿಗೂ ಉದ್ಧಾರವಾಗುವುದಿಲ್ಲ’ ಎಂದು ವಿನಯ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.

ಕ್ರಿಮಿನಲ್‌ ಮೊಕದ್ದಮೆ: ಎಚ್ಚರಿಕೆ 
‘ರೈತರು ತಾಳ್ಮೆ ಕಳೆದುಕೊಂಡು ಬ್ಯಾಂಕ್‌ಗಳ ವಿರುದ್ಧ ಪ್ರತಿಭಟನೆ ನಡೆಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಬೆಳೆ ವಿಮೆ ತುಂಬಿಸಿಕೊಳ್ಳಲು ಇನ್ನು ಏಳು ದಿನಗಳು ಬಾಕಿ ಇವೆ. ರೈತ ಸಾಲ ಪಡೆದಿದ್ದರೂ, ಆತನಿಂದ ವಿಮೆ ತುಂಬಿಸಿಕೊಳ್ಳಬೇಕು. ಯಾವುದೇ ನೆಪ ಹೇಳಿ ವಿಳಂಬ ಮಾಡಿ ನಂತರ ರೈತನಿಗೆ ಬೆಳೆ ವಿಮೆ ಬಾರದಿದ್ದರೆ ಅಂಥ ಬ್ಯಾಂಕ್‌ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

*
ಐಎಎಸ್ ಅಧಿಕಾರಿಯಾದರೆ ಏನು, ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಕೆಲಸ ಮಾಡುವ ಅಗತ್ಯವಿಲ್ಲ. ತಿರುಗಾಡಿ ಸಮಸ್ಯೆಗಳನ್ನು ಅರಿತು ಪರಿಹರಿಸಲು ಪ್ರಯತ್ನಿಸಿ.
-ವಿನಯ ಕುಲಕರ್ಣಿ,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT