ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಕರ ವಿರೋಧದ ಮಧ್ಯೆ ಇ– ಪಾವತಿ

ಮೊದಲ ದಿನ ವಹಿವಾಟು ನೀರಸ; ಸಹಕಾರ ಮಾರಾಟ ಮಹಾಮಂಡಳದಿಂದ ಖರೀದಿ
Last Updated 25 ಜುಲೈ 2017, 7:11 IST
ಅಕ್ಷರ ಗಾತ್ರ

ಗದಗ: ವರ್ತಕರ ವಿರೋಧದ ನಡುವೆಯೇ ಜಿಲ್ಲೆಯ ಐದೂ ಎಪಿಎಂಸಿಗಳಲ್ಲಿ ಸೋಮವಾರ ಇ–ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕ ವಾಗಿ ಜಾರಿಗೆ ತರಲಾಯಿತು.

ಹೊಸ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿ ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರದಲ್ಲಿ ಎಪಿಎಂಸಿ ವರ್ತಕರು ಬಂದ್‌ಗೆ ಕರೆ ನೀಡಿದ್ದರು. ಈ ಎರಡೂ ಎಪಿಎಂಸಿಗಳಲ್ಲಿ ಸೋಮವಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಗದಗ, ನರಗುಂದ, ಮುಂಡರಗಿ, ಲಕ್ಷ್ಮೇಶ್ವರ, ಹೊಳೆ ಆಲೂರು ಎಪಿಎಂಸಿಗಳಲ್ಲೂ ನೀರಸ ವಹಿವಾಟು ನಡೆಯಿತು.

ವರ್ತಕರು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಎಪಿಎಂಸಿಗಳಿಗೆ ಕೃಷಿ ಉತ್ಪನ್ನಗಳ ಆವಕ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿತ್ತು. ಗದಗ ಮತ್ತು ಲಕ್ಷ್ಮೇಶ್ವರ ಎಪಿಎಂಸಿಗಳಿಗೆ ರೈತರು ಅತ್ಯಲ್ಪ ಪ್ರಮಾಣದಲ್ಲಿ ಹೆಸರು ಮಾರಾಟ ಮಾಡಲು ತಂದಿದ್ದರು.  ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳದಿಂದ ಮಾತ್ರ ಖರೀದಿ ನಡೆಯಿತು. ಆದರೆ, ಕಡಿಮೆ ಬೆಲೆ ನಮೂದಿಸಿದ್ದರಿಂದ ಕೆಲವೆಡೆ ರೈತರು ಮಾರಾಟ ಮಾಡಲು ಹಿಂದೇಟು ಹಾಕಿದರು.

‘ಜಿಲ್ಲೆಯ ಐದೂ ಎಪಿಎಂಸಿಗಳು ಸೇರಿ ಪ್ರತಿ ನಿತ್ಯ ಸರಾಸರಿ ₹1.5ರಿಂದ ₹2 ಕೋಟಿ ವಹಿವಾಟು ನಡೆಯುತ್ತದೆ. ದಿನ ನಿತ್ಯ ಸರಾಸರಿ 200 ಲಾಟ್‌ ಕೃಷಿ ಉತ್ಪನ್ನಗಳು ಮಾರಾಟವಾಗುತ್ತವೆ. ಆದರೆ, ಸೋಮವಾರ ಹೊಸ ವ್ಯವಸ್ಥೆ ಜಾರಿಯಿಂದ ವಹಿವಾಟು ಸ್ವಲ್ಪ ಕಡಿಮೆಯಾಯಿತು. ಒಟ್ಟು 40 ಲಾಟ್‌ ಉತ್ಪನ್ನಗಳು ಮಾರಾಟವಾದವು. ಗದಗ ಎಪಿಎಂಸಿಯಲ್ಲಿ 20 ಲಾಟ್‌ ಕೃಷಿ ಉತ್ಪನ್ನಗಳನ್ನು ಇ–ಟೆಂಡರ್‌ ಮೂಲಕ ಸಹಕಾರ ಮಾರಾಟ ಮಹಾಮಂಡಳ ಖರೀದಿಸಿತು. ಯಾವುದೇ ತಾಂತ್ರಿಕ ಸಮಸ್ಯೆ ಎದುರಾಗಲಿಲ್ಲ’ ಎಂದು ಗದಗ ಎಪಿಎಂಸಿ ಕಾರ್ಯದರ್ಶಿ ಮಂಜುನಾಥ್‌ ಪತ್ರಿಕೆಗೆ ತಿಳಿಸಿದರು.

ಜಿಲ್ಲೆಯ ಐದೂ ಎಪಿಎಂಸಿಗಳ ವ್ಯಾಪ್ತಿಯಲ್ಲಿ ಒಟ್ಟು 3.26 ಲಕ್ಷ ರೈತರ ಪೈಕಿ, 2.08 ಲಕ್ಷ ರೈತರು, 1,253 ವರ್ತಕರ ಪೈಕಿ 1,216 ವರ್ತಕರು ಹಾಗೂ 526 ದಲ್ಲಾಳಿಗಳ ಪೈಕಿ 497 ದಲ್ಲಾಳಿಗಳು ಇ– ಪಾವತಿ ವ್ಯವಸ್ಥೆಗೆ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.

ಲಕ್ಷ್ಮೇಶ್ವರ ವರದಿ
ಸರ್ಕಾರದ ಆದೇಶದ ಮೇರೆಗೆ ಸೋಮವಾರದಿಂದ ಕೃಷಿ ಉತ್ಪನ್ನ ಗಳನ್ನು ಖರೀದಿ ಮಾಡಿದವರು 24 ತಾಸಿನೊಳಗೆ ಉತ್ಪನ್ನದ ಮೌಲ್ಯವನ್ನು ನೇರವಾಗಿ ರೈತರ ಖಾತೆಗೆ ಇ–ಪೇಮೆಂಟ್‌ ಮೂಲಕ ಜಮೆ ಮಾಡಬೇಕು ಎಂಬ ನೂತನ ಪದ್ಧತಿಯನ್ನು ಜಾರಿಗೆ ತರಲು ಇಲ್ಲಿನ ಎಪಿಎಂಸಿ ಮುಂದಾಗಿದೆ. ಆದರೆ ಈ ವ್ಯವಸ್ಥೆಯನ್ನು ವಿರೋಧಿಸಿದ ಖರೀದಿ ದಾರರು ರೈತರ ಮಾಲನ್ನು ಟೆಂಡರ್‌ನಲ್ಲಿ ಖರೀದಿಸಲು ಮುಂದಾಗಲಿಲ್ಲ. ಇದರಿಂ ದಾಗಿ ಹೆಸರು ಹಾಗೂ ಶೇಂಗಾ ಕಾಳನ್ನು ಮಾರಾಟಕ್ಕೆ ತಂದಿದ್ದ ರೈತರು ಮಾಲು ಮಾರಾಟವಾಗದೇ ಪರದಾಡಿದರು.

ಈ ಮೊದಲು ಬೇರೆ ಬೇರೆ ಊರುಗಳಿಂದ ಮಾಲನ್ನು ತರುತ್ತಿದ್ದ ರೈತರು ದಲಾಲರಿಂದ ಮುಂಗಡ ತೆಗೆದು ಕೊಂಡು ಗಾಡಿ ಬಾಡಿಗೆ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಖರ್ಚುಗಳನ್ನು ನೀಗಿಸಿಕೊಳ್ಳುತ್ತಿದ್ದರು. ಆದರೆ ಇ–ಪೇಮೆಂಟ್‌ ಜಾರಿ ನಂತರ ದಲಾಲರು ರೈತರಿಗೆ ಹಣ ಕೊಡಬೇಕಾದರೆ ಲೇವಾದೇವಿ ಲೈಸೆನ್ಸ್ ಪಡೆಯಬೇಕು ಎಂದು ಸರ್ಕಾರ ಕಡ್ಡಾಯ ಮಾಡಿದ್ದ ರಿಂದ ಅವರು ರೈತರಿಗೆ ಮುಂಗಡ ಹಣ ಕೊಡಲಿಲ್ಲ. ಇದರಿಂದಾಗಿ ರೊಚ್ಚಿಗೆದ್ದ ರೈತರು ಎಪಿಎಂಸಿ ಕಚೇರಿಗೆ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಮಾಲು ಹೇರಿಕೊಂಡು ಬಂದ ಗಾಡಿಯ ವರಿಗೆ ಬಾಡಿಗೆ ಕೊಡುವಂತೆ ಆಗ್ರಹಿಸಿದರು.

ಆಗ ಎಪಿಎಂಸಿ ಅಧ್ಯಕ್ಷ ಎಸ್‌.ಪಿ. ಪಾಟೀಲ ‘ರೈತರ ಅನುಕೂಲಕ್ಕಾಗಿ ಸರ್ಕಾರ ಇ–ಪೇಮೆಂಟ್‌ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು ರೈತರು ಇದಕ್ಕೆ ಹೊಂದಿಕೊಳ್ಳಲೇಬೇಕು. ನೂತನ ಪದ್ಧತಿ ಜಾರಿ ಆದರೆ ರೈತರಿಗೆ ಬಹಳ ಅನುಕೂಲ ಆಗುತ್ತದೆ. ಹಾಗಾಗಿ ರೈತರು ಸಹಕರಿಸ ಬೇಕು’ ಎಂದು ಮನವಿ ಮಾಡಿದರು.

ಇದರಿಂದ ಸಿಟ್ಟಿಗೆದ್ದ ರೈತರು ‘ವ್ಯವಸ್ಥೆಯನ್ನು ಜಾರಿಗೆ ತರುವ ಮೊದಲು ರೈತರಿಗೆ ತಿಳಿಸಬೇಕಾಗಿತ್ತು. ಈಗ ಏಕಾ ಏಕಿ ಹೀಗೆ ಮಾಡಿದರೆ ಮಾಲನ್ನು ಖರೀದಿ ಮಾಡುವವರು, ಹಣ ಕೊಡುವ ವರಾರು’ ಎಂದು ಪ್ರತಿಭಟನೆಗೆ ಇಳಿದರು.

‘ನಮಗ ಹೊಸಾ ಪದ್ಧತಿ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಈಗ ಮಾಲು ತಂದೇವಿ. ಮದ್ಲಿನಂಗ ಖರೀದಿಸಿ ರೊಕ್ಕ ಕೊಡ್ರೀ’ ಎಂದು ಹರದಗಟ್ಟಿ ಗ್ರಾಮದಿಂದ ಹೆಸರು ಮಾರಾಟ ಮಾಡಲು ಬಂದಿದ್ದ ಹಸನ್‌ಸಾಬ್‌ ಕಳಲಕೊಂಡ, ಪಶುಪತಿಹಾಳದ ನಿಂಗಪ್ಪ ಮುರಡಿ, ಹುಲ್ಲೂರಿನ ಸಿದ್ದಪ್ಪ ಸಾಸಲವಾಡ, ಯತ್ನಳ್ಳಿಯ ಈಶ್ವರಪ್ಪ ಬಡಿಗೇರ ಬೇಡಿಕೊಂಡರು.

‘ಮದ್ಲ ಮಾಲ ಹೇರಕೊಂಡು ಬಂದ್ರ ಬಾಡಿಗೆ ಕೊಡ್ತಿದ್ರು. ಆದರ ಈಗ ಬಾಡಿಗಿ ಕೊಡವಲ್ರು’ ಎಂದು ಚನ್ನಪ್ಪಗೌಡ ಬಿಷ್ಟನಗೌಡ್ರ ಹೇಳಿದರು.
ಸ್ಥಳಕ್ಕೆ ಬಂದ ವರ್ತಕರ ಸಂಘದ ಅಧ್ಯಕ್ಷ ಓಂಪ್ರಕಾಶ ಜೈನ ಹಾಗೂ ಚೆಂಬಣ್ಣ ಬಾಳಿಕಾಯಿ ‘ಇ–ಪೇಮೆಂಟ್‌ ವ್ಯವಸ್ಥೆ ಜಾರಿಗೆ ಬಂದರೆ ರೈತರಿಗೆ ಮುಂಗಡ ಹಣ ಕೊಡಲು ಸಾಧ್ಯವಿಲ್ಲ. ಅಲ್ಲದೆ ಹಣ ಇದ್ದವರು ಮಾತ್ರ ಉತ್ಪನ್ನಗಳನ್ನು ಖರೀದಿಸಬೇಕಾಗುತ್ತದೆ. ಹೀಗೆ ಆದರೆ ಉತ್ಪನ್ನಗಳಿಗೆ ಪೈಪೋಟಿ ಬೆಲೆ ದೊರೆಯುವುದಿಲ್ಲ. ಮತ್ತು ಇಡೀ ರಾಜ್ಯದಾದ್ಯಂತ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿತ್ತು, ಆದರೆ ಇದನ್ನು ಕೇವಲ ಗದಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರುತ್ತಿರುವುದರ ಹಿಂದಿನ ಉದ್ದೇಶ ಏನು’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ಗಂಗಾಧರ ಮೆಣಸಿನಕಾಯಿ, ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಗೋವಿಂದಪ್ಪ ಶೆರಸೂರಿ ‘ಇ–ಪೇಮೆಂಟ್‌ ವ್ಯವಸ್ಥೆಯನ್ನು ಜಾರಿಗೆ ತರಬಾರದು’ ಎಂದು ಒತ್ತಾಯಿಸಿದರು.

ಕೊನೆಗೆ ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ ಮೂಲಕ ರೈತರ ಮಾಲನ್ನು ಖರೀದಿಸಲು ಸರ್ಕಾರ ಒಪ್ಪಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಮಹಾ ಮಂಡಳ ರೈತರ ಎಲ್ಲ ರೀತಿಯ ಉತ್ಪನ್ನ ಗಳನ್ನು ಖರೀದಿಸಲು ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಎಪಿಎಂಸಿ ಕಾರ್ಯ ದರ್ಶಿ ಎನ್‌.ಎ. ಲಕ್ಕುಂಡಿ ಹೇಳಿದ ನಂತರ ರೈತರು ನಿಟ್ಟುಸಿರು ಬಿಟ್ಟರು.

*
ಇ–ಪಾವತಿ ವ್ಯವಸ್ಥೆಯಲ್ಲಿ ಖರೀದಿ ಪ್ರಕ್ರಿಯೆ ನಡೆದ ಮರು ದಿನವೇ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗುತ್ತದೆ. ಇದರಿಂದ ರೈತರ ಶೋಷಣೆ ತಪ್ಪಲಿದೆ.
-ಎಚ್‌.ಕೆ. ಪಾಟೀಲ,
ಗ್ರಾಮೀಣಾಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT