ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಭಾಷೆ ಸಂಸ್ಕೃತಿ ಎಲ್ಲರೂ ಅರಿಯಲಿ

‘ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ’ ಕಾರ್ಯಕ್ರಮದಲ್ಲಿ ಶಾಸಕ ವಾಸು ಸಲಹೆ
Last Updated 25 ಜುಲೈ 2017, 9:15 IST
ಅಕ್ಷರ ಗಾತ್ರ

ಮೈಸೂರು: ಕೊಡಗಿನಲ್ಲಿರುವ ಅರೆಭಾಷೆ ಸಂಸ್ಕೃತಿಯ ಬಗ್ಗೆ ಹೊರಗಿನವರಿಗೆ ಹೆಚ್ಚಿಗೆ ತಿಳಿದಿಲ್ಲ. ಇಂತಹ ಒಳ್ಳೆಯ ಭಾಷೆ, ಸಂಸ್ಕೃತಿಯನ್ನು ಎಲ್ಲರಿಗೂ ತಲುಪಿಸುವ ಕೆಲಸ ನಡೆಯಬೇಕು ಎಂದು ಶಾಸಕ ವಾಸು ಭಾನುವಾರ ಸಲಹೆ ನೀಡಿದರು.

ಕೊಡಗು ಗೌಡ ಸಮಾಜ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ‘ಅರೆಭಾಷೆ ಸಂಸ್ಕೃತಿ ಪರಿಪಾಲಕರ ಸಮಾಗಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಭಾಷೆ, ಸಂಸ್ಕೃತಿಯ ಬಗ್ಗೆ ಎಲ್ಲರೂ ತಿಳಿದುಕೊಂಡರೆ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ. ತೆರೆ ಮರೆಯಲ್ಲಿರುವ ಸಂಸ್ಕೃತಿ ಅನಾವರಣ ಗೊಳ್ಳಲು ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಅಕಾಡೆಮಿಗಳು ಮತ್ತು ಸಮಾಜದ ಮುಖಂಡರು ಈ ಬಗ್ಗೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಅರೆಭಾಷೆ ಜನಾಂಗದವರ ಕಾರ್ಯಕ್ರಮ ಇತರರಿಗೆ ಮಾದರಿ ಆಗುವಂತಿರಬೇಕು. ನಾವು ಮಾಡುವ ಉತ್ತಮ ಕೆಲಸಗಳನ್ನು ನಮ್ಮ ಸಮಾಜಕ್ಕೆ ಮಾತ್ರ ಸೀಮಿತಗೊಳಿಸಬಾರದು. ಅದರ ಪ್ರಯೋಜನ ಇತರರಿಗೂ ದೊರೆಯು ವಂತಾಗಬೇಕು ಎಂದು ಹೇಳಿದರು.

ಕೊಡಗು ಗೌಡ ಸಮಾಜದ ಬಹಳಷ್ಟು ಪದ್ಧತಿಗಳು ಮರೆತೇ ಹೋಗಿವೆ. ಅವುಗಳನ್ನು ನೆನಪಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ವಿವಿಧತೆಯಲ್ಲಿ ಏಕತೆಗೆ ಹೆಸರು ಪಡೆದಿರುವ ಈ ದೇಶದಲ್ಲಿ ಎಷ್ಟೋ ಸಂಸ್ಕೃತಿ ಮತ್ತು ಭಾಷೆಗಳು ಇನ್ನೂ ತೆರೆಮರೆಯಲ್ಲೇ ಇವೆ ಎಂದು ವಿಷಾದ ವ್ಯಕ್ತಪಡಿಸಿದರು.

‘ನಾನು ಮತ್ತು ಡಿ.ವಿ.ಸದಾನಂದ ಗೌಡ ಅವರು ವಿಧಾನಸಭೆಯಲ್ಲಿ ಅರೆಭಾಷೆ ಮಾತನಾಡುತ್ತಿದ್ದೆವು. ನೀವಿಬ್ಬರು ಸೇರಿಕೊಂಡು ನಮಗೆ ಅರ್ಥ ವಾಗದ ಭಾಷೆಯಲ್ಲಿ ದೂಷಿಸಬೇಡಿ ಎಂದು ಇತರರು ತಮಾಷೆಯಿಂದ ಹೇಳುತ್ತಿದ್ದರು’ ಎಂದು ಬೋಪಯ್ಯ ಸ್ಮರಿಸಿದರು.

ಒಂದು ಸಮಾಜ ಶಿಕ್ಷಣದಲ್ಲಿ ಮುಂದುವರಿದರೆ ಎಲ್ಲರೂ ಗುರುತಿ ಸುವರು. ಆದ್ದರಿಂದ ಕೊಡಗು ಗೌಡ ಸಮಾಜದ ಎಲ್ಲರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಆಸಕ್ತಿ ವಹಿಸಬೇಕು ಎಂದರು.

ಆಧುನಿಕತೆಯ ಈ ಹೊತ್ತಿನಲ್ಲಿ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಕೊಳ್ಳುವುದು ಅಗತ್ಯ. ಅರೆಭಾಷಿಕ ಗೌಡ ಸಮಾಜದ ಮೂಲ ಸಂಸ್ಕೃತಿಯನ್ನು ಬೆಳೆಸುವ ಮತ್ತು ಪ್ರೋತ್ಸಾಹಿಸುವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ ಎಂದು ಗೌಡ ಸಮಾಜದ ಒಕ್ಕೂಟಗಳ ಅಧ್ಯಕ್ಷ ಸೂರ್ತಲೆ ಸೋಮಣ್ಣ ಹೇಳಿದರು.

ಸಮಾಗಮದಲ್ಲಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ‘ಅರೆಭಾಷಿಕರ ಹುಟ್ಟು ಮತ್ತು ಆಚರಣೆ’ ಕುರಿತು ಬಾರಿಯಂಡ ಜೋಯಪ್ಪ ವಿಷಯ ಮಂಡಿಸಿದರು. ಪ್ರೌಢಾವಸ್ಥೆ, ಮದುವೆ ಆಚರಣೆ ಕುರಿತು ಡಾ.ಕೋರನ ಸರಸ್ವತಿ ಪ್ರಕಾಶ್‌, ಸಾವು ಮತ್ತು ವಿಧಿ ವಿಧಾನಗಳ ಆಚರಣೆ ಬಗ್ಗೆ ಪಟ್ಟಡ ಶಿವಕುಮಾರ್‌ ಮತ್ತು ಹಬ್ಬಗಳ ಬಗ್ಗೆ ಡಾ.ಚೆರಿಯಮನೆ ರಾಮಚಂದ್ರ ಮಾತನಾಡಿದರು. ಸಂಜೆ ಅರೆಭಾಷೆ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್‌ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಗೌಡ ಸಮಾಜ ಮೈಸೂರು ವಿಭಾಗದ ಅಧ್ಯಕ್ಷ ಚೆಟ್ಟಿಮಾಡ ಜನಾರ್ದನ್, ಕೊಡಗು ಗೌಡ ಸಮಾಜ ಮಡಿಕೇರಿ ವಿಭಾಗದ ಅಧ್ಯಕ್ಷ ಪೇರಿಯನ ಜಯಾನಂದ, ಉಮರಬ್ಬ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT