ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ: ಸ್ವಾಮೀಜಿ ಮಧ್ಯ ಪ್ರವೇಶಕ್ಕೆ ಸಚಿವರ ವಿರೋಧ

‘ಆರ್‌ಎಸ್‌ಎಸ್‌ ಕಪಿಮುಷ್ಟಿಯಲ್ಲಿ ಪೇಜಾವರ ಶ್ರೀ’
Last Updated 25 ಜುಲೈ 2017, 19:33 IST
ಅಕ್ಷರ ಗಾತ್ರ

ಬೆಂಗಳೂರು/ಧಾರವಾಡ: ‘ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ವಿಷಯದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಧ್ಯ ಪ್ರವೇಶ ಬೇಕಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ  ಹಾಗೂ  ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಪ್ರತಿಪಾದಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಂಗಳವಾರ ಪ್ರತ್ಯೇಕವಾಗಿ ಮಾತನಾಡಿದ ಇಬ್ಬರು ಸಚಿವರು, ‘ಇದು ನಮ್ಮ ಸಮುದಾಯಕ್ಕೆ ಸೇರಿದ ಸಂಗತಿ. ಈ ವಿಷಯದಲ್ಲಿ ಬೇರೆಯವರು ಗೊಂದಲ ಸೃಷ್ಟಿಸುವುದು ಬೇಡ’ ಎಂದು ಹೇಳಿದ್ದಾರೆ.

‘ಪೇಜಾವರ ಶ್ರೀಗಳು ಆರ್‌ಆರ್‌ಎಸ್‌ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ಪ್ರತ್ಯೇಕ ಧರ್ಮದ  ವಿಷಯದಲ್ಲಿ ಕೈ ಹಾಕುವ ಕೆಲಸವನ್ನು ಅವರು ಮಾಡಬಾರದು. ನಮ್ಮ ಸಮುದಾಯದವರು ಅದಕ್ಕೆ ಅವಕಾಶವನ್ನೂ ಕೊಡಬಾರದು’ ಎಂದು ಎಂ.ಬಿ. ಪಾಟೀಲ  ಒತ್ತಾಯಿಸಿದರು.

‘ವೀರಶೈವ ಮತ್ತು ಲಿಂಗಾಯತರು ಸೇರಿ  ಪ್ರತ್ಯೇಕ ಧರ್ಮ ರಚಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ನಮ್ಮ ಸಮುದಾಯದ ಸ್ವಾಮೀಜಿಗಳು, ಹಾಗೂ ಮುಖಂಡರು ನಿರ್ಧರಿಸಲಿದ್ದಾರೆ. ಲಿಂಗಾಯತ ಧರ್ಮವು ಬೌದ್ಧ, ಸಿಖ್‌ ಧರ್ಮಗಳಂತೆ ಜಾಗತಿಕ ಧರ್ಮ ಆಗಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ನಮ್ಮ ಸಮುದಾಯದ ಕೆಲವು ರಾಜಕೀಯ ಮುಖಂಡರೂ ಆರ್‌ಎಸ್‌ಎಸ್‌ ಹಿಡಿತದಲ್ಲಿದ್ದಾರೆ. ಹೀಗಾಗಿ ಸ್ವಾರ್ಥದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಅವರು ದೂರಿದರು. ‘ಯಡಿಯೂರಪ್ಪ ಅವರು ಲಿಂಗಾಯತ ಧರ್ಮಕ್ಕೆ ಬೆಂಬಲ ನೀಡಬೇಕಾಗಿತ್ತು. ಆರ್‌ಎಸ್ಎಸ್ ಹಾಗೂ ಚುನಾವಣೆ ಭಯದಿಂದ ಅವರು ವಿರೋಧ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಅವರು ತಪ್ಪು ಮಾಡುತ್ತಿದ್ದಾರೆ’ ಎಂದೂ  ಟೀಕಿಸಿದರು.

‘ಪ್ರತ್ಯೇಕ ಲಿಂಗಾಯತ  ಧರ್ಮ ಸ್ಥಾಪನೆ ಆಗಬೇಕು ಎಂಬುದು ಈಗಿನ ಬೇಡಿಕೆಯಲ್ಲ. ಈ ಹಿಂದೆಯೂ ಚರ್ಚೆಯಾಗಿತ್ತು. ಧರ್ಮ ಸ್ಥಾಪನೆ ವಿಷಯ ಈಗಾಗಲೇ ವಿಳಂಬವಾಗಿದೆ. ಸಿದ್ದಗಂಗಾ ಮಠದ ಶ್ರೀಗಳು ಇದನ್ನು ಒಪ್ಪುತ್ತಾರೆ’ ಎಂದು ಸಚಿವ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ‘ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಅವರನ್ನು ಅನಗತ್ಯವಾಗಿ ಎಳೆದು ತರಬಾರದು’ ಎಂದರು.

ಕಾನೂನು ಹೋರಾಟ: ‘ಪ್ರತ್ಯೇಕ ಧರ್ಮ ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಬೇಕು. ಅಗತ್ಯವಾದರೆ ಈ ವಿಷಯದಲ್ಲಿ ಕಾನೂನು ಹೋರಾಟ ಮಾಡಲೂ ಸಿದ್ಧ’ ಎಂದು ಪಾಟೀಲ ಸ್ಪಷ್ಟಪಡಿಸಿದರು. ಧಾರವಾಡದಲ್ಲಿ ಮಾತನಾಡಿದ ಸಚಿವ ವಿನಯ ಕುಲಕರ್ಣಿ, ‘ಲಿಂಗಾಯತ  ಸ್ವತಂತ್ರ ಧರ್ಮದ ಮಾನ್ಯತೆ ಪಡೆದರೆ ಒಳ ಪಂಗಡಗಳಲ್ಲಿನ ಸಾಕಷ್ಟು ಬಡ ಕುಟುಂಬಗಳಿಗೆ ಸವಲತ್ತು ಸಿಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT