ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರಚೀಟಿ ಪಡೆಯಲು ಪಡಿಪಾಟಲು

Last Updated 27 ಜುಲೈ 2017, 6:14 IST
ಅಕ್ಷರ ಗಾತ್ರ

ಬೆಳಗಾವಿ: ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್‌) ಸರ್ಕಾರದಿಂದ ನೀಡುವ ಪಡಿತರಚೀಟಿ ಬಯಸಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಉಂಟಾಗಿರುವುದರಿಂದ ಅರ್ಜಿದಾರರು ಪರದಾಡುವಂತಾಗಿದೆ.

ಅರ್ಜಿಗಳ ಪರಿಶೀಲನೆ ಕಾರ್ಯವನ್ನು ಯಾವ ಇಲಾಖೆಯವರು ಮಾಡಬೇಕು ಎನ್ನುವ ವಿಷಯದಲ್ಲಿ ಆಹಾರ, ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಇಲಾಖೆಗಳ ನಡುವೆ ಉಂಟಾಗಿದ್ದ ಗೊಂದಲದಿಂದಾಗಿ ಅರ್ಜಿಗಳ ವಿಲೇವಾರಿ ನಡೆದಿಲ್ಲ. ಬಿಪಿಎಲ್‌ ಪಡಿತರ ಚೀಟಿ ಕೋರಿ ಜಿಲ್ಲೆಯಲ್ಲಿ (ನಗರವೂ ಸೇರಿದಂತೆ) ಈವರೆಗೆ ಬರೋಬ್ಬರಿ 2,10,634 ಅರ್ಜಿಗಳು ಸಲ್ಲಿಕೆಯಾಗಿವೆ.

ಅರ್ಜಿದಾರರು ಕಚೇರಿಗಳಿಗೆ ಅಲೆದಾಡುವುದು ನಡೆಯುತ್ತಿದೆಯೇ ಹೊರತು ಪಡಿತರ ಚೀಟಿ ಹೊಂದುವ ‘ಭಾಗ್ಯ’ವನ್ನು ಕಲ್ಪಿಸುವಲ್ಲಿ ಆಡಳಿತ ವಿಫಲವಾಗಿದೆ. ಇದು ಆಕಾಂಕ್ಷಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಿಪಿಎಲ್‌ ಪಡಿತರ ಚೀಟಿ ಹೊಂದಿದವರಿಗೆ ರಾಜ್ಯ ಸರ್ಕಾರದಿಂದ ‘ಅನ್ನಭಾಗ್ಯ’ ಯೋಜನೆಯಡಿ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯುವುದು ಸೇರಿದಂತೆ ಹಲವು ಸೌಲಭ್ಯಗಳಿಗಾಗಿ ಬಿಪಿಎಲ್‌ ಪಡಿತರ ಚೀಟಿಗಳನ್ನು ಕೇಳಲಾಗುತ್ತದೆ. ಹೀಗಾಗಿ, ಫಲಾನುಭವಿಗಳಾಗಲು ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರು ಅರ್ಜಿ ಸಲ್ಲಿಸಿದ್ದಾರೆ.

ಹಲವು ತಿಂಗಳಿಂದಲೂ: ಫೆಬ್ರುವರಿಯಿಂದ ಈವರೆಗೆ ಅರ್ಜಿಗಳನ್ನು ವಿಲೇವಾರಿ ಮಾಡುವ ಕಾರ್ಯ ಸ್ಥಗಿತಗೊಂಡಿದೆ. ಆರು ತಿಂಗಳಲ್ಲಿ ಅರ್ಜಿಗಳ ಪರಿಶೀಲನೆ ಕಾರ್ಯವನ್ನೂ ಮಾಡಿಲ್ಲ. ಅರ್ಜಿ ಸಲ್ಲಿಸಿದವರ ವಾಸಸ್ಥಳ, ಆಧಾರ್‌ ಸಂಖ್ಯೆ ಹಾಗೂ ವರಮಾನ ಪ್ರಮಾಣಪತ್ರ ಪರಿಶೀಲಿಸುವ ಹೊಣೆಯನ್ನು ಆಯಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಲಾಗಿತ್ತು.

‘ಇಲಾಖೆಯ ಕೆಲಸವೇ ಬಹಳಷ್ಟಿರುತ್ತದೆ. ಇದರಿಂದಾಗಿ ಪಡಿತರ ಚೀಟಿಯ ಕೆಲಸವನ್ನೂ ಮಾಡುವುದಕ್ಕೆ ಕಷ್ಟವಾಗುತ್ತದೆ’ ಎನ್ನುವುದು ಗ್ರಾಮ ಲೆಕ್ಕಾಧಿಕಾರಿಗಳ ವಾದವಾಗಿತ್ತು. ಇದರಿಂದಾಗಿ, ಅರ್ಜಿಗಳ ಪರಿಶೀಲನಾ ಕಾರ್ಯ ನನೆಗುದಿಗೆ ಬಿದ್ದಿದೆ.

ಪಡಿತರ ಚೀಟಿ ಪಡೆಯಲು ನಿಗದಿಪಡಿಸಿದ್ದ ಮಾನದಂಡಗಳ ಪೈಕಿ, ಅರ್ಜಿದಾರರು ಆದಾಯ ಪ್ರಮಾಣಪತ್ರ ಹೊಂದಿರಬೇಕು ಎನ್ನುವುದನ್ನು ಸೇರಿಸಲಾಗಿದೆ. ಈ ಪ್ರಮಾಣಪತ್ರ ನೀಡುವ ಕೆಲಸವನ್ನು ಗ್ರಾಮ ಲೆಕ್ಕಾಧಿಕಾರಿಗಳೇ ಮಾಡುತ್ತಾರೆ. ಹೀಗಾಗಿ, ಅರ್ಜಿಗಳನ್ನೂ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಕಳುಹಿಸಬೇಕು ಎಂದು ಅವರಿಗೇ ಸರ್ಕಾರದಿಂದ ಸೂಚಿಸಲಾಗಿದೆ. ಇದರಿಂದಾಗಿ, ಅರ್ಜಿಗಳ ವಿಲೇವಾರಿ ಕಾರ್ಯ ಇನ್ಮುಂದೆ ಚುರುಕು ಪಡೆಯಲಿದೆ ಎನ್ನುವ ವಿಶ್ವಾಸ ಆಹಾರ ಇಲಾಖೆಯ ಅಧಿಕಾರಿಗಳದ್ದು.

ಉಪನಿರ್ದೇಶಕರು ಏನಂತಾರೆ?: ‘ಅರ್ಜಿಗಳನ್ನು ಆಹಾರ ಇಲಾಖೆಯವರು ಪರಿಶೀಲಿಸಬೇಕೋ, ಕಂದಾಯ ಇಲಾಖೆಯವರು ಮಾಡಬೇಕೋ ಎನ್ನುವ ಬಗ್ಗೆ ಗೊಂದಲ ಉಂಟಾಗಿತ್ತು. ಇದರಿಂದಾಗಿ, ವಿಲೇವಾರಿ ಕಾರ್ಯ ನಡೆದಿಲ್ಲ. ಈಚೆಗೆ ಗೊಂದಲವನ್ನು ಈಚೆಗಷ್ಟೇ ನಿವಾರಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ.

ವಿಎಗಳು ದಾಖಲಾತಿಗಳನ್ನು ಪರಿಶೀಲಿಸುತ್ತಾರೆ, ಆದಾಯ ಪ್ರಮಾಣಪತ್ರದ ಜತೆ ಅರ್ಜಿಯನ್ನೂ ದೃಢೀಕರಿಸುತ್ತಾರೆ. ಅದನ್ನು ಉಪ ತಹಶೀಲ್ದಾರ್ ಅನುಮೋದಿಸಿದ ನಂತರ, ಇಲಾಖೆಗೆ ರವಾನೆಯಾಗುತ್ತದೆ. ಆಹಾರ ನಿರೀಕ್ಷಕರ ಸಹಿ ನಂತರ, 15 ದಿನಗಳಲ್ಲಿ ಚೀಟಿಗಳನ್ನು ಫಲಾನುಭವಿಯ ವಿಳಾಸಕ್ಕೆ (ಆಧಾರ್‌ನಲ್ಲಿ ನಮೂದಿಸಿದ್ದು) ಕಳುಹಿಸಲಾಗುತ್ತದೆ’ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ಎಸ್‌. ಎಸ್. ಬಳ್ಳಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಜಿಲ್ಲೆಯಲ್ಲಿ ಎಪಿಎಲ್‌ ಪಡಿತರ ಚೀಟಿ ಕೋರಿ 17,486 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಇಲಾಖೆಯಿಂದಲೇ ಹಂತಹಂತವಾಗಿ ವಿಲೇವಾರಿ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT