ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನಶೀಲರಾಗಲು ವಿದ್ಯಾರ್ಥಿಗಳಿಗೆ ಸಲಹೆ

Last Updated 26 ಜುಲೈ 2017, 7:13 IST
ಅಕ್ಷರ ಗಾತ್ರ

ಮಂಡ್ಯ: ‘ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಶೀಲರಾಗಬೇಕು’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಅಭಿಪ್ರಾಯಪಟ್ಟರು. ನಗರದ ಲಕ್ಷ್ಮಿ ಜನಾರ್ಧನ ಪ್ರೌಢ ಶಾಲೆಯಲ್ಲಿ ಮಂಗಳವಾರ ನಡೆದ ವಿದ್ಯಾರ್ಥಿ ಸಂಘ ಉದ್ಘಾಟನೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಮಹನೀಯರ ಮೌಲ್ಯ ಅಳವಡಿಸಿಕೊಳ್ಳಬೇಕು. ಕೇವಲ ಪಠ್ಯ ಚಟುವಟಿಕೆಯಲ್ಲಿ ತೊಡಗದೆ ಶಾಲಾ ದಿನಗಳಿಂದಲೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ. ಇದರ ಜೊತೆಗೆ ಗುಣಾತ್ಮಕ ಚಿಂತನೆ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯದ ಕನಸು ಕಾಣಬೇಕು’ ಎಂದು ಹೇಳಿದರು.

‘ಲಕ್ಷ್ಮಿ ಜನಾರ್ಧನ ಶಾಲೆಯಲ್ಲಿ ಓದಿದ ಮಕ್ಕಳು ಇಂದು ವಿದೇಶಗಳಲ್ಲಿ ಸಾಧನೆ ಮಾಡಿದ್ದಾರೆ. ಹಲವು ಕ್ಷೇತ್ರದಲ್ಲಿ ತಮ್ಮದೇ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಯಾವುದೇ ಸಂದರ್ಭದಲ್ಲಿ ತಾವು ಓದಿದ ಶಾಲೆ ಹಾಗೂ ತಮ್ಮೂರಿನ ಪರಿಸರ ಮರೆಯಬಾರದು. ಶಾಲೆಗಳು ಹಾಗೂ ಊರಿಗೆ ಕೈಲಾದಷ್ಟು ಸಹಾಯ ಮಾಡುತ್ತಿರಬೇಕು’ ಎಂದು ಸಲಹೆ ನೀಡಿದರು.

‘ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಭಾಗವಹಿಸದ ಯಾವುದೇ ಕ್ಷೇತ್ರಗಳಿಲ್ಲ. ಮೀನಿನಂತೆ ಈಜಿ, ಹಕ್ಕಿಯಂತೆ ಹಾರುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ಮಹಿಳೆಯರಿಗೆ ಹೆಚ್ಚು ಅವಕಾಶಗಳು ಸಿಗಬೇಕು. ವಿದ್ಯಾರ್ಥಿನಿಯರು ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡು ಸಾಧನೆ ತೋರಬೇಕು’ ಎಂದು ಹೇಳಿದರು.

ಶಾಲೆಯ ಶಿಕ್ಷಣ ಸಮಿತಿ ಅಧ್ಯಕ್ಷೆ ಅಂಜನಾ ಶ್ರೀಕಾಂತ್‌ ಮಾತನಾಡಿ ‘ವಿದ್ಯಾರ್ಥಿಗಳು ಟಿ.ವಿ, ಅಂತರ್ಜಾಲ, ಮೊಬೈಲ್‌ ಸಂಸ್ಕೃತಿಯಿಂದ ದೂರ ಇರಬೇಕು. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕ್ರೀಡೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಆಸಕ್ತಿ ವಹಿಸುವುದು ಮುಖ್ಯ ಆಗಬೇಕು. ಇವುಗಳು ಭವಿಷ್ಯ ರೂಪಿಸಲು ನೆರವಾಗುತ್ತವೆ’ ಎಂದು ತಿಳಿಸಿದರು. 

ಟ್ರಸ್ಟ್‌ನ ಸಹ ಕಾರ್ಯದರ್ಶಿ ಸತ್ಯನಾಥನ್‌ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ನಿಯರು ಇಂಗ್ಲಿಷ್‌, ಕನ್ನಡ, ಸಂಸ್ಕೃತ, ಹಿಂದಿ ವಿಷಯದಲ್ಲಿ ಕಂಠಪಾಠ ಹೇಳಿದರು. ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಲಾಯಿತು. ಡಾ.ಬಿ.ಕೆ.ಸುರೇಶ್‌, ಡಾ.ಗೋಪಾಲಕೃಷ್ಣ, ವಿದ್ಯಾಶಂಕರ್‌, ಷಕೀಲಾ ಪ್ರಕಾಶ್‌, ಪ್ರಾಂಶುಪಾಲರಾದ ಲತಾ, ಮುಖ್ಯ ಶಿಕ್ಷಕಿ ಚಂದ್ರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT