ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರು ಪರೀಕ್ಷೆ ಮುಗಿದರೂ ಕೈ ಸೇರದ ಪಠ್ಯ!

Last Updated 26 ಜುಲೈ 2017, 6:01 IST
ಅಕ್ಷರ ಗಾತ್ರ

ವಿಜಯಪುರ: ಶೈಕ್ಷಣಿಕ ವರ್ಷದ ಮೊದಲ ಕಿರು ಪರೀಕ್ಷೆ ಕೆಲ ಶಾಲೆಗಳಲ್ಲಿ ಪೂರ್ಣಗೊಂಡರೂ, ಪ್ರಸಕ್ತ ಸಾಲಿನ ನೂತನ ಪಠ್ಯ ಪುಸ್ತಕಕ್ಕಾಗಿ ಶೇ 20ಕ್ಕಿಂತ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳು ಇನ್ನೂ ಚಾತಕ ಹಕ್ಕಿಗಳಂತೆ ಕಾದು ಕೂತಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆ, ಕಿರು ಪರೀಕ್ಷೆ ಈಗಾಗಲೇ ಕೆಲ ಶಾಲೆಗಳಲ್ಲಿ ನಡೆದಿವೆ. ಹಲ ಶಾಲೆಗಳಲ್ಲಿ ನಡೆಯುತ್ತಿವೆ. ಉಳಿದ ಶಾಲೆಗಳಲ್ಲಿ ಪೂರ್ವ ಸಿದ್ಧತೆಗಳು ನಡೆದಿವೆ.

ಒಟ್ಟಾರೇ ಮೊದಲ ಕಿರು ಪರೀಕ್ಷೆಯ ಪ್ರಕ್ರಿಯೆ ಚುರುಕುಗೊಂಡಿದ್ದರೂ, ವಿದ್ಯಾರ್ಥಿಗಳ ಕೈಗೆ ಪಠ್ಯ ಪುಸ್ತಕ ಇನ್ನೂ ದೊರಕದಿರುವುದು ಮಕ್ಕಳು–ಪಾಲಕರ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಜತೆಗೆ ವ್ಯಾಸಂಗ, ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬ ಚಿಂತೆ ಕಾಡಲಾರಂಭಿಸಿದೆ.

‘ಸಮಯಕ್ಕೆ ಸರಿಯಾಗಿ ಪಠ್ಯ ಪುಸ್ತಕ ಪೂರೈಕೆಯಾಗದಿರುವುದು, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಈಗಾಗಲೇ ವಿದ್ಯಾರ್ಥಿಗಳ ಕಡೆಯಿಂದ ಶುಲ್ಕ ಪಡೆದಿದ್ದು, ಎರಡು ತಿಂಗಳು ಗತಿಸಿದರೂ ಪಠ್ಯ ನೀಡದಿರುವುದಕ್ಕೆ ಪೋಷಕರ ವಲಯ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದೆ.

ನಾವೇನು ಪಠ್ಯ ಪುಸ್ತಕಗಳನ್ನು ಉಚಿತವಾಗಿ ಕೊಡಿ ಎಂದು ಬೇಡುತ್ತಿಲ್ಲ. ನೀವು ನಿಗದಿ ಪಡಿಸಿದ ಶುಲ್ಕವನ್ನು ಈಗಾಗಲೇ ತುಂಬಿದ್ದೇವೆ. ಮೊದಲ ಕಿರು ಪರೀಕ್ಷೆ ಮುಗಿದರೂ ಇನ್ನೂ ಪಠ್ಯ ಪುಸ್ತಕ ನೀಡದಿರುವುದು ನಮ್ಮ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ನಷ್ಟ ತುಂಬಿಕೊಡುವವರು ಯಾರು ಎಂದು ಪುಂಖಾನುಪುಂಖವಾಗಿ ಪ್ರಶ್ನಿಸುವ ಪೋಷಕರಿಗೆ ಉತ್ತರ ನೀಡದ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ಖಾಸಗಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಠ್ಯ ಪುಸ್ತಕಗಳಿಗಾಗಿ ಬಿಇಒ ಕಚೇರಿಗೆ ಅಲೆದು ಸಾಕಾಗಿದೆ. ಇನ್ನೊಂದೆರೆಡು ದಿನಗಳಲ್ಲಿ ಬರಲಿವೆ ಎಂಬ ಸಿದ್ಧ ಉತ್ತರ ಕೇಳಿ ಬೇಸತ್ತಿದ್ದೇವೆ. ಒಂದೆಡೆ ಪೋಷಕರ ಒತ್ತಡ. ಇನ್ನೊಂದೆಡೆ ಎರಡು ತಿಂಗಳು ಮುಂಗಡವಾಗಿ ಬೇಡಿಕೆ ಸಲ್ಲಿಸಿ, ದುಡ್ಡು ಕಟ್ಟಿದರೂ ಪುಸ್ತಕ ನೀಡದ ಸಾರ್ವಜನಿಕ ಶಿಕ್ಷಣ ಇಲಾಖೆ ಕತ್ತರಿಯ ನಡುವೆ ಸಿಲುಕಿದ ಅಡಕೆಯಂತಾಗಿದೆ ನಮ್ಮ ಪರಿಸ್ಥಿತಿ’ ಎಂದು ಅವರು ಅಳಲು ತೋಡಿಕೊಂಡರು.

‘ಕೆಲ ಖಾಸಗಿ ಶಾಲೆಗಳಿಗೆ ಬೇಡಿಕೆ ಸಲ್ಲಿಸಿದಷ್ಟು ಪಠ್ಯ ಪುಸ್ತಕಗಳನ್ನು ಪೂರೈಸದಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಪೋಷಕರು–ವಿದ್ಯಾರ್ಥಿ ಗಳಿಗೆ ಉತ್ತರ ನೀಡಿ ಸಾಕಾಗಿದೆ. ಇಲಾಖೆಯ ಅಧಿಕಾರಿಗಳನ್ನು ಹೆಚ್ಚಿಗೆ ಪ್ರಶ್ನಿಸುವಂತಿಲ್ಲ. ಪೋಷಕರ ಒತ್ತಡ ನಿಭಾಯಿಸಲು ಆಗುತ್ತಿಲ್ಲ’ ಎಂದು ಖಾಸಗಿ ಶಾಲೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

* * 

ಮುದ್ರಣದಲ್ಲಿನ ವಿಳಂಬದಿಂದ ಉಚಿತ–ಮಾರಾಟ ಪಠ್ಯ ಪುಸ್ತಕ ಜಿಲ್ಲೆಗೆ ಇನ್ನೂ ಶೇ 20ರಷ್ಟು ಬರಬೇಕಿದೆ. ಜುಲೈ ಅಂತ್ಯದೊಳಗೆ ತಲುಪುವ ನಿರೀಕ್ಷೆ ಇದ್ದು, ಇಲಾಖೆಗೆ ಮಾಹಿತಿ ನೀಡಿದ್ದೇವೆ
ಪ್ರಹ್ಲಾದ್‌ ಟಿ.ಬೊಂಗಾಳೆ
ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT