ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಶಾಲಾ ಪಠ್ಯದಲ್ಲಿ ಬದಲಾಗಿದೆ 'ಭಾರತದ ಇತಿಹಾಸ'

Last Updated 25 ಜುಲೈ 2017, 16:13 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಆಡಳಿತರೂಢ ರಾಜ್ಯಗಳಲ್ಲಿನ ಶಾಲಾ ಪಠ್ಯ ಪುಸ್ತಕಗಳಲ್ಲಿ  ಭಾರತದ ಇತಿಹಾಸವನ್ನೇ ತಿರುಚಲಾಗುತ್ತಿದೆ ಎಂಬ ಆಪಾದನೆ ಕೇಳಿ ಬಂದಿರುವ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಭಾರತದಲ್ಲಿದ್ದ ಮೊಘಲ್ ರಾಜರನ್ನು ಕೊಲೆಪಾತಕಿಯರು ಎಂದು ಬಿಂಬಿಸಿ ಹಿಂದೂ ಅರಸರು ಮಾತ್ರ ಯುದ್ಧ ಗೆದ್ದಿದ್ದರು ಎಂದು ಭಾರತದ ಚರಿತ್ರೆಯಲ್ಲಿ ಮಾರ್ಪಾಡು ಮಾಡಲಾಗುತ್ತಿದೆ. ಇನ್ನು ಕೆಲವು ಪಠ್ಯ ಪುಸ್ತಕಗಳಲ್ಲಿ ರಾಷ್ಟ್ರ ನಾಯಕರ ಹೆಸರನ್ನೇ ಮರೆಮಾಚಲಾಗಿದೆ ಎಂದು ಪತ್ರಿಕಾ ವರದಿಯಲ್ಲಿ ಹೇಳಲಾಗಿದೆ.

ಮಹಾರಾಣಾ Vs ಅಕ್ಬರ್
ಜೂನ್ 18,1576ರಲ್ಲಿ ಚಕ್ರವರ್ತಿ ಅಕ್ಬರ್ ನೇತೃತ್ವದ ಮೊಘಲರ ಸೇನೆ ಮೇವಾರ್ ರಾಜ ಮಹಾರಾಣಾ ಪ್ರತಾಪ್ ಅವರನ್ನು ಯುದ್ಧದಲ್ಲಿ ಪರಾಭವಗೊಳಿಸಿತ್ತು. ಈ ಯುದ್ಧವು ಹಲ್ದಿಘಾಟಿ ಯುದ್ಧವೆಂದು ಕರೆಯಲ್ಪಡುತ್ತದೆ. ಇಲ್ಲಿನ ಇತಿಹಾಸದ ಸಾಕ್ಷ್ಯಗಳ ಪ್ರಕಾರ ಮಹಾರಾಣಾ ಪ್ರತಾಪ್ ಯುದ್ಧಭೂಮಿಯಿಂದ ಪಲಾಯನಗೈದಿದ್ದರು. ಆನಂತರ ಅವರು ಕೆಲವು ವರ್ಷಗಳ ಕಾಲ ಮೊಘಲರ ವಿರುದ್ಧ ಪ್ರತಾಪ್ ಗೆರಿಲ್ಲಾ ಯುದ್ದ ನಡೆಸಿದರು.
ಆದರೆ ರಾಜಸ್ಥಾನ ವಿಶ್ವವಿದ್ಯಾನಿಲಯದ ಹೊಸ ಪಠ್ಯ ಪುಸ್ತಕದಲ್ಲಿ 450 ವರ್ಷಗಳ ಹಿಂದೆ ಮಹಾರಾಣಾ ಪ್ರತಾಪ್ ಅವರು ಅಕ್ಬರ್ ಚಕ್ರವರ್ತಿಯನ್ನು ಯುದ್ಧದಲ್ಲಿ ಪರಾಭವಗೊಳಿಸಿದರು ಎಂದು ಬರೆಯಲಾಗಿದೆ. ಈ ಹಿಂದೆ ರಾಜಸ್ಥಾನದಲ್ಲಿರುವ ಬಿಜೆಪಿ ಸರ್ಕಾರ 9 ಮತ್ತು 10ನೇ ತರಗತಿಯ ಪಠ್ಯಪುಸ್ತಕದಲ್ಲಿಯೂ ಭಾರತದ ಇತಿಹಾಸವನ್ನು ತಿರುಚಿತ್ತು.

ಗಾಂಧಿ, ನೆಹರು ಹೆಸರು ಕಾಣೆ
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಮತ್ತು  ಜವಾಹರ್ ಲಾಲ್ ನೆಹರೂ ಅವರ ಪಾತ್ರ ಎಷ್ಟಿತ್ತು ಎಂಬುದಕ್ಕೆ ಪುರಾವೆಗಳೂ ಇವೆ. 1947ರಲ್ಲಿ ದೇಶ ಸ್ವತಂತ್ರಗೊಂಡಾಗ ಜವಾಹರ್ ಲಾಲ್ ನೆಹರು ಅವರು ಪ್ರಧಾನಿಯಾದರು.
ಆದರೆ  ರಾಜಸ್ಥಾನದ 8ನೇ ತರಗತಿಯ ಪಠ್ಯಪುಸ್ತಕದಲ್ಲಿ ದೇಶದ ಮೊದಲ ಪ್ರಧಾನಿಯ ಹೆಸರೇ ಇಲ್ಲ! ಅಷ್ಟೇ  ಅಲ್ಲ ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ್ದಾರೆ ಎಂಬ ಮಾಹಿತಿಯೇ ಇಲ್ಲ. 10 ಮತ್ತು 12ನೇ ತರಗತಿಯ ಹೊಸ ಪಠ್ಯ ಪುಸ್ತಕದಲ್ಲಿ ಮಹಾತ್ಮ ಗಾಂಧಿಯ ಹೆಸರು ಇದ್ದರೂ ನೆಹರೂ ಹೆಸರು ಪ್ರಸ್ತಾಪವೇ ಆಗಿಲ್ಲ. ಇದರ ಬದಲು ಆರ್‍ಎಸ್‍ಎಸ್ ಸಿದ್ದಾಂತವಾಗಿ ವೀರ್ ಸಾವರ್ಕರ್ ಬಗ್ಗೆ ಸುದೀರ್ಘವಾದ ಮಾಹಿತಿ ಇದೆ. ಇಲ್ಲಿ ಸಾವರ್ಕರ್ ಅವರನ್ನು ಮಹಾನ್ ದೇಶಪ್ರೇಮಿ ಎಂದು ಬಿಂಬಿಸಲಾಗಿದೆ .11ನೇ ತರಗತಿಯ ರಾಜ ಶಾಸ್ತ್ರ ಪಠ್ಯ ಪುಸ್ತಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬ್ರಿಟಿಷರ 'ಸಾಕು ಮಗು' ಎಂದು ಉಲ್ಲೇಖಿಸಲಾಗಿದೆ.

ನೀತಿ ಪಠ್ಯದಲ್ಲಿ ಕೇಸರೀಕರಣ
ನೀತಿ ಪಠ್ಯಪುಸ್ತಕದ ಮೂಲಕ ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಲಾಗುತ್ತದೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ಹರಿಯಾಣದಲ್ಲಿ ದೀನಾನಾಥ್ ಭಾತ್ರಾ ಅವರು ರಚಿಸಿದ ನೀತಿ ಪಠ್ಯವಿದೆ. ಈ ದೀನಾನಾಥ್ ಭಾತ್ರಾ ಬೇರೆ ಯಾರೂ ಅಲ್ಲ ಆರ್‍ಎಸ್‍ಎಸ್ ಬೆಂಬಲಿತ ಶಿಕ್ಷಾ ಬಚಾವೊ ಆಂದೋಲನದ ವಿವಾದಿತ ಸಂಚಾಲಕ!

ಏಳನೇ ತರಗತಿಯಿಂದ 12ನೇ ತರಗತಿಯವರೆಗಿನ ಪಠ್ಯ ಪುಸ್ತಕದ ಆರಂಭವಾಗುವುದೇ ಸರಸ್ವತಿ ವಂದನೆಯಿಂದ. ಸರಸ್ವತಿ ವಂದನೆಯ ಮಂತ್ರಗಳನ್ನು ಪಠಿಸುವುದರಿಂದ ಜ್ಞಾನ ಮತ್ತು ತಿಳುವಳಿಕೆ ವರ್ಧಿಸುತ್ತದೆ ಎಂದು ಪಠ್ಯಪುಸ್ತಕದಲ್ಲಿ ಹೇಳಲಾಗಿದೆ. ಭಾತ್ರಾ ಅವರ ಪ್ರಕಾರ, ಮಕ್ಕಳಲ್ಲಿ ಭಾರತೀಯ ಮೌಲ್ಯ ಮತ್ತು ದೇಶೀಯತೆ ತುಂಬಲು ಈ ಪುಸ್ತಕ ಸಹಕಾರಿಯಾಗಿದೆ. ಆದಾಗ್ಯೂ, ಹಿಂದೂಗಳಲ್ಲದ ವಿದ್ಯಾರ್ಥಿಗಳಲ್ಲಿ ಸರಸ್ವತಿ ವಂದನೆ ಪಠಿಸುವಂತೆ ಹೇಳುವುದು ಸರಿಯಲ್ಲ ಎಂದು ವಿಮರ್ಶಕರ ವಾದ. ಗುಜರಾತಿನಲ್ಲಿ ಭಾತ್ರಾ ಅವರು ರಚಿಸಿದ ಪಠ್ಯ ಪುಸ್ತಕವನ್ನೇ ಕಡ್ಡಾಯ ಮಾಡಲಾಗಿದೆ.

ಮುಸ್ಲಿಮರು, ಕ್ರೈಸ್ತರು 'ವಿದೇಶಿಯರು'
1995ರಲ್ಲಿ ಗುಜರಾತಿನಲ್ಲಿ ಕೇಶೂಭಾಯಿ ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ, 9ನೇ ತರಗತಿಯ ಸಾಮಾಜಿಕ ಅಧ್ಯಯನ ಪಠ್ಯ ಪುಸ್ತಕದಲ್ಲಿ ಮುಸ್ಲಿಂ, ಕ್ರೈಸ್ತ ಮತ್ತು ಪಾರ್ಸಿಗಳನ್ನು ವಿದೇಶಿಯರು ಎಂದು ಉಲ್ಲೇಖಿಸಲಾಗಿತ್ತು,  ಗುಜರಾತ್ ರಾಜ್ಯ ಮಂಡಳಿಯ  ಈ ಪಠ್ಯ ಪುಸ್ತಕಗಳಲ್ಲಿ, ಹೆಚ್ಚಿನ ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದು ಮುಸ್ಲಿಂ, ಕ್ರೈಸ್ತ, ಸಿಖ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗಿದೆ. 10ನೇ ತರಗತಿಯ ಸಾಮಾಜಿಕ ಅಧ್ಯಯನ ಪಠ್ಯದಲ್ಲಿ ಹಿಟ್ಲರ್‍‍ನ್ನು ಹೀರೋ ಎಂದು ಬಿಂಬಿಸಲಾಗಿತ್ತು. ಇದು ವಿವಾದಕ್ಕೀಡಾದ ನಂತರ ಹಿಟ್ಲರ್ ಪಠ್ಯ ವಿಷಯವನ್ನು ಬದಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT