ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ನ್ಯಾಯ; ಸಚಿವೆ ಭರವಸೆ

Last Updated 26 ಜುಲೈ 2017, 6:49 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಪರಿಹಾರ ನೀಡದೇ ಉತಾರದಲ್ಲಿ ಸೇರಿಸಿರುವ ಸರ್ಕಾರದ ಹೆಸರನ್ನು ತೆಗೆಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರಿಗೆ ಭರವಸೆ ನೀಡಿದರು.

ಇಲ್ಲಿನ ನವನಗರದಲ್ಲಿರುವ ಯೋಜನೆಯ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ವಿಭಾಗದ ಕಚೇರಿಯ ಎದುರು ಕಳೆದ 12 ದಿನಗಳಿಂದ ಸಂತ್ರಸ್ತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಉಮಾಶ್ರೀ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.

‘ಆಗಸ್ಟ್ 5ರಂದು ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಲ್ಲಿ ಈ ವಿಚಾರದ ಬಗ್ಗೆ ಸೂಕ್ತ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸಂಪುಟ ಸಭೆಯಲ್ಲಿ ಇಲ್ಲವೇ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸಂತ್ರಸ್ತರಿಗೆ ಆಗಿರುವ ತೊಂದರೆಯನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಗ್ರಾಮ ಸಭೆ ನಡೆಸದೇ ಸ್ವಾಧೀನ ಪ್ರಕ್ರಿಯೆ ನಡೆಸಿ ಬೆಲೆ ನಿಗದಿಗೊಳಿಸಿರುವುದು ತಪ್ಪು. ಅಧಿಕಾರಿಗಳ ಆದ ಪ್ರಮಾದವನ್ನು ಸರಿಪಡಿಸಲಾಗುವುದು’ ಎಂದು ಉಮಾಶ್ರೀ ಸ್ಪಷ್ಟಪಡಿಸಿದರು.

ಪ್ರತಿಭಟನೆ ಕೈ ಬಿಡಲು ಮನವಿ:  ‘ಪ್ರತಿಭಟನಾ ನಿರತರಲ್ಲಿ ಶೇ 90ಕ್ಕೂ ಹೆಚ್ಚು ಮಂದಿ ಪರಿಶಿಷ್ಟ ಜಾತಿಯವರೇ ಇದ್ದಾರೆ. ಅವರಿಗೆ ಅನ್ಯಾಯ ಆಗದಂತೆ ಸರ್ಕಾರ ನೋಡಿಕೊಳ್ಳಲಿದೆ. ಆ ವಿಚಾರದಲ್ಲಿ ನಾನು ಸಂತ್ರಸ್ತರ ಪರವಾಗಿಯೇ ಇದ್ದೇನೆ. ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ. ಸಂತ್ರಸ್ತರ ವಿಚಾರದಲ್ಲಿ  ಯಾವುದೇ ರಾಜಕೀಯ ಮಾಡುವುದಿಲ್ಲ’ ಎಂದು ಹೇಳಿದ ಬೀಳಗಿ ಶಾಸಕ ಜೆ.ಟಿ.ಪಾಟೀಲ, ಪ್ರತಿಭಟನೆ ಕೈ ಬಿಡುವಂತೆ ಸಂತ್ರಸ್ತರಿಗೆ ಮನವಿ ಮಾಡಿದರು.

‘₹100 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಿ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಪ್ರದೇಶಕ್ಕೆ ಕಾಲುವೆ ಮೂಲಕ ನೀರು ಕೊಡಲಾಗುತ್ತಿದೆ. ಫಲವತ್ತಾದ ನೀರಾವರಿ ಪ್ರದೇಶದ ಸ್ವಾಧೀನ ಪ್ರಕ್ರಿಯೆಗೂ ಅವಕಾಶ ನೀಡುವುದಿಲ್ಲ. ಮೊದಲು ಉತಾರದಲ್ಲಿರುವ ಸರ್ಕಾರದ ಹೆಸರನ್ನು ತೆಗೆಸಿ, ರೈತರ ಸಾಲಮನ್ನಾ ಯೋಜನೆಯ ಲಾಭ ಫಲಾನುಭವಿಗಳಿಗೆ ಸಿಗುವಂತೆ ಮಾಡಲಾಗುವುದು’ ಎಂದು  ಹೇಳಿದರು.

ನಾಯಕರೊಂದಿಗೆ ಚರ್ಚೆ: ಪ್ರತಿಭಟನಾ ಕೈ ಬಿಡುವಂತೆ ಸಚಿವೆ ಉಮಾಶ್ರೀ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯ ಹೂವಪ್ಪ ರಾಠೋಡ, ‘ಉತಾರದಲ್ಲಿರುವ ಸರ್ಕಾರದ ಹೆಸರು ಕೈ ಬಿಡುವ ಬಗ್ಗೆ ಮೊದಲು ಸ್ಪಷ್ಟ ನಿರ್ಧಾರ ಕೈಗೊಳ್ಳಿ.

ಅಲ್ಲಿಯವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದರು. ಆಗಸ್ಟ್ 5ರ ಸಭೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಕೊಡಿಸಲಾಗುವುದು. ಅಲ್ಲಿಯವರೆಗೂ ಧರಣಿ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ’ ಎಂದು ಸಚಿವೆ ಮನವೊಲಿಸಿದರು.

ಅದಕ್ಕೆ ಸ್ಪಂದಿಸಿದ ಹೂವಪ್ಪ, ‘ಮುಖಂಡರೊಂದಿಗೆ ಚರ್ಚಿಸಿ ಪ್ರತಿಭಟನೆ ಹಿಂದಕ್ಕೆ ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು. ಈ ವೇಳೆ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ವಿಭಾಗದ ಆಯುಕ್ತ ಶಿವಯೋಗಿ ಕಳಸದ, ನಗರಸಭೆ ಸದಸ್ಯ ಶ್ರೀನಿವಾಸ ಬಳ್ಳಾರಿ ಸೇರಿದಂತೆ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT