ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಶಾಲೆಗಳ ರಾಷ್ಟ್ರೀಕರಣಕ್ಕೆ ಸಲಹೆ

ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಕನ್ನಡ ಜ್ಯೋತಿ’ ಕಾರ್ಯಕ್ರಮ
Last Updated 25 ಜುಲೈ 2017, 10:03 IST
ಅಕ್ಷರ ಗಾತ್ರ

ವಿಜಯಪುರ: ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ದೇಶದ ಎಲ್ಲ ಶಾಲೆಗಳ ರಾಷ್ಟ್ರೀಕರಣ ಮಾಡಬೇಕು ಎಂದು ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕನ್ನಡ ಆಂಜಿನಪ್ಪ ಒತ್ತಾಯಿಸಿದರು.

ಇಲ್ಲಿನ ಕೋಲಾರ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ‘ಕನ್ನಡ ಜ್ಯೋತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ದಟ್ಟವಾದ ಭಾಷಾ ಪ್ರೇಮ ಮೂಡಿಸಬೇಕು. ಜತೆಗೆ ಅಂಗನವಾಡಿಯಿಂದಲೇ ಕನ್ನಡ ಭಾಷೆ ಕಲಿಸಬೇಕು ಎಂದರು.

ಸಮಸ್ಯೆಯಿಂದ ಹೊರ ಬಂದು ಜೀವನ ಸಾಗಿಸುವ ಶಕ್ತಿಯನ್ನು ಕನ್ನಡದ ಕವಿಗಳು ರಚಿಸಿದ  ಕವನಗಳು ಕಟ್ಟಿಕೊಡುತ್ತವೆ.  ಬಡತನದ ಸಿಟ್ಟಿನ ಬೆಂಕಿಯ ಜ್ವಾಲೆಯನ್ನೇ ಕನ್ನಡ ನಾಡು- ನುಡಿಯನ್ನು ಬೆಳಗಿಸುವ ಜ್ಯೋತಿ ಯನ್ನಾಗಿ ಬೆಳಗಿಸಿದ ಕೀರ್ತಿ ದ.ರಾ. ಬೇಂದ್ರೆ ಅವರಿಗೆ ಸಲ್ಲುತ್ತದೆ ಎಂದರು.

ಬಡತನ, ನಿರುದ್ಯೋಗ, ಪ್ರೇಮ ಪ್ರತಿಬಿಂಬಿಸುವ ಮೂಲಕ ಕಾವ್ಯಗಳಲ್ಲಿ ಸಾಮಾನ್ಯ ಜನರಿಗೆ ತಿಳಿವಳಿಕೆ ಮೂಡಿಸುವ ಕ್ರಾಂತಿ ಹುಟ್ಟುಹಾಕಬೇಕು ಎಂದರು.

ಪುರಸಭಾ ಕಂದಾಯ ಅಧಿಕಾರಿ ಜಯಕಿರಣ್ ಮಾತನಾಡಿ,  ಕನ್ನಡ ಜನಪದ ಸಾಹಿತ್ಯಕ್ಕೆ ಪ್ರಾಚೀನ ಇತಿಹಾಸವಿದೆ. ಕನ್ನಡ ಸಾಹಿತ್ಯದ ಜತೆ ಜತೆಯಲ್ಲಿ ಜನಪದ ಸಾಹಿತ್ಯ ಬೆಳೆಯಬೇಕು ಎಂದರು.

ವಿದ್ಯಾರ್ಥಿಗಳು ಉತ್ತಮ ಗ್ರಂಥಗಳನ್ನು ಬಿಡುವಿನ ವೇಳೆಯಲ್ಲಿ ಓದಬೇಕು. ಕನ್ನಡ ಭಾಷೆಯ ಹಿರಿಮೆ ಹೆಚ್ಚಿಸಿದ ನಾಡಿನ ಸಾಹಿತಿಗಳು, ಕವಿಗಳು, ದಾಸರು, ಶರಣರು, ಸಂತರ ಬಗ್ಗೆ ಅಧ್ಯಯನ ಮಾಡಬೇಕು ಎಂದರು.

ಶಿಕ್ಷಕ ಶಿವಾಜಿರಾವ್, ಪುರಸಭಾ ಆರೋಗ್ಯಾಧಿಕಾರಿ ಉದಯ್ ಶಂಕರ್, ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೋಕೋಕೋಲಾ ಮಂಜುನಾಥ್, ಮುಖ್ಯಶಿಕ್ಷಕಿ ಜಕೀರಾಬಿ, ಕನ್ನಡ ಶಿಕ್ಷಕಿ ಗಿರಿಜಾ, ಶಂಷಿಯಾ ಬೇಗಂ, ಅಜ್ಮದ್, ಬಾಬಾಜಾನ್, ಆಸ್ಮಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಜಹೀರ್ ಪಾಷ, ಶೇಖ್ ಸನಾಉಲ್ಲಾ, ಇದ್ದರು.

ಕನ್ನಡದಲ್ಲೇ ಸಹಿ ಹಾಕಿ, ಮಾತಾಡಿ
ಎ.ಮಂಜುನಾಥ್ ಮಾತನಾಡಿ, ಕನ್ನಡ ಭಾಷೆಯನ್ನು ವ್ಯಕ್ತಿ ನೆಲೆಯಲ್ಲಿ ಬಳಸಿ ಶ್ರೀಮಂತಗೊಳಿಸುವ ನೈತಿಕ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದರು.

ದೇಶ, ವಿದೇಶಗಳಲ್ಲಿ ಕನ್ನಡದ ಬೆಳವಣಿಗೆಗೆ ಪೂರಕ ವಾತಾವರಣ ಇದೆ. ಅದನ್ನು ಸ್ವೀಕರಿಸುವ ಮನೋಭಾವ ಕನ್ನಡಿಗರಲ್ಲಿರಬೇಕು. ಕನ್ನಡದಲ್ಲೇ ಸಹಿ ಹಾಕಿ, ವ್ಯಾಕರಣಬದ್ಧವಾಗಿ ಮಾತನಾಡಬೇಕು ಎಂದರು.

*
ಇವತ್ತು ಅನೇಕ ಮಕ್ಕಳಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಇದೇ ಸ್ಥಿತಿ ಮುಂದುವರಿದರೆ 50 ವರ್ಷಗಳಲ್ಲಿ ಕನ್ನಡ ಭಾಷೆ ನಾಶವಾಗಲಿದೆ
–ಕನ್ನಡ ಆಂಜಿನಪ್ಪ, ಕರ್ನಾಟಕ  ಕನ್ನಡ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT