ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು: ಆರೋಪ

Last Updated 27 ಜುಲೈ 2017, 8:36 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಸಮರ್ಪಕವಾಗಿ ಕೆಲಸ ಮಾಡದೆ, ಸರಿಯಾದ ಮಾಹಿತಿಯನ್ನೂ ನೀಡುತ್ತಿಲ್ಲ ಎಂದು ಆಕ್ಷೇಪಿಸಿ ತಾಲ್ಲೂಕು ಪಂಚಾಯಿತಿ ಸದಸ್ಯರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಕಾರ್ಯ ನಿರ್ವಹಣೆಯ ಕುರಿತು ಬಿರುಸಿನ ಚರ್ಚೆ ನಡೆಯಿತು. ಸದಸ್ಯರು ಪಕ್ಷ ಭೇದ ಮರೆತು ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯ ನಿರ್ವಹಣಾಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೈವಾರ ಕ್ಷೇತ್ರದ ಸದಸ್ಯ ನಾಗರಾಜ್‌ ವಾಗ್ದಾಳಿಗೆ ಅಧಿಕಾರಿಗಳು ಉತ್ತರಿಸಲಾಗದೆ ತತ್ತರಿಸಿದರು. ಕೈವಾರದಲ್ಲಿ ಕಳೆದ 6 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. 3 ತಿಂಗಳ ಹಿಂದೆ ಅಧಿಕಾರಿಗಳನ್ನು ಪಂಚಾಯಿತಿ ಕಚೇರಿಯಲ್ಲಿ ಕೂಡಿ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ತಾ.ಪಂ. ಇಒ ಎರಡು ಕೊಳವೆ ಬಾವಿ ಕೊರೆಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನ ನೀರಿಲ್ಲದೆ ಸಾಯುತ್ತಿದ್ದರೂ ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ 14ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆಯ ಅನುಮೋದನೆ ಇಲ್ಲದೆ ₹ 15 ಲಕ್ಷ  ಖರ್ಚು ಮಾಡಿದ್ದಾರೆ. ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕಾರ್ಯ ನಿರ್ವಹಣಾಧಿಕಾರಿ ಸಿ. ಶ್ರೀನಿವಾಸ್‌, ‘ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಯಾವುದೇ ಯೋಜನೆಗೂ ಅನುಮೋದನೆ ನೀಡಿಲ್ಲ’ ಎಂದು ಹೇಳಿದರು. ತಕ್ಷಣವೇ ಮುಗಿಬಿದ್ದ ಸದಸ್ಯ ನಾಗರಾಜ್‌, ‘ಹರಿಕಥೆ ಬೇಡ, ಸ್ಪಷ್ಟ ಉತ್ತರಬೇಕು’ ಎಂದು ತಿರುಗೇಟು ನೀಡಿದರು. ತಕ್ಷಣ ಚೇತರಿಸಿಕೊಂಡ ಇಒ, ‘ಪಿಡಿಒಗೆ ತಕ್ಷಣ ನೋಟಿಸ್‌ ಜಾರಿ ಮಾಡಿ, ತನಿಖೆ ಕೈಗೊಂಡು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗುವುದು. ನಂತರ ಕ್ರಮಕ್ಕೆ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಸದಸ್ಯ ರಾಜಕುಮಾರ್‌ ಸೀಕಲ್‌ ಮತ್ತು ಮೈಲಾಂಡ್ಲಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸಿದ್ಧವಾಗಿದ್ದರೂ ವಿದ್ಯುತ್‌ ಸಂಪರ್ಕ ನೀಡದ ಕಾರಣ ವ್ಯರ್ಥವಾಗಿವೆ ಎಂದು ದೂರಿದರು. ಅಧ್ಯಕ್ಷೆ ಶಾಂತಮ್ಮ ಅವರೂ ಅಸಮಾಧಾನ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್‌ ಮಾತನಾಡಿ, ರೈತರಿಗೆ ನೇರ ಸಂಪರ್ಕವಿರುವ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳು ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಬೇಕು. ರೈತರಿಗೆ ಯೋಜನೆಗಳ ಮಾಹಿತಿ ತಲುಪಿಸಬೇಕು. ತಾಲ್ಲೂಕಿಗೆ ಬಂದಿರುವ ಯಾವುದೇ ಹಣ ವಾಪಸ್‌ ಹೋಗಬಾರದು ಎಂದು ಸೂಚಿಸಿದರು.

ರೇಷ್ಮೆ , ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಪೂರಕ ಮಾಹಿತಿ ಇಲ್ಲದೆ ಅರ್ಜಿ ಸಲ್ಲಿಸಲು ಫಲಾನುಭವಿಗಳೇ ಇಲ್ಲದಂತಾಗಿದೆ ಎಂದು ಹಲವಾರು ಸದಸ್ಯರು ದೂರಿದರು.

ಆಯಾ ಕ್ಷೇತ್ರಗಳಲ್ಲಿ ಅನುಷ್ಠಾನವಾಗುವ ಯೋಜನೆಗಳ ಕುರಿತು ಕಡ್ಡಾಯವಾಗಿ ಸದಸ್ಯರ ಗಮನಕ್ಕೆ ತರಬೇಕು ಎಂದು ಉಪಾಧ್ಯಕ್ಷ ಶ್ರೀನಿವಾಸ್‌ ಸೂಚಿಸಿದರು. ಬೆಸ್ಕಾಂ ಅಧಿಕಾರಿಗಳು ಸಮಸ್ಯೆಗಳ ಕುರಿತು ಸ್ಪಂದಿಸುವುದಿಲ್ಲ. ಸದಸ್ಯರ ದೂರವಾಣಿಯನ್ನು ಸ್ವೀಕರಿಸುವುದಿಲ್ಲ ಎಂದು ಸದಸ್ಯೆ ಮಾನಸ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT