ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ

Last Updated 26 ಜುಲೈ 2017, 14:01 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದ ಮುಖ್ಯಮಂತ್ರಿ  ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಬುಧವಾರ ಸಂಜೆ ಜೆಡಿಯು ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ನಿತೀಶ್ ಕುಮಾರ್, ಬಿಹಾರ ರಾಜ್ಯಪಾಲ ಕೇಶರಿ ನಾಥ್ ತ್ರಿಪಾಠಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ನಿತೀಶ್ ಅವರ ರಾಜೀನಾಮೆ ನಿರ್ಧಾರಕ್ಕೆ ಶಾಸಕರು ಸಮ್ಮತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜೀನಾಮೆ ನೀಡಿದ ನಂತರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ನಿತೀಶ್ ಅವರು, ಬಿಹಾರದ ಒಳಿತಿಗಾಗಿ ತಾನು  ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

ನನ್ನ ರಾಜೀನಾಮೆ  ಪತ್ರವನ್ನು ರಾಜ್ಯಪಾಲರು ಸ್ವೀಕರಿಸಿದ್ದಾರೆ ಎಂದು ಹೇಳಿದ ನಿತೀಶ್, ಸದ್ಯದ ವಾತಾವರಣದಲ್ಲಿ ನನಗೆ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಸಮಸ್ಯೆಗೆ ಪರಿಹಾರ ಹುಡುಕಲು ನನ್ನಿಂದ ಸಾಧ್ಯವಾಗಿಲ್ಲ, ನನಗೆ ಸುಸ್ತಾಗಿದೆ. ನಾವು ಯಾವತ್ತೂ ಯಾರಲ್ಲಿಯೂ ರಾಜೀನಾಮೆ ನೀಡಿ ಎಂದು ಹೇಳಲಿಲ್ಲ ಎಂದಿದ್ದಾರೆ.

[related]

ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ತಮ್ಮ ಪುತ್ರ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ತೇಜಸ್ವಿ ಯಾದವ್ ಅಪ್ಪ ಆರ್‌‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹೇಳಿದ್ದರು. ಆರ್‍‌ಜೆಡಿ ಮತ್ತು ಜೆಡಿಯು ನಡುವಿನ ಒಡಕಿನಿಂದಾಗಿಯೇ ನಿತೀಶ್ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.

ತೇಜಸ್ವಿ ರಾಜೀನಾಮೆಗೆ ಒತ್ತಾಯ ಯಾಕೆ?
2005ರಲ್ಲಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಲಾಲೂ ಪ್ರಸಾದ್ ಯಾದವ್ ವಿರುದ್ಧ ಮತ್ತು ಅಕ್ರಮ ಭೂಸ್ವಾಧೀನ ವಿಷಯಕ್ಕೆ ಸಂಬಂಧಿಸಿ ರಾಬ್ರಿ ದೇವಿ ಹಾಗೂ ತೇಜಸ್ವಿ ಯಾದವ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಇತ್ತೀಚೆಗೆ ಲಾಲೂ ಮತ್ತು ಅವರ ಕುಟುಂಬದವರ ವಿವಿಧ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ತೇಜಸ್ವಿ ಯಾದವ್ ಸ್ಪಷ್ಟನೆ ನೀಡಬೇಕು, ಇಲ್ಲವೇ ಉಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ನಿತೀಶ್ ಕುಮಾರ್ ಹೇಳಿದ್ದರು.

ಲಾಲೂ ಸುದ್ದಿಗೋಷ್ಠಿ
ತೇಜಸ್ವಿ ರಾಜೀನಾಮೆಗೆ ಒತ್ತಾಯ ತೀವ್ರವಾದ ಹಿನ್ನಲೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಲಾಲೂ ಪ್ರಸಾದ್  ಅವರು, ಮಾಧ್ಯಮಗಳು ಆರ್‌ಜೆಡಿ–ಜೆಡಿ(ಯು) ಮತ್ತು ಕಾಂಗ್ರೆಸ್‌ನ ಮಹಾ ಮೈತ್ರಿಯಲ್ಲಿ ಬಿರುಕು ಹುಡುಕುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ‘ನಾವು ಮೈತ್ರಿ ಮಾಡಿಕೊಂಡಿದ್ದೇವೆ ಮತ್ತು ಅವರನ್ನು (ನಿತೀಶ್‌ ಕುಮಾರ್) ಮುಖ್ಯಮಂತ್ರಿಯಾಗಿ ಒಪ್ಪಿಕೊಂಡಿದ್ದೇವೆ. ನಮಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಅವರು ಆ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗದಿರಲು ನಿರ್ಧರಿಸುವುದಾದರೆ ಅದು ಅವರ ಆಯ್ಕೆಗೆ ಬಿಟ್ಟ ವಿಷಯ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT