ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡಕ್ಕೆ 31 ಗ್ರಾಮ ಮಾತ್ರ !

Last Updated 26 ಜುಲೈ 2017, 6:44 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸ ತಾಲ್ಲೂಕು ರಚನೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಇಳಕಲ್ ಹಾಗೂ ಗುಳೇದಗುಡ್ಡ ತಾಲ್ಲೂಕುಗಳ ವ್ಯಾಪ್ತಿ, ನೀಲನಕ್ಷೆ, ಗಡಿಗುರುತಿಸುವಿಕೆ ಒಳಗೊಂಡ ಸಮಗ್ರ ವರದಿಯನ್ನು ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಇದೇ 17ರಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ  ಸಲ್ಲಿಸಿದ್ದಾರೆ.

ಸುತ್ತೋಲೆ ಅನ್ವಯ ನಿಗದಿ: ಆಯಾ ಹೋಬಳಿಗಳನ್ನು ಮಾತ್ರ ಒಳಗೊಂಡಂತೆ ಹೊಸ ತಾಲ್ಲೂಕು ರಚಿಸಲು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಅದರಂತೆ ಉಪವಿಭಾಗಾಧಿಕಾರಿ ವರದಿ ಸಿದ್ಧಗೊಳಿಸಿದ್ದಾರೆ. ಇದರಿಂದ ಗುಳೇದಗುಡ್ಡ ಕಸಬಾ ಹೋಬಳಿಯ 31 ಗ್ರಾಮಗಳನ್ನು ಮಾತ್ರ ಹೊಸ ತಾಲ್ಲೂಕಿನ ವ್ಯಾಪ್ತಿಗೆ ಸೇರಿಸಿ ಪ್ರಸ್ತಾವ ಕಳುಹಿಸಲಾಗಿದೆ. ಅದಕ್ಕೆ ಸರ್ಕಾರದ ಒಪ್ಪಿಗೆ ದೊರೆತಲ್ಲಿ ಜಿಲ್ಲೆಯ ಅತ್ಯಂತ ಪುಟ್ಟ ತಾಲ್ಲೂಕು ಎಂಬ ಶ್ರೇಯಕ್ಕೆ ಗುಳೇದಗುಡ್ಡ ಪಾತ್ರವಾಗಲಿದೆ.

ಎರಡು ಪ್ರಸ್ತಾವ: ಇಳಕಲ್ ತಾಲ್ಲೂಕು ರಚನೆಗೆ ಸಂಬಂಧಿಸಿದಂತೆ ಮಾತ್ರ ಎರಡು ಪ್ರಸ್ತಾವ ಸಲ್ಲಿಸಲಾಗಿದೆ. ಕೇವಲ 41 ಗ್ರಾಮಗಳನ್ನು ಒಳಗೊಂಡಂತೆ ಇಳಕಲ್ ತಾಲ್ಲೂಕು ರಚನೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಇಳಕಲ್‌ ಒಂದೇ ಹೋಬಳಿಯಾದರೆ ತಾಲ್ಲೂಕಿನ ವ್ಯಾಪ್ತಿ ಅತ್ಯಂತ ಕಡಿಮೆಯಾಗಲಿದೆ.

ಪಕ್ಕದ ಕರಡಿ ಹಾಗೂ ಅಮೀನಗಡ ಹೋಬಳಿಗಳ ತಲಾ 17 ಗ್ರಾಮಗಳನ್ನು ಸೇರಿಸಿ 73 ಗ್ರಾಮಗಳನ್ನು ಒಳಗೊಂಡ ತಾಲ್ಲೂಕು ರಚನೆ ಮಾಡಿ’ ಎಂಬುದು ಅವರ ಒತ್ತಾಯ. ಹುನಗುಂದದಲ್ಲಿ ನಡೆದ ತಾಲ್ಲೂಕು ರಚನಾ ಸಮಿತಿ ಸಭೆಯಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ‘ಬರೀ ಇಳಕಲ್‌ ಹೋಬಳಿಯನ್ನು ಒಳಗೊಂಡ ತಾಲ್ಲೂಕು ರಚನೆ ಮಾಡಿದಲ್ಲಿ ಅದು ಅವೈಜ್ಞಾನಿಕವಾಗಲಿದೆ. ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ’ ಎಂದು ವಿಜಯಾನಂದ ಸ್ಪಷ್ಟಪಡಿಸಿದ್ದಾರೆ.

‘ಇಳಕಲ್, ಕರಡಿ, ಅಮೀನಗಡ, ಕಸಬಾ ಸೇರಿದಂತೆ ನಾಲ್ಕು ಹೋಬಳಿಗಳನ್ನು ಹೊಂದಿರುವ ಹುನಗುಂದ ತಾಲ್ಲೂಕು 146 ಹಳ್ಳಿಗಳನ್ನು ಒಳಗೊಂಡಿದೆ. ತಲಾ 73 ಹಳ್ಳಿಗಳಂತೆ ಸಮಾನವಾಗಿ ವಿಭಜಿಸಿದಲ್ಲಿ ಮಾತ್ರ ತಾಂತ್ರಿಕವಾಗಿ ಹೊಸ ತಾಲ್ಲೂಕಿನ ಕಲ್ಪನೆ ಸಾಕಾರಗೊಳ್ಳಲಿದೆ. ಇದರಿಂದ ಎರಡೂ ತಾಲ್ಲೂಕುಗಳಿಗೂ ನ್ಯಾಯ ಕಲ್ಪಿಸಿದಂತಾ­ಗುತ್ತದೆ’ ಎಂಬುದು ಅವರ ವಾದ.

ಸರ್ಕಾರದ ಮಟ್ಟದಲ್ಲಿ ತೀರ್ಮಾನ: ಹೊಸ ತಾಲ್ಲೂಕು ರಚನೆ ವೇಳೆ ಯಾವುದೇ ಕಾರಣಕ್ಕೂ ಈಗಿರುವ ಹೋಬಳಿಗಳನ್ನು ವಿಭಜಿಸುವಂತಿಲ್ಲ. ಬಹುತೇಕ ಹೊಸ ತಾಲ್ಲೂಕುಗಳು ಈ ಹಿಂದೆ ಹೋಬಳಿ ಕೇಂದ್ರಗಳೇ ಆಗಿವೆ. ಹಾಗಾಗಿ ಅವುಗಳ ವ್ಯಾಪ್ತಿಯಲ್ಲಿಯೇ ಗಡಿ ಗುರುತಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

‘ಶಾಸಕರ ಒತ್ತಾಯದ ಹಿನ್ನೆಲೆಯಲ್ಲಿ ಇಳಕಲ್‌ ತಾಲ್ಲೂಕು ರಚನೆ ವಿಚಾರವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ಸರ್ಕಾರಕ್ಕೆ ವರದಿ ನೀಡಲಾಗಿದೆ’ ಎಂದು ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಹೇಳುತ್ತಾರೆ.

ತಾಲ್ಲೂಕು ಕಚೇರಿ ಕಟ್ಟಡಗಳ ನಿಗದಿ
‘ಇಳಕಲ್‌ ನಗರದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ (ಡಯಟ್) ಹಳೆಯ ಕಟ್ಟಡವನ್ನು ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿಯಾಗಿ ಗುರುತಿಸಲಾಗಿದೆ. ಅಲ್ಲಿ 15ಕ್ಕೂ ಹೆಚ್ಚು ಕೊಠಡಿಗಳು ಇವೆ. ತಹಶೀಲ್ದಾರ್ ಕಚೇರಿಯ ಜೊತೆಗೆ ಬೇರೆ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ಆರಂಭಿಸಲು ಅನುಕೂಲವಾಗಲಿದೆ’ ಎಂದು ಸೋಮನಾಳ ತಿಳಿಸಿದರು.

‘ಗುಳೇದಗುಡ್ಡ ಪಟ್ಟಣದಲ್ಲಿರುವ ನೀರಾವರಿ ನಿಗಮದ ಸೇರಿದ ಮಲಪ್ರಭಾ ಎಡದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶ (ಎಂಎಲ್‌ಬಿಸಿ) ಕಚೇರಿಯ ಹಳೆಯ ಕಟ್ಟಡವನ್ನು ನೂತನ ತಾಲ್ಲೂಕು ಕಚೇರಿಗೆ ಗುರುತಿಸಲಾಗಿದೆ’ ಎಂದರು.

* * 

ಕೆರೂರು ಹೋಬಳಿ ಸೇರಿಸಿ ಗುಳೇದ ಗುಡ್ಡ ತಾಲ್ಲೂಕು ರಚನೆಯಾಗಬೇಕು ಎಂಬುದು ನಮ್ಮ ಬೇಡಿಕೆ. ಈ ವಾರದ ಲ್ಲಿಯೇ ಸಭೆ ಕರೆದು ಮುಂದಿನ ಹೋರಾ ಟದ ರೂಪುರೇಷೆ ನಿರ್ಧರಿಸಲಿದ್ದೇವೆ
ರಾಜಶೇಖರ ಶೀಲವಂತ
ಗುಳೇದಗುಡ್ಡ ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT