ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾರರನ್ನು ತಬ್ಬಿಬ್ಬುಗೊಳಿಸುವ ತಬೀಬಲ್ಯಾಂಡ್‌ ರಸ್ತೆ !

Last Updated 26 ಜುಲೈ 2017, 6:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಸಿಲು ಬಂದರೆ ಈ ರಸ್ತೆ ತಗ್ಗು ದಿಣ್ಣೆಯಾಗುತ್ತದೆ. ಅದೇ ಮಳೆ ಸುರಿದರೆ ಇಡೀ ರಸ್ತೆ ಕೆಸರು ಗದ್ದೆಯಾಗುತ್ತದೆ. ಅಂದಹಾಗೆ ಇದ್ಯಾವುದೋ ಹಳ್ಳಿಗಾಡಿನ ಕಚ್ಚಾ ರಸ್ತೆಯಲ್ಲ. ಗಣೇಶಪೇಟೆಯ ವೃತ್ತದ ತಬೀಬಲ್ಯಾಂಡ್ ರಸ್ತೆ! ಡಾಂಬರು ಹಾಕಿದ ರಸ್ತೆ ಇದು ಎಂದು ಗುರುತು ಸಿಗದಷ್ಟು ಅಧ್ವಾನವಾಗಿದೆ. ರಸ್ತೆಗೆ ಹೊಂದಿಕೊಂಡಂತೆ ತರಕಾರಿ ಮಾರುಕಟ್ಟೆ, ಖಾಸಗಿ ಪ್ರಾಥಮಿಕ ಶಾಲೆ, ಮಾಂಸದ ಅಂಗಡಿಗಳು ಹಾಗೂ ಗ್ಯಾರೇಜ್‌ಗಳಿವೆ. ಹಾಗಾಗಿ, ಇಲ್ಲಿ ಜನಸಂದಣಿ ಜಾಸ್ತಿ.

ಗಣೇಶಪೇಟೆಯ ಪ್ರಮುಖ ವೃತ್ತವನ್ನು ಸಂಪರ್ಕಿಸುವ ಈ ರಸ್ತೆಯ ಮಾರ್ಗವಾಗಿ ಹೋಗಲು ವಾಹನ ಸವಾರರು ನೂರು ಸಲ ಯೋಚಿಸಬೇಕು. ಒಂದು ವೇಳೆ ಹೋದರೂ, ರಸ್ತೆ ದಾಟಿದ ಬಳಿಕ ತಮ್ಮ ವಾಹನಕ್ಕೆ ಏನಾದರೂ ಆಗಿದೆಯೇ ಎಂದು ಒಮ್ಮೆ ಪರಿಶೀಲಿಸಿಕೊಳ್ಳಬೇಕಾಗುತ್ತದೆ.

‘ಒಂದೂವರೆ ತಿಂಗಳಿಂದ ಈ ಯಾತನೆ ಅನುಭವಿಸುತ್ತಿದ್ದೇವೆ. ಮಳೆಯಲ್ಲಿ ಈ ಮಾರ್ಗವಾಗಿ ಬಂದ ಎಷ್ಟೋ ವಾಹನಗಳು ಕೆಸರಿನಲ್ಲಿ ಹೂತುಕೊಂಡಿವೆ. ಆಗ ಅಕ್ಕಪಕ್ಕದ ಅಂಗಡಿಯವರು ಹೋಗಿ ನೆರವಾಗಿದ್ದೇವೆ. ಇನ್ನು ಶಾಲಾ ಮಕ್ಕಳನ್ನು ಕರೆದುಕೊಂಡು ಬರುವವರು ದೂರದಲ್ಲೇ ವಾಹನ ನಿಲ್ಲಿಸಿ, ಮಕ್ಕಳನ್ನು ಎತ್ತಿಕೊಂಡು ಬರುವಂತಹ ಸ್ಥಿತಿ ಎದುರಾಗಿದೆ’ ಎಂದು ಸಾರ್ವಜನಿಕರು ಅನುಭವಿಸುವ ತೊಂದರೆ ಕುರಿತು ಅಬ್ದುಲ್ ರಜಾಕ್ ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆಯ ದುಸ್ಥಿತಿ ಕುರಿತು ಪಾಲಿಕೆ (ವಾರ್ಡ್ 52) ಸದಸ್ಯರ ಗಮನಕ್ಕೆ ಸ್ಥಳೀಯರು ಹಲವು ಸಲ ಗಮನಕ್ಕೆ ತಂದಿದ್ದೇವೆ. ಅವರು ಕಾಮಗಾರಿ ನಿಮಿತ್ತ ಅಗೆದಿದ್ದೇವೆ ಎಂದು ಸಬೂಬು ಹೇಳಿ ಇತ್ತೀಚೆಗೆ, ಮಣ್ಣು ಮುಚ್ಚಿಸಿದರು. ಆದರೆ, ಮಳೆಯಿಂದಾಗಿ ಇಡೀ ರಸ್ತೆ ಕೆಸರುಮಯವಾಗಿ ಮಾರ್ಪಟ್ಟಿತು. ಮಾರುಕಟ್ಟೆಗೆ ಬಂದ ಎಷ್ಟೊ ಮಂದಿ ಇಲ್ಲಿ ಜಾರಿ ಬಿದ್ದಿದ್ದನ್ನು ಕಣ್ಣಾರೆ ಕಂಡಿದ್ದೇನೆ’ ಎಂದು ಸ್ಥಳೀಯ ನಿವಾಸಿ ವಿಶ್ವನಾಥ ಶರ್ಮ ದೂರುತ್ತಾರೆ.

ಇನ್ನೂ ಅಕ್ಕಪಕ್ಕದ ಓಣಿಗಳ ರಸ್ತೆಗಳು ಸಹ ಸಂಚಾರಕ್ಕೆ ಅಷ್ಟೇನೂ ಉತ್ತಮವಾಗಿಲ್ಲ. ವಾಟರ್ ಟ್ಯಾಂಕ್, ಕುಲಕರ್ಣಿ ಹಕ್ಕಲು, ದರ್ಗಾ ರಸ್ತೆ, ಮಂಟೂರು ರಸ್ತೆ, ಶೀಲಾ ಕಾಲೊನಿ, ಬುದ್ಧ ವಿಹಾರ ಮಾರ್ಗ, ಅರಳೀಕಟ್ಟಿ ಕಾಲೊನಿ ಸೇರಿದಂತೆ ಈ ಭಾಗದ ಕೆಲ ಪ್ರದೇಶಗಳ ಸಂಚಾರ ತೀರಾ ಪ್ರಯಾಸದಾಯಕವಾಗಿದೆ.

‘ಮಳೆಗಾಲ ಮುಗಿಯಲಿ’
ತಬೀಬಲ್ಯಾಂಡ್ ರಸ್ತೆಯಲ್ಲಿದ್ದ ಕೊಳವೆಬಾವಿ ನೀರಿಗೆ ಕೊಳಚೆ ನೀರು ಸೇರುತ್ತಿತ್ತು. ಅದನ್ನು ಪತ್ತೆ ಹಚ್ಚುವ ಸಲುವಾಗಿ ರಸ್ತೆಯನ್ನು ಅಗೆದು ಸರಿಪಡಿಸಿ, ಮತ್ತೆ ಮಣ್ಣು ಮಚ್ಚಲಾಗಿದೆ. ಮಳೆಗಾಲ ಮುಗಿದ ಬಳಿಕ  ಡಾಂಬರು ಹಾಕಲಾಗುವುದು ಎಂದು ಪಾಲಿಕೆ ಸದಸ್ಯ ಸುಧೀರ ಸರಾಫ ತಿಳಿಸಿದರು.

ಬೈಕ್ ಸ್ಕಿಡ್ ಮಾಮೂಲಿ
ಗುಂಡಿಗಳ ಜತೆಗೆ ಕೆಸರುಗದ್ದೆಯಂತಾಗಿರುವ ಈ ರಸ್ತೆಯಲ್ಲಿ ಬೈಕ್‌ಗಳು ಸ್ಕಿಡ್ ಆಗುವುದು ಮಾಮೂಲಿಯಾಗಿದೆ. ಇನ್ನು ಗುಂಡಿ ಹತ್ತಿಸಿದ ವಾಹನಗಳಿಗೆ ಆದ ಹಾನಿಗೆ ಲೆಕ್ಕವಿಲ್ಲ. ಪಾಲಿಕೆಯವರು ಸರಿಯಾಗಿ ರಸ್ತೆಯನ್ನು ನಿರ್ಮಿಸಿಕೊಟ್ಟರೆ ಅದೇ ದೊಡ್ಡ ಉಪಕಾರ
ಅಬ್ದುಲ್ ಸತ್ತಾರ್

ಕುಸಿದ ಬಿದ್ದ ವೃದ್ಧರು
‘ಮಾರುಕಟ್ಟೆಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ತರಕಾರಿ ಬ್ಯಾಗ್ ಹೊತ್ತುಕೊಂಡು ಹೋಗುವಾಗ ಗುಂಡಿಗೆ ಕಾಲಿಟ್ಟು ಬಿದ್ದರು. ನೆಟ್ಟಗೆ ನಿಲ್ಲಲು ಆಗದಷ್ಟು ನೋವಿನಿಂದ ಬಳಲುತ್ತಿದ್ದ ಅವರನ್ನು ಸ್ಥಳೀಯರೆಲ್ಲ ಸೇರಿ ಆಟೊ ಹತ್ತಿಸಿ ಮನೆಗೆ ಕಳುಹಿಸಿದೆವು.
ಸಿಕಂದರ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT