ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟ್ಟಾಗಿ ಹೋರಾಡಿದರೆ ಸ್ವತಂತ್ರ ಧರ್ಮ...

ಅಕ್ಷರ ಗಾತ್ರ

ಹನ್ನೆರಡನೇ ಶತಮಾನದ ಶರಣರಾದ ಹರಳಯ್ಯ ಮತ್ತು ಮಧುವಯ್ಯ ಮಹಾಸ್ಮರಣ ದಿನವನ್ನು ಆರೇಳು ವರ್ಷಗಳ ಹಿಂದೆ  ಒಂದು ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಆಶ್ರಯದಲ್ಲಿ ಆಚರಿಸಲಾಯಿತು. ಕೇಂದ್ರ ಸಚಿವರಾಗಿದ್ದ ಸುಶೀಲ್‌ಕುಮಾರ್ ಶಿಂಧೆ ಹಾಗೂ ಎಂ.ವೀರಪ್ಪ ಮೊಯಿಲಿ ಅವರನ್ನು ಈ ಸಮಾರಂಭಕ್ಕೆ ಆಮಂತ್ರಿಸಲಾಗಿತ್ತು. ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರೂ ಇದ್ದರು.

ಆ ಸಭೆಯಲ್ಲಿ ಮಾತನಾಡುತ್ತ- ‘ಬಸವಾದಿ ಶರಣರು ಅಂದು ಅಲಕ್ಷಿತ ಸಮುದಾಯಗಳನ್ನೆಲ್ಲ ಒಟ್ಟುಗೂಡಿಸಿ, ಅವರ ನೇತೃತ್ವದಲ್ಲಿ ಕ್ರಾಂತಿ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಈ ಸಮುದಾಯಗಳಿಗೆ ಸ್ವತಂತ್ರಧರ್ಮದ ಅಸ್ತಿತ್ವ ಪಡೆಯಲಾಗಿರುವುದಿಲ್ಲ. ನೀವು ಕೇಂದ್ರ ಸರ್ಕಾರದಲ್ಲಿ ಇರುವುದರಿಂದ ನಮಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು’ ಎಂದು ಒತ್ತಾಯಿಸಿದೆ.

ನಂತರ ಅತಿಥಿಗಣ್ಯರೊಟ್ಟಿಗೆ ಕುಳಿತಾಗ, ಖಾಸಗಿಯಾಗಿ ಕಾನೂನು ಸಚಿವ ಮೊಯಿಲಿ ಅವರೊಟ್ಟಿಗೆ ಆ ವಿಚಾರ ಮತ್ತೆ ಪ್ರಸ್ತಾಪಿಸಿದೆ. ಆಗ ಅವರು, ‘ನೀವು ದೆಹಲಿಗೆ ನಿಯೋಗ ತೆಗೆದುಕೊಂಡು ಬಂದರೆ, ಅನುಕೂಲ ಆಗುತ್ತದೆ’ ಎಂದರು. ನಾನು ಇದನ್ನು ಮಹಾಸಭೆಯ ಪದಾಧಿಕಾರಿಗಳೊಟ್ಟಿಗೆ ಚರ್ಚಿಸಿದೆ. ಕೆಲವೇ ದಿನಗಳಲ್ಲಿ ಸರ್ಕಾರ ಬದಲಾವಣೆ ಆಯಿತು. ಆ ಕೆಲಸ ಹಾಗೇ ಉಳಿಯಿತು. ಈಗ ಮಹಾಸಭೆ ಮತ್ತೆ ಆ ಯೋಜನೆ ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ.

ಹಲವಾರು ಧರ್ಮಗಳ ಉಗಮವಾದ ಮಾನವ ಜನಾಂಗದಲ್ಲಿ ಎಲ್ಲವೂ ಸರಿಯಿಲ್ಲ; ಸರ್ವವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಇದನ್ನು ಎತ್ತಿ ತೋರಿಸುವಂತೆ ಆಗಾಗ ಜನಾಂಗೀಯ ಕಲಹಗಳು ನಡೆಯುತ್ತಿವೆ. ಧರ್ಮಾಧಾರಿತ ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆ ಪ್ರಾಬಲ್ಯ ಪಡೆಯುತ್ತ ಬಂದಿದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಜಾತಿಗಳ ಹೆಸರಲ್ಲಿ ವಿಭಜನೆಗೊಂಡ ಸಮಾಜವು ವರ್ಣಾಶ್ರಮ ಸಮಾಜ ಎನಿಸಿಕೊಂಡಿತು. ವರ್ಣಾಶ್ರಮ ವ್ಯವಸ್ಥೆಯಲ್ಲಿ ಬ್ರಾಹ್ಮಣನು ಬ್ರಹ್ಮನ ತಲೆಯಿಂದ, ಕ್ಷತ್ರಿಯ ಆತನ ಬಾಹುಗಳಿಂದ, ವೈಶ್ಯ ಉದರದಿಂದ ಮತ್ತು ಶೂದ್ರರು ಬ್ರಹ್ಮನ ಪಾದಗಳಿಂದ ಜನಿಸಿದರೆಂಬ ನಂಬಿಕೆ ಇದೆ. ಈ ಕಲ್ಪನೆಯ ಹೊರತಾಗಿ ಮಾನವನ ಉಗಮವು ನಿಸರ್ಗದ ಕೊಡುಗೆ ಎಂದು ಭಾವಿಸಿದ್ದಿದ್ದರೆ ಭೇದಭಾವಗಳಿಗೆ ಅವಕಾಶ ಆಗುತ್ತಿರಲಿಲ್ಲವೇನೋ!

ಜಾತಿ ಪ್ರಧಾನ ವ್ಯವಸ್ಥೆಯಲ್ಲಿ ಉಚ್ಚ-ನೀಚ, ಮೇಲು-ಕೀಳು, ದಲಿತ-ಬಲಿತ, ಮುಂದುವರೆದ-ಹಿಂದುಳಿದ, ಬಡವ-ಬಲ್ಲಿದ ಎಂಬ ವ್ಯತ್ಯಾಸಗಳು ಹಾಗೇ ಮುಂದುವರೆಯುತ್ತ ಬಂದಿವೆ. ಜಾತಿಭೇದ ಮತ್ತು ಲಿಂಗಭೇದವನ್ನು ವಿರೋಧಿಸಿ ಸಾಮಾಜಿಕ ಕ್ರಾಂತಿಗಳು ನಡೆದಿವೆ. ಸಮಾಜ ಸುಧಾರಣೆಯ ಪರವಾಗಿ ನಡೆದ ಕ್ರಾಂತಿಗಳು ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯನ್ನು ನಿವಾರಿಸಲು ಯತ್ನಿಸಿವೆ.

12ನೆಯ ಶತಮಾನದಲ್ಲಿ ಇವುಗಳ ವಿರುದ್ಧ ಬಸವಣ್ಣನವರು ಬಂಡೇಳುತ್ತಾರೆ. ಮಹಿಳಾ ಹಕ್ಕು ಮತ್ತು ಮಾನವ ಹಕ್ಕುಗಳನ್ನು ಕೇಳಿದಾಗ ಅಂದಿನ ಶ್ರೇಣೀಕೃತ ಸಮಾಜವು ಅವರನ್ನು ಜಾತಿ ಮತ್ತು ಮತದಿಂದಲೂ ಬಹಿಷ್ಕರಿಸುತ್ತದೆ. ಹಾಗೆಯೇ ಶಿವೋಪಾಸಕರು ವೈದಿಕ ಪರಂಪರೆಯಿಂದ ಹೊರಬಂದರು; ಅಥವಾ ಆ ಪರಂಪರೆಯೇ ಅವರನ್ನು ಹೊರಹಾಕಿತು. ಮುಂದೇನು ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಅವರ ಪೂರ್ವಾಶ್ರಮದವರು ಶೈವಬ್ರಾಹ್ಮಣರಾಗಿದ್ದರು. ಮಾದರಸ ಮತ್ತು ಮಾದಲಾಂಬಿಕೆಯು ನಂದಿಯ ಆರಾಧಕರಾಗಿದ್ದರು. ಪುತ್ರ ಸಂತಾನಕ್ಕಾಗಿ ಹರಕೆ ಹೊತ್ತಿದ್ದರು. ಮುಂದೆ ಬಸವಣ್ಣನ ಜನನ ಆಗುತ್ತದೆಂದು ಸಂಬಂಧಿಸಿದ ಪುರಾಣಗಳು, ಆಧಾರಗಳು ಹೇಳುತ್ತವೆ.

ಮನೆಬಿಟ್ಟ ಬಸವಣ್ಣನಿಗೆ ಅಂದು ವೃಷಭ ಅಥವಾ ನಂದಿ ಎಂದು ನಾಮಕರಣ ಮಾಡಲಾಗಿತ್ತು. ನಂತರ ಬಸವಣ್ಣನೆಂದು ಬದಲಾಯಿಸಿಕೊಂಡಿದ್ದಿರಬಹುದು. ಈ ಕಾರಣಕ್ಕಾಗಿ ಬಸವಣ್ಣನವರನ್ನು ನಂದಿ ಅವತಾರವೆಂದು, ಶಿವನ ವಾಹನವೆಂದು ಬಣ್ಣಿಸಲಾಗಿದೆ. ಶೈವೋಪಾಸಕರಿಗೆಲ್ಲ ‘ಶಿವ’ ಸರ್ವೋತ್ತಮ. ಬಸವಪೂರ್ವದಲ್ಲಿ ಶೈವಧರ್ಮ ಇತ್ತು; ಬಸವಣ್ಣನವರು ಅದಕ್ಕೆ ಸೇರಿಕೊಂಡರು ಎಂದು ಕೆಲವರು ಹೇಳುತ್ತ ಬಂದಿದ್ದಾರೆ.

ಬಸವಣ್ಣನವರು ಮೂಲತಃ ಶಿವೋಪಾಸಕರಾಗಿದ್ದು, ಶಿವನ ಸಂಕೇತವಾದ ಇಷ್ಟಲಿಂಗವನ್ನು ಪರಿಚಯಿಸಿದರು. ಕಾರಣವೇನೆಂದರೆ, ಶಿವ ಮಂದಿರಗಳಲ್ಲಿ ಶೋಷಿತರಿಗೆ ಪ್ರವೇಶ ಇರಲಿಲ್ಲ. ಶಿವನ ಸಂಕೇತವಾದ ಇಷ್ಟಲಿಂಗವನ್ನು ಕೊರಳಲ್ಲಿ ಧರಿಸುವುದರಿಂದ ಶಿವಭಕ್ತ ಎನಿಸಿಕೊಳ್ಳುತ್ತಾನೆ. ತನ್ಮೂಲಕ ಲಿಂಗಭಕ್ತನು ಆಗುತ್ತಾನೆಂಬ ಉದ್ದೇಶದಿಂದ ಇಷ್ಟಲಿಂಗವನ್ನು ಕಟ್ಟಿಕೊಳ್ಳುವ ಪರಂಪರೆಯು ಪ್ರಚಲಿತ ಆಯಿತು. ಲಿಂಗವನ್ನು ಕಟ್ಟುವವರ ಪರಂಪರೆಯು ಮುಂದೆ ‘ಲಿಂಗಾಯತ’ ಎನಿಸಿಕೊಂಡಿತು. ವೇದಾಗಮಗಳನ್ನು ಅನುಸರಿಸುವವರು ವೀರಶೈವ ಎನಿಸಿಕೊಂಡರು. ವಚನಗಳನ್ನು ಬಸವಾದಿ ಶರಣರ ವಿಚಾರ ಪಾಲಿಸುವವರು ಲಿಂಗಾಯತರು ಎಂದು ಗುರುತಿಸಿಕೊಂಡರು. ಇಬ್ಬರಿಗೂ ಇಷ್ಟಲಿಂಗವೇ ನಿಜದೈವ.

ಶ್ರೀಮಠದ ವತಿಯಿಂದ 2000ನೇ ಇಸವಿಯಲ್ಲಿ ಕೂಡಲಸಂಗಮದಲ್ಲಿ ‘ಬಸವತತ್ವ ಸಮಾವೇಶ’ ನಡೆಯಿತು. ಬಸವ ಕೇಂದ್ರಗಳ ಮುಖಾಂತರ ಇದನ್ನು ಸಂಘಟಿಸಲಾಗಿತ್ತು. ನಂತರ ಚಿತ್ರದುರ್ಗ ಬೃಹನ್ಮಠದಲ್ಲಿ ಸಮಾನ ವಿಚಾರಧಾರೆಯವರು ಕೂಡಿಕೊಂಡು ಸುದೀರ್ಘವಾಗಿ ಚರ್ಚಿಸಲಾಯಿತು. ನಾವುಗಳು ಅನುಸರಿಸುವ ತತ್ವ, ಸಿದ್ಧಾಂತಕ್ಕೆ ಶರಣಧರ್ಮ ಅಥವಾ ಬಸವಧರ್ಮ ಎಂದು ಗುರುತಿಸಿಕೊಳ್ಳಬೇಕೆಂಬ ಒತ್ತಾಸೆ. ಸೇರಿದ್ದ ಶರಣರು ‘ಬಸವಧರ್ಮ’ ಇರಲಿ ಎಂದು ಸಮ್ಮತಿಸಿದರು. ಈ ನಿರ್ಣಯ ತೆಗೆದುಕೊಂಡಾಗ ಕೆಲವರನ್ನುಳಿದು, ಉಳಿದವರೆಲ್ಲ ಬೆಂಬಲಿಸಲು ಮುಂದೆ ಬರಲಿಲ್ಲ; ಮೌನಕ್ಕೆ ಶರಣರಾದರು.

ಹೆಚ್ಚಿನ ಬೆಂಬಲ ದೊರೆತಿದ್ದರೆ ಬಸವಧರ್ಮವೇ ಅಸ್ತಿತ್ವ ಪಡೆದುಕೊಳ್ಳುತ್ತಿತ್ತು. ಶರಣ ಅಥವಾ ಬಸವ ಶಬ್ದಗಳು ವಿಶಾಲಾರ್ಥ ಪಡೆದಿದ್ದು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಸೇರ್ಪಡೆಗೊಂಡ ಎಲ್ಲ ಶರಣರ ಸಮುದಾಯಗಳು ಅದರೊಂದಿಗೆ ಗುರುತಿಸಿಕೊಳ್ಳಲು ಅನುಕೂಲ ಆಗುತ್ತಿತ್ತು. ಈ ಒಂದೂವರೆ ದಶಕದಲ್ಲಿ ಮತ್ತಷ್ಟು ಜಿಜ್ಞಾಸೆ ನಡೆದು, ವೀರಶೈವದ ಜತೆ ಲಿಂಗಾಯತ ಶಬ್ದ ಬಳಸುವ ಪರಿಪಾಟ ಅಧಿಕವಾಯಿತು. ವೀರಶೈವ ಮಹಾಸಭೆ ಸಹ ವೀರಶೈವ ಲಿಂಗಾಯತ ಭವನ ಎಂದು ಹೆಸರನ್ನು ಇಟ್ಟುಕೊಂಡಿತು. ಲಿಂಗಾಯತ ಹೆಚ್ಚು ಪ್ರಚಲಿತ ಆಗುತ್ತಿರುವ ಸಂದರ್ಭದಲ್ಲಿ ವೀರಶೈವ ಶಬ್ದವನ್ನು ಬಿಡದಿರಲಿ ಎಂಬ ಕಾರಣಕ್ಕಾಗಿ ಲಿಂಗಾಯತ ವೀರಶೈವ ಎನ್ನುತ್ತಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮದಲ್ಲಿ ಲಿಂಗಾಯತರು ಮಾತ್ರ ಇರಬೇಕೆಂದು ಭಾವಿಸುವುದು ಸೂಕ್ತವಲ್ಲ. ಬಂದವರನ್ನೆಲ್ಲ ಸೇರಿಸಿಕೊಂಡು ಹೋದರೆ ಮಾತ್ರ ಅದಕ್ಕೆ ವಿಶಾಲಾರ್ಥ ಬರುತ್ತದೆ. ಇಲ್ಲದಿದ್ದರೆ ಲಿಂಗಾಯತ ಮತ ಆಗುವುದರಲ್ಲಿ ಸಂದೇಹ ಇಲ್ಲ. ಮತಗಳು ಪಥಗಳಾಗಬೇಕು. ಲಿಂಗಾಯತ ಒಂದು ಪಥ. ಬಸವಪಥ ಜೀವನಪಥ. ಲಿಂಗಾಯತದೊಂದಿಗೆ ಗುರುತಿಸಿಕೊಳ್ಳುವವರ ಸಂಖ್ಯೆಯು ಅಧಿಕವಾಗಿದ್ದು, ಅವರಿಗೆಲ್ಲ ಬಸವಾದಿ ಶರಣರು ಪ್ರತಿಪಾದಿಸಿದ ತತ್ವಗಳು ಮುಖ್ಯ ಆಗುತ್ತವೆ.

ಬಸವಣ್ಣ ಮತ್ತಿತರ ಶರಣರು ಪ್ರತಿಪಾದಿಸಿದ ತತ್ವ- ಸಿದ್ಧಾಂತಗಳನ್ನು ಇಡೀ ಜಗತ್ತೇ ಒಪ್ಪುವಂತೆ ಇವೆ. ಯಾರ್‍ಯಾರು ಈ ತತ್ವವನ್ನು ಒಪ್ಪಿಕೊಳ್ಳುತ್ತಾರೋ, ಅವರೆಲ್ಲ ಸೇರಲು ಅವಕಾಶ ಇರಲಿ. ಆಗ ಅದು ವಿಶ್ವಧರ್ಮ ಅನಿಸಿಕೊಳ್ಳುತ್ತದೆ. ಆಸಕ್ತ ಎಲ್ಲ ಜನರನ್ನು ಒಳಗೊಳ್ಳುವ ಆಶಯವೇ ಲಿಂಗಾಯತ ಧರ್ಮದ ವೈಶಿಷ್ಟ್ಯವಾಗಿದೆ. ಮತಭೇದಗಳನ್ನು ಬದಿಗಿಟ್ಟು, ಒಟ್ಟಾಗಿ ಹೋರಾಡಿದರೆ ಸ್ವತಂತ್ರ ಧರ್ಮ; ಕಚ್ಚಾಡಿದರೆ ಮತಧರ್ಮ.

ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಚರ್ಚೆ ಮತ್ತೆ ಆರಂಭವಾಗಿದ್ದು ಅದು ಸಾಕಾರಗೊಳ್ಳುವ ನಿಟ್ಟಿನಲ್ಲಿ ಸಂಘಟನೆಯ ಅಗತ್ಯವಿದೆ. ಎಲ್ಲ ಸಂಘಟನೆಗಳು ಮತ್ತು ಧಾರ್ಮಿಕ ನೇತಾರರನ್ನೊಳಗೊಂಡು ಸ್ವತಂತ್ರ ಧರ್ಮವನ್ನು ಅಧಿಕೃತವಾಗಿ ಘೋಷಿಸಬೇಕಾಗಿದೆ. ಇದರಲ್ಲಿ ರಾಜಕಾರಣ ಇಣುಕಬಾರದು. ಮಹಾಸಭೆಯ ಮುಖಂಡರು ಮುಂದಿಟ್ಟ ಸ್ವತಂತ್ರಧರ್ಮ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಚುನಾವಣೆ ಮುಂದಿರುವುದರಿಂದ ಈ ಪ್ರಕರಣವು ಬೇರೆಬೇರೆ ಬಣ್ಣವನ್ನು ಪಡೆದುಕೊಳ್ಳುತ್ತಿದೆ. ರಾಜಕೀಯವನ್ನು ಬೆರೆಸಲಾಗುತ್ತಿದೆ. ಒಂದು ಹೋರಾಟಕ್ಕೆ ಸರ್ವಪಕ್ಷಗಳು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗುತ್ತದೆ. ಇಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಮುಖ್ಯ ಅಲ್ಲ. ಸ್ವತಂತ್ರ ಧರ್ಮದ ಅಸ್ತಿತ್ವಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಸಿದ್ದರಾಮಯ್ಯನವರು ಅದಕ್ಕೆ ಪೂರಕವಾಗಿ ಸ್ಪಂದಿಸಿರಬಹುದು. ಇದು ರಾಜಕೀಯಗೊಳ್ಳಬಾರದು. ಆಗ ಅದು ವಿಸ್ತೃತ ಸ್ವರೂಪ ಪಡೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT