ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸಮಾನತೆಯಿಂದ ಸಮಾಜದ ಅಭಿವೃದ್ಧಿ

Last Updated 27 ಜುಲೈ 2017, 8:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಲಿಂಗ ಅಸಮಾನತೆ ಅಳಿದು ಎಲ್ಲಾ ರಂಗಗಳಲ್ಲಿಯೂ ಮಹಿಳೆಯರೂ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಈ ವಿಚಾರದಲ್ಲಿ ಪುರುಷರಿಂದ ಮಹಿಳೆಯರಿಗೆ ಸಮಾನತೆಯ ಅವಕಾಶ ಕಲ್ಪಿಸುವ ಕೆಲಸವಾಗಬೇಕು’ ಎಂದು ಶಾಸಕ ಡಾ.ಕೆ. ಸುಧಾಕರ್ ಹೇಳಿದರು.

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸ್ತ್ರೀ ಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲದ ಚೆಕ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಲಾಗುತ್ತಿದೆ. ಅವರಿಗೆ ಸಾಮಾಜಿಕ ಭದ್ರತೆ ಇಲ್ಲ. ಆ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸಗಳೂ ನಡೆದಿಲ್ಲ. ಇಂದಿಗೂ ಪುರುಷರ ಅಪ್ಪಣೆ ಇಲ್ಲದೆ ಮಹಿಳೆ ಮನೆಯಿಂದಾಚೆಗೆ ಹೆಜ್ಜೆ ಇಡಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಪುರುಷ ಪ್ರಧಾನ ವ್ಯವಸ್ಥೆಯೊಳಗೆ ನಾವು ಈ ರೀತಿ ಮಾಡುತ್ತಿರುವುದು ಸರಿನಾ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ಪುರುಷರಷ್ಟೇ ಮಹಿಳೆಯರಿಗೆ ಸಾಮರ್ಥ್ಯವಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇವತ್ತು ಮಹಿಳೆಗೆ ಆತ್ಮಸ್ಥೈರ್ಯ, ಶಕ್ತಿ ತುಂಬುವ ಕೆಲಸಗಳಾಗಬೇಕಿದೆ. ಸಮಾಜದಲ್ಲಿ ಮಹಿಳೆಯರು ಹಿಂದೆ ಉಳಿಯಬಾರದು. ದೇಶ ಪ್ರಜ್ವಲವಾಗಿ ಬೆಳಗಬೇಕಾದರೆ ಲಿಂಗ ಸಮಾನತೆ ಬರಬೇಕು. ಮಹಿಳೆಯರಿಗೆ ಅವಕಾಶ ಕಲ್ಪಿಸಿದಾಗ ಮಾತ್ರ ನಾವು ಸಮಾನತೆ ತರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಗ್ರಾಮೀಣ ಪ್ರದೇಶದ ಮಹಿಳೆಯರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು. ಇದಕ್ಕೆಲ್ಲ ಮುಖ್ಯವಾಗಿ ಆರ್ಥಿಕವಾಗಿ ಸದೃಢರಾಗಬೇಕು. ಆ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೆ ತಂದಿದೆ. ಕಳೆದ ವರ್ಷ 120 ಗುಂಪುಗಳಿಗೆ ಬಡ್ಡಿ ರಹಿತ ಸಾಲ ವಿತರಿಸಲಾಗಿತ್ತು. ಈ ಬಾರಿ ಕೂಡ ಅಷ್ಟೇ ಸಂಘಗಳಿಗೆ ಸಾಲ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಈ ಸಾಲವನ್ನು ಮಹಿಳೆಯರು ಜಾಗ್ರತೆಯಿಂದ ಬಳಸಬೇಕು. ಹೈನುಗಾರಿಕೆ, ಕೃಷಿ, ರೇಷ್ಮೆ ಅಥವಾ ಸ್ವಉದ್ಯೋಗಗಳಿಗೆ ಈ ಹಣವನ್ನು ಬಳಸಬೇಕು. ಹೆಚ್ಚು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ದಿಸೆಯಲ್ಲಿ ಸರ್ಕಾರ ಕೌಶಲ ಕಲಿಸುವ ಯೋಜನೆಯೊಂದನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರು ತಮಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಅಗತ್ಯವಾದ ಕೌಶಲವನ್ನು ಕಲಿಯಬೇಕು. ತರಬೇತಿ ವೇಳೆ ಗೌರವಧನ ಕೂಡ ನೀಡಲಾಗುತ್ತದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ. ರಾಮಸ್ವಾಮಿ ಮಾತನಾಡಿ, ‘ಮಹಿಳೆಯರು ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಪುರುಷರಿಗೆ ಸಮನಾಗಿ ಸಬಲೀಕರಣಗೊಳ್ಳಬೇಕು. ಬಡ್ಡಿ ರಹಿತ ಸಾಲದ ಹಣವನ್ನು ಸ್ವಾವಲಂಬಿಯಾಗುವಂತಹ ಉದ್ಯೋಗ, ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಕೂಡ ಪ್ರೋತ್ಸಾಹ ನೀಡಿ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದುವರಿಯಬೇಕು’ ಎಂದರು.

120 ಸ್ತ್ರೀ ಶಕ್ತಿ ಸಂಘಗಳ 1,516 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ₹ 3.67 ಕೋಟಿ ಬಡ್ಡಿ ರಹಿತ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು. ಇದೇ ವೇಳೆ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸೀರೆ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಸದಸ್ಯರಾದ ಕವಿತಾ ಕೃಷ್ಣಮೂರ್ತಿ, ಪ್ರಕಾಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗೇಶ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ಶ್ರೀನಿವಾಸ್, ಮುಷ್ಟೂರು ನಾರಾಯಣಮ್ಮ ಉಪಸ್ಥಿತರಿದ್ದರು.

* * 

ಜನಸಂಖ್ಯೆಯ ಶೇ 50 ರಷ್ಟಿರುವ ಮಹಿಳೆಯರು ಕೂಡ ಪುರುಷರಿಗೆ ಸಮನಾಗಿ ಸಾಧನೆ ಮಾಡಿದಾಗ ದೇಶ ವಿಶ್ವದಲ್ಲಿಯೇ ತನ್ನದೆ ಆದ ಛಾಪು ಮೂಡಿಸಲು ಸಾಧ್ಯ
ಡಾ.ಕೆ. ಸುಧಾಕರ್
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT